More

    ಕಾರ್ಕಳದಲ್ಲಿ ಮೃತ್ಯುಕೂಪ ರಸ್ತೆಗಳು

    | ಆರ್.ಬಿ.ಜಗದೀಶ್ ಕಾರ್ಕಳ
    ಕಾರ್ಕಳ ತಾಲೂಕು ಕೇಂದ್ರೀಕೃತವಾಗಿರಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಹಲವು ಯೋಜನೆಗಳು ಮಂಜೂರಾಗುತ್ತಿದ್ದರೂ ಅನುಷ್ಠಾನದಲ್ಲಿ ಉಂಟಾಗುತ್ತಿರುವ ವ್ಯತ್ಯಯದಿಂದ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಇಕ್ಕಟ್ಟಾಗಿರುವ ಎಲ್ಲ ಪ್ರಮುಖ ರಸ್ತೆಗಳೂ ಮಳೆಗಾಲದಲ್ಲಿ ಸಂಪೂರ್ಣ ಹೊಂಡಮಯವಾಗುತ್ತಿವೆ. ಇದರಿಂದ ವಾಹನ ಸಂಚಾರ ಹಾಗೂ ಪಾದಚಾರಿಗಳ ಓಡಾಟಕ್ಕೆ ತೊಡಕಾಗುತ್ತಿದೆ.
    ಕಾರ್ಕಳ ನಗರದ ಮೂರು ಮಾರ್ಗ, ಅಂಚೆ ಕಚೇರಿ ರಸ್ತೆ, ಸಾಲ್ಮರ, ತಾಲೂಕು ಜಂಕ್ಷನ್‌ನ ರಸ್ತೆ ದುಸ್ಥಿತಿಯಲ್ಲಿದೆ. ಕಾರು, ರಿಕ್ಷಾ ಸಹಿತ ಬೈಕ್‌ಗಳ ಓಡಾಟಕ್ಕೆ ಅಸಾಧ್ಯ ಎಂಬಂಥ ಸ್ಥಿತಿ ನಿರ್ಮಾಣವಾಗಿದೆ. ಕರೊನಾ ಸಂಕಷ್ಟ, ಇಂಧನ ಬೆಲೆ ಏರಿಕೆ ಮಧ್ಯೆ ವಾಹನಗಳನ್ನು ರಸ್ತೆಗೆ ಇಳಿಸಿದರೆ ಅಡಿ ಭಾಗ ರಸ್ತೆಯ ಗುಂಡಿಗೆ ತಾಗಿ ಜಖಂಗೊಳ್ಳುತ್ತಿದ್ದು ಮಾಲೀಕರಿಗೆ ತಲೆನೋವಾಗಿ ಪರಿಣಮಿಸಿದೆ.
    ಬಾಯಿ ತೆರೆದ ಒಳಚರಂಡಿ ಚೇಂಬರ್‌ಗಳು: ಎಂ.ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಮೊದಲ ಸಲ ಪುರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ಯೋಜನೆ ಕಾರ್ಕಳದಲ್ಲಿ ಅನುಷ್ಠಾನಗೊಳಿಸಲಾಗಿತ್ತು. ವಾಣಿಜ್ಯ ಮಹಡಿ, ವಸತಿ ಸಂಕೀರ್ಣ, ಮನೆಗಳಿಂದ ಉತ್ಪಾದನೆಯಾಗುತ್ತಿರುವ ತ್ಯಾಜ್ಯ ನೀರು ಹರಿಯಲು ಮಾಡಿದ ಒಳಚರಂಡಿ ಯೋಜನೆಗೆ ಹಲವು ದಶಕ ಸಂದಿರುವುದರಿಂದ ಎರಡು ವರ್ಷಗಳ ಹಿಂದೆ ಒಳಚರಂಡಿ ಯೋಜನೆಯ ಮರು ನಿರ್ಮಾಣಕ್ಕೆ ಶಾಸಕ ವಿ.ಸುನೀಲ್‌ಕುಮಾರ್ ಚಾಲನೆ ನೀಡಿದ್ದರು. ರಾಜ್ಯ ಸರ್ಕಾರದಿಂದ ಒಳಚರಂಡಿ ಮತ್ತು ಕುಡಿಯುವ ನೀರು ಸರಬರಾಜು ಮಂಡಳಿ ಮೂಲಕ 13 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದೆ. ಸಮಗ್ರ ಒಳಚರಂಡಿ ಯೋಜನೆಗಾಗಿ 17 ಕೋಟಿ ರೂ. ಪ್ರಸ್ತಾವನೆಯನ್ನು ಕಾರ್ಕಳ ಪುರಸಭೆ ಮುಂದಿರಿಸಿದೆ.
    ಮೂರು ಮಾರ್ಗದಿಂದ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ ಕಾರ್ಕಳ ಶಾಖೆ ತನಕ ಮೊದಲ ಹಂತದಲ್ಲಿ ಒಳಚರಂಡಿ ಯೋಜನೆ ಕಾಮಗಾರಿ ಪೂರ್ಣಗೊಳಿಂಡಿದೆ. ಇದಕ್ಕೆ ಎರಡು ವರ್ಷ ಸಂದಿದ್ದು, ನೂತನ ನಿರ್ಮಿತ ಒಳಚರಂಡಿ ಚೇಂಬರ್‌ನಿಂದ ತ್ಯಾಜ್ಯ ನೀರು ಹೊರ ಚಿಮ್ಮುತ್ತಿರುವುದರಿಂದ ದುರ್ವಾಸನೆ ಹರಡುತ್ತಿದೆ. ಒಳಚರಂಡಿ ಮರುನಿರ್ಮಾಣ ಕಾಮಗಾರಿ ಇತರೆಡೆಗಳಲ್ಲಿ ಪೂರ್ಣಗೊಂಡಿಲ್ಲ. ಹಳೇ ಚೇಂಬರ್‌ಗಳು ಕುಸಿಯುತ್ತಿದ್ದು, ಪುರಸಭಾ ಆಡಳಿತ ಹಾಗೂ ಒಳಚರಡಿ ಮತ್ತು ಕುಡಿಯುವ ನೀರು ಸರಬರಾಜು ಮಂಡಳಿ ಗಮನ ಹರಿಸದೆ ಅನಾಹುತಕ್ಕೆ ಎಡೆ ಮಾಡುತ್ತಿದೆ.

    ಕಾಳಜಿಗೆ ಸ್ಪಂದಿಸಿದ ನಗರ ಠಾಣಾಧಿಕಾರಿ: ರಸ್ತೆಯಲ್ಲಿ ಒಳಚರಂಡಿ ಚೇಂಬರ್ ಬಾಯಿ ತೆರೆದಿರುವ ಬಗ್ಗೆ ವಿಜಯವಾಣಿ ಪ್ರತಿನಿಧಿ ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಹಾಗೂ ನಗರ ಠಾಣಾಧಿಕಾರಿ ಮಧು ಗಮನಕ್ಕೆ ತಂದಿದ್ದರು. ಮುಖ್ಯಾಧಿಕಾರಿ ರೂಪಾ ಶೆಟ್ಟಿ ಹಾಗೂ ಇತರ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ತುರ್ತು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ತಕ್ಷಣ ನಗರ ಠಾಣಾಧಿಕಾರಿ ಮಧು ಬಿ.ಇ ಬ್ಯಾರಿಕೇಡ್ ಅಳವಡಿಸಿ ಮುನ್ನೆಚ್ಚರಿಕೆ ವಹಿಸಿದ್ದಾರೆ. ಠಾಣಾಧಿಕಾರಿ ಕಾರ್ಯಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

    ಕಳೆದ ವರ್ಷದ ಮಳೆಗಾಲ ನಂತರ ರಸ್ತೆ ಪ್ಯಾಚ್‌ವರ್ಕ್ಸ್ ಕಾಮಗಾರಿ ನಡೆಸಲಾಗಿದ್ದು, ಲಕ್ಷಾಂತರ ರೂ. ವೆಚ್ಚ ಭರಿಸಲಾಗಿತ್ತು. ಮೂರು ತಿಂಗಳ ಹಿಂದಷ್ಟೇ ಅದರ ಬಿಲ್ ಪಾವತಿಸಲಾಗಿದೆ. ಪ್ರಸಕ್ತ ರಸ್ತೆ ಸ್ಥಿತಿಗೆ ಕಳಪೆ ಕಾಮಗಾರಿಯೇ ಕಾರಣ. ಪ್ರತಿವರ್ಷ ಪ್ಯಾಚ್‌ವರ್ಕ್ ನೆಪದಲ್ಲಿ ಜನರ ತೆರಿಗೆ ಹಣ ಪೋಲಾಗುತ್ತಿದೆ.
    |ಅಶ್ಫಕ್ ಅಹಮ್ಮದ್
    ಪ್ರತಿಪಕ್ಷ ನಾಯಕ ಕಾರ್ಕಳ ಪುರಸಭೆ


    ರಸ್ತೆ ದುಸ್ಥಿತಿಯಲ್ಲಿ ಇರುವ ವಿಚಾರ ಗಮನದಲ್ಲಿದೆ. ವಿಪರೀತ ಮಳೆಯಿಂದ ದುರಸ್ತಿ ಕಾರ್ಯ ನಡೆಸಲು ಸಾಧ್ಯವಾಗಿಲ್ಲ. ಮಳೆ ಕಡಿಮೆಯಾಗ ಕೂಡಲೇ ಅದರ ಕಾಮಗಾರಿ ಕ್ಷಿಪ್ರಗತಿಯಲ್ಲಿ ನಡೆಯಲಿದೆ.
    ಸುಮಾ ಕೇಶವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts