More

    ಆಯನೂರು ವಿರುದ್ಧ ದಲಿತ ಮುಖಂಡರು ಕಿಡಿ

    ಶಿವಮೊಗ್ಗ: ದಲಿತ ಸಂಘಟನೆಯೊಂದರ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ್ ಮಾಡಿದ ಭಾಷಣ ಮತ್ತೊಂದು ದಲಿತ ಸಂಘಟನೆಯ ಆಕ್ರೋಶಕ್ಕೆ ಕಾರಣವಾಗಿದೆ. ಆಯನೂರು ಇದೇ ರೀತಿ ಹೇಳಿಕೆ ನೀಡಿದರೆ ಮುಂಬರುವ ಚುನಾವಣೆಯಲ್ಲಿ ದಲಿತರು ಕಾಂಗ್ರೆಸ್‌ನ್ನು ಬೆಂಬಲಿಸುವುದಿಲ್ಲ ಎಂದು ದಲಿತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

    ದಲಿತ ಸಂಘಟನೆ ಹಲವು ಕಾರಣಕ್ಕೆ ಒಡೆದು ಹೋಳಾದ ನಂತರ ಅನೇಕ ಡೆಲ್ಲಿ ಸೆಟ್‌ಗಳು ಹುಟ್ಟಿಕೊಂಡಿವೆ ಎಂದು ದಲಿತ ಸಂಘಟನೆಯ ಕಾರ್ಯಕ್ರಮವೊಂದರಲ್ಲಿ ಆಯನೂರು ಹೇಳಿದ್ದರು. ಇದಕ್ಕೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ ಡಿಎಸ್‌ಎಸ್(ಅಂಬೇಡ್ಕರ್ ವಾದ) ಸಂಚಾಲಕ ಟಿ.ಎಚ್.ಹಾಲೇಶಪ್ಪ, ನಾವು ಡೆಲ್ಲಿ ಸೆಟ್ ಆದರೆ, ಆಯನೂರು ಮಂಜುನಾಥ್ ಚೈನಾ ಸೆಟ್ಟೇ ಎಂದು ತಿರುಗೇಟು ನೀಡಿದ್ದಾರೆ.
    ಆಯನೂರು ಮಂಜುನಾಥ್ ರಾಜಕೀಯ ಅಧಿಕಾರದ ಗೀಳಿಗಾಗಿ ಪಕ್ಷದಿಂದ ಪಕ್ಷಕ್ಕೆ ಹಾರುತ್ತಿರುವ ಸವಕಲು ನಾಣ್ಯ. ದಲಿತ ಸಂಘಟನೆಗಳನ್ನು ಅಸಲಿ-ನಕಲಿ ಎಂದು ಹೇಳಲು ಇವರೇನು ನ್ಯಾಯಾಧೀಶರೆ? ನಾವೆಲ್ಲರೂ ಹೋರಾಟದಿಂದಲೇ ಬಂದವರು ಎಂದು ಆಕ್ರೋಶ ವ್ಯಕ್ತಪಡಿಸಿದರು.
    ದಲಿತ ಸಂಘಟನೆಗಳ ನಿರ್ಧಾರದಿಂದ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಆಯನೂರು ಮಂಜುನಾಥ್ ಬಾಯಿಗೆ ಕಾಂಗ್ರೆಸ್ ಹೈಕಮಾಂಡ್ ಬೀಗ ಹಾಕದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು. ನೀಡಿರುವ ಹೇಳಿಕೆಗೆ ಅವರು ಕ್ಷಮೆ ಕೋರಬೇಕೆಂದು ಒತ್ತಾಯಿಸಿದರು.
    ಡಿಸ್‌ಎಸ್ ಜಿಲ್ಲಾ ಸಂಚಾಲಕ ಚೆನ್ನಯ್ಯ ಮಾತನಾಡಿ, ನಾಯಕತ್ವ ವಿಚಾರದಲ್ಲಿ ದಲಿತ ಸಂಘಟನೆಗಳು ವಿಭಜನೆಯಾಗಿರಬಹುದು. ಸಿದ್ಧಾಂತವನ್ನು ಬಿಟ್ಟಿಲ್ಲ. ಆಯನೂರು ಮಂಜುನಾಥ್ ಬಹಿರಂಗವಾಗಿ ಕ್ಷಮೆ ಕೋರದಿದ್ದಲ್ಲಿ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಲ
    ದಲಿತ ಮುಖಂಡ ರಾಜಕುಮಾರ್ ಮಾತನಾಡಿ, ದಲಿತ ಸಂಘಟನೆಗಳು ನ್ಯಾಯಯುತವಾಗಿ ಹೋರಾಟ ಮಾಡಿ ಶೋಷಿತರಿಗೆ ನ್ಯಾಯ ಒದಗಿಸಿಕೊಡುತ್ತಿವೆ. ಆಯನೂರು ಮಂಜುನಾಥ್ ಹೇಳಿಕೆಯಿಂದ ದಲಿತ ಸಂಘಟನೆಗಳಲ್ಲಿ ವಿನಾಕಾರಣ ಗೊಂದಲ ಸೃಷ್ಠಿಯಾಗಿದೆ ಎಂದರು. ಮತ್ತೋರ್ವ ಮುಖಂಡ ಭಾನುಪ್ರಸಾದ್ ಮಾತನಾಡಿ, ಆಯನೂರು ಮಂಜುನಾಥ್ ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಕಪ್ಪು ಪಟ್ಟಿ ಪ್ರದರ್ಶಿಸುವುದಾಗಿ ಹೇಳಿದರು.
    ದಲಿತ ಮುಖಂಡರಾದ ಎಂ.ಆರ್.ಶಿವಕುಮಾರ್, ಸೂಗೂರು ಪರಮೇಶ್ವರ, ಮಹಾಲಿಂಗಪ್ಪ, ರೇವಪ್ಪ ಹೊಸಕೊಪ್ಪ, ಹುಣಸೂಡು ಶೇಷಪ್ಪ, ಎ.ಡಿ.ಆನಂದ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts