More

    ದಾಳಿಂಬೆಗೆ ದುಂಡಾಣು ಬಾಧೆ

    ರೋಣ: ‘ಇಷ್ಟಪಟ್ಟು ಬಲು ಕಷ್ಟದಿಂದ ಲಕ್ಷಾಂತರ ರೂಪಾಯಿ ವ್ಯಯಿಸಿ 2 ಎರಡು ಎಕರೆಯಲ್ಲಿ ಬೆಳೆದಿದ್ದ ದಾಳಿಂಬೆ ಬೆಳೆಗೆ ಅಂಗಮಾರಿ ದುಂಡಾಣು ಹಾಗೂ ಚುಕ್ಕೆ ರೋಗ ಕಾಣಿಸಿಕೊಂಡಿದೆ. ಪರಿಣಾಮ ಸಾಲ ತೀರಿಸಲು ಪರದಾಡುವ ಸ್ಥಿತಿ ನಿರ್ವಣವಾಗಿದೆ’ ಎನ್ನುತ್ತಾರೆ ಪಟ್ಟಣದ ರೈತ ಬಸವರಾಜ ಶಾಂತಗೇರಿ.

    ಇದು ಕೇವಲ ಬಸವರಾಜ ಅವರ ನೋವಿನ ಮಾತಲ್ಲ. ದಾಳಿಂಬೆ ಬೆಳೆದ ಬಹುತೇಕ ರೈತರ ನೋವಿನ ನುಡಿಯಾಗಿದೆ.

    ಮಾರುಕಟ್ಟೆಯಲ್ಲಿ ದಾಳಿಂಬೆಗೆ ಉತ್ತಮ ಬೆಲೆ ಇದೆ. ಆದರೆ, ಜಮೀನಿನಲ್ಲಿ ಉತ್ತಮ ಫಸಲಿಲ್ಲದೆ ರೈತ ಬಸವರಾಜ ಮರುಗುಂತಾಗಿದೆ. ಮುಂಗಾರು ಆರಂಭದಲ್ಲಿ ದಾಳಿಂಬೆ ಗಿಡಗಳು ಭರ್ಜರಿಯಾಗಿ ಬೆಳೆದು ಮೈದುಂಬಿಕೊಂಡಿದ್ದವು. ಆದರೆ, ಕಾಯಿ ಬಲಿಯುವ ಹಂತದಲ್ಲಿ ರೋಗ ಬಾಧೆಯಿಂದ ಕಳಾಹೀನಗೊಂಡಿವೆ. ಹತ್ತಾರು ವರ್ಷಗಳಿಂದ ದಾಳಿಂಬೆ ಬೆಳೆ ನಂಬಿಕೊಂಡು ಬೇಸಾಯ ಮಾಡುತ್ತಿರುವ ಬಸವರಾಜಗೆ ಪದೇ ಪದೆ ಪ್ರಕೃತಿ ವಿಕೋಪ ಹಾಗೂ ಸಾಂಕ್ರಾಮಿಕ ರೋಗದಿಂದ ಬೆಳೆ ನಷ್ಟ ಉಂಟಾದರೂ ಸರ್ಕಾರದಿಂದ ಯಾವುದೇ ಪರಿಹಾರ ಲಭಿಸುತ್ತಿಲ್ಲ ಎನ್ನುತ್ತಿದ್ದಾರೆ.

    ದಾಳಿಂಬೆ ಗಿಡಗಳಿಗೆ ಏಪ್ರಿಲ್, ಮೇ ತಿಂಗಳಲ್ಲಿ ಅಂಗಮಾರಿ ರೋಗ ಹೆಚ್ಚು ಕಾಣಿಸಿಕೊಳ್ಳುತ್ತದೆ. ಆದರೆ, ಈ ರೋಗ ಇದೀಗ ಹೆಚ್ಚಾಗುತ್ತಿದ್ದು. ಇದನ್ನು ತಡೆಯಲು ಕಾಂಟೋಫ, ಬ್ಯಾಕ್ಟೀರಿಯಾ ನಾಶಕ, ಔಷಧ ಸಿಂಪಡಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ಅವರು ಅಳಲು ತೋಡಿಕೊಂಡರು.

    ಪಟ್ಟಣ ಹಾಗೂ ತಾಲೂಕಿನ ಮುಶಿಗೇರಿ, ನೆಲ್ಲೂರು, ಕಾಲಕಾಲೇಶ್ವರ, ಸೂಡಿ, ಜಕ್ಕಲಿ, ಅಬ್ಬಿಗೇರಿ ಸೇರಿ ಮತ್ತಿತರ ಗ್ರಾಮಗಳಲ್ಲಿ 200ಕ್ಕೂ ಹೆಚ್ಚು ರೈತರು 700 ಕ್ಕೂ ಅಧಿಕ ಎಕರೆ ಜಮೀನಿನಲ್ಲಿ ದಾಳಿಂಬೆ ಬೆಳೆದಿದ್ದಾರೆ. ಇಲ್ಲಿಂದಲೇ ಹುಬ್ಬಳ್ಳಿ, ಬೆಂಗಳೂರು ಸೇರಿ ಇತರ ನಗರಗಳಿಗೆ ದಾಳಿಂಬೆಯನ್ನು ರಫ್ತು ಮಾಡಲಾಗುತ್ತದೆ. ಆದರೆ, ಚುಕ್ಕಿ ( ದುಂಡಾಣು ) ರೋಗದಿಂದ ಬಣ್ಣ ಮತ್ತು ಕಳಾಹೀನವಾಗಿದ್ದರಿಂದ ಮಾರುಕಟ್ಟೆಯಲ್ಲಿ ಬೆಲೆ ಸಿಗುತ್ತಿಲ್ಲ ಎನ್ನುತ್ತಾರೆ ಇಲ್ಲಿನ ರೈತರು.

    ಈ ರೋಗವು ಜಾಂತೋಪಾಸ್, ಆಕ್ಸಿನೋಪೋ ಡಿಸ್​ಪಿವಿ ಪುನಿಕೆ ಎಂಬ ಸೂಕ್ಷ್ಮಾಣು ಜೀವಿಯಿಂದ ಬರುತ್ತದೆ. ಈ ರೋಗಾಣು ಭೂಮಿಯ ಮೇಲೆ ಉದುರಿದ ರೋಗ ಪೀಡಿತ ಎಲೆ ಹಾಗೂ ಕಾಯಿಗಳಲ್ಲಿ ಬದುಕಿರುತ್ತವೆ. ಎಲೆಗಳ ಮೇಲೆ ಚುಕ್ಕೆಗಳು ಕಾಣಿಸಿಕೊಂಡು ಕಾಲ ಕ್ರಮೇಣ ಕಪ್ಪು ಮಿಶ್ರಿತ ಕಂದು ಬಣ್ಣಕ್ಕೆ ತಿರುಗುತ್ತದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯವರು.

    ದುಂಡಾಣು ಹಾಗೂ ಕಾಯಿ ಕೊರಕ ರೋಗ ತಡೆಯಲು ತೋಟಗಾರಿಕೆ ಇಲಾಖೆಯಿಂದ ಹಣ್ಣು ಬೆಳೆಗಾರರಿಗೆ ತಾಂತ್ರಿಕ ಸಲಹೆಗಳನ್ನು ನೀಡಲಾಗಿದೆ. ಹವಾಮಾನ ಆಧರಿಸಿ ಬರುವ ಈ ರೋಗಾಣು ನಿಯಂತ್ರಣ ಸವಾಲಾಗಿ ಪರಿಣಮಿಸಿದೆ. ರೋಗ ಬಾಧೆಯಿಂದ ಇಂತಹ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ನೆರವು ನೀಡಲು ಸರ್ಕಾರದಿಂದ ಯಾವುದೇ ಯೋಜನೆ ರೂಪಿಸಿಲ್ಲ.

    | ಎಂ.ಬಿ. ತಾಂಭೋಟಿ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ

    ನಾಟಿ ಮಾಡುವುದರಿಂದ ಹಿಡಿದು ಫಲ ಬರುವವರೆಗೆ ಒಂದು ಎಕರೆ ದಾಳಿಂಬೆ ಬೆಳೆಯಲು ಒಂದು ಲಕ್ಷ ರೂಪಾಯಿ ಖರ್ಚು ಮಾಡುತ್ತಿದ್ದೇವು. ನಾಟಿ ಮಾಡಿದ ನಾಲ್ಕು ವರ್ಷಕ್ಕೆ ಇನ್ನೇನು ಇಳುವರಿ ಬರುತ್ತದೆ ಎನ್ನುವಷ್ಟರಲ್ಲಿ ದುಂಡಾಣು ಹಾಗೂ ಕಾಯಿ ಕೊರಕ ರೋಗ ವಕ್ಕರಿಸುತ್ತಿತ್ತು. ಹೀಗಾಗಿ ದಾಳಿಂಬೆ ಬೆಳೆಯುವುದನ್ನು ಬಿಟ್ಟು ಬೇರೆ ಬೆಳೆ ಬೆಳೆಯುತ್ತಿದ್ದೇವೆ.

    | ವಿಜಯ ಸಜ್ಜನ ರೈತ, ರೋಣ ಪಟ್ಟಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts