More

    ಪ್ರಭಾರಿಗಳದ್ದೇ ಕಾರ್ಯ‘ಭಾರ’

    ಹರೀಶ್ ಮೋಟುಕಾನ, ಮಂಗಳೂರು

    ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 30ಕ್ಕೂ ಅಧಿಕ ಸರ್ಕಾರಿ ಇಲಾಖೆಗಳಲ್ಲಿ ಹಲವು ಸಮಯಗಳಿಂದ ಪೂರ್ಣಾಧಿಕಾರದ ಅಧಿಕಾರಿಗಳಿಲ್ಲದೆ ಪ್ರಭಾರಿಗಳದ್ದೇ ಕಾರ‌್ಯ‘ಭಾರ’.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 100ಕ್ಕೂ ಅಧಿಕ ಪ್ರಮುಖ ಇಲಾಖೆಗಳ ಜಿಲ್ಲಾ ಕಚೇರಿಗಳಿವೆ. ಆ ಪೈಕಿ 25ಕ್ಕೂ ಹೆಚ್ಚಿನವುಗಳ ಜವಾಬ್ದಾರಿಯನ್ನು ಪ್ರಭಾರಿಗಳೇ ನಿರ್ವಹಿಸುತ್ತಿದ್ದಾರೆ. ಉಡುಪಿಯಲ್ಲೂ ಇದೇ ಪರಿಸ್ಥಿತಿ. 7ಕ್ಕೂ ಹೆಚ್ಚು ಇಲಾಖೆಗಳಲ್ಲಿ ಅಧಿಕಾರಿಗಳು ಹೆಚ್ಚುವರಿ ಹೊಣೆ ನಿರ್ವಹಿಸುತ್ತಿದ್ದಾರೆ. ತನ್ನ ಇಲಾಖೆಯ ಕೆಲಸದ ಒತ್ತಡ, ಜವಾಬ್ದಾರಿಗಳ ಜತೆಗೆ ಹೆಚ್ಚುವರಿಯಾಗಿ ಇತರ ಇಲಾಖೆಗಳ ಹೊಣೆ ಹೊರುವಂತಾಗಿದೆ.

    ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು. ಆದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಆ ಇಲಾಖೆಯ ಸಹಾಯಕ ಆಯುಕ್ತರ ಹುದ್ದೆಯೇ ಖಾಲಿ ಇರುವುದು ಗಮನಾರ್ಹ. ಕರಾವಳಿಯಲ್ಲಿ ಪ್ರವಾಸೋದ್ಯಮ ಮುಖ್ಯ ಕ್ಷೇತ್ರ. ಆದರೆ ಈ ಎರಡೂ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರ ಹುದ್ದೆ ಹಲವು ವರ್ಷಗಳಿಂದ ಖಾಲಿ ಇದೆ.
    ಕ್ರೀಡಾ ಇಲಾಖೆಯ ಉಪನಿರ್ದೇಶಕರು, ರೇಷ್ಮೆ ಇಲಾಖೆಯ ಉಪನಿರ್ದೇಶಕರು, ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯ ಉಪನಿರ್ದೇಶಕರು, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ, ಜಿಲ್ಲಾ ವಕ್ಫ್ ಅಧಿಕಾರಿ, ಎಪಿಎಂಸಿ ಮಂಗಳೂರು ಕಾರ್ಯದರ್ಶಿ, ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ, ಮಹಿಳಾ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ 5 ಹುದ್ದೆಗಳು, ದೇವರಾಜ ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ, ಸಬ್ ರಿಜಿಸ್ಟ್ರಾರ್ ಕಚೇರಿ, ಜಿಲ್ಲಾ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ಹಾಗೂ ತರಬೇತಿ ಇಲಾಖೆ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ, ಜಿ.ಪಂ.ಯೋಜನಾ ನಿರ್ದೇಶಕ, ಭೂದಾಖಲೆಗಳ ಉಪನಿರ್ದೇಶಕ ಸೇರಿದಂತೆ ಜಿಲ್ಲೆಯ ಬಹುತೇಕ ಇಲಾಖೆಯ ಮುಖ್ಯ ಸ್ಥಾನಗಳಲ್ಲಿ ಪ್ರಭಾರಿಗಳ ಮೇಲೆಯೇ ಜವಾಬ್ದಾರಿಯ ಭಾರ ಹಾಕಲಾಗಿದೆ.
    ಉಡುಪಿ ಜಿಲ್ಲೆಯಲ್ಲಿ ನಾಗರಿಕ ಆಹಾರ ಪೂರೈಕೆ ಇಲಾಖೆ, ಧಾರ್ಮಿಕ ದತ್ತಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆರ್‌ಟಿಒ, ಕ್ರೀಡಾ ಇಲಾಖೆಗಳಲ್ಲಿ ಪ್ರಭಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಆಗಾಗ ಬದಲಾವಣೆ ಆಗುತ್ತಿರುತ್ತಾರೆ. ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಹುದ್ದೆ ಖಾಲಿ ಇದ್ದು, ಮಂಗಳೂರಿನ ಹಿರಿಯ ಸಹಾಯಕ ನಿರ್ದೇಶಕರಿಗೆ ಜವಾಬ್ದಾರಿ ನೀಡಲಾಗಿದೆ. ಎರಡೂ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಇಲಾಖಾಧಿಕಾರಿ ಇಲ್ಲದೆ 10 ವರ್ಷಗಳೇ ಕಳೆದಿವೆ. ಸುಮಾರು 10ಕ್ಕೂ ಅಧಿಕ ಅಧಿಕಾರಿಗಳು ಎರಡೂ ಜಿಲ್ಲೆಗಳಲ್ಲಿ ಕಾರ‌್ಯ ನಿರ್ವಹಿಸುತ್ತಿದ್ದಾರೆ.

    ಪ್ರಭಾರದ ಕಚೇರಿಯಲ್ಲಿ ಹುದ್ದೆ ಖಾಲಿ
    ಈ ಇಲಾಖೆಗಳಲ್ಲಿ ಮುಖ್ಯ ಹುದ್ದೆಗಳು ಪ್ರಭಾರವಿರುವ ಜತೆಗೆ, ಉಳಿದ ಹುದ್ದೆಗಳು ಖಾಲಿಯಾಗಿದೆ ಎಂಬುದು ಕೂಡ ವಿಶೇಷ. ಬಹುತೇಕ ಇಲಾಖೆಯ ಕಚೇರಿ ನಿರ್ವಹಣೆ ಕೂಡ ಪೂರ್ಣ ಸಿಬ್ಬಂದಿ ಇಲ್ಲದೆ ಚಿಂತಾಜನಕ ಎನ್ನುವ ಪರಿಸ್ಥಿತಿಯಲ್ಲಿದೆ. ಆರೋಗ್ಯ ಇಲಾಖೆ, ಸರ್ಕಾರಿ ಆಸ್ಪತ್ರೆ, ಗಣಿ ಮತ್ತು ಭೂ ವಿಜ್ಞಾನ, ಕೆಎಸ್‌ಆರ್‌ಟಿಸಿ, ಸೇರಿದಂತೆ ಹಲವು ಇಲಾಖೆಗಳಲ್ಲಿ ಸಿಬ್ಬಂದಿ ನೇಮಕ ಪೂರ್ಣಮಟ್ಟದಲ್ಲಿ ಆಗದೆ ಹುದ್ದೆಗಳೆಲ್ಲ ಖಾಲಿ ಇದೆ. ನಿವೃತ್ತರಾದವರ ಹುದ್ದೆಗೆ ಹೊಸ ನೇಮಕಾತಿ ಆಗದೆ ದಶಕವೇ ಕಳೆದಿವೆ.
    ಮಂಗಳೂರು ಮಹಾನಗರ ಪಾಲಿಕೆಗೆ ಒಟ್ಟು 1725ರಷ್ಟು ಹುದ್ದೆಗೆ ಮಂಜೂರಾತಿ ದೊರಕಿದ್ದರೆ, ಇಲ್ಲಿ 1000ಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಮುಡಾದಲ್ಲಿಯೂ ಇಂತಹುದೇ ಪರಿಸ್ಥಿತಿ. ಜಿಲ್ಲಾಧಿಕಾರಿ ಕಚೇರಿ-ಜಿಲ್ಲಾ ಪಂಚಾಯಿತಿ-ತಾಲೂಕು ಪಂಚಾಯಿತಿಯಲ್ಲೂ ಕೆಲವು ಹುದ್ದೆಗಳು ಖಾಲಿ ಇದ್ದರೆ, ಬಹುತೇಕ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲಾಗಿದೆ. ಜಿಲ್ಲೆಯ ಪುರಸಭೆ, ನಗರ ಸಭೆ, ಪಟ್ಟಣ ಪಂಚಾಯಿತಿಯಲ್ಲೂ ಸಿಬ್ಬಂದಿ ಕೊರತೆ ಬಹುವಾಗಿ ಕಾಡುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಸದ್ಯ ಪ್ರಭಾರ ಜವಾಬ್ದಾರಿಯಲ್ಲಿದ್ದಾರೆ. ವಿಶೇಷವೆಂದರೆ ಅವರಿಗೇ ಇದೀಗ ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಜವಾಬ್ದಾರಿ ವಹಿಸಲಾಗಿದೆ. ಉಡುಪಿ ಕನ್ನಡ ಸಂಸ್ಕೃತಿ ಇಲಾಖೆಯ ಬೆರಳಚ್ಚುಗಾರರೊಬ್ಬರಿಗೆ ಬ್ಯಾರಿ ಸಾಹಿತ್ಯ ಅಕಾಡೆಮಿಯ ಪ್ರಭಾರ ರಿಜಿಸ್ಟ್ರಾರ್ ಜವಾಬ್ದಾರಿ ನೀಡಲಾಗಿದೆ. ಕೊಂಕಣಿ, ಅರೆಭಾಷೆ ಅಕಾಡೆಮಿಗೂ ಖಾಯಂ ರಿಜಿಸ್ಟ್ರಾರ್ ನೇಮಕ ಮಾಡುವುದಕ್ಕೂ ಸರ್ಕಾರ ನಿರಾಸಕ್ತಿ ತೋರಿದೆ. ರಾಜ್ಯದ ಎರಡನೇ ಅತಿ ದೊಡ್ಡ ಸಾರಿಗೆ ಕಚೇರಿಯಾದ ಮಂಗಳೂರು ಪ್ರಾದೇಶಿಕ ಸಾರಿಗೆ ಕಚೇರಿಯು (ಆರ್‌ಟಿಒ)ಪೂರ್ಣಾವಧಿ ಸಾರಥಿ ಇಲ್ಲದೆ ನಾಲ್ಕು ವರ್ಷಗಳೇ ಕಳೆದಿದೆ. 2015 ಆ.31ರಂದು ಆರ್‌ಟಿಒ ಅವರು ಸೇವೆಯಿಂದ ನಿವೃತ್ತರಾಗಿದ್ದರು. ಈ ಹುದ್ದೆ ಕಳೆದ 4 ವರ್ಷದಿಂದಲೂ ಭರ್ತಿಯಾಗಲೇ ಇಲ್ಲ. ಪರಿಣಾಮವಾಗಿ ಕೆಲವು ತಿಂಗಳಿಗೆ ಒಬ್ಬರಂತೆ ಹಲವು ಸಹಾಯಕ ಸಾರಿಗೆ ಅಧಿಕಾರಿಗಳು ಪ್ರಭಾರವಾಗಿಯೇ ಇಲ್ಲಿ ಕಾರ‌್ಯನಿರ್ವಹಿಸುವಂತಾಗಿದೆ. ಜತೆಗೆ, ಪ್ರಾಧಿಕಾರದಲ್ಲಿ ಮಂಜೂರಾತಿಯಾದ ಹಲವು ಹುದ್ದೆಗಳು ಕೂಡ ಖಾಲಿಯಾಗಿವೆ.

    ಎರಡು ಜಿಲ್ಲೆಗಳಿಗೆ ಓರ್ವ ಅಧಿಕಾರಿ
    ದ.ಕ.ಜಿಲ್ಲಾ ಮಟ್ಟದ ಕೆಲವು ಇಲಾಖೆಯ ಅಧಿಕಾರಿಗಳಿಗೆ ಎರಡು ಜಿಲ್ಲೆಯ ಜವಾಬ್ದಾರಿ ನೀಡಿರುವುದರಿಂದ ಅವರು ಎರಡು ಜಿಲ್ಲೆಗಳಿಗೂ ಹೋಗಿ-ಬಂದು ಕೆಲಸ ಮಾಡುವ ಒತ್ತಡವಿದೆ. ಮಂಗಳೂರು ಪಾಲಿಕೆ ಸೇರಿದಂತೆ ಇನ್ನೂ ಕೆಲವೆಡೆ ನಿವೃತ್ತಿ ಆದವರನ್ನೇ ಮುಖ್ಯ ಹುದ್ದೆಗಳಲ್ಲಿ ಮುಂದುವರಿಸಲಾಗಿದೆ. ಜಿಲ್ಲೆಯ ಸರ್ಕಾರಿ ಶಾಲೆ-ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿಯೂ ಕೆಲವು ಹುದ್ದೆಗಳು ಖಾಲಿಯಾಗಿವೆ. 1 ಗ್ರಾ.ಪಂ.ನ ಪಿಡಿಒಗೆ ಮತ್ತೊಂದು ಗ್ರಾ.ಪಂ.ನ ಹೆಚ್ಚುವರಿ ಹೊಣೆ ಜಿಲ್ಲೆಯಲ್ಲಿ ಸಾಮಾನ್ಯವಾಗಿದೆ.

    ರಾಜ್ಯದ ಹೆಚ್ಚಿನ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಸಮಸ್ಯೆ ಇದೆ. ನೇಮಕಾತಿಗೆ ಕೆಲವೊಂದು ಮಾರ್ಗಸೂಚಿಗಳಿವೆ. ಕರಾವಳಿ ಜಿಲ್ಲೆಗಳಲ್ಲಿ ಅಗತ್ಯ ಇಲಾಖೆಗಳ ಪ್ರಮುಖ ಹುದ್ದೆಗಳಿಗೆ ನೇಮಕಾತಿ ಮಾಡುವ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
    – ಕೋಟ ಶ್ರೀನಿವಾಸ ಪೂಜಾರಿ,
    ಉಸ್ತುವಾರಿ ಸಚಿವ, ದ.ಕ ಜಿಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts