More

    ಮಾಸ್ಕ್, ಸ್ಯಾನಿಟೈಸರ್ ಹಾಕಿದ್ರೂ ಅಂತರವಿಲ್ಲ!

    ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸಾರ್ವಜನಿಕ ಸೇವೆ ನೀಡುವ ಸರ್ಕಾರಿ ಕಚೇರಿ ಮತ್ತು ಬ್ಯಾಂಕುಗಳಲ್ಲಿ ಕೈಗೊಳ್ಳಲಾಗಿರುವ ಕರೊನಾ ನಿಯಂತ್ರಣ ಕ್ರಮಗಳ ಕುರಿತು ‘ವಿಜಯವಾಣಿ’ ಶುಕ್ರವಾರ ನಡೆಸಿದ ರಿಯಾಲಿಟಿ ಚೆಕ್ ಇಲ್ಲಿದೆ.

    ಮಂಗಳೂರು: ಒಳಗೆ ಪ್ರವೇಶಿಸುವಾಗ ಥರ್ಮಲ್ ಮೀಟರ್‌ನಲ್ಲಿ ತಾಪಮಾನ ಪರೀಕ್ಷೆ, ಮುಖಕ್ಕೆ ಮಾಸ್ಕ್ ಬಳಕೆ ಕಡ್ಡಾಯವಾದರೂ, ದೈಹಿಕ ಅಂತರ ಪಾಲನೆಯೇ ಇಲ್ಲ. ಕರೊನಾ ನಿಯಂತ್ರಣ ವ್ಯವಸ್ಥೆಗೆ ಇದು ಸವಾಲೊಡ್ಡುತ್ತಿದೆ.
    ಶುಕ್ರವಾರ ಮಹಾನಗರ ಪಾಲಿಕೆ ಕಚೇರಿಯ ಚಿತ್ರಣವಿದು. ಕಚೇರಿಗೆ ಪ್ರವೇಶಿಸುವ ಪ್ರತಿಯೊಬ್ಬರನ್ನೂ ಸೆಕ್ಯುರಿಟಿ ಸಿಬ್ಬಂದಿ ದೇಹದ ತಾಪಮಾನ ಪರೀಕ್ಷಿಸಿ ಒಳಗೆ ಬಿಡುತ್ತಿದ್ದರೂ ಒಳಗೆ ಹೋದ ಬಳಿಕ ಅಲ್ಲಿ ಜನರನ್ನು ಕೇಳುವವರಿಲ್ಲ. ಜನನ-ಮರಣ ಪ್ರಮಾಣಪತ್ರ ಕೌಂಟರ್ ಬಳಿ ಜನಜಂಗುಳಿಯೇ ಕಂಡುಬಂದಿದೆ. ಮಹಾನಗರ ಪಾಲಿಕೆಗೆ ಮಾತ್ರ ಸದ್ಯ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿಯಿದ್ದು, ಪ್ರತಿನಿತ್ಯ ನೂರಾರು ಮಂದಿ ತಮ್ಮ ಕೆಲಸ ಮಾಡಿಸಿಕೊಳ್ಳಲು ಕಚೇರಿಗೆ ಬರುತ್ತಿದ್ದಾರೆ.

    ಯಾವುದೇ ವಿಭಾಗಕ್ಕೂ ಸಾರ್ವಜನಿಕರಿಗೆ ನೇರ ಪ್ರವೇಶಿಸಲು ಅನುಮತಿಯಿದೆ. ಹೀಗಾಗಿ ವಿಭಾಗಗಳ ಹೊರಗೆ ಗುಂಪಾಗಿ ನಿಂತು ಕಾಯುತ್ತಿರುವುದು ಕಂಡುಬಂದಿದೆ. ಶೇ.95 ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದು, ಎಲ್ಲರೂ ಮಾಸ್ಕ್ ಧರಿಸಿಯೇ ಕೆಲಸ ಮಾಡುತ್ತಿದ್ದಾರೆ.

    ಡಿಸಿ ಕಚೇರಿ, ಜಿಪಂ-ತಾಪಂಗಳಿಗೆ ಪ್ರವೇಶವಿಲ್ಲ
    ದ.ಕ.ಜಿ.ಪಂ, ಮಿನಿವಿಧಾನ ಸೌಧ, ತಾಪಂ, ಜಿಲ್ಲಾಧಿಕಾರಿ ಕಚೇರಿಗಳಿಗೆ ಸಾರ್ವಜನಿಕ ಪ್ರವೇಶಕ್ಕೆ ಅನುಮತಿ ಇಲ್ಲ. ಬಸ್ ಸಂಚಾರ ಇಲ್ಲದ ಕಾರಣ ದೂರದ ಪ್ರದೇಶಗಳಿಂದ ಬರುವ ಜನರ ಸಂಖ್ಯೆ ಕಡಿಮೆ. ತೀರಾ ಅಗತ್ಯ ಕೆಲಸಗಳಿಗೆ ಬರುವವರನ್ನು ಮಾತ್ರ ಭದ್ರತಾ ಸಿಬ್ಬಂದಿ ಒಳಗೆ ಬಿಡುತ್ತಿದ್ದಾರೆ. ಸಿಬ್ಬಂದಿ ಮಾಸ್ಕ್ ಧರಿಸಿ ಕೆಲಸ ಮಾಡುತ್ತಿದ್ದಾರೆ.

    ಬ್ಯಾಂಕ್‌ಗಳಲ್ಲಿ ಕಟ್ಟುನಿಟ್ಟು
    ಪ್ರಧಾನ ಕಚೇರಿ ಸೂಚನೆಗಳನ್ನು ಎಲ್ಲ ಬ್ಯಾಂಕ್ ಶಾಖೆಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಕೆಲವು ಶಾಖೆಗಳಲ್ಲಿ ಗ್ರಾಹಕರ ದೈಹಿಕ ತಾಪಮಾನ ಪರೀಕ್ಷಿಸಿ ಒಳಬಿಡಲಾಗುತ್ತಿದೆ. ಗ್ರಾಹಕರು, ಸಿಬ್ಬಂದಿ ಸ್ಯಾನಿಟೈಸರ್ ಬಳಸಿಯೇ ಕಚೇರಿ ಒಳಗೆ ಪ್ರವೇಶಿಸಬೇಕು. ಭದ್ರತಾ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಗ್ರಾಹಕರ ಸಂಖ್ಯೆ ಹಿಂದೆಗಿಂತ ಕಡಿಮೆ ಇದೆ. ಸಂಖ್ಯೆ ಹೆಚ್ಚಾದರೆ ಇಂತಿಷ್ಟೇ ಜನರನ್ನು ಒಳಗೆ ಬಿಡುವ ಕೆಲಸವನ್ನು ಭದ್ರತಾ ಸಿಬ್ಬಂದಿ ಮಾಡುತ್ತಿದ್ದಾರೆ.

    ಉಡುಪಿ ಸರ್ಕಾರಿ ಕಚೇರಿಗಳಲ್ಲೇ ಆದೇಶಕ್ಕೆ ಕಿಮ್ಮತ್ತಿಲ್ಲ
    ಉಡುಪಿ: ಹೊರ ರಾಜ್ಯಗಳಿಂದ ಬಂದವರಿಂದಾಗಿ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಕೋವಿಡ್ ಪ್ರಕರಣಗಳು ಕಂಡುಬರುತ್ತಿರುವ ಜಿಲ್ಲೆಯಲ್ಲಿ ದೈಹಿಕ ಅಂತರ ಪಾಲನೆ, ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ ಬಳಕೆ ಆದೇಶ ಪಾಲನೆ ಆಗುತ್ತಿಲ್ಲ. ಸರ್ಕಾರಿ ಕಚೇರಿ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿಯೂ ಈ ಆದೇಶವನ್ನು ಗಂಭೀರವಾಗಿ ಪರಿಗಣಿಸಿಲ್ಲ.
    ಪ್ರಸ್ತುತ ಸರ್ಕಾರಿ ಕಚೇರಿಗಳಿಗೆ ಬೆರಳೆಣಿಕೆಯಷ್ಟೇ ಸಾರ್ವಜನಿಕರು ಆಗಮಿಸುತ್ತಿದ್ದಾರೆ. ಉಪ ನೋಂದಣಾಧಿಕಾರಿ ಕಚೇರಿ ಹೊರತುಪಡಿಸಿ ಬೇರೆಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕಂಡುಬಂದಿಲ್ಲ. ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ದೈಹಿಕ ಅಂತರ ಪಾಲಿಸಿಲ್ಲ. ನೆಲದಲ್ಲಿ ವೃತ್ತಾಕಾರದ ಚಿಹ್ನೆಯಿದ್ದರೂ ಸಾರ್ವಜನಿಕರು ದೈಹಿಕ ಅಂತರ ಪಾಲಿಸದೆ ಒಟ್ಟೊಟ್ಟಿಗೆ ಕುಳಿತುಕೊಂಡಿದ್ದರು.

    ಕೆಲವರು ಮಾಸ್ಕ್ ಧರಿಸದೆ ಕಚೇರಿಗೆ ಬಂದಿದ್ದರು. ಸಿಬ್ಬಂದಿ, ಅಧಿಕಾರಿಗಳು ಕೂಡ ಸಲಹೆ, ಸೂಚನೆ ನೀಡುತ್ತಿರಲಿಲ್ಲ. ಸ್ಯಾನಿಟೈಸರ್ ಬಳಕೆಯೂ ಇಲ್ಲ. ನಗರಸಭೆಯಲ್ಲಿ ಕಚೇರಿ ಒಳಗೆ ಹೋಗುವಾಗ ಸಿಬ್ಬಂದಿ ಸ್ಯಾನಿಟೈಸರ್ ನೀಡುತ್ತಿದ್ದರು. ಅದು ಬಿಟ್ಟರೆ ಸಿಬ್ಬಂದಿ ಮತ್ತು ಸಾರ್ವಜನಿಕರ ನಡುವೆ ದೈಹಿಕ ಅಂತರ ಇರಲಿಲ್ಲ.
    ಬ್ಯಾಂಕುಗಳಲ್ಲಿ ಪಾಲನೆ: ರಾಷ್ಟ್ರೀಕೃತ ಬ್ಯಾಂಕುಗಳ ಪೈಕಿ ಕೆಲವು ಶಾಖೆಗಳಲ್ಲಿ ಮಾತ್ರ ಕೋವಿಡ್-19 ನಿಯಮಾವಳಿಗಳನ್ನು ಅನುಸರಿಸಲಾಗುತ್ತಿದೆ. ಕೆಲವು ಶಾಖೆಗಳಲ್ಲಿ ಸ್ಯಾನಿಟೈಸರ್ ಇಲ್ಲ. ಸಿಬ್ಬಂದಿ ಪರಸ್ಪರ ಸಂವಹನ ನಡೆಸುವಾಗ ಮಾಸ್ಕ್ ಧರಿಸಿರಲಿಲ್ಲ. ಬ್ಯಾಂಕ್‌ಗೆ ಬರುವ ಕೆಲವು ಗ್ರಾಹಕರೂ ಮಾಸ್ಕ್ ಧರಿಸಿರಲಿಲ್ಲ. ನಗರದ ಬಹುತೇಕ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಗ್ರಾಹಕರು ಮತ್ತು ಸಿಬ್ಬಂದಿ ನಡುವೆ ದೈಹಿಕ ಅಂತರ ಪಾಲನೆಗಾಗಿ ಹಗ್ಗಗಳನ್ನು ಕಟ್ಟಿ, ಅಲ್ಯೂಮಿನಿಯಂ ಬ್ಯಾರಿಕೇಡ್ ಇಡಲಾಗಿದೆ.

    ಡಿಸಿ, ಜಿಪಂ ಕಚೇರಿಯಲ್ಲಿ ಪರಿಸ್ಥಿತಿ ಹೇಗಿದೆ?
    ಜಿಪಂ ಮತ್ತು ಜಿಲ್ಲಾಧಿಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಓಡಾಟ ಇಲ್ಲ. ಅಗತ್ಯ ಕೆಲಸಕ್ಕೆ ಮಾತ್ರ ಬೆರಳೆಣಿಕೆಯಷ್ಟು ಮಂದಿ ಸಾರ್ವಜನಿಕರು ಕಚೇರಿಗಳಿಗೆ ಬರುತ್ತಿದ್ದಾರೆ. ಡಿಸಿ ಕಚೇರಿಗೆ ಬರುವ ಮುನ್ನ ಕೈತೊಳೆದು ಕಚೇರಿ ಒಳಗೆ ಬರುವಂತೆ ತಾತ್ಕ್ಕಾಲಿಕ ಹ್ಯಾಂಡ್ ವಾಶ್ ಬೇಸಿನ್ ಇಡಲಾಗಿದೆ. ಕೆಲವರಷ್ಟೇ ಇದನ್ನು ಪಾಲಿಸುತ್ತಿದ್ದಾರೆ. ಬಹುತೇಕ ಅಧಿಕಾರಿ, ಸಿಬ್ಬಂದಿ ಪಾಲಿಸುತ್ತಿಲ್ಲ. ಕಚೇರಿ ಆವರಣದಲ್ಲಿ ಅಕ್ಕಪಕ್ಕದ ಕಚೇರಿ ಸಿಬ್ಬಂದಿ ಪರಸ್ಪರ ಮಾತುಕತೆಯಲ್ಲಿ ತೊಡಗಿಸಿಕೊಂಡಿದ್ದಾಗ ದೈಹಿಕ ಅಂತರ ನಿರ್ಲಕ್ಷಿಸುತ್ತಿದ್ದಾರೆ. ಮಾಸ್ಕ್ ಧರಿಸಿದ್ದರೂ ಕಚೇರಿಯೊಳಗೆ ದೈಹಿಕ ಅಂತರ ಪಾಲನೆ ಆಗುತ್ತಿಲ್ಲ, ಬನ್ನಂಜೆಯಲ್ಲಿರುವ ತಾಲೂಕು ಆಫೀಸ್ ಕತೆಯೂ ಇದೇ.

    ಮಾಸ್ಕ್ ಕಿರಿಕಿರಿ ಎನ್ನುವ ಮಂದಿ!
    ಸಾರ್ವಜನಿಕ ಸ್ಥಳದಲ್ಲಿ ಬಹುತೇಕ ಮಂದಿ ಮಾಸ್ಕ್ ಧರಿಸುತ್ತಿಲ್ಲ. ಮಾಸ್ಕ್ ಕಿರಿಕಿರಿ ಎಂದು ಹಲವರು ಹಿಂದೇಟು ಹಾಕುತ್ತಿದ್ದಾರೆ. ಆರೋಗ್ಯ ರಕ್ಷಣೆಗಿಂತ ಕಾಟಾಚಾರಕ್ಕೆ ಎಂಬಂತೆ ಮಾಸ್ಕ್ ಧರಿಸುವವರೂ ಇದ್ದಾರೆ. ಮಾಸ್ಕ್ ಧರಿಸದ ಕಾರಣಕ್ಕೆ ನಗರದಲ್ಲಿ 63 ಮಂದಿಗೆ ದಂಡ ವಿಧಿಸಲಾಗಿದೆ. ಆದರೂ ಕೆಲವರು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ನಗರದ ಅಂಗಡಿ, ಮಾರುಕಟ್ಟೆಗಳಲ್ಲಿ ಸಾರ್ವಜನಿಕರಿಂದ ದೈಹಿಕ ಅಂತರ ಪಾಲನೆಯಾಗುತ್ತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts