More

    ದಿಢೀರ್ ಏರಿಕೆ ನೀಡಿದ ಹೊಡೆತ, ಕೊನೇ ಕ್ಷಣಕ್ಕೆ ಕೈತಪ್ಪಿದ ಗ್ರೀನ್ ರೆನ್

    ಮಂಗಳೂರು: ಒಂದು ಹಂತದವರೆಗೂ ನಿರಂತರವಾಗಿ ಹಸುರು ವಲಯ ಆಗುವತ್ತ ಮುನ್ನಡೆದಿದ್ದ ದಕ್ಷಿಣ ಕನ್ನಡ ಜಿಲ್ಲೆ ದಿಢೀರ್ ಆಗಿ ಏರತೊಡಗಿದ ಕರೊನಾ ಪ್ರಕರಣಗಳಿಂದ ಲಾಕ್‌ಡೌನ್ ಹೊಡೆತ ಅನುಭವಿಸುವಂತಾಗಿದೆ.

    ನೆರೆಯ ಉಡುಪಿ ಜಿಲ್ಲೆಯಲ್ಲಿ ಇಡೀ ಸ್ಥಿತಿಯ ನಿರ್ವಹಣೆ ಉತ್ತಮವಾಗಿದ್ದು, ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದರಿಂದಾಗಿ ಪ್ರಕರಣಗಳೆಲ್ಲವೂ ನೆಗೆಟಿವ್ ಆಗಿ ಗ್ರೀನ್ ರೆನ್‌ಗೆ ಬರುವಂತಾಗಿದೆ.
    ಮಾ.22ರಂದು ಮೊದಲ ಪ್ರಕರಣ ವರದಿಯಾಗಿ ಏ.4ರ ವೇಳೆಗೆ 12 ಪಾಸಿಟಿವ್ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗಿದ್ದರಿಂದ ದ.ಕ ಜಿಲ್ಲೆ ರೆಡ್ ಜೋನ್‌ಗೆ ಹೋಗಿತ್ತು. ಆ ಬಳಿಕ ನಿರಂತರವಾಗಿ ಏ.17ರ ವರೆಗೂ ಪಾಸಿಟಿವ್ ಇರಲಿಲ್ಲ, ಇನ್ನೊಂದು ದಿನದಲ್ಲೂ ಪ್ರಕರಣ ಇಲ್ಲದಿದ್ದರೆ ಗ್ರೀನ್ ಜೋನ್‌ಗೆ ಹೋಗುವ ಸಾಧ್ಯತೆ ಇತ್ತು. ಆದರೆ 17ರಂದು ಮತ್ತೊಂದು ಪಾಸಿಟಿವ್ ಬಂತು, ಆ ಬಳಿಕ ಎರಡು ಕರೊನಾ ಸಾವು ಸೇರಿದಂತೆ ಪ್ರಕರಣಗಳ ಸಂಖ್ಯೆ 21ಕ್ಕೆ ಏರಿತು(ಇದರಲ್ಲಿ ಕೇರಳ/ಕಾರ್ಕಳದಿಂದ ಇಲ್ಲಿ ಚಿಕಿತ್ಸೆ ಪಡೆದವರೂ ಸೇರಿದ್ದಾರೆ)

    ಕಿತ್ತಳೆಯಾದ್ರೂ ಪ್ರಯೋಜನವಿಲ್ಲ: ರಾಜ್ಯ ಸರ್ಕಾರ ವಲಯ ವರ್ಗೀಕರಣದಲ್ಲಿ ಏ.27ರಂದು ಬದಲಾವಣೆ ಮಾಡಿದೆ. ಅದರಂತೆ ಪ್ರಸ್ತುತ ದ.ಕ ಜಿಲ್ಲೆ ರೆಡ್‌ನಿಂದ ಆರೆಂಜ್ ರೆನ್‌ಗೆ ಬಂದಿದೆ. ಯಾವುದೇ ಹಾಲಿ ಕರೊನಾ ಪ್ರಕರಣ ಇಲ್ಲದಿದ್ದರೆ ಹಸಿರು, 1ರಿಂದ 5 ಇದ್ದಲ್ಲಿ ಹಳದಿ, 6ರಿಂದ 14 ಪ್ರಕರಣ ಇದ್ದರೆ ಕಿತ್ತಳೆ ಹಾಗೂ 15ರ ಮೇಲ್ಪಟ್ಟು ಕೆಂಪು ವಲಯ ಎಂದು ಘೋಷಿಸಿದೆ. ಇತರ ರಾಜ್ಯ/ಜಿಲ್ಲೆಯವರು ಮಂಗಳೂರಿನಲ್ಲಿ ಚಿಕಿತ್ಸೆ ಪಡೆದವರನ್ನು ಈಗ ಪಟ್ಟಿಯಲ್ಲಿ ಹೊರತುಪಡಿಸಲಾಗಿದೆ. ಹಾಗಾಗಿ ದ.ಕ ರೆಡ್‌ನಿಂದ ಕಿತ್ತಳೆ ವಲಯಕ್ಕೆ ಬಂದಿದೆ.

    ದ.ಕ ಕರೊನಾ ಸಂಖ್ಯೆ 21 ಅಲ್ಲ 15: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಮೊದಲು ಒಟ್ಟು ಕರೊನಾ ಪಾಸಿಟಿವ್ ಸಂಖ್ಯೆಯಲ್ಲಿ ಕಾಸರಗೋಡು, ಕಾರ್ಕಳ ಜಿಲ್ಲೆಯವರನ್ನೂ ಸೇರಿಸಿಕೊಳ್ಳಲಾಗಿತ್ತು. ಆದರೆ ದ.ಕ ಜಿಲ್ಲಾಡಳಿತ ಮಂಗಳವಾರ ಕರೊನಾ ರೋಗಿಗಳ ಸಂಖ್ಯೆಯಲ್ಲಿ ಬದಲಾವಣೆ ಮಾಡಿದೆ. ಇದುವರೆಗೆ ಹೊರ ರಾಜ್ಯ/ಜಿಲ್ಲೆಗಳಿಂದ ಮಂಗಳೂರಿಗೆ ಬಂದು ಇಲ್ಲಿ ಚಿಕಿತ್ಸೆ ಪಡೆದವರನ್ನು ಪ್ರತ್ಯೇಕವಾಗಿ ತೋರಿಸಲಾಗಿದೆ. ಜಿಲ್ಲೆಯ ನಿವಾಸಿಗಳನ್ನೂ ಪ್ರತ್ಯೇಕವಾಗಿ ಪಟ್ಟಿ ಮಾಡಲಾಗಿದೆ. ಅದರಂತೆ ಭಟ್ಕಳ ಹಾಗೂ ಉಡುಪಿಯ ತಲಾ 1, ಕೇರಳದ 4 ಪ್ರಕರಣಗಳನ್ನು ಈಗ ಪ್ರತ್ಯೇಕಗೊಳಿಸಲಾಗಿದೆ.

    ದ.ಕ.ಹೊಸ ಪ್ರಕರಣ ಇಲ್ಲ: ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಯಾವುದೇ ಹೊಸ ಕೊವಿಡ್ ಪ್ರಕರಣ ವರದಿಯಾಗಿಲ್ಲ. ಒಟ್ಟು 46 ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದೆ, ಎನ್‌ಐಟಿಕೆಯಲ್ಲಿ 59, ಇಎಸ್‌ಐನಲ್ಲಿ 40 ಮಂದಿಯನ್ನು ನಿಗಾವಣೆಯಲ್ಲಿರಿಸಲಾಗಿದೆ. ಮಂಗಳವಾರ 297 ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದ್ದು ಸಿಕ್ಕಿರುವ ಎಲ್ಲಾ 101 ವರದಿಗಳೂ ನೆಗೆಟಿವ್. ಇನ್ನೂ 536 ವರದಿಗಳು ಬರುವುದು ಬಾಕಿ ಇದೆ. ಹೊಸದಾಗಿ 9 ಪ್ರಕರಣಗಳನ್ನು ನಿಗಾ ಇರಿಸುವುದಕ್ಕಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಸಿರಾಟ ಸಮಸ್ಯೆಯ 5 ಪ್ರಕರಣಗಳು ಪತ್ತೆಯಾಗಿವೆ ಎಂದು ಡಿಸಿ ಪ್ರಕಟಣೆ ತಿಳಿಸಿದೆ.

    25 ಮಂದಿ ವರದಿ ನೆಗೆಟಿವ್
    ಉಡುಪಿ: ಜಿಲ್ಲಾಡಳಿತ ಮಂಗಳವಾರ ಸ್ವೀಕರಿಸಿದ ಎಲ್ಲ 25 ಶಂಕಿತ ಕರೊನಾ ಪ್ರಕರಣಗಳ ವರದಿ ನೆಗೆಟಿವ್ ಬಂದಿದೆ. ಉಸಿರಾಟದ ತೊಂದರೆ 11, ಇಲ್‌ನೆಸ್‌ಗೆ ಸಂಬಂಧಿಸಿ 3, ಕೋವಿಡ್-19 ಸೋಂಕಿತರ ಸಂಪರ್ಕಕ್ಕೆ ಒಳಗಾದ 18 ಮಂದಿ, ಇತರೆ ಹಾಟ್‌ಸ್ಪಾಟ್ ಜಿಲ್ಲೆಗಳಿಂದ ಬಂದ ಐವರು ಸೇರಿದಂತೆ ಒಟ್ಟು 37 ಮಂದಿಯ ಮಾದರಿಯನ್ನು ಮಂಗಳವಾರ ಸಂಗ್ರಹಿಸಲಾಗಿದೆ. 14 ಮಂದಿ ಐಸೊಲೇಷನ್ ವಾರ್ಡ್‌ಗೆ ದಾಖಲಾಗಿದ್ದಾರೆ. ಇನ್ನೂ 52 ಮಂದಿಯ ವರದಿ ಬರಲು ಬಾಕಿ ಇದೆ. ಮಂಗಳವಾರ 17 ಮಂದಿ 28 ದಿನದ ಕ್ವಾರಂಟೈನ್ ಪೂರೈಸಿದ್ದಾರೆ. ಐಸೊಲೇಷನ್ ವಾರ್ಡ್‌ನಿಂದ 19 ಮಂದಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

    ಮಿಜಾರಿನ ವ್ಯಕ್ತಿಗೆ ಹೋಂ ಕ್ವಾರಂಟೈನ್
    ಗುರುಪುರ: ಬಂಟ್ವಾಳದಲ್ಲಿ ಕರೊನಾ ಸೋಂಕು ಪ್ರಕರಣ ಪತ್ತೆಯಾದ ಸಂದರ್ಭ ಕುಪ್ಪೆಪದವಿನ ದಂಪತಿ ಮಗುವಿನೊಂದಿಗೆ ಬಂಟ್ವಾಳದ ಕಕ್ಕೆಪದವು ಎಂಬಲ್ಲಿಗೆ ಹೋಗಿ, ಮನೆಗೆ ಮರಳಿದ್ದರಿಂದ ಕುಪ್ಪೆಪದವಿನಲ್ಲಿ ಆತಂಕ ಉಂಟಾಗಿದೆ. ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿ ದಂಪತಿ ಮನೆಗೆ ಭೇಟಿ ನೀಡಿ, ಮುಂದಿನ ಆದೇಶದವರೆಗೆ ಮನೆಯಿಂದ ಹೊರಬರಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ರೋಗಿಯೊಬ್ಬರನ್ನು ಮಂಗಳೂರಿನ ಫಸ್ಟ್‌ನ್ಯೂರೋ ಆಸ್ಪತ್ರೆಗೆ ದಾಖಲಿಸಲು ಹೋಗಿದ್ದ ಮಿಜಾರಿನ ವ್ಯಕ್ತಿಯೊಬ್ಬರನ್ನು ಹೋಂ ಕ್ವಾರಂಟೈನ್ ಇರುವಂತೆ ಸೂಚಿಸಲಾಗಿದೆ. ಇದೇ ವೇಳೆ ಗುರುಪುರ ಮಠದ ಸೈಟ್‌ಗೆ ಮೈಸೂರಿನಿಂದ ಕುಟುಂಬವೊಂದು ಮರಳಿದ್ದು, ಅಧಿಕಾರಿಗಳ ತಂಡ ಆ ಮನೆಗೆ ತೆರಳಿ ಎಲ್ಲರೂ ಹೋಂ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಿದೆ ಎನ್ನಲಾಗಿದೆ.

    ಕಾಸರಗೋಡಿನ ಒಬ್ಬರಲ್ಲಿ ಸೋಂಕು
    ಕಾಸರಗೋಡು: ಜಿಲ್ಲೆಯಲ್ಲಿ ಮಂಗಳವಾರ ಒಂದು ಕೋವಿಡ್-19 ಪ್ರಕರಣ ದಾಖಲಾಗಿದೆ. ಕೇರಳದಲ್ಲಿ ನಾಲ್ಕು ಮಂದಿಯಲ್ಲಿ ವೈರಸ್ ಕಾಣಿಸಿಕೊಂಡಿದ್ದು, ಳಿದ ಮೂವರು ಕಣ್ಣೂರು ಜಿಲ್ಲೆಯವರು. ಇಬ್ಬರು ವಿದೇಶದಿಂದ ಬಂದಿದ್ದು, ಇಬ್ಬರಿಗೆ ಸಂಪರ್ಕದಿಂದ ವೈರಸ್ ತಗುಲಿದೆ. ಕಾಸರಗೋಡು ಜಿಲ್ಲೆಯಲ್ಲಿ 1958ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 1923ಮಂದಿ ಮನೆಗಳಲ್ಲಿ ಹಾಗೂ 35ಮಂದಿ ಆಸ್ಪತ್ರೆಗಳಲ್ಲಿದ್ದಾರೆ.ಮಂಗಳವಾರ ಹೊಸದಾಗಿ ಇಬ್ಬರು ಐಸೊಲೇಶನ್ ವಾರ್ಡಿಗೆ ದಾಖಲಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 162ಮಂದಿ ಗುಣಮುಖರಾಗಿದ್ದು, 14ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿದ್ದಾರೆ.

    ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಕೋವಿಡ್-19 ವೈರಸ್‌ಬಾಧಿತ ಕೊನೆಯ ವ್ಯಕ್ತಿ ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಜನರಲ್ ಆಸ್ಪತ್ರೆ ಕರೊನಾ ವೈರಸ್ ಬಾಧಿತ ರೋಗಿಗಳಿಂದ ಮುಕ್ತವಾಗಿದೆ. ಮಂಗಳವಾರ ಕೊನೆಯ ರೋಗಿಯನ್ನು ಆಸ್ಪತ್ರೆ ವೈದ್ಯಾಧಿಕಾರಿಗಳು, ದಾದಿಯರ ಸಹಿತ ಸಿಬ್ಬಂದಿ ಆತ್ಮೀಯವಾಗಿ ಬೀಳ್ಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts