More

    ಮೆಕ್ಯಾನಿಕ್‌ಗಳ ಅವಹೇಳನ ಕ್ಷಮೆ ಯಾಚಿಸಲು ದ.ಕನ್ನಡ ಗ್ಯಾರೇಜ್ ಮಾಲೀಕರ ಸಂಘ ಆಗ್ರಹ

    ಮಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಟಿ ಕಾರ್ಯಕ್ರಮದಲ್ಲಿ ಮೆಕ್ಯಾನಿಕ್‌ಗಳ ಬಗ್ಗೆ ಅವಹೇಳನ ಮಾಡಿರುವುದು ಬೇಸರ ಉಂಟು ಮಾಡಿದೆ. ಹೇಳಿಕೆ ನೀಡಿದ ಯುವತಿ, ಆಯೋಜಕರು, ತೀರ್ಪುಗಾರರು, ನಿರೂಪಕಿ ಬಹಿರಂಗವಾಗಿ ಮೆಕ್ಯಾನಿಕ್‌ಗಳು ಮತ್ತು ಅವರ ಕುಟುಂಬದವರ ಬಳಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ದ.ಕನ್ನಡ ಗ್ಯಾರೇಜ್ ಮಾಲೀಕರ ಸಂಘ ಒತ್ತಾಯಿಸಿದೆ.


    ಮೆಕ್ಯಾನಿಕ್‌ಗಳು ಶ್ರಮ ವಹಿಸಿ ದುಡಿದು ತಿನ್ನುವ ಶ್ರಮ ಜೀವಿಗಳು. ಅಂಥವರ ಬಗ್ಗೆ ‘ಗ್ರೀಸ್ ತಿನ್ನುವವರು’ ಎಂದು ಅವಹೇಳನ ಮಾಡುವುದು ಘನತೆಗೆ ತಕ್ಕುದಲ್ಲ. ಟಿ.ಆರ್.ಪಿ ಹೆಚ್ಚಿಸಿಕೊಳ್ಳಲು ಇಂತಹ ಹೇಳಿಕೆ ನೀಡಬಹುದೇ ಹೊರತು ಪ್ರೇಕ್ಷಕರ ಮನಸ್ಸು ಗೆಲ್ಲಲಾಗದು ಎಂದು ಸಂಘದ ಅಧ್ಯಕ್ಷ ಕೇಶವ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.


    ಇಂತಹ ತುಚ್ಛ ಮನೋಭಾವದ ಕಾರ್ಯಕ್ರಮಗಳನ್ನು ನಾವು ಖಂಡಿಸುತ್ತೇವೆ. ಸಮಾಜದಲ್ಲಿ ಯಾವುದೇ ಕಾಯಕ ಕೀಳಲ್ಲ ಎಂದು ತಿಳಿಸುವ ಅಗತ್ಯವಿದೆ. ಶ್ರೇಷ್ಠ ನಟ, ನಟಿಯರು ಉಪಸ್ಥಿತರಿರುವ ಈ ಕಾರ್ಯಕ್ರಮದಲ್ಲಿ ಯಾವುದೇ ಆಕ್ಷೇಪ ಅಥವಾ ವಿಷಾದ ವ್ಯಕ್ತಪಡಿಸದೆ ಚಪ್ಪಾಳೆಯೊಂದಿಗೆ ಪ್ರೋತ್ಸಾಹಿಸಿರುವುದು ವಿಪರ್ಯಾಸ.


    ಯಾವುದೇ ವೃತ್ತಿಯನ್ನು ದೂಷಿಸುವುದು, ಕೀಳು ಮನೋಭಾವದಿಂದ ನೋಡುವುದು ಅಪರಾಧವಾಗಿದ್ದು, ಈ ಬಗ್ಗೆ ಕಾರ್ಮಿಕ ಇಲಾಖೆ ಸಹಿತ ಸಂಬಂಧಪಟ್ಟ ಇಲಾಖೆಗಳು ಕೂಡಲೇ ಸ್ಪಂದಿಸಿ ಆ ಟಿ.ವಿ. ವಾಹಿನಿಗೆ ನೋಟಿಸು ಜಾರಿ ಮಾಡಿ ಎಚ್ಚರಿಕೆ ನೀಡಬೇಕು ಎಂದವರು ಒತ್ತಾಯಿಸಿದ್ದಾರೆ.


    ಸಂಘದ ಪದಾಧಿಕಾರಿಗಳಾದ ದಿವಾಕರ, ಪುಂಡಲೀಕ ಸುವರ್ಣ, ರಾಜಗೋಪಾಲ್, ದಿನಕರ್, ಕಿರಣ್‌ರಾಜ್, ಪುರುಷೋತ್ತಮ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts