More

    ಇಲ್ಲಿವರೆಗೂ ದಕ್ಷಿಣ ಕನ್ನಡ ಸೇಫ್

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕರೊನಾ ಶಂಕಿತ ವ್ಯಕ್ತಿಗಳಿಂದ ಭಾನುವಾರ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ್ದ 11 ಮಾದರಿಗಳ ಫಲಿತಾಂಶ ಸೋಮವಾರ ತಲುಪಿದ್ದು, ಎಲ್ಲ ನೆಗೆಟಿವ್ ಬಂದಿದೆ.
    ಕೊರನಾ ಆತಂಕ ಶುರುವಾದ ದಿನದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನವಮಂಗಳೂರು ಬಂದರು, ಲಕ್ಷದ್ವೀಪದ ಹಡಗು ಸಂಚಾರ ನಿರ್ವಹಿಸುವ ಮಂಗಳೂರು ಹಳೇ ಬಂದರುಗಳಲ್ಲಿ ಸ್ಕ್ರೀನಿಂಗ್ ನಡೆಸಿ, ಕರೊನಾ ಸೋಂಕು ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳ ಗಂಟಲು ಸ್ರಾವದ ಮಾದರಿಗಳನ್ನು ಬೆಂಗಳೂರು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇಲ್ಲಿವರೆಗಿನ ಎಲ್ಲ ಫಲಿತಾಂಶ ನೆಗೆಟಿವ್ ದೊರೆತಿದೆ.

    ಸೋಮವಾರ 838 ಮಂದಿಯ ಸ್ಕ್ರೀನಿಂಗ್ ನಡೆಸಲಾಗಿದ್ದು, 10 ಮಂದಿಯ ಮಾದರಿಗಳನ್ನು ಬೆಂಗಳೂರು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 115 ಜನರನ್ನು ಮನೆಯಲ್ಲೇ ವೈದ್ಯರ ನೀಗಾದಲ್ಲಿ ಇಡಲಾಗಿದೆ. ಏಳು ಮಂದಿ ಸೋಮವಾರ ಮನೆಯಲ್ಲೇ ವೈದ್ಯರ ನೀಗಾದಲ್ಲಿ ಇರುವ ಅವಧಿಯಿಂದ ಬಿಡುಗಡೆ ಪಡೆದಿದ್ದಾರೆ. ಐದು ಮಂದಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
    ಆರೋಗ್ಯ ಸಚಿವ ಮಾ.17 ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಲಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೈಸೂರು ವಿಭಾಗ ಮಟ್ಟದ ಸಭೆ ನಡೆಸಿ ಕರೊನಾ ಸೋಂಕು ಸಂಬಂಧಿಸಿ ಇಲಾಖೆ ಕೈಗೊಂಡಿರುವ ಕ್ರಮಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ಮೈಸೂರು ವಿಭಾಗ ವ್ಯಾಪ್ತಿಯ ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಚಿಕ್ಕಮಂಗಳೂರು ಜಿಲ್ಲೆಗಳ ಆರೋಗ್ಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

    ವೆನ್ಲಾಕ್‌ಗೆ ಭೇಟಿ
    ಕರೊನಾ ಶಂಕಿತ ಹಾಗೂ ದೃಢಪಡಿಸಿದ ವ್ಯಕ್ತಿಗಳಿಗೆ ಚಿಕಿತ್ಸೆ ಒದಗಿಸಲು ಮಂಗಳೂರು ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಕಾದಿರಿಸಿದ ಐಸೋಲೇಶನ್ ವಾರ್ಡ್‌ಗೆ ಆರೋಗ್ಯ ಸಚಿವ ಶ್ರೀರಾಮುಲು ಹಿರಿಯ ಅಧಿಕಾರಿಗಳೊಂದಿಗೆ ಸೋಮವಾರ ಭೇಟಿ ನೀಡಲಿದ್ದಾರೆ. ಪ್ರಸ್ತುತ ವೆನ್ಲಾಕ್ ಆಸ್ಪತ್ರೆಯಲ್ಲಿರುವ ಐಸೋಲೇಶನ್ ವಾರ್ಡ್ ಇತರ ಜನರಲ್ ವಾರ್ಡ್‌ಗಳ ಜತೆಯಲ್ಲೇ ಇದೆ.

    ಮಾಸ್ಕ್, ಸ್ಯಾನಿಟೈಸರ್ ಕೊರತೆ
    ಖರೀದಿಸಿ ಮನೆಗಳಲ್ಲಿ ತೆಗೆದಿಡುತ್ತಿರುವ ಜನರು * ನಾಲ್ಕು ಪಟ್ಟು ಅಧಿಕ ದರದಲ್ಲಿಯೂ ಮಾರಾಟ

    ಮಂಗಳೂರು: ಜನರು ಕರೊನಾ ಸೋಂಕು ಕುರಿತ ಭಯದಿಂದ ಮಾಸ್ಕ್, ಸ್ಯಾನಿಟೈಸರ್‌ನಂತಹ ವೈದ್ಯಕೀಯ ಉಪಚಾರ ವಸ್ತುಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿ ಮನೆಯಲ್ಲಿ ಸಂಗ್ರಹಿಸಿಡುತ್ತಿರುವ ಕಾರಣ ಅಗತ್ಯವುಳ್ಳವರಿಗೆ ಈ ವಸ್ತುಗಳ ಕೊರತೆ ಎದುರಾಗಿದೆ.
    ಸಾಮಾನ್ಯ ಮಾಸ್ಕ್, ತ್ರಿ ಲೇಯರ್ ಮಾಸ್ಕ್ ಹಾಗೂ ಎನ್ 95 ಮಾಸ್ಕ್‌ಗಳು ತಮ್ಮ ನಿಜವಾದ ದರಕ್ಕಿಂತ ನಾಲ್ಕು- ಐದು ಪಟ್ಟು ಅಧಿಕ ದರಗಳಲ್ಲಿ ಮಾರಾಟವಾಗುತ್ತಿವೆ. ಇವುಗಳ ಚಿಲ್ಲರೆ ಖರೀದಿ ಸಂದರ್ಭ ಎಂಆರ್‌ಪಿ ನೋಡಲು ಅವಕಾಶವಿಲ್ಲದ ಕಾರಣಹೆಚ್ಚು ದರಕ್ಕೆ ಮಾರಾಟ ಸುಲಭವಾಗಿದೆ. ಆಸ್ಪತ್ರೆಯಲ್ಲಿ ಕೂಡ ಅನಗತ್ಯ ಸಂದರ್ಭಗಳಲ್ಲಿ ಇದನ್ನು ಬಳಸಬೇಡಿ ಎಂದು ಕೆಲ ಆಸ್ಪತ್ರೆಗಳ ಆಡಳಿತ ವ್ಯವಸ್ಥೆ ತಮ್ಮ ಸಿಬ್ಬಂದಿಗೆ ಸೂಚಿಸಿದೆ.
    ಅಗತ್ಯ ವಸ್ತುಗಳ ಕೊರತೆ ಹಿನ್ನೆಲೆಯಲ್ಲಿ ಅಗತ್ಯಕ್ಕೆ ಬೇಕಾಗುವಷ್ಟು ಮಾಸ್ಕ್, ಸ್ಯಾನಿಟೈಸರ್ ತರಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಜಿಲ್ಲಾಡಳಿತದ ಮೂಲ ತಿಳಿಸಿದೆ.
    ಸಾರ್ವಜನಿಕರು ಈ ವಸ್ತುಗಳನ್ನು ಬೇಕಾಬಿಟ್ಟಿ ಬಳಸುವ ಅಗತ್ಯ ಇಲ್ಲ. ಆಸ್ಪತ್ರೆ ಸಿಬ್ಬಂದಿ, ರೋಗಿಗಳ ಸಮೀಪವಿದ್ದು ಅವರ ಉಪಚಾರ ಮಾಡುವ ಮನೆ ಸದಸ್ಯರು ಮಾತ್ರ ಬಳಸಿದರೆ ಸಾಕು. ಹೆಚ್ಚು ಜನ ಸೇರುವ ಪ್ರದೇಸದಿಂದ ದೂರವಿರುವುದು ಹಾಗೂ ದೇಹದ ಸ್ವಚ್ಛತೆ ಪಾಲನೆ ಕಾಯ್ದುಕೊಳ್ಳುವುದು ಸೂಕ್ತ ಎಂದು ಹಿರಿಯ ವೈದ್ಯಾಧಿಕಾರಿಯೊಬ್ಬರು ಸಲಹೆ ನೀಡಿದ್ದಾರೆ. ಮಂಗಳೂರು ಆಸ್ಪತ್ರೆಗಳಿಗೆ ಮುಂಬೈ ಹಾಗೂ ಬೆಂಗಳೂರಿನ ಕಂಪನಿಗಳಿಂದ ಮಾಸ್ಕ್ ಹಾಗೂ ಸ್ಯಾನಿಟೈಸರ್ ತರಿಸಿಕೊಳ್ಳಲಾಗುತ್ತದೆ.

    ಸೋಂಕು ಹೇಗೆ ಹರಡುತ್ತದೆ?
    ಸೋಂಕಿತ ವ್ಯಕ್ತಿಯು ಸೀನಿದಾಗ ಮತ್ತು ಕೆಮ್ಮಿದಾಗ, ಸೋಂಕಿತ ವ್ಯಕ್ತಿಯ ಜತೆ ನಿಕಟ ಸಂಪರ್ಕದಲ್ಲಿರುವಾಗ, ಸೋಂಕಿತ ವ್ಯಕ್ತಿಯ ಹಸ್ತ ಲಾಘವ ಮತ್ತು ಮುಟ್ಟುವಾಗ, ಸೋಂಕಿತ ವ್ಯಕ್ತಿಯು ಬಳಸಿದ ವಸ್ತುಗಳನ್ನು ಯಾವುದೇ ರಕ್ಷಣೆ ಇಲ್ಲದೆ ಬಳಸಿದಾಗ ಮತ್ತು ಸ್ವಚ್ಛಗೊಳಿಸದ ಮತ್ತು ಸುರಕ್ಷಿತವಲ್ಲದ ಕೈಗಳಿಂದ ಕೈಗಳಿಂದ ಕಣ್ಣು, ಮೂಗು, ಬಾಯಿಯನ್ನು ಮುಟ್ಟುವುದರಿಂದ ಈ ರೋಗ ಹರಡುತ್ತದೆ ಎನ್ನುವುದು ಆರೋಗ್ಯ ಇಲಾಖೆ ಮಾಹಿತಿ.

    ರೈಲು ಪ್ರಯಾಣಿಕರ ಸಂಖ್ಯೆ ತೀವ್ರ ಇಳಿಕೆ
    ಮಂಗಳೂರು: ಕರೊನಾ ಆತಂಕ ಪರಿಣಾಮ ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆ ಶೇ.50 ಕ್ಕಿಂತ ಅಧಿಕ ಇಳಿಕೆಯಾಗಿದೆ. ವೈದ್ಯಕೀಯ ಚಿಕಿತ್ಸೆ, ಔದ್ಯೋಗಿಕ ವಿಚಾರ ಸಹಿತ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಜನರು ಪ್ರಯಾಣ ನಡೆಸುತ್ತಿದ್ದ ಹಾಗೆ ಕಾಣುತ್ತಿದೆ ಎಂದು ರೈಲ್ವೆ ಹಿರಿಯ ಅಧಿಕಾರಿಯೋರ್ವರು ಪ್ರತಿಕ್ರಿಯಿಸಿದ್ದಾರೆ. ಪ್ರಸ್ತುತ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ನಗರದ ಯುನಿಟಿ ಆಸ್ಪತ್ರೆಯ ಸಹಯೋಗದಲ್ಲಿ ವೈದ್ಯಕೀಯ ಹೆಲ್ಪ್ ಡೆಸ್ಕ್ ಒಂದು ಕಾರ್ಯನಿರ್ವಹಿಸುತ್ತಿದೆ. ಪ್ರಯಾಣಿಕರು ಇಲ್ಲಿ ಯಾವುದೇ ವೈದ್ಯಕೀಯ ಮಾರ್ಗದರ್ಶನದ ಸಹಾಯ ಪಡೆಯಲು ಅವಕಾಶವಿದೆ. ರೈಲು ನಿಲ್ದಾಣದಲ್ಲಿರುವ ಧ್ವನಿವರ್ಧಕಗಳ ಮೂಲಕ ಕೊರನಾ ಮುಂಜಾಗ್ರತಾ ಕ್ರಮಗಳ ಮಾಹಿತಿ ಪ್ರಸಾರವಾಗುತ್ತಿದೆ.

    ಬೆಳ್ತಂಗಡಿಯ ವೃದ್ಧ ಆಸ್ಪತ್ರೆಗೆ ದಾಖಲು
    ಉಪ್ಪಿನಂಗಡಿ: ಉಮ್ರಾ ಯಾತ್ರೆ ಮುಗಿಸಿ ಮೆಕ್ಕಾದಿಂದ ಮರಳಿದ್ದ ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ 75 ವರ್ಷದ ವೃದ್ಧರೊಬ್ಬರು ಅನಾರೋಗ್ಯಕ್ಕೆ ತುತ್ತಾಗಿದ್ದು, ಶಂಕಿತ ಕರೊನಾ ಹಿನ್ನೆಲೆಯಲ್ಲಿ ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ತನ್ನ ಮಗಳು ಅಳಿಯನೊಂದಿಗೆ ಕೆಲ ದಿನಗಳ ಹಿಂದೆಯಷ್ಟೇ ಉಮ್ರಾ ಯಾತ್ರೆ ಮುಗಿಸಿ ಸ್ವದೇಶಕ್ಕೆ ಹಿಂತಿರುಗಿದ್ದರು. 15 ದಿನಗಳ ಕಾಲ ವಿದೇಶದಲ್ಲಿದ್ದ ಅವರು ಹತ್ತು ದಿನಗಳ ಹಿಂದೆ ಸ್ವದೇಶಕ್ಕೆ ಹಿಂತಿರುಗಿದ್ದರು. ಕೆಲ ದಿನಗಳಿಂದ ಶೀತ ಕೆಮ್ಮು ನೆಗಡಿಯಿಂದ ಬಳಲುತ್ತಿರುವ ಇವರನ್ನು ಆರೋಗ್ಯ ಇಲಾಖೆಯ ನಿರ್ದೇಶನದನ್ವಯ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕರೊನಾ ಪರಿಕ್ಷೆಗೆ ಒಳಪಡಿಸಲಾಗಿದ್ದು, ವರದಿಯನ್ನು ನಿರೀಕ್ಷಿಸಲಾಗಿದೆ.

    ಮಂಗಳೂರು-ಬೆಂಗಳೂರು ಬಸ್ ಸಂಚಾರ ಇಳಿಕೆ
    ಮಂಗಳೂರು: ಪ್ರಯಾಣಿಕರ ಸಂಖ್ಯೆ ತೀವ್ರ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಮಂಗಳೂರು-ಬೆಂಗಳೂರು ನಡುವೆ ಓಡಾಟ ನಡೆಸುವ ಸರ್ಕಾರಿ ಹಾಗೂ ಖಾಸಗಿ ಬಸ್‌ಗಳ ಸಂಖ್ಯೆ ಕಡಿಮೆಯಾಗಿದೆ. ಕಡಿತಗೊಂಡಿರುವ ಬಸ್‌ಗಳ ಸಂಖ್ಯೆ ಸರ್ಕಾರಿ ವಲಯದಲ್ಲಿ ಸುಮಾರು ಶೇ.20ರಷ್ಟು ಇದ್ದರೆ, ಖಾಸಗಿ ವಲಯದಲ್ಲಿ ಶೇ.40ಕ್ಕೂ ಅಧಿಕ ಇರಬಹುದು ಎಂದು ಅಂದಾಜಿಸಲಾಗಿದೆ. ಮಂಗಳೂರು-ಬೆಂಗಳೂರು ಮಾರ್ಗದ 24 ಸಹಿತ 60 ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಕಡಿತಗೊಂಡಿದೆ.

    ಬೀದಿ ಬದಿ ವ್ಯಾಪಾರ ತೆರವು
    ಕರೊನಾ ಜತೆ ಕಾಲರಾ ಸೋಂಕು ಹರಡುವ ಆತಂಕ ಇರುವ ಹಿನ್ನೆಲೆಯಲ್ಲಿ ಮಂಗಳೂರು ನಗರ ಹಾಗೂ ಆಸುಪಾಸಿನಲ್ಲಿ ಬೀದಿ ಬದಿ ತಿಂಡಿ ತಿನಸು ಮಳಿಗೆ ವ್ಯಾಪಾರ ತೆರವುಗೊಳಿಸುವ ಕಾರ್ಯಾಚರಣೆಯನ್ನು ಮಹಾನಗರ ಪಾಲಿಕೆ ಸಿಬ್ಬಂದಿ ಸೋಮವಾರವೂ ಮುಂದುವರಿಸಿದ್ದಾರೆ. ಈ ರೀತಿಯ ವ್ಯಾಪಾರವನ್ನು ನಿಷೇಧಿಸಿ ಅಕ್ರಮವಾಗಿ ನಡೆಸುತ್ತಿರುವ ವಿರುದ್ಧ ಪಾಲಿಕೆಯ ಆರೋಗ್ಯಾಧಿಕಾರಿಯವರು ಆರೋಗ್ಯ ವಿಭಾಗ ಮತ್ತು ಕಂದಾಯ ವಿಭಾಗದ ಸಿಬ್ಬಂದಿ ವಲಯವಾರು ತಂಡ ರಚಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

    ವಿಹಾರ ನೌಕೆಯಲ್ಲಿರುವ ಭಾರತೀಯರ ರಕ್ಷಣೆಗೆ ಮೊರೆ
    ಮಂಗಳೂರು: ಕ್ಯಾಲಿಫೋರ್ನಿಯಾದ ಓಕ್‌ಲ್ಯಾಂಡ್ ಬಂದರಿನಿಂದ ಹೊರಡಲಿರುವ ಗ್ರ್ಯಾಂಡ್ ಪ್ರಿನ್ಸೆಸ್ ವಿಹಾರ ನೌಕೆಯಲ್ಲಿ 131 ಭಾರತೀಯರು ಇದ್ದು ರಕ್ಷಣೆಗೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
    ಈ ಪೈಕಿ ಮೂಲತಃ ಮಂಗಳೂರಿನವರಾದ ನಟೇಶ್ ಬಂಗೇರ ಎಂಬುವರು ಎರಡು ವರ್ಷಗಳಿಂದ ವಿಹಾರ ನೌಕೆಯಲ್ಲಿ ಕೆಲಸಕ್ಕಿದ್ದಾರೆ. ವಿಹಾರ ನೌಕೆಯಿಂದ ಭಾರತೀಯರನ್ನು ಕರೆತರಲು ಚಾರ್ಟರ್ ಫ್ಲೈಟ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಹೊರ ದೇಶಗಳಿಂದ ಭಾರತಕ್ಕೆ ಬರುವವರಿಗೆ ಆರೋಗ್ಯ ಪ್ರಮಾಣಪತ್ರ ಕಡ್ಡಾಯ ಮಾಡಲಾಗಿದ್ದು ಭಾರತಕ್ಕೆ ಬರುವವರಲ್ಲಿ ಅದು ಇಲ್ಲದ ಕಾರಣ ಆರು ಗಂಟೆ ಕಾದ ಬಳಿಕ ವಿಮಾನ ಹತ್ತಲು ಬಿಡದೆ ಹಡಗಿಗೆ ವಾಪಸ್ ಕಳುಹಿಸಲಾಗಿದೆ. ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿರುವ ನಟೇಶ್, ನಾವು ನೌಕೆ ಏರುವ ಮೊದಲು ಭಾರತಕ್ಕೆ ಬರುವವರು ಮೆಡಿಕಲ್ ಸರ್ಟಿಫಿಕೆಟ್ ಹೊಂದಿರಬೇಕೆಂಬುದನ್ನು ಕಡ್ಡಾಯ ಮಾಡಿರಲಿಲ್ಲ. ಸಂವಹನ ಸಮಸ್ಯೆಯಿಂದ ಅನನುಕೂಲವಾಗಿದೆ ಎಂದು ತಿಳಿಸಿದ್ದಾರೆ. ನೌಕೆಯಲ್ಲಿರುವ ಭಾರತೀಯರನ್ನು ಇನ್ನೂ ಕರೊನಾ ತಪಾಸಣೆ ನಡೆಸಿಲ್ಲ.
    131 ಭಾರತೀಯರೂ ಭಾರತೀಯ ರಾಯಭಾರ ಕಚೇರಿ ಸಂಪರ್ಕಿಸಲು ಸಾಧ್ಯವಾದರೂ ಅಗತ್ಯ ವೈದ್ಯಕೀಯ ಪ್ರಮಾಣ ಪತ್ರ ಇಲ್ಲದ ಹಿನ್ನೆಲೆಯಲ್ಲಿ ಸ್ವದೇಶಕ್ಕೆ ಮರಳಲು ಸಾಧ್ಯವಾಗುತ್ತಿಲ್ಲ. ಹಡಗಿನಲ್ಲಿರುವ ಭಾಋತಿಐರ ಪೈಕಿ ಯಾರಿಗೂ ಕರೊನ ರೋಗ ಲಕ್ಷಣ ಕಂಡುಬಂದಿಲ್ಲ ಎಂದು ನಟೇಶ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts