More

    ವಾರ್ಡ್ ಮಟ್ಟದಲ್ಲಿ ಕರೊನಾ ಟೆಸ್ಟ್, ಮನಪಾ ವ್ಯಾಪ್ತಿಯಲ್ಲಿ ದಿನಕ್ಕೆ ಸಾವಿರ ಪರೀಕ್ಷೆ

    ಮಂಗಳೂರು: ದ.ಕ.ಜಿಲ್ಲೆಯಲ್ಲಿ ಕರೊನಾ ತಪಾಸಣೆ ಹೆಚ್ಚಾಗಬೇಕಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ದಿನ ಸಾವಿರ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಹೇಳಿದರು.

    ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ 60 ವಾರ್ಡ್‌ಗಳ ನೂರು ಕಡೆ ರ‌್ಯಾಪಿಡ್ ಆ್ಯಂಟಿಜೆನ್ ಟೆಸ್ಟಿಂಗ್ ಕೇಂದ್ರಗಳನ್ನು ತೆರೆಯಲಾಗುವುದು. ಕಿಯಾಸ್ಕ್‌ಗಳನ್ನು ವಾರ್ಡ್ ಮಟ್ಟದಲ್ಲಿಯೂ ಆರಂಭಿಸಲಾಗುವುದು. ಕರೊನಾ ಸೋಂಕಿತರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಿಲ್‌ಗಳು ಸರ್ಕಾರ ನಿಗದಿಪಡಿಸಿದ ದರದಲ್ಲಿ ಇದೆಯೇ ಎಂದು ಪರಿಶೀಲಿಸಲು ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಪ್ರತ್ಯೇಕ ಘಟಕ ಸ್ಥಾಪಿಸಲಾಗುವುದು ಎಂದರು.

    ದ.ಕ.ದಲ್ಲಿ 225 ಮಂದಿಗೆ ಸೋಂಕು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ 225 ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 4 ಮಂದಿ ಮೃತಪಟ್ಟಿದ್ದಾರೆ. ಮಂಗಳೂರು ತಾಲೂಕಿನಲ್ಲಿ ಅತ್ಯಧಿಕ 147 ಮಂದಿಯಲ್ಲಿ ಕರೊನಾ ಕಾಣಿಸಿಕೊಂಡಿದೆ. ಉಳಿದಂತೆ ಬಂಟ್ವಾಳ 19, ಬೆಳ್ತಂಗಡಿ 29, ಮೂಡುಬಿದಿರೆ 1, ಪುತ್ತೂರು 16 ಮತ್ತು ಸುಳ್ಯದ 4 ಮಂದಿಯ ವರದಿ ಪಾಸಿಟಿವ್ ಬಂದಿದೆ. 9 ಮಂದಿ ಹೊರ ಜಿಲ್ಲೆಯವರು. ಮೃತಪಟ್ಟ 4 ಮಂದಿಯೂ ಮಂಗಳೂರು ತಾಲೂಕಿಗೆ ಸೇರಿದವರು. 73 ಮಂದಿ ವಿವಿಧ ಆಸ್ಪತ್ರೆಗಳಿಂದ ಗುಣವಾಗಿ ಮನೆಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ ಪ್ರಸ್ತುತ 3138 ಸಕ್ರಿಯ ಪ್ರಕರಣಗಳಿದ್ದು, 2927 ಮಂದಿ ಸೋಂಕು ಮುಕ್ತರಾಗಿದ್ದಾರೆ. ಈವರೆಗೆ ಮೃತಪಟ್ಟವರ ಸಂಖ್ಯೆ 180ಕ್ಕೆ ಏರಿದೆ.

    ಹೆಲ್ತ್ ಬುಲೆಟಿನ್‌ನಲ್ಲಿ ಗೊಂದಲ: ರಾಜ್ಯಮಟ್ಟದಲ್ಲಿ ಬಿಡುಗಡೆಗೊಳ್ಳುವ ಕರೊನಾ ಬುಲೆಟಿನ್‌ನಲ್ಲಿ ಮಂಗಳವಾರ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 13 ಎಂದು ಪ್ರಕಟಗೊಂಡಿದ್ದು, ಜಿಲ್ಲೆಯಿಂದ ಬಿಡುಗಡೆಯಾಗುವ ಬುಲೆಟಿನ್‌ನಲ್ಲಿ 4 ಎಂದು ನಮೂದಾಗಿದೆ. ಈ ಗೊಂದಲದ ಬಗ್ಗೆ ವಿಚಾರಿಸಿದಾಗ, ರಾಜ್ಯದಲ್ಲಿ ಅಪ್‌ಡೇಟ್ ಮಾಡುವಾಗ ವ್ಯತ್ಯಾಸವಾಗಿರುವ ಸಾಧ್ಯತೆ ಇದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ತಿಳಿಸಿದ್ದಾರೆ.

    ಕಾಸರಗೋಡಲ್ಲಿ 91 ಮಂದಿಗೆ ಸೋಂಕು
    ಕಾಸರಗೋಡು: ಜಿಲ್ಲೆಯ 91 ಮಂದಿ ಸಹಿತ ಕೇರಳದಲ್ಲಿ ಮಂಗಳವಾರ ಹೊಸದಾಗಿ 1,083 ಮಂದಿಯಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ. ಕೋವಿಡ್ ಬಾಧಿಸಿ ಮೂವರು ಮೃತಪಟ್ಟಿದ್ದು, ಕೇರಳದಲ್ಲಿ ಇದುವರೆಗೆ ಕೋವಿಡ್ ಬಾಧಿಸಿ ಮೃತಪಟ್ಟವರ ಸಂಖ್ಯೆ 87ಕ್ಕೇರಿದೆ.

    205 ಕಾರ್ಮಿಕರಿಗೆ ಸೋಂಕು
    ಗುರುಪುರ: ಕಳೆದ 5 ದಿನಗಳಲ್ಲಿ ಗಂಜಿಮಠ ಕೈಗಾರಿಕಾ ಪ್ರದೇಶದ ಖಾಸಗಿ ಪ್ಯಾಕೇಜಿಂಗ್ ಕಂಪನಿಯೊಂದರ 205 ಮಂದಿಗೆ ಕರೊನಾ ಪಾಸಿಟಿವ್ ದೃಢಪಟ್ಟಿದೆ. ಸದ್ಯ ಈ ಪ್ರದೇಶದ ನಾಗರಿಕರು ತೀವ್ರ ಆತಂಕದಲ್ಲಿದ್ದಾರೆ. ಪಾಸಿಟಿವ್ ಪತ್ತೆಯಾದ 139 ಮಂದಿಯನ್ನು ಕೊಂಪದವಿನ ಮುರಾರ್ಜಿ ದೇಸಾಯಿ ಶಾಲೆಯ ಕೊಠಡಿಗಳಲ್ಲಿ ಐಸೋಲೇಷನ್‌ನಲ್ಲಿ ಇರಿಸಲಾಗಿದೆ. ಉಳಿದ 66 ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts