More

    ದ.ಕ.ದಲ್ಲಿ ಕರೊನಾಗೆ ಮೊದಲ ಬಲಿ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೊನಾದ ಮೊದಲ ಪ್ರಕರಣ ವರದಿಯಾದ 27 ದಿನದ ಬಳಿಕ ಸಾವಿನ ಪಟ್ಟಿಯಲ್ಲಿ ಜಿಲ್ಲೆಯ ಹೆಸರೂ ಕಾಣಿಸಿಕೊಂಡಿದೆ. ಇದರೊಂದಿಗೆ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಮಹಿಳೆಗೆ ಕರೊನಾ ಪಾಸಿಟಿವ್ ವರದಿಯೂ ಬಂದಿದ್ದು, ಒಟ್ಟು ಪಾಸಿಟಿವ್ ಪ್ರಕರಣದ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
    ಉಸಿರಾಟ ಸಮಸ್ಯೆಯೊಂದಿಗೆ ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದ ಬಂಟ್ವಾಳ ತಾಲೂಕಿನ ಮಧ್ಯವಯಸ್ಕ ಮಹಿಳೆ ಭಾನುವಾರ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರ ಗಂಟಲು ದ್ರವದ ಮಾದರಿಯ ವರದಿ ಭಾನುವಾರ ಸಿಕ್ಕಿದ್ದು, ಕರೊನಾ ಪಾಸಿಟಿವ್ ಆಗಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.
    ಬಂಟ್ವಾಳ ಪೇಟೆಯ 50 ವರ್ಷ ವಯಸ್ಸಿನ ಮಹಿಳೆಯನ್ನು ಶ್ವಾಸಕೋಶದ ತೀವ್ರ ತೊಂದರೆಯೊಂದಿಗೆ ಬಂಟ್ವಾಳ ತಾಲೂಕು ಆಸ್ಪತ್ರೆಗೆ ಶನಿವಾರ ಕರೆತರಲಾಗಿತ್ತು. ಆಕೆಗೆ ಕರೊನಾ ಲಕ್ಷಣಗಳಿವೆ ಎಂಬ ಸಂಶಯದ ಹಿನ್ನೆಲೆಯಲ್ಲಿ ಬಳಿಕ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
    ಶನಿವಾರವೇ ಮಹಿಳೆಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಯಿತು. ಆದರೆ ಪರೀಕ್ಷೆ ವರದಿ ಬರುವ ಮೊದಲೇ ಮಹಿಳೆಯ ಸ್ಥಿತಿ ಬಿಗಡಾಯಿಸಿದ್ದು, ಭಾನುವಾರ ಬೆಳಗ್ಗೆ ಮೃತರಾಗಿದ್ದಾರೆ.

    ಕುಟುಂಬದ ಮೂವರು ಆಸ್ಪತ್ರೆಗೆ
    ಈ ಮಹಿಳೆಯ ಪತಿ, ಪುತ್ರ, ಪುತ್ರಿ ಹಾಗೂ ಸಂಬಂಧಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಬಂಧಿ ಮಹಿಳೆಗೆ ಶುಗರ್, ಬಿಪಿ ಸಮಸ್ಯೆಯಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರ ಕುಟುಂಬದ ಸದಸ್ಯರೊಬ್ಬರು ದುಬೈನಿಂದ ಬಂದಿದ್ದು, ಅವರಿಂದ ಸೋಂಕು ಹರಡಿರುವ ಸಾಧ್ಯತೆ ಇದೆ, ಸದ್ಯ ಮೃತರ ಕುಟುಂಬ ಶೋಕದಲ್ಲಿರುವ ಕಾರಣ ಹೇಗೆ ಈ ಸೋಂಕು ತಗಲಿದೆ ಮಾಹಿತಿ ಸಂಗ್ರಹಿಸಲಾಗಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಉಬ್ಬಸ ಸಮಸ್ಯೆ ದಿಢೀರ್ ಉಲ್ಬಣ
    ಈ ಮಹಿಳೆಗೆ ಹಿಂದೆ ಉಬ್ಬಸ ಸಮಸ್ಯೆ ಇತ್ತು. ಅದರಿಂದಾಗಿ ಶ್ವಾಸಕೋಶಕ್ಕೆ ತಗಲಿದ ಸೋಂಕು ದಿಢೀರ್ ತೀವ್ರ ಸ್ವರೂಪ ಪಡೆದಿರಬಹುದು ಅಥವಾ ಈ ಸಮಸ್ಯೆಯಿಂದಾಗಿ ಮನೆಯವರೂ ಸೋಂಕನ್ನು ಗುರುತಿಸಲು ವಿಫಲರಾಗಿರುವ ಸಾಧ್ಯತೆಯೂ ಇಲ್ಲದಿಲ್ಲ. ಸೋಂಕಿತ ಮಹಿಳೆ ಹಾಗೂ ಅವರ ಸಂಬಂಧಿ ಮಹಿಳೆ ಶುಗರ್, ಬಿಪಿ ಸಮಸ್ಯೆಗೆ ಚಿಕಿತ್ಸೆಗೆಂದು ಜೊತೆಗೇ ಬಂಟ್ವಾಳ ತಾಲೂಕು ಆಸ್ಪತ್ರೆಗೆ ಹೋಗಿದ್ದರು. ಅಲ್ಲಿಂದ ಇಬ್ಬರನ್ನೂ ವೆನ್ಲಾಕ್‌ಗೆ ಕಳುಹಿಸಲಾಗಿತ್ತು. ಉಸಿರಾಟ ಸಮಸ್ಯೆಯಿದ್ದ ಮಹಿಳೆ ಭಾನುವಾರ ಬೆಳಗ್ಗೆ ಸಾವನ್ನಪ್ಪಿದ್ದರೆ ಇನ್ನೋರ್ವ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಯಾಂಪಲ್ ವರದಿ ಬಂದಿಲ್ಲ.

    ಬಂಟ್ವಾಳ ಖಾಸಗಿ ವೈದ್ಯರ ನಿರ್ಲಕ್ಷೃ?
    ದ.ಕ ಜಿಲ್ಲೆಯ ಕರೊನಾ ಪ್ರಥಮ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡದ ಖಾಸಗಿ ವೈದ್ಯರೊಬ್ಬರ ಮೇಲೆ ಕಾನೂನು ಕ್ರಮ ಜರಗುವ ಸಾಧ್ಯತೆ ಇದೆ. ಮೃತಪಟ್ಟ ಬಂಟ್ವಾಳದ ಮಹಿಳೆಗೆ ಕರೊನಾ ಲಕ್ಷಣಗಳಿದ್ದರೂ ಜಿಲ್ಲಾಡಳಿತ, ಆರೋಗ್ಯ ಇಲಾಖೆಗೆ ಮಾಹಿತಿ ನೀಡದೆ ನಿರ್ಲಕ್ಷೃವೆಸಗಿದ್ದಾರೆ ಎಂದು ತಿಳಿದುಬಂದಿದೆ. ಮೃತ ಮಹಿಳೆ ಈ ಖಾಸಗಿ ವೈದ್ಯರ ಕ್ಲಿನಿಕ್‌ಗೆ ಚಿಕಿತ್ಸೆಗಾಗಿ ಬರುತ್ತಿದ್ದರು, ಆದರೆ ರೋಗ ಲಕ್ಷಣಗಳನ್ನು ಗಮನಿಸಿಯೂ ವೈದ್ಯರು ಇದನ್ನು ಸಂಬಂಧಪಟ್ಟವರ ಗಮನಕ್ಕೆ ತಂದಿರಲಿಲ್ಲ ಎಂದು ತಿಳಿದು ಬಂದಿದೆ. ಮೃತ ಮಹಿಳೆಯನ್ನು ಪ್ರಾರಂಭದಲ್ಲಿ ತಪಾಸಣೆಗೆ ಒಳಪಡಿಸಿದ್ದ ಖಾಸಗಿ ವೈದ್ಯರನ್ನೂ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಲಾಗಿದೆ.

    ಬೋಳೂರಿನಲ್ಲಿ ಶವಸಂಸ್ಕಾರಕ್ಕೆ ಆಕ್ಷೇಪ
    ಕೊವಿಡ್‌ನಿಂದ ಸಾವನ್ನಪ್ಪಿದ ಬಂಟ್ವಾಳದ ಮಹಿಳೆಯ ಅಂತ್ಯಕ್ರಿಯೆಯನ್ನು ಭಾನುವಾರ ಸಾಯಂಕಾಲ ಮಂಗಳೂರು ಬೋಳೂರಿನ ವಿದ್ಯುತ್ ಚಿತಾಗಾರದಲ್ಲಿ ಕೆಲವೇ ಬಂಧುಗಳ ಸಮಕ್ಷಮ ಸರ್ಕಾರಿ ಮಾರ್ಗಸೂಚಿಯನ್ವಯ ವೈದ್ಯಕೀಯ ಶಿಷ್ಟಾಚಾರದಂತೆ ನೆರವೇರಿಸಲಾಯಿತು. ಕೆಲವೇ ಸಮೀಪ ಬಂಧುಗಳಲ್ಲದೆ ಮಂಗಳೂರು ಸಹಾಯಕ ಆಯುಕ್ತರು, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದರು. ಆದರೆ ಕರೊನಾ ಸೋಂಕಿತೆಯ ಅಂತ್ಯಸಂಸ್ಕಾರ, ಇದರಿಂದ ನಮಗೂ ರೋಗ ಹರಡಬಹುದು, ಇಲ್ಲಿ ಅಂತ್ಯಕ್ರಿಯೆ ನಡೆಸಬಾರದು ಎಂದು ಕೆಲವು ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು. ಕೊನೆಗೆ ಪೊಲೀಸರನ್ನು ಕರೆಸಿ ಗುಂಪನ್ನು ಚದುರಿಸಲಾಯಿತು.

    ಸೋಂಕಿತನ ಪತ್ನಿಗೂ ಪಾಸಿಟಿವ್
    ಉಪ್ಪಿನಂಗಡಿ ನಿವಾಸಿ, ಏ.16ರಂದು ಕರೊನಾ ಪಾಸಿಟಿವ್ ಆಗಿದ್ದ 39 ವರ್ಷ ವಯಸ್ಸಿನ ರೋಗಿಯ ಪತ್ನಿಗೂ ಕರೊನಾ ಸೋಂಕು ದೃಢಪಟ್ಟಿದೆ. 30 ವರ್ಷದ ಈ ಮಹಿಳೆ ಹಾಗೂ ಆಕೆಯ ಪತಿ ಇಬ್ಬರನ್ನೂ ಕೊವಿಡ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈಕೆಯ ಪತಿ ಮಾ.21ರಂದು ದೆಹಲಿಯಿಂದ ವಾಪಸಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ 14 ದಿನಗಳ ವೈದ್ಯಕೀಯ ನಿಗಾ ಘಟಕ (ಕ್ವಾರಂಟೈನ್‌ನಲ್ಲಿ)ದಲ್ಲಿ ಇರಿಸಿತ್ತು. ಆಗ ಆತ ಪತ್ನಿ ಹಾಗೂ ಸಂಬಂಧಿಕರೊಂದಿಗೆ ಸಂಪರ್ಕದಲ್ಲಿದ್ದರು.

    ಬಂಟ್ವಾಳ ಪೇಟೆಗೆ ಬೀಗ, ಪೊಲೀಸರಿಂದ ಧ್ವನಿವರ್ಧಕದಲ್ಲಿ ಎಚ್ಚರಿಕೆ
    ಬಂಟ್ವಾಳ: ಪುರಸಭಾ ವ್ಯಾಪ್ತಿಯ ಕಸ್ಬಾ ಗ್ರಾಮದ ಬಂಟ್ವಾಳ ಪೇಟೆ ನಿವಾಸಿ ಮಹಿಳೆ ಕರೊನಾ ಸೋಂಕಿನಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಪೇಟೆಯನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ.
    ನಿಧನ ಸುದ್ದಿ ತಿಳಿಯುತ್ತಿದ್ದಂತೆಯೇ ಬಂಟ್ವಾಳ ಪೇಟೆಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದ್ದು ಯಾರೂ ಮನೆಯಿಂದ ಹೊರಬರದಂತೆ ಪೊಲೀಸರು ಧ್ವನಿವರ್ಧಕದ ಮೂಲಕ ಎಚ್ಚರಿಸಿದ್ದಾರೆ. ಮನೆ ಮನೆಗಳಿಗೆ ಪೊಲೀಸರು ಭೇಟಿ ನೀಡಿ ಎಚ್ಚರಿಕೆ ವಹಿಸುವಂತೆ ವಿನಂತಿಸಿಕೊಂಡಿದ್ದಾರೆ. ಬಂಟ್ವಾಳ ಕೆಳಗಿನ ಪೇಟೆಯಿಂದ ಜಕ್ರಿಬೆಟ್ಟುವರೆಗೆ ಸೀಲ್‌ಡೌನ್ ಮಾಡಿ ಸಂಚಾರ ನಿಷೇಧಿಲಾಗಿದೆ.

    ಪ್ರಸ್ತುತ ಸೀಲ್‌ಡೌನ್ ಆಗಿರುವ ಬಂಟ್ವಾಳ ಪೇಟೆ ಪ್ರದೇಶ ಸಾಕಷ್ಟು ಜನಸಂದಣಿ ಇರುವ ಪ್ರದೇಶ. ಗ್ರಾಮೀಣ ಭಾಗದ ಜನರು ನಿತ್ಯದ ವ್ಯವಹಾರಗಳಿಗೆ ಇಲ್ಲಿಗೆ ಭೇಟಿ ನೀಡುತ್ತಾರೆ. ಪುರಸಭೆ ಕಚೇರಿ, ಸರ್ಕಾರಿ ಆಸ್ಪತ್ರೆ, ಬ್ಯಾಂಕ್ ಶಾಖೆಗಳು, ಶಾಲೆ, ದೇವಸ್ಥಾನ, ಸ್ವರ್ಣಾಭರಣ, ಜವಳಿ ಮಳಿಗೆಗಳು, ಮೀನು ಮಾರುಕಟ್ಟೆ ಇರುವ ಪ್ರಮುಖ ವ್ಯಾಪಾರಿ ಕೇಂದ್ರ ಇದಾಗಿದ್ದು, ಸೀಲ್ಡೌನ್‌ನಿಂದ ಜನ ತೊಂದರೆ ಅನುಭವಿಸುವಂತಾಗಿದೆ. ಜಿಲ್ಲೆಯ ಕರೊನಾ ವೈರಸ್‌ನ ಮೊದಲ ಬಲಿ ಬಂಟ್ವಾಳದಲ್ಲಿ ಆಗಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

    ಕೆಲಸದ ನಿಮಿತ್ತ ದುಬೈಗೆ ತೆರಳಿದ್ದ ಮಗ
    ಮೃತಪಟ್ಟ ಮಹಿಳೆ ಮನೆಯಲ್ಲಿ ಪತಿ, ಅತ್ತೆ ಹಾಗೂ ಇಬ್ಬರು ಮಕ್ಕಳು ಇದ್ದಾರೆ. ಮೃತ ಮಹಿಳೆ ಈ ಹಿಂದೆ ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿದ್ದು ಎಂಟು ವರ್ಷಗಳಿಂದ ವೃತ್ತಿ ತ್ಯಜಿಸಿ ಮನೆ ವಾರ್ತೆ ನೋಡಿಕೊಳ್ಳುತ್ತಿದ್ದಾರೆ. ಪತಿ ಕೇಬಲ್ ನೆಟ್‌ವರ್ಕ್ ಸಂಸ್ಥೆ ನಡೆಸುತ್ತಿದ್ದು, ಮಗ ತಂದೆಯ ಕೆಲಸದಲ್ಲಿ ಸಹಕಾರ ನೀಡುತ್ತಿದ್ದಾರೆ. ಮಗಳು ವಿದ್ಯಾರ್ಥಿನಿ. ಕೆಲಸದ ನಿಮಿತ್ತ ದುಬೈಗೆ ತೆರಳಿದ್ದ ಮಗ ಫೆಬ್ರವರಿಯಲ್ಲೇ ವಾಪಸಾಗಿದ್ದರು ಎನ್ನಲಾಗಿದೆ. ಅತ್ತೆಗೆ ಬಿದ್ದು ಗಾಯವಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಬಂಧಿ ಮಹಿಳೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ.

    ಲಕ್ಷ್ಮೀನಗರಕ್ಕೆ ಅಗತ್ಯ ವಸ್ತು ಪೂರೈಕೆ
    ಉಪ್ಪಿನಂಗಡಿ: ಸೀಲ್‌ಡೌನ್ ಆಗಿರುವ ಲಕ್ಷ್ಮೀನಗರದ ಜನವಸತಿ ಪ್ರದೇಶದಲ್ಲಿ ದಿಗ್ಬಂಧನಕ್ಕೆ ಒಳಗಾದ ಹನ್ನೊಂದು ಮನೆಗಳಿಗೆ ಅಗತ್ಯ ವಸ್ತುಗಳ ಸರಬರಾಜಿಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.
    ಕರೊನಾ ಪಾಸಿಟಿವ್ ಆಗಿರುವ ಕುಟುಂಬ ಹಾಗೂ ಆತನ ಸಹೋದರನ ಕುಟುಂಬ ಸದಸ್ಯರನ್ನು ಒಳಗೊಂಡಂತೆ ಒಟ್ಟು ಹದಿನಾಲ್ಕು ಮಂದಿಯನ್ನು ಪ್ರಾಥಮಿಕ ಸಂಪರ್ಕದ ಹಿನ್ನೆಲೆಯಲ್ಲಿ ಉಪ್ಪಿನಂಗಡಿಯ ಸಮುದಾಯ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಅವರ ಗಂಟಲ ದ್ರವದ ಪರೀಕ್ಷೆಯನ್ನು ನಡೆಸಲಾಗಿದೆ. ಸೆಕೆಂಡರಿ ಸಂಪರ್ಕದ ಹದಿನೆಂಟು ಮಂದಿಯನ್ನು ಮನೆಯಲ್ಲಿರಿಸಲಾಗಿದೆ. ಹೊರ ಸಂಪರ್ಕಕ್ಕೆ ಲಭಿಸದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಪುತ್ತೂರು ತಹಸೀಲ್ದಾರ್ ರಮೇಶ್ ಬಾಬು ತಿಳಿಸಿದ್ದಾರೆ. ಸೀಲ್‌ಡೌನ್ ಪ್ರದೇಶದಲ್ಲಿ ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಪಂಚಾಯಿತಿ ಹಾಗೂ ಸ್ವಯಂ ಸೇವಕರೊಬ್ಬರು ಆವರ್ತನಾ ಪದ್ಧ್ದತಿಯಲ್ಲಿ ತಲಾ 4 ಮಂದಿ ಕಾರ್ಯನಿರ್ವಹಿಸಲಿದ್ದಾರೆ. ಕರೊನಾ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಈಗಾಗಲೇ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಕರಾಯ ಗ್ರಾಮದ ಕಲ್ಲೇರಿಯ ಪರಿಸರವನ್ನೂ ನಿರ್ಬಂಧಿತ ಪ್ರದೇಶವನ್ನಾಗಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

    ಆರ್ಯಾಪು ಸಂಪ್ಯ ಸೀಲ್‌ಡೌನ್
    ಈಶ್ವರಮಂಗಲ: ಪುತ್ತೂರು ತಾಲೂಕಿನ ಸಂಪ್ಯಮೂಲೆಯ ವ್ಯಕ್ತಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಆದೇಶದಂತೆ ಆರ್ಯಾಪು ಗ್ರಾಮದ ಸಂಪ್ಯವನ್ನು ಸೀಲ್‌ಡೌನ್ ಮಾಡಲಾಗಿದ್ದು, ಸ್ಥಳೀಯ ಅಧಿಕಾರಿಗಳು ಮೊಕ್ಕಾಂ ಹೂಡಿ ಆದೇಶ ಪಾಲನೆಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
    ಗ್ರಾಮದಲ್ಲಿ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸೋಂಕು ದೃಢಪಟ್ಟಿದ್ದ ಮನೆ ವ್ಯಾಪ್ತಿಯಿಂದ 1 ಕಿ.ಮೀ. ದೂರವನ್ನು ತೀವ್ರ ಬಫರ್ ಜೋನ್ ಎಂದು ಗುರುತಿಸಲಾಗಿದೆ. ಸೋಂಕು ಕಂಡುಬಂದಿರುವ ಮನೆಯಿಂದ 100 ಮೀ. ದೂರಕ್ಕೆ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಸಂಪ್ಯ ಭಾಗದಲ್ಲಿ 91 ಮಂದಿಯ 23 ಮನೆಗಳು ಈ ಸೀಲ್‌ಡೌನ್ ವ್ಯಾಪ್ತಿಗೆ ಒಳಪಟ್ಟಿವೆ. ಗ್ರಾಮದಿಂದ 5 ಕಿ.ಮೀ. ಅಂತರದ ಪುತ್ತೂರು ನಗರ ಪ್ರದೇಶ ಹಾಗೂ 7 ಕಿ.ಮೀ. ವ್ಯಾಪ್ತಿಯ ಗ್ರಾಮೀಣ ಪ್ರದೇಶ ಬಫರ್ ಜೋನ್ ಎಂದು ಗುರುತಿಸಲಾಗಿದೆ.
    ತೀವ್ರ ಬಫರ್ ಜೋನ್ ಭಾಗದಲ್ಲಿರುವ ಸೋಂಕಿತ ಮನೆಯಿಂದ 100 ಮೀ. ವ್ಯಾಪ್ತಿಯಲ್ಲಿರುವ ಮನೆಗಳಿಂದ ಯಾರೂ ಹೊರ ಹೋಗುವುದನ್ನು, ಬರುವುದನ್ನು ನಿರ್ಬಂಧಿಸಲಾಗಿದೆ. ಅಗತ್ಯ ವಸ್ತುಗಳನ್ನು ಸ್ಥಳೀಯ ಆಡಳಿತಗಳು ಮನೆ ಬಾಗಿಲಿಗೆ ಸರಬರಾಜು ಮಾಡಲು ಸೂಚಿಸಲಾಗಿದೆ. ವ್ಯಾಪ್ತಿಯಲ್ಲಿ ಪುತ್ತೂರು ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಘಟಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಸಂಪ್ಯ ಮತ್ತು ಉಪ್ಪಿನಂಗಡಿಯ ಲಕ್ಷ್ಮೀನಗರದಲ್ಲಿ ಸೀಲ್‌ಡೌನ್ ಮಾಡಿರುವ ಪ್ರದೇಶದಲ್ಲಿ ಸ್ಥಳೀಯ ಅಧಿಕಾರಿಗಳು ತಕ್ಷಣದ ಪ್ರತಿಕ್ರಿಯೆಗಾಗಿ ಮೊಕ್ಕಾಂ ಹೂಡಿದ್ದಾರೆ.

    ಕಾಸರಗೋಡಿನಲ್ಲಿ ಒಂದು ಪ್ರಕಣ ದೃಢ
    ಕಾಸರಗೋಡು: ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಯಲ್ಲಿ ಭಾನುವಾರ ತಲಾ ಒಬ್ಬರಲ್ಲಿ ಕರೊನಾ ವೈರಸ್ ಪತ್ತೆಯಾಗಿದೆ. ಇವರು ಅಬುದಾಬಿ ಹಾಗೂ ದುಬೈನಿಂದ ಆಗಮಿಸಿದ್ದರು. ಕಾಸರಗೋಡು ಜಿಲ್ಲೆಯ ಚೆಮ್ನಾಡ್ ಗ್ರಾಮ ಪಂಚಾಯಿತಿಯ ತೆಕ್ಕಿಲ್ ನಿವಾಸಿ 48 ವರ್ಷದ ಪುರುಷ ಸೋಂಕಿಗೀಡಾದವರು. ಕಾಸರಗೋಡು ಜಿಲ್ಲೆಯಲ್ಲಿ ಇದುವರೆಗೆ 123 ಮಂದಿ ಕೋವಿಡ್-19 ವೈರಸ್‌ನಿಂದ ಮುಕ್ತಿ ಪಡೆದಿದ್ದಾರೆ. ಪ್ರಸಕ್ತ ಕೋವಿಡ್-19 ಬಾಧಿಸಿದವರಲ್ಲಿ ಜಿಲ್ಲೆಯ 46 ಮಂದಿ ಚಿಕಿತ್ಸೆಯಲ್ಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 5,194 ಮಂದಿ ನಿಗಾದಲ್ಲಿದ್ದು, ಭಾನುವಾರ ಎಂಟು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಟ್ಟು 103 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts