More

    ನಿರ್ಲಕ್ಷಿಸಿದ್ದು ಖಾಸಗಿ ವೈದ್ಯರೋ, ಇಲಾಖೆಯೋ?

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಕೊವಿಡ್-19 ಸಾವು ಪ್ರಕರಣ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಅದರೊಂದಿಗೆ ಇದಕ್ಕೆ ಪೂರಕವಾಗಿ ಖಾಸಗಿ ವೈದ್ಯರೊಬ್ಬರ ಮೇಲೆ ಪ್ರಕರಣ ದಾಖಲಿಸಿರುವುದು ಹಲವು ಸಂಶಯಗಳಿಗೂ ಕಾರಣವಾಗಿದೆ.

    ಆರೋಗ್ಯ ಇಲಾಖೆ ಬಂಟ್ವಾಳ ತಾಲೂಕಿನಲ್ಲಿ ಕೊವಿಡ್ ಕುರಿತಾಗಿ ಖಾಸಗಿ ಕ್ಲಿನಿಕ್‌ನವರಿಗೆ ಯಾವುದೇ ಮಾರ್ಗದರ್ಶನ/ ಮಾಹಿತಿಯನ್ನೇ ನೀಡಿಲ್ಲ. ಆದರೆ ಸಾವು ಪ್ರಕರಣಕ್ಕೆ ಸಂಬಂಧಿಸಿ ಕೊವಿಡ್ ಕುರಿತು ಲಕ್ಷಣಗಳಿದ್ದರೂ ಅದರ ಮಾಹಿತಿಯನ್ನು ಆರೋಗ್ಯ ಇಲಾಖೆಗೆ ನೀಡದೆ ನಿರ್ಲಕ್ಷೃ ವಹಿಸಿದ್ದಾಗಿ ಬಂಟ್ವಾಳದ ಖಾಸಗಿ ವೈದ್ಯರ ಮೇಲೆ ತಾಲೂಕು ವೈದ್ಯಾಧಿಕಾರಿ ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎನ್ನುವುದು ವೈದ್ಯರ ಅಸಮಾಧಾನ.

    ಏ.15ರಂದು ಖಾಸಗಿ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆದಿದ್ದ ಮಹಿಳೆ, ಮರುದಿನ ತುಂಬೆಯ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆಂದು ಹೋಗಿದ್ದಾರೆ. ಆಗ ಆಸ್ಪತ್ರೆಯವರು ಆರೋಗ್ಯ ಇಲಾಖೆ ತಾಲೂಕು ಕಚೇರಿಗೂ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ, ಅದನ್ನು ನಿರ್ಲಕ್ಷಿಸಿರುವುದು ಯಾಕೆ ಎನ್ನುವುದು ಕೆಲವು ವೈದ್ಯರ ಪ್ರಶ್ನೆ.

    ಏ.16ರಂದು ಮಹಿಳೆಯೊಂದಿಗೆ ಮನೆಯವರು ತುಂಬೆ ಆಸ್ಪತ್ರೆಗೆ ಹೋಗಿದ್ದರು, ಅಲ್ಲಿ ಮಹಿಳೆಗೆ ಐವಿ ಇಂಜೆಕ್ಷನ್ ನೀಡುವಂತೆ ಕೇಳಿಕೊಂಡಾಗ, ಹೊರರೋಗಿಗಳಿಗೆ ನೀಡುವುದಿಲ್ಲ; ಅಡ್ಮಿಟ್ ಆದರೆ ಮಾತ್ರ ನೀಡಬಹುದು ಎಂದರಲ್ಲದೆ ಜ್ವರ ಇದ್ದ ಕಾರಣ ತಾಲೂಕು ಆಸ್ಪತ್ರೆಗೆ ಹೋಗಿ ಎಂದು ಸಲಹೆ ನೀಡಿದ್ದರು. ಮಹಿಳೆಗೆ ಮೊದಲಿನಿಂದಲೂ ಅಸ್ತಮಾ ರೋಗವಿದ್ದು , ಖಾಸಗಿ ವೈದ್ಯರಿಂದಲೇ ಚಿಕಿತ್ಸೆ ಪಡೆಯುತ್ತಿದ್ದರು.

    ಆರೋಗ್ಯ ಇಲಾಖೆಯವರು ಕೊವಿಡ್ ಬಗ್ಗೆ ಖಾಸಗಿ ವೈದ್ಯರಿಗೆ ಮಾಹಿತಿ ನೀಡದಿರುವುದು ಒಂದೆಡೆ, ಇನ್ನೊಂದೆಡೆ ತುಂಬೆ ಆಸ್ಪತ್ರೆಯಿಂದ ಮಾಹಿತಿ ನೀಡಿದರೂ ಅದನ್ನು ಅನುಸರಣೆ ಮಾಡದೆ ತಮ್ಮ ತಪ್ಪನ್ನು ಮುಚ್ಚಿ ಹಾಕಿದ್ದಾರೆ. ಈ ವಿಚಾರವಾಗಿ ಖಾಸಗಿ ವೈದ್ಯರ ಮೇಲೆ ಪ್ರಕರಣ ದಾಖಲಿಸುವುದು ಸರ್ವಥಾ ಸರಿಯಲ್ಲ. ಇದರಿಂದ ಎಲ್ಲ ಖಾಸಗಿ ವೈದ್ಯರ ಸ್ಥೈರ್ಯ ಕುಸಿಯಲಿದೆ ಎಂದು ವೈದ್ಯರೊಬ್ಬರು ತಿಳಿಸುತ್ತಾರೆ.

    ಸೋಂಕೆಲ್ಲಿಂದ ತಿಳಿಯದು!: ಮಹಿಳೆಯ ಸಾವಿಗೆ ಕರೊನಾ ಕಾರಣ ಎಂದು ವರದಿ ಬಂದಿದ್ದರೂ ಅವರಿಗೆ ಸೋಂಕು ತಗಲಿದ್ದು ಎಲ್ಲಿಂದ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಮಹಿಳೆಯ ಪುತ್ರ ಫೆ.13ರಂದು ದುಬೈಯಿಂದ ಬಂದಿದ್ದು, ಅವರಿಗೆ ನೆಗೆಟಿವ್ ಬಂದಿದೆ. ಬಂದು ಎರಡು ತಿಂಗಳು ಕಳೆದಿರುವುದರಿಂದ ಪುತ್ರನಿಂದ ಸೋಂಕು ತಗಲಿರುವ ಸಾಧ್ಯತೆ ತೀರಾ ಕಡಿಮೆ ಎನ್ನುತ್ತಾರೆ ವೈದ್ಯರು. ಮಹಿಳೆಯ ಅತ್ತೆ ತಲೆಗೆ ಏಟಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅವರನ್ನು ನೋಡಲು ಆಗಾಗ ಬರುತ್ತಿದ್ದರು. ಅಲ್ಲಿ ಯಾರಿಂದಲಾದರೂ ಸೋಂಕು ತಗಲಿರಬಹುದೇ ಎಂಬ ಬಗ್ಗೆಯೂ ಈಗಾಗಲೇ ಪರಿಶೀಲಿಸಲಾಗಿದೆ. ಆದರೆ ಅಲ್ಲೂ ಯಾವುದೇ ಮಾಹಿತಿ ಸಿಗುತ್ತಿಲ್ಲ. ಒಟ್ಟಿನಲ್ಲಿ ಮೂಲ ಎಲ್ಲಿಂದ ಎಂದು ತಿಳಿಯದಿರುವುದೇ ಇಲಾಖೆ ಆತಂಕಕ್ಕೆ ಕಾರಣವಾಗಿದೆ.

    ಜಿಲ್ಲಾಧಿಕಾರಿಯವರನ್ನು ಭೇಟಿಯಾಗುತ್ತವೆ. ಖಾಸಗಿ ವೈದ್ಯರಿಂದ ಯಾವುದೇ ತಪ್ಪು ಇದ್ದ ಹಾಗಿಲ್ಲ. ಏ.15ರಂದು ರೋಗಿಯನ್ನು ನೋಡಿದ್ದು ಹೌದು, ಆದರೆ ಉಸಿರಾಟ ಸಮಸ್ಯೆ ಮಾತ್ರ ಇತ್ತು, ಜ್ವರ ಇರಲಿಲ್ಲ. ಅಂತಹ ಸ್ಥಿತಿಯಲ್ಲಿ ಆರೋಗ್ಯ ಇಲಾಖೆಗೆ ತಿಳಿಸಬೇಕು ಎನ್ನುವ ಸೂಚನೆ ಯಾರೂ ಕೊಟ್ಟಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಿದ್ದೇವೆ.
    – ಡಾ.ಪ್ರದೀಪ್ ಶೆಟ್ಟಿ, ಐಎಂಎ ಬಂಟ್ವಾಳ ಘಟಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts