More

    ದಕ್ಷಿಣ ಕನ್ನಡ ಸಂಪೂರ್ಣ ಬಂದ್

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಹತ್ತು ತಿಂಗಳ ಮಗು ಸಹಿತ ಇಬ್ಬರಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಆದೇಶದಂತೆ ಶನಿವಾರ ಸಂಪೂರ್ಣ ಬಂದ್ ಆಗಿದೆ.

    ಭಾರತ ಲಾಕ್‌ಡೌನ್ ಆದ ಮೊದಲ ಮೂರು ದಿನಗಳಲ್ಲಿ ಅವಶ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6 ಗಂಟೆಯಿಂದ 12 ಗಂಟೆ ತನಕ ಅವಕಾಶ ಕಲ್ಪಿಸಲಾಗಿತ್ತು. ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪರಿಸ್ಥಿತಿಯ ಗಂಭೀರತೆ ಅವಲೋಕಿಸಿ ಸಂಪೂರ್ಣ ಬಂದ್‌ಗೆ ಆದೇಶ ಹೊರಡಿಸಿದ್ದರು.

    ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಹರ್ಷ ಪಿ.ಎಸ್. ಹಾಗೂ ಎಸ್ಪಿ ಲಕ್ಷ್ಮೀ ಪ್ರಸಾದ್ ನಿರ್ದೇಶನದಂತೆ ಪೊಲೀಸರು ಬೆಳಗ್ಗೆ 5.30ಕ್ಕೆ ರಸ್ತೆಗಿಳಿದು ಯಾರು ಕೂಡ ಮನೆಯಿಂದ ಹೊರಬರದಂತೆ ತಡೆದರು. ಬಂದ್ ಬಗ್ಗೆ ಮಾಹಿತಿ ಇಲ್ಲದೆ ಹೊರ ಬಂದವರನ್ನು ಮನವರಿಕೆ ಮಾಡಿ ಕೊಟ್ಟು ಮನೆಗೆ ಕಳುಹಿಸಿದರು.

    ಮಂಗಳೂರು ನಗರ, ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಕಡಬ, ಮೂಡುಬಿದಿರೆ, ಸುಳ್ಯ ತಾಲೂಕು ಕೇಂದ್ರಗಳು ಹಾಗೂ ಗ್ರಾಮೀಣ ಭಾಗಗಳಲ್ಲೂ ಬಂದ್ ಯಶಸ್ವಿಯಾಗಿದೆ. ಪೊಲೀಸರ ಜತೆ ಸ್ಥಳೀಯ ಸಂಘ ಸಂಸ್ಥೆಗಳ ಯುವಕರು ಜತೆಯಾಗಿ ಯಾರು ಕೂಡ ಮನೆಯಿಂದ ಹೊರ ಬರದಂತೆ ಎಚ್ಚರಿಕೆ ನೀಡಿದರು.

    ಮೆಡಿಕಲ್, ಪತ್ರಿಕೆ, ಹಾಲು ವಿತರಣೆಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಕೆಲವು ಕಡೆಗಳಲ್ಲಿ ಹಾಲಿನ ಬೂತ್‌ಗಳನ್ನೂ ತೆರೆಯಲು ಅವಕಾಶ ಮಾಡಿಕೊಟ್ಟಿಲ್ಲ. ಇನ್ನು ಕೆಲವು ಕಡೆಗಳಲ್ಲಿ ಮನೆ ಮನೆಗೆ ಹಾಲಿನ ಪೂರೈಕೆ ಮಾಡಲಾಯಿತು. ಉಳಿದಂತೆ ಯಾವುದೇ ತರಕಾರಿ, ಹಣ್ಣುಹಂಪಲು, ದಿನಸಿ ಅಂಗಡಿಗಳು ತೆರೆದಿಲ್ಲ.

    ಸೆಂಟ್ರಲ್ ಮಾರುಕಟ್ಟೆಯೂ ಬಂದ್: ಸೆಂಟ್ರಲ್ ಮಾರುಕಟ್ಟೆ ಸಂಪೂರ್ಣ ಬಂದ್ ಆಗಿತ್ತು. ಆದರೆ ಹೊರಗಡೆ ತಳ್ಳುಗಾಡಿಗಳಲ್ಲಿ ತರಕಾರಿ, ಹಣ್ಣು, ಸೊಪ್ಪುಗಳನ್ನು ಮಾರಾಟ ಮಾಡಿದ್ದಾರೆ. ಮಾರುಕಟ್ಟೆಯ ಹೊರಗಡೆಯ ಕೆಲವೊಂದು ಅಂಗಡಿಗಳು ತೆರೆದಿದ್ದವು. ಸಂಪೂರ್ಣ ಬಂದ್ ಘೋಷಣೆ ಮಾಡಿದ್ದರೂ ಗ್ರಾಹಕರು ಸೆಂಟ್ರಲ್ ಮಾರುಕಟ್ಟೆಯತ್ತ ಮುಗಿಬಿದ್ದರು. ಪೊಲೀಸರು ಎಲ್ಲರನ್ನು ಹಿಂದಕ್ಕೆ ಕಳುಹಿಸಿ, ವ್ಯಾಪಾರಿಗಳನ್ನು ಬಂದ್ ಮಾಡುವಂತೆ ಸೂಚಿಸಿದರು. ವಾಹನಗಳು ಪ್ರವೇಶಿಸದಂತೆ ಇಲ್ಲಿನ ನಾಲ್ಕು ರಸ್ತೆಗಳನ್ನು ಬಂದ್ ಮಾಡಲಾಗಿದೆ. ಹೊರಜಿಲ್ಲೆಗಳಿಂದ ತರಕಾರಿ, ಹಣ್ಣುಗಳನ್ನು ಹೇರಿಕೊಂಡು ಬಂದ ಲಾರಿಗಳು ಸೆಂಟ್ರಲ್ ಮಾರುಕಟ್ಟೆಗೆ ತಲುಪಿವೆ. ಕೆಲವು ಲಾರಿಗಳಿಂದ ಅನ್‌ಲೋಡ್ ಮಾಡಿದ್ದಾರೆ. ಇನ್ನು ಕೆಲವು ಲಾರಿಗಳು ಹಾಗೆಯೇ ನಿಂತುಕೊಂಡಿವೆ. ಜಿಲ್ಲೆ ಬಂದ್ ಸೂಚನೆ ಸಿಕ್ಕಿದ ಕೆಲವು ಲಾರಿಗಳು ಅರ್ಧದಿಂದಲೇ ಹಿಂತಿರುಗಿ ಹೋಗಿವೆ ಎಂದು ಸೆಂಟ್ರಲ್ ಮಾರುಕಟ್ಟೆಯ ತರಕಾರಿ ವ್ಯಾಪಾರಿ ಜೆ.ಪಿ.ಸಾಲ್ಯಾನ್ ತಿಳಿಸಿದ್ದಾರೆ.
    ಮೀನು, ಮಾಂಸ ಸಂಪೂರ್ಣ ಬಂದ್: ಮೀನುಗಾರಿಕಾ ಬಂದರು ಸಂಪೂರ್ಣ ಸ್ತಬ್ಧಗೊಂಡಿದೆ. ಇದರಿಂದಾಗಿ ಮೀನು ಪೂರೈಕೆ ಸ್ಥಗಿತಗೊಂಡಿದೆ. ಚಿಕನ್, ಮಟನ್ ಅಂಗಡಿಗಳೂ ಸಂಪೂರ್ಣ ಬಂದ್ ಆಗಿದ್ದವು.

    ವಾಹನ ಸಂಚಾರ ಸ್ಥಗಿತ: ನಗರದಲ್ಲಿ ವಾಹನ ಸಂಚಾರ ಶೇ.90ರಷ್ಟು ಸ್ಥಗಿತಗೊಂಡಿತ್ತು. ನಗರ ಪ್ರವೇಶಿಸುವ ಜಪ್ಪಿನಮೊಗರು, ಪಂಪ್‌ವೆಲ್, ನಂತೂರು, ಕೆಪಿಟಿ ಹಾಗೂ ಕೊಟ್ಟಾರದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಅನವಶ್ಯಕವಾಗಿ ನಗರ ಪ್ರವೇಶಿಸುತ್ತಿದ್ದವರನ್ನು ತಡೆದು ಹಿಂದಕ್ಕೆ ಕಳುಹಿಸುತ್ತಿರುವುದು ಕಂಡು ಬಂತು. ರಾಷ್ಟ್ರೀಯ ಹೆದ್ದಾರಿಗಳಲ್ಲೂ ತುರ್ತು ವಾಹನಗಳಷ್ಟೇ ಸಂಚರಿಸುತ್ತಿದ್ದವು. ದ್ವಿಚಕ್ರ ವಾಹನಗಳಲ್ಲಿ ರಸ್ತೆಯಲ್ಲಿ ಸುತ್ತಾಡುತ್ತಿದ್ದವರಿಗೆ ಪೊಲೀಸರು ಎಚ್ಚರಿಕೆ ನೀಡಿ ಮನೆಗೆ ಕಳುಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts