More

    ದ.ಕ.ದಲ್ಲಿ ಇಳಿಕೆ ಹಾದಿಯಲ್ಲಿ ಕೋವಿಡ್

    ಮಂಗಳೂರು: ಸತತ ನಾಲ್ಕು ದಿನಗಳಿಂದ ಪ್ರತಿದಿನ 200ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಕರೊನಾ ಪ್ರಕರಣ ಸೋಮವಾರ ವರದಿಯಾಗಿದೆ. ಜಿಲ್ಲಾಡಳಿತ ಬಿಡುಗಡೆ ಮಾಡಿದ ಬುಲೆಟಿನ್‌ನಲ್ಲಿ 89 ಮಂದಿಗೆ ಸೋಂಕು ಖಚಿತವಾಗಿರುವ ಮತ್ತು ನಾಲ್ವರು ಮೃತಪಟ್ಟಿರುವ ಮಾಹಿತಿ ಇದೆ.
    ಕಳೆದ 10 ದಿನಗಳಲ್ಲಿ 100ಕ್ಕಿಂತ ಕಡಿಮೆ ಪ್ರಕರಣ ದಿನವೊಂದರಲ್ಲಿ ವರದಿಯಾಗಿರುವುದು ಇದು ಮೂರನೇ ಬಾರಿ. ಜುಲೈ 15ರಂದು 73, ಜು.16ರಂದು 238, ಜು.17ರಂದು 311, ಜು.18ರಂದು 237, ಜು.19ರಂದು 285 ಪ್ರಕರಣ ಪತ್ತೆಯಾಗಿತ್ತು.
    ಸೋಮವಾರ ಪತ್ತೆಯಾದ 89 ಮಂದಿಯಲ್ಲಿ 45 ಮಂದಿಗೆ ಐಎಲ್‌ಐ, ಸಾರಿ(ತೀವ್ರ ಉಸಿರಾಟ ತೊಂದರೆ)ಯ 16 ಮಂದಿಗೆ, ಪ್ರಾಥಮಿಕ ಸಂಪರ್ಕದಿಂದ 11 ಮಂದಿಗೆ ಕರೊನಾ ಬಂದಿದೆ. ವಿದೇಶದಿಂದ ಮರಳಿ ಇಬ್ಬರಲ್ಲಿ ಹಾಗೂ ಪ್ರಾಥಮಿಕ ಸಂಪರ್ಕದಿಂದ 11 ಮಂದಿಗೆ ಕರೊನಾ ದೃಢಪಟ್ಟಿದೆ.

    ನಾಲ್ವರು ಸಾವು: ಮಂಗಳೂರು ನಿವಾಸಿ 55 ವರ್ಷದ ಗಂಡಸು 15ರಂದು ವೆನ್ಲಾಕ್‌ಗೆ ದಾಖಲಾದವರು ಭಾನುವಾರ ಮೃತರಾಗಿದ್ದಾರೆ. ಬಿಪಿ, ಡಯಾಬಿಟಿಸ್, ಮೂತ್ರಪಿಂಡದ ಕಾಯಿಲೆಯಿಂದ ನರಳುತ್ತಿದ್ದರು. ಮಂಗಳೂರು ನಿವಾಸಿ 63 ವರ್ಷದ ಗಂಡಸು ಮೂತ್ರಪಿಂಡ ವೈಫಲ್ಯ, ಹೃದಯ ಸಂಬಂಧಿ ಕಾಯಿಲೆ, ಡಯಾಬಿಟಿಸ್, ಬಿಪಿ, ತೀವ್ರ ಉಸಿರಾಟದ ತೊಂದರೆ ಇದ್ದು ಜು.18ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಅದೇ ದಿನ ಮೃತರಾಗಿದ್ದರು. ಬೆಳ್ತಂಗಡಿ ನಿವಾಸಿ 42 ವರ್ಷದ ಗಂಡಸು ಜು.17ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ 19ರಂದು ನಿಧನರಾಗಿದ್ದು ಬಹು ಅಂಗಾಂಗ ವೈಫಲ್ಯಕ್ಕೊಳಗಾಗಿದ್ದರು.

    ಚಿಕ್ಕಮಗಳೂರು ಜಿಲ್ಲೆಯ 65 ವರ್ಷದ ಗಂಡಸು 19ರಂದು ಶ್ವಾಸಕೋಶದ ಕ್ಯಾನ್ಸರ್, ಟ್ರಿಪಲ್ ವೆಸಲ್ ಡಿಸೀಸ್, ಡಯಾಬಿಟಿಸ್ ಇತ್ಯಾದಿಯೊಂದಿಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಅದೇ ದಿನ ಮೃತಪಟ್ಟಿದ್ದಾರೆ. ಈ ನಾಲ್ವರಿಗೂ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತರಾದವರ ಸಂಖ್ಯೆ 82ಕ್ಕೆ ತಲುಪಿದೆ.

    ಜು.18ರಂದು ಮೃತಪಟ್ಟಿದ್ದ 2 ತಿಂಗಳ ಮಗುವಿನ ಬಗ್ಗೆ ತಜ್ಞರ ಸಮಿತಿ ವರದಿ ನೀಡಿದ್ದು, ಬಹು ಅಂಗಾಂಗ ವೈಫಲ್ಯದಿಂದ ಸಾವು ಸಂಭವಿಸಿದೆ. ಜೊತೆಗೆ ಕರೊನಾ ಪಾಸಿಟಿವ್ ಕೂಡ ಆಗಿತ್ತು ಎಂದು ತಿಳಿಸಿದ್ದಾರೆ.
    ಜಿಲ್ಲೆಯಲ್ಲಿ ಒಟ್ಟು ಕರೊನಾ ಪಾಸಿಟಿವ್ 3685ಕ್ಕೆ ಏರಿಕೆಯಾಗಿದ್ದು, 2055 ಸಕ್ರಿಯ ಪ್ರಕರಣಗಳಿವೆ. ಸೋಮವಾರ 57 ಮಂದಿ ಆಸ್ಪತ್ರೆಯಿಂದ ಕರೊನಾ ಮುಕ್ತರಾಗಿ ಮನೆಗೆ ಮರಳಿದ್ದಾರೆ. ಡಿಸ್ಚಾರ್ಜ್ ಆದವರ ಸಂಖ್ಯೆ 1548ಕ್ಕೆ ಏರಿಕೆಯಾಗಿದೆ.

    ಬೆಳ್ತಂಗಡಿಯ ಇಬ್ಬರು ಬಲಿ
    ಬೆಳ್ತಂಗಡಿ: ಕೋವಿಡ್‌ಗೆ ತಾಲೂಕಿನಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮಲವಂತಿಗೆ ಗ್ರಾಮದ ಕಾಜೂರು ನಿವಾಸಿ(51) ಶಸ್ತ್ರಚಿಕಿತ್ಸೆಗೆಂದು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಸೋಮವಾರ ಮೃತಪಟ್ಟಿದ್ದಾರೆ. ನೆರಿಯಾ ದೇವಗಿರಿ ನಿವಾಸಿ (42) ಕರೊನಾ ಸೋಂಕಿನಿಂದ ಭಾನುವಾರ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ಬಂಟ್ವಾಳ ನಿವಾಸಿ ಸಾವು
    ಬಂಟ್ವಾಳ: ಗೂಡಿನಬಳಿ ನಿವಾಸಿ, ಎಸ್‌ಕೆಎಸ್‌ಎಫ್‌ಎಫ್ ಮತ್ತು ಕಾಂಗ್ರೆಸ್ ಮುಖಂಡ, 45 ವರ್ಷ ವಯಸ್ಸಿನ ಪುರುಷ ಅಲ್ಪಕಾಲದ ಅನಾರೋಗ್ಯದಿಂದ ಭಾನುವಾರ ಸಾಯಂಕಾಲ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ತೀವ್ರ ಜ್ವರದಿಂದ ಎರಡು ದಿನಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿರುವ ಮಾಹಿತಿ ಲಭಿಸಿದೆ. ಅವರು ತಾಯಿ, ಪತ್ನಿ, ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.

    ಪೊಲೀಸ್ ಸಿಬ್ಬಂದಿಗೆ ಕರೊನಾ
    ಪುತ್ತೂರು: ನಗರ ಪೊಲೀಸ್ ಠಾಣೆಯ 33 ವರ್ಷದ ಮಹಿಳಾ ಪೊಲೀಸ್ ಸಿಬ್ಬಂದಿ ಸೇರಿ ಪುತ್ತೂರಿನಲ್ಲಿ ಸೋಮವಾರ ಮೂರು ಕರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದೆ. ಪಡ್ನೂರು ಗ್ರಾಮದ 51 ವರ್ಷದ ಪುರುಷ, ಉಪ್ಪಿನಂಗಡಿ ರಥಬೀದಿ ನಿವಾಸಿ 58 ವರ್ಷದ ಪುರುಷನಿಗೆ ಸೋಂಕು ಕಾಣಿಸಿಕೊಂಡಿದೆ. ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ 102 ಪ್ರಕರಣಗಳು ದಾಖಲಾಗಿವೆ.

    ವೈದ್ಯೆಗೆ ಪಾಸಿಟಿವ್
    ಸುರತ್ಕಲ್: ಕೊಡಿಪಾಡಿ ನಿವಾಸಿ ವೈದ್ಯೆಯೊಬ್ಬರಿಗೆ ಕರೊನಾ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಅವರ ಮನೆಯಲ್ಲಿರುವ ಮೂವರನ್ನು ಮನೆಯಲ್ಲಿಯೇ ಹೋಂ ಕ್ವಾರಂಟೈನ್ ಮಾಡಲಾಗಿದೆ.

    ಕಾಸರಗೋಡಿನಲ್ಲಿ 28 ಮಂದಿಗೆ ಸೋಂಕು
    ಕಾಸರಗೋಡು: ಜಿಲ್ಲೆಯ 28 ಮಂದಿ ಸಹಿತ ಕೇರಳದಲ್ಲಿ ಸೋಮವಾರ 794 ಮಂದಿಯಲ್ಲಿ ಕೋವಿಡ್-19 ಕಾಣಿಸಿಕೊಂಡಿದೆ. ಕಾಸರಗೋಡಿನ 11 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. 15 ಮಂದಿ ಆರೋಗ್ಯ ಇಲಾಖೆ ಸಿಬ್ಬಂದಿ ಒಳಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts