More

    ಪ್ರಿಯಕರನ ಕಾಟಕ್ಕೆ ಬೇಸತ್ತು ದರೋಡೆ ನಾಟಕವಾಡಿದ ಪ್ರೇಯಸಿ

    ವಿಟ್ಲ: ಪ್ರಿಯಕರನ ಕಾಟದಿಂದ ಬೇಸತ್ತು ಮನೆ ಬದಲಿಸುವ ಉದ್ದೇಶದಿಂದ ದರೋಡೆ ನಾಟಕವಾಡಿದ ಪ್ರಕರಣವನ್ನು ದಕ್ಷಿಣ ಕನ್ನಡ ಪೊಲೀಸರು ಬಯಲಿಗೆಳೆದಿದ್ದಾರೆ.

    ಉಕ್ಕುಡ ಕಾಂತಡ್ಕ ಜುಮಾ ಮಸೀದ್ ಮುಂಭಾಗದ ಬಾಡಿಗೆ ಮನೆಯಲ್ಲಿ ವಾಸವಿದ್ದ ಆಟೋ ಚಾಲಕ ರಫೀಕ್ ಮತ್ತು ಆತನ ಪುತ್ರ ಡಿ.25ರಂದು ಮಧ್ಯಾಹ್ನ ನಮಾಜಿಗೆ ತೆರಳಿದ್ದ ಸಂದರ್ಭ ಮನೆಯೊಳಗೆ ನುಗ್ಗಿದ ಆಗಂತುಕ ಕಟ್ಟಿ ಹಾಕಿ ಚಿನ್ನಾಭರಣ ದರೋಡೆ ಮಾಡಿದ್ದಾನೆಂದು ದೂರಿನಲ್ಲಿ ಪತ್ನಿ ಜೈನಾಬಿ ವಿವರಿಸಿದ್ದಳು. ಆದರೆ ತನಿಖೆಯಲ್ಲಿ ಇದು ಸುಳ್ಳೆಂಬುದು ಸಾಬೀತಾಗಿದೆ.

    ಮನೆ ಬದಲಿಸಲು ಒಪ್ಪದ ಗಂಡ: ಮನೆಯ ಪಕ್ಕದಲ್ಲಿ ವಾಸವಿರುವ ಪ್ರಿಯಕರನ ಕಾಟ ಜೋರಾದಾಗ ಹೆದರಿದ ಜೈನಾಬಿ ಬಾಡಿಗೆ ಮನೆ ಬದಲಿಸುವ ನಿರ್ಧಾರಕ್ಕೆ ಬಂದಿದ್ದಳು. ಗಂಡ ಒಪ್ಪದಿದ್ದಾಗ, ಸತ್ಯ ವಿಷಯ ಹೇಳಲಾಗದೆ ಜೈನಾಬಿ ದರೋಡೆ ಕಥೆ ಹೆಣೆದಿದ್ದಾಳೆ.

    ಜೈನಾಬಿ ಕಾಲು ಮಾತ್ರ ಕಟ್ಟಿದ ಸ್ಥಿತಿಯಲ್ಲಿ ಇತ್ತು. ಕಪಾಟಿನಿಂದ ಬಟ್ಟೆಗಳನ್ನು ಸ್ವಲ್ಪ ದೂರಕ್ಕೆ ಎಸೆಯಲಾಗಿತ್ತು ಹೊರತು ಬೇರಾವ ವಸ್ತುಗಳೂ ಮಿಸುಕಾಡಿರಲಿಲ್ಲ. ಕಣ್ಣಿಗೆ ಕಾರದ ಪುಡಿ ಎರಚಲಾಗಿತ್ತು ಎಂದು ಹೇಳಿದರೂ ಆ ರೀತಿ ನಡೆದಿರಲಿಲ್ಲ. ಶ್ವಾನದಳ ಮನೆಯನ್ನು ಸುತ್ತು ಹೊಡೆದಿದ್ದು, ಅದು ಬೇರೆ ಹೋಗಿರಲಿಲ್ಲ ಮತ್ತು ಬೆರಳಚ್ಚು ತಜ್ಞರಿಗೂ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಅನುಮಾನಗೊಂಡು ಜೈನಾಬಿಯನ್ನು ವಿಚಾರಣೆ ನಡೆಸಿದಾಗ ನಿಜ ವಿಷಯ ಬಯಲಾಗಿದೆ. ಬಂಟ್ವಾಳ ಸಹಾಯಕ ಅಧೀಕ್ಷಕ ವೆಲೆಂಟನ್ ಡಿಸೋಜ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ನೇತೃತ್ವದಲ್ಲಿ ವಿಟ್ಲ ಠಾಣಾ ಉಪನಿರೀಕ್ಷಕ ವಿನೋದ್ ರೆಡ್ಡಿ, ಸಿಬ್ಬಂದಿ ಪ್ರಸನ್ನ, ಜಯಕುಮಾರ್, ಪ್ರತ್ತಾಪ, ವಿನಾಯಕ, ಹೇಮರಾಜ್ ಅವರ ತಂಡ ತನಿಖೆಯಲ್ಲಿ ಭಾಗಿಯಾಗಿತ್ತು.

    ತನಿಖೆಗೆ ಹೆದರಿ ಚಿನ್ನ ಎಸೆದಳು: ದರೋಡೆ ದಿನ ಚಿನ್ನವನ್ನು ಮಹಿಳೆ ಮನೆಯಲ್ಲಿಯೇ ಅಡಗಿಸಿಟ್ಟಿದ್ದಳು. ಪೊಲೀಸ್ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಭಯಗೊಂಡು ತಾಯಿ ಮನೆ ಅಜ್ಜಿನಡ್ಕ ಸಮೀಪ ಎಸೆದಿದ್ದಾಳೆ. ತನಿಖೆ ನಡೆಸಿ ಭಾಗಶಃ ಚಿನ್ನ ಪತ್ತೆ ಹಚ್ಚಲಾಗಿದೆ. ದರೋಡೆ ಸುದ್ದಿಗೆ ಹೆದರಿ ಅಭದ್ರತೆ ನೆಪದಲ್ಲಿ ಇಲ್ಲಿನ ಕೆಲವು ಬಾಡಿಗೆ ಮನೆಯವರು ಮನೆ ಖಾಲಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts