More

  ದಾನ ಧರ್ಮದಲ್ಲಿ ಎತ್ತಿದ ಕೈಗೆ ಅಧಿಕಾರ ನೀಡಿ

  ಶಿಡ್ಲಘಟ್ಟ:ಕಮಲ ಕೆರೆಯಲ್ಲಿರಬೇಕು, ತೆನೆ ಹೊಲದಲ್ಲಿರಬೇಕು, ದಾನ ಧರ್ಮ ಮಾಡುವ ಕೈ ಮಾತ್ರ ಸದಾ ನಮ್ಮಲ್ಲಿರಬೇಕು. ಹಾಗಾಗಿ ಎಲ್ಲರೂ ಹಸ್ತದ ಗುರುತಿಗೆ ಮತ ನೀಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮಂಗಳವಾರ ರೋಡ್ ಶೋ ನಡೆಸಿ ಮತಯಾಚನೆ ಮಾಡಿ, ನಗರದ ಸಾರಿಗೆ ಬಸ್ ನಿಲ್ದಾಣದಿಂದ ಕೋಟೆ ವೃತ್ತದವರೆಗೂ ರೋಡ್ ಶೋ ನಡೆಸಿದ ಡಿಕೆಶಿ, ಬಸ್ ನಿಲ್ದಾಣ ಹಾಗೂ ಕೋಟೆ ವೃತ್ತದಲ್ಲಿ ಮತಯಾಚನೆ ಮಾಡಿದರು. ಬಿಜೆಪಿಯ ಕಟ್ಟೆ ಒಡೆದಿದೆ. ದಳದ ತೆನೆ ಕಮರಿದೆ. ಉಳಿದಿರೋದೊಂದೇ ಕೈ. ಹಾಗಾಗಿ ಕಾಂಗ್ರೆಸ್‌ಗೆ ಮತ ನೀಡಿ ಎಂದು ಕಾಂಗ್ರೆಸ್ ಕಾರ್ಯಕರ್ತರಷ್ಟೇ ಅಲ್ಲ ಬಿಜೆಪಿ ಹಾಗೂ ಜೆಡಿಎಸ್‌ನ ಕಾರ್ಯಕರ್ತರಲ್ಲಿ ನಾನು ಕೈ ಜೋಡಿಸಿ ಕೇಳಿಕೊಳ್ಳುತ್ತೇನೆ ಎಂದರು.

  ಕ್ಷೇತ್ರದಲ್ಲಿ ನಾನೇ ಅಭ್ಯರ್ಥಿ ಎಂದು ತಿಳಿದು ಮತ ನೀಡಿ ಕಾಂಗ್ರೆಸ್ ಗೆಲ್ಲಿಸಬೇಕೆಂದು ಮನವಿ ಮಾಡಿದರು. ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಶಾಸಕ ವಿ.ಮುನಿಯಪ್ಪ ಸೇರಿ ಅನೇಕ ಮುಖಂಡರು ಹಾಜರಿದ್ದರು.

  ನಗರದಲ್ಲಿ ಬೃಹತ್ ಮೆರವಣಿಗೆ : ಸಾರಿಗೆ ಬಸ್ ನಿಲ್ದಾಣದಿಂದ ಕೋಟೆ ವೃತ್ತದವರೆಗಿನ ರೋಡ್ ಶೋನಲ್ಲಿ ಕೀಲು ಕುದುರೆ, ಗಾರುಡಿ ಗೊಂಬೆ, ತಮಟೆ, ಕುಂಭ ಕಳಶಗಳು ಮೆರವಣಿಗೆಗೆ ಸೊಬಗು ನೀಡಿದ್ದವು. ಕಾಂಗ್ರೆಸ್‌ನ ಧ್ವಜ, ಬಾವುಟಗಳು ರಾರಾಜಿಸಿದವು, ಬಸ್ ನಿಲ್ದಾಣದ ಬಳಿ ಕ್ರೇನ್ ಮೂಲಕ ಬೃಹತ್ ಹೂವಿನ ಹಾರ ಹಾಕಿ ಬರ ಮಾಡಿಕೊಳ್ಳಲಾಯಿತು.
  ಜೆಡಿಎಸ್ ಅಧಿಕಾರಕ್ಕೆ ಬರಲ್ಲ. ಈ ಹಿಂದೆ ಜನತಾದಳದವರೊಂದಿಗೆ ಸೇರಿ ಮೈತ್ರಿ ಸರ್ಕಾರ ರಚನೆ ಮಾಡಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಅವರಿಗೆ ನಾವು ಸಂಪೂರ್ಣ ಸಹಕಾರ ನೀಡಿದ್ದೆವು. ಆದರೆ ಸರ್ಕಾರ ಉಳಿಸಿಕೊಳ್ಳಲಾಗಲಿಲ್ಲ. ರಾಜ್ಯದಲ್ಲಿ ಜನತಾದಳ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲ್ಲ. ಹಾಗಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸುವಂತೆ ಕ್ಷೇತ್ರದ ದಳದ ಕಾರ್ಯಕರ್ತರಲ್ಲಿ ಮನವಿ ಮಾಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
  ಪುಟ್ಟು ಆಂಜಿನಪ್ಪಗೆ ಟಾಂಗ್:ಕಾಂಗ್ರೆಸ್ ಅಭ್ಯರ್ಥಿಗೆ ವಿರುದ್ಧವಾಗಿ ಬಂಡಾಯವಾಗಿ ಸ್ಪರ್ಧಿಸಿರುವ ಯಾರೇ ಆಗಲಿ ನನಗೆ ಅವರು ಇವರು ಬೆಂಬಲಿಸುತ್ತಿದ್ದಾರೆ ಎಂದು ಹೇಳಿಕೊಳ್ಳುವಂತಿಲ್ಲ. ಯಾರೊಬ್ಬರೂ ಅವರ ಬೆಂಬಲಿಕ್ಕಲ್ಲ, ಬೆಂಬಲಿಸುವಂತೆಯೂ ಇಲ್ಲ ಎಂದು ಬಂಡಾಯವಾಗಿ ಸ್ಪರ್ಧಿಸಿರುವ ಪುಟ್ಟು ಆಂಜಿನಪ್ಪ ಅವರಿಗೆ ಹೆಸರು ಹೇಳದೆ ಡಿಕೆಶಿ ಟಾಂಗ್ ನೀಡಿದರು.

  ಮಕ್ಕಳು ಪ್ರಚಾರ: ಚುನಾವಣೆ ಹಾಗೂ ಪ್ರಚಾರ ಕಾರ್ಯಗಳಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಬಳಸಿಕೊಳ್ಳಬಾರದು ಎಂದು ಚುನಾವಣಾ ಆಯೋಗ ಸ್ಪಷ್ಟ ಸೂಚನೆ ನೀಡಿದ್ದರೂ ಇಂದು ನಗರದಲ್ಲಿ ನಡೆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರೋಡ್ ಶೋ ಕಾರ್ಯಕ್ರಮದಲ್ಲಿ ಬಹಳಷ್ಟು ಮಕ್ಕಳು ಕಾಂಗ್ರೆಸ್ ಪಕ್ಷದ ಧ್ವಜ ಹಿಡಿದು ಪ್ರಚಾರ ಮಾಡುತ್ತಿರುವುದು ಕಂಡು ಬಂತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts