More

    ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ: ಡಿ.ಕೆ.ಶಿವಕುಮಾರ್

    ಮೈಸೂರು: ಕಾಂಗ್ರೆಸ್ ಪಕ್ಷವು ಮುಂದಿನ ವಿಧಾನಸಭೆ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.

    ಪಕ್ಷದಲ್ಲಿ ಸಿದ್ದರಾಮಯ್ಯ ಬಣ, ಡಿ.ಕೆ.ಶಿವಕುಮಾರ್ ಬಣ ಎಂಬುದಿಲ್ಲ. ಇರುವುದು ಒಂದೇ ಅದು ಕಾಂಗ್ರೆಸ್ ಬಣ ಮಾತ್ರ. ಎಸ್.ಎಂ. ಕೃಷ್ಣರ ನಂತರ ಒಕ್ಕಲಿಗ ಸಮುದಾಯದಿಂದ ನಾನು ಒಂದು ಹಂತದವರೆಗೆ ಬೆಳೆದಿರುವೆ. ಹೀಗಾಗಿ ನನ್ನ ಕೈ ಬಲಪಡಿಸಿ ಎಂದು ಒಕ್ಕಲಿಗ ಸಮುದಾಯವನ್ನು ಮನವಿ ಮಾಡಿಕೊಂಡಿರುವೆ. ರಾಜ್ಯದ ಎಲ್ಲ ಸಮುದಾಯಗಳಿಂದಲೂ ಬೆಂಬಲ ಸಿಗುವ ವಿಶ್ವಾಸವಿದೆ. ನಾನೇನು ಸನ್ಯಾಸೀನಾ? ನಾನೇನು ಕಾವಿ ಬಟ್ಟೆ ತೊಟ್ಟಿದ್ದೇನೆಯೇ? ಎಂದು ಪ್ರಶ್ನಿಸಿದರು.


    ಸಿದ್ದರಾಮೋತ್ಸವ ತಪ್ಪಿಲ್ಲ: ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಅಂಗವಾಗಿ ಆಯೋಜಿಸಿರುವ ಸಿದ್ದರಾಮೋತ್ಸವ ವ್ಯಕ್ತಿ ಪೂಜೆ ಕಾರ್ಯಕ್ರಮವಲ್ಲ. ಅದು ಐತಿಹಾಸಿಕ ಕಾರ್ಯಕ್ರಮ. ಸಿದ್ದರಾಮಯ್ಯ 45 ವರ್ಷಗಳ ಕಾಲ ರಾಜಕೀಯ ಸೇವೆ ಮಾಡಿದ್ದಾರೆ. ಮುಖ್ಯಮಂತ್ರಿಯಾಗಿ ಅನೇಕ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಇದೆಲ್ಲವನ್ನೂ ಮೆಲುಕು ಹಾಕುವ ಸಮಾರಂಭ ಅದು. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಸಂಭ್ರಮದಿಂದ ಇದನ್ನು ಆಯೋಜಿಸುತ್ತಿದ್ದಾರೆ. ಇದರಲ್ಲಿ ತಪ್ಪಿಲ್ಲ ಎಂದು ಸ್ಪಷ್ಟಪಡಿಸಿದರು.
    ಮನುಷ್ಯನ ಬದುಕಿನಲ್ಲಿ ಹಲವು ಮೈಲುಗಲ್ಲುಗಳಿರುತ್ತವೆ. ಒಬ್ಬೊಬ್ಬರು ಒಂದು ವಿಧದಲ್ಲಿ ಜನ್ಮದಿನವನ್ನು ಆಚರಣೆ ಮಾಡಿಕೊಳ್ಳುತ್ತಾರೆ. ಅದೇ ರೀತಿ ಸಿದ್ದರಾಮಯ್ಯ ಅವರ ಇದುವರೆಗಿನ ಜೀವನವನ್ನು ಮೆಲುಕು ಹಾಕುವ ಸಲುವಾಗಿ ಸಿದ್ದರಾಮೋತ್ಸವ ಆಯೋಜನೆ ಮಾಡಲಾಗುತ್ತಿದೆ. ಆ ಕಾರ್ಯಕ್ರಮದಲ್ಲಿ ನಾನು, ರಾಹುಲ್ ಗಾಂಧಿಯವರು ಭಾಗಿಯಾಗುತ್ತೇವೆ. ನನ್ನ ಹುಟ್ಟು ಹಬ್ಬವನ್ನು ಸರಳವಾಗಿ ಆಚರಣೆ ಮಾಡಿಕೊಂಡೆ. ನಾನು ಪತ್ನಿ ಸಮೇತ ಕೇದಾರನಾಥಕ್ಕೆ ಹೋಗಿದ್ದೆ. ಹುಟ್ಟುಹಬ್ಬ ಆಚರಣೆ ವಿಚಾರದಲ್ಲಿ ಒಬ್ಬೊಬ್ಬರ ಆಯ್ಕೆ ಒಂದೊಂದು ರೀತಿಯಾಗಿರುತ್ತದೆ ಎಂದರು.

    ದಲಿತರೊಬ್ಬರು ಮುಖ್ಯಮಂತ್ರಿ ಏಕೆ ಆಗಬಾರದು?: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಲಿತರೊಬ್ಬರು ಮುಖ್ಯಮಂತ್ರಿ ಏಕೆ ಆಗಬಾರದು? ಕಾಂಗ್ರೆಸ್‌ನಿಂದ ಡಿ.ದೇವರಾಜ ಅರಸು, ಗುಂಡೂರಾವ್, ವೀರಪ್ಪ ಮೊಯ್ಲಿ, ಧರ್ಮಸಿಂಗ್ ಹೀಗೆ ಅನೇಕರು ಸಿಎಂ ಆಗಿದ್ದಾರೆ. ಅದೇ ರೀತಿ ದಲಿತರು ಸಿಎಂ ಆಗಲಿ ಎಂದು ಅಭಿಪ್ರಾಯಪಟ್ಟರು.

    ಆಪರೇಷನ್ ಕಮಲಕ್ಕೆ ಬಲಿಯಾಗಿ ಪಕ್ಷ ಬಿಟ್ಟು ಹೋಗಿರುವ ಶಾಸಕರು ಮತ್ತೆ ಕಾಂಗ್ರೆಸ್ ಸೇರುವ ಸುಳಿವು ನೀಡಿದ ಅವರು, ರಾಜಕೀಯದಲ್ಲಿ ಎಲ್ಲ ಸಾಧ್ಯತೆಗಳೂ ಇವೆ. ಈ ರಹಸ್ಯವನ್ನು ಬಿಟ್ಟುಕೊಡಲ್ಲ. ಏಕೆಂದರೆ ಆ ಪಕ್ಷದವರು ಎಚ್ಚೆತ್ತುಕೊಳ್ಳುತ್ತಾರೆ. ಇದಕ್ಕಾಗಿ ಶುಭ ಗಳಿಗೆ ಬರಲಿದೆ ಎಂದರು.

    ಬಿಜೆಪಿ ಸರ್ಕಾರ ಭ್ರಷ್ಟ ಸರ್ಕಾರ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಭ್ರಷ್ಟಾತೀಭ್ರಷ್ಟ ಸರ್ಕಾರವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಪ್ರಕರಣಗಳ ಕುರಿತು ತನಿಖೆ ನಡೆಸಿ ತಾರ್ಕಿಕ ಅಂತ್ಯಕ್ಕೆ ತಲುಪಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್ ಗುಡುಗಿದರು.
    ಪ್ರತಿಪಕ್ಷವಾಗಿ ಕಾಂಗ್ರೆಸ್ ದುರ್ಬಲವಾಗಿಲ್ಲ. ಸರ್ಕಾರದ ವೈಫಲ್ಯಗಳ ವಿರುದ್ಧ ನಿರಂತರ ಹೋರಾಟ ಮಾಡುತ್ತಿದೆ. ಹೋರಾಟದ ಫಲವಾಗಿಯೇ ಸಚಿವರು ರಾಜೀನಾಮೆ ನೀಡುವಂತಾಯಿತು. ಆದರೂ ಇದು ದಪ್ಪ ಚರ್ಮದ ಭ್ರಷ್ಟ ಸರ್ಕಾರ ಆಗಿದೆ. ಈ ಸರ್ಕಾರದ ಅವಧಿಯಲ್ಲಿ ಸಾಧಕರು, ಸಾಮಾನ್ಯರ ಬದುಕಿಗೆ ತೊಂದರೆಯಾಗಿದೆ. ಶಾಂತಿಯೂ ಕದಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts