More

    ಹಾಸಿಗೆ ಮಾರಾಟಕ್ಕೆ ಹೊರಟು 91,000 ರೂಪಾಯಿ ಕಳ್ಕೊಂಡ್ರು..

    ಬೆಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸೈಬರ್ ಕಳ್ಳರು ಇಬ್ಬರು ಯುವಕರಿಗೆ ಒಟ್ಟು 91 ಸಾವಿರ ರೂ. ವಂಚಿಸಿದ್ದಾರೆ. ಒಎಲ್​ಎಕ್ಸ್ನಲ್ಲಿ ಹಾಸಿಗೆ ಮಾರಾಟ ಮಾಡಲು ಹೋದ ಕೊತ್ತನೂರು ನಿವಾಸಿ ಪೆರಲ್ ಥಾಮಸ್ 37 ಸಾವಿರ ರೂ. ಕಳೆದುಕೊಂಡರೆ, ಕೋಣನಕುಂಟೆ ನಿವಾಸಿ ಲಕ್ಕಪ್ಪ ಧರ್ಮಟ್ಟಿ ಬೈಕ್ ಖರೀದಿಸಲು 54 ಸಾವಿರ ರೂ.ಗಳನ್ನು ವಂಚಕರ ಖಾತೆಗೆ ಜಮೆ ಮಾಡಿ ಕಳೆದುಕೊಂಡಿದ್ದಾನೆ.

    ಮನೆಯಲ್ಲಿದ್ದ ಹಾಸಿಗೆಯೊಂದನ್ನು ಮಾರಾಟ ಮಾಡಲು ಒಎಲ್​ಎಕ್ಸ್​ನಲ್ಲಿ ಥಾಮಸ್ ಜಾಹೀರಾತು ಹಾಕಿದ್ದ. ಅದನ್ನು ಗಮನಿಸಿದ ವಂಚಕ ಜು. 9ರಂದು ಥಾಮಸ್​ಗೆ ಕರೆ ಮಾಡಿ ತನ್ನನ್ನು ವಿನೋದ್ ಎಂದು ಪರಿಚಯಿಸಿಕೊಂಡು ಹಾಸಿಗೆಯನ್ನು ಖರೀದಿಸುವುದಾಗಿ ನಂಬಿಸಿದ್ದ. ಆನ್​ಲೈನ್​ನಲ್ಲೇ ಹಣ ಪಾವತಿಸುವಂತೆ ಥಾಮಸ್ ತಿಳಿಸಿದ್ದ. ಕೆಲ ಸಮಯದ ಬಳಿಕ ಮತ್ತೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ತಾನು ಕ್ಯೂಆರ್ ಕೋಡ್ ಕಳುಹಿಸುತ್ತೇನೆ. ಅದನ್ನು ಸ್ಕ್ಯಾನ್​ ಮಾಡಿದರೆ ನಿಮ್ಮ ಖಾತೆಗೆ ಹಣ ಜಮಾ ಮಾಡಲು ಸುಲಭವಾಗುತ್ತದೆ ಎಂದಿದ್ದ. ಅದನ್ನು ನಂಬಿದ ಥಾಮಸ್, ಆತ ಕಳುಹಿಸಿದ ಕ್ಯೂಆರ್ ಕೋಡ್ ಸ್ಕ್ಯಾನ್​ ಮಾಡಿದ್ದ. ಕೆಲ ಹೊತ್ತಿನಲ್ಲೇ ಥಾಮಸ್ ಬ್ಯಾಂಕ್ ಖಾತೆಯಿಂದ 37 ಸಾವಿರ ರೂ. ಕಡಿತವಾಗಿದೆ. ವಿನೋದ್​ಗೆ ಕರೆ ಮಾಡಿದಾಗ ಆತನ ಮೊಬೈಲ್ ಆಫ್ ಆಗಿತ್ತು. ಈ ಬಗ್ಗೆ ಥಾಮಸ್ ಈಶಾನ್ಯ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾನೆ.

    ಬೈಕ್ ಖರೀದಿಸಲು ಹೋಗಿ ಹಣ ಕಳಕೊಂಡ: ಖಾಸಗಿ ಕಂಪನಿ ಉದ್ಯೋಗಿ ಲಕ್ಕಪ್ಪ ಹಳೆಯ ಬೈಕ್ ಖರೀದಿಗೆ ಮುಂದಾಗಿದ್ದ. ಬೈಕ್ ಮಾರಾಟಕ್ಕಿವೆಯೇ ಎಂಬ ಬಗ್ಗೆ ಜಾಲತಾಣಗಳಲ್ಲಿ ಹುಡುಕಾಡುತ್ತಿದ್ದ. ಒಎಲ್​ಎಕ್ಸ್​ನಲ್ಲಿ ಜು.9ರಂದು ಮಾರಾಟಕ್ಕೆ ಬೈಕ್ ಇರುವುದನ್ನು ಗಮನಿಸಿ ಆ ಜಾಹೀರಾತು ಹಾಕಿದ ವ್ಯಕ್ತಿಯನ್ನು ಸಂರ್ಪಸಿ ಖರೀದಿಸುವುದಾಗಿ ಲಕ್ಕಪ್ಪ ತಿಳಿಸಿದ್ದ. ಬೈಕ್ ದಾಖಲೆ ನೀಡಿದ ಬಳಿಕ ಹಣ ಪಾವತಿಸುವುದಾಗಿ ಹೇಳಿದ್ದ. ಅದಕ್ಕೆ ಒಪ್ಪದ ಬೈಕ್ ಮಾಲೀಕ, ಮೊದಲು ಹಣ ಪಾವತಿಸಬೇಕು.

    ಹಣ ಪಾವತಿಸಿದ ಬಳಿಕ ನೀವು ಹೇಳಿದ ವಿಳಾಸಕ್ಕೆ ಬೈಕ್ ತಂದುಕೊಡುವುದಾಗಿ ತಿಳಿಸಿದ್ದ. ಆತನ ಮಾತನ್ನು ನಂಬಿದ ಲಕ್ಕಪ್ಪ, ಆತ ಸೂಚಿಸಿದ ಬ್ಯಾಂಕ್ ಖಾತೆಗೆ 54 ಸಾವಿರ ರೂ. ವರ್ಗಾವಣೆ ಮಾಡಿದ್ದ. ಹಣ ಪಡೆದ ಬಳಿಕ ಆತ ಸಂಪರ್ಕಕ್ಕೆ ಸಿಕ್ಕಿಲ್ಲ. ಈ ಬಗ್ಗೆ ದಕ್ಷಿಣ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    COVID19 ಚಿಕಿತ್ಸೆ: ಆಸ್ಪತ್ರೆಗಳ ವಿವರ ಇನ್ನು ವೆಬ್​ಸೈಟ್​ನಲ್ಲಿ ಲಭ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts