More

    ಸಿಕ್ಕಸಿಕ್ಕ ನಂಬರ್‌ಗೆ ಕರೆ ಮಾಡಿ ಹಣ ಕಳಕೊಂಡ್ರು!…ಆನ್‌ಲೈನ್ ಖರೀದಿದಾರರಿಗೆ ಕಂಟಕವಾದ ಸೈಬರ್ ಕಳ್ಳರು

    ಬೆಂಗಳೂರು: ಕರೊನಾ ಸೋಂಕಿನ ಲಾಕ್‌ಡೌನ್ ಬೇಜಾರಿನಲ್ಲಿ ಗೂಗಲ್‌ನಲ್ಲಿ ಸಿಗುವ ಸಹಾಯವಾಣಿ ನಂಬರ್‌ಗಳಿಗೆ ಕರೆ ಮಾಡಬೇಡಿ. ವಂಚನೆ ಮಾಡುವುದಕ್ಕಾಗಿಯೇ ಸೈಬರ್ ಕಳ್ಳರು ಅಜ್ಞಾತ ಸ್ಥಳದಲ್ಲಿ ಕಾದು ಕುಳಿತಿದ್ದಾರೆ!
    ಆನ್‌ಲೈನ್‌ನಲ್ಲಿ ದಿನಸಿ ಖರೀದಿಗೆಂದು ಕರೆ ಮಾಡಿದ ವ್ಯಕ್ತಿಯಿಂದ 52 ಸಾವಿರ ರೂ. ಮತ್ತು ವಿದ್ಯುತ್ ಬಿಲ್ ಸಂಬಂಧ ವಿಚಾರಿಸಲು ಕರೆ ಮಾಡಿದವನ ಬ್ಯಾಂಕಿನಲ್ಲಿ 20 ಸಾವಿರ ರೂ. ದೋಚಿದ್ದಾರೆ.

    ಅನ್ನಪೂರ್ಣೆಶ್ವರಿನಗರದ ಬಿ.ಎ. ಜಗನಾಥ್ ಎಂಬುವರು ಬಿಗ್ ಬಾಸ್ಕೆಟ್‌ನಲ್ಲಿ ದಿನಸಿ ಖರೀದಿಗೆಂದು ಗೂಗಲ್ ಸರ್ಚ್ ಮಾಡಿ ಹೆಲ್ಪ್‌ಲೈನ್‌ಗೆ ಕರೆ ಮಾಡಿದ್ದರು. ಅಪರಿಚಿತ ವ್ಯಕ್ತಿ, ಕರೆ ಸ್ವೀಕರಿಸಿ ‘ನಿಮ್ಮ ಮೊಬೈಲ್‌ನಲ್ಲಿ ಮೊದಲು ಎನಿಡೆಸ್ಕ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. ದಿನಸಿ, ತರಕಾರಿ ಖರೀದಿ ಸುಲಭವಾಗುತ್ತದೆ’ ಎಂದು ಹೇಳಿದ್ದಾನೆ. ಅದನ್ನು ನಂಬಿದ ಜಗನ್ನಾಥ್, ಎನಿಡೆಸ್ಕ್ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡಿದ್ದರು. ಮತ್ತೆ ಕರೆ ಮಾಡಿದ ಅಪರಿಚಿತ, ದೂರುದಾರರ ಡೆಬಿಟ್ ಕಾರ್ಡ್‌ನ 16 ಸಂಖ್ಯೆ ಮತ್ತು ಸಿವಿವಿ ನಂಬರ್ ಪಡೆದು ಹಂತ ಹಂತವಾಗಿ 52,897 ರೂ.ಗಳನ್ನು ಸೈಬರ್ ವಂಚಕ ತನ್ನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾನೆ.

    ಇನ್ನೊಂದು ಪ್ರಕರಣದಲ್ಲಿ, ಕೆ.ಪಿ. ಅಗ್ರಹಾರ ಸಮೀಪದ ಭುವನೇಶ್ವರಿನಗರದ ಪಿ. ಮೋಹನ್, ಏಪ್ರಿಲ್‌ನ ವಿದ್ಯುತ್ ಬಿಲ್ ಪಾವತಿ ಕುರಿತು ಮಾಹಿತಿ ತಿಳಿಯಲು ಜಸ್ಟ್ ಡಯಲ್‌ನಲ್ಲಿ ಸಹಾಯವಾಣಿ ನಂಬರ್ ಪಡೆದು ಕರೆ ಮಾಡಿದಾಗ 20,248 ರೂ. ಸೈಬರ್ ಕಳ್ಳರು ದೋಚಿದ್ದಾರೆ.

    ಮೋಹನ್ ಬ್ಯಾಂಕ್ ಖಾತೆಯಿಂದ ವಿದ್ಯುತ್ ಬಿಲ್ ಪ್ರತಿ ತಿಂಗಳು ಆಟೋಡೆಬಿಟ್ ಆಗುತ್ತಿತ್ತು. ಏಪ್ರಿಲ್ ತಿಂಗಳ ಬಿಲ್ ಸಹ ಕಡಿತವಾಗಿದೆ. ವಿಚಾರಿಸಲು ಜಸ್ಟ್ ಡಯಲ್‌ಗೆ ಕರೆ ಮಾಡಿದಾಗ ಸಹಾಯವಾಣಿ ನಂಬರ್ ಕೊಟ್ಟಿದ್ದಾರೆ. ಅದಕ್ಕೆ ಕರೆ ಮಾಡಿದಾಗ ವಾಪಸ್ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುತ್ತೇವೆ. ಅದಕ್ಕೆ ನಿಮ್ಮ ಬ್ಯಾಂಕ್ ಖಾತೆ ವಿವರ ಮತ್ತು ಡೆಬಿಟ್ ಕಾರ್ಡ್ ಮಾಹಿತಿ ಕೊಡಿ ಎಂದಿದ್ದಾರೆ. ಇವರು ಕೊಟ್ಟಿದ್ದಾರೆ. ಆಗ 20,248 ರೂ.ಗಳನ್ನು ಕಳ್ಳರು ತಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ವಂಚನೆಗೆ ಒಳಗಾದ ಮೋಹನ್, ಬ್ಯಾಂಕ್ ಖಾತೆ ಬಂದ್ ಮಾಡಿದ್ದಾರೆ. ಈ ಎರಡು ಪ್ರಕರಣಗಳು ಪಶ್ಚಿಮ ಸಿಇಎನ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಗೂಗಲ್‌ನಲ್ಲಿ ಸಹಾಯವಾಣಿ ಹುಡುಕಾಟ ನಡೆಸಿ ಅದರಲ್ಲಿ ಸಿಗುವ ಮೊಬೈಲ್ ಅಥವಾ ದೂರವಾಣಿ ಸಂಖ್ಯೆಗೆ ಕರೆ ಮಾಡುವುದು ಅಪಾಯಕಾರಿ. ಸೈಬರ್ ಕಳ್ಳರು, ವಂಚನೆ ಉದ್ದೇಶಕ್ಕೆ ಗೂಗಲ್‌ನಲ್ಲಿ ತಮ್ಮ ನಂಬರ್‌ನ್ನು ಅಪ್‌ಲೋಡ್ ಮಾಡಿರುತ್ತಾರೆ. ಸಹಾಯಕೋರಿ ಕರೆ ಮಾಡಿದರೆ ಸಾಕು ಅವರಿಗೆ ದಾರಿ ತಪ್ಪಿಸಿ ವಂಚನೆ ಮಾಡುತ್ತಾರೆ. ಸಂಬಂಧಪಟ್ಟ ಕಂಪನಿ, ಇಲಾಖೆ ನೀಡುವ ಸಹಾಯವಾಣಿಗೆ ಕರೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳುವುದು ಒಳಿತು.

    ಕೇಂದ್ರ ಸರ್ಕಾರ VS ಪಶ್ಚಿಮ ಬಂಗಾಳ ಸರ್ಕಾರ; ಕರೊನಾ ಭೀಕರತೆ ಸೃಷ್ಟಿಸಿದ್ದರೂ ದೀದಿ ನೀಡುತ್ತಿಲ್ಲ ಸಹಕಾರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts