More

    ಅರಣ್ಯ ಪ್ರದೇಶದಲ್ಲಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ


    ಎಚ್.ಡಿ.ಕೋಟೆ : ಸೂಕ್ಷ್ಮ ಅರಣ್ಯ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ತಾಲೂಕಿನ ಗಡಿಭಾಗದ ಬಾವಲಿ ಹಾಡಿಯ ನಿವಾಸಿಗಳು ಅಬಕಾರಿ ಜಿಲ್ಲಾಧಿಕಾರಿ ಮಹಾದೇವಿಬಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.


    ಗಡಿಭಾಗದ ಬಾವಲಿ ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ಇಲಾಖೆ ವತಿಯಿಂದ ತೆರೆಯಲಾಗಿರುವ ಚೆಕ್‌ಪೋಸ್ಟ್‌ಗೆ ಗುರುವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಆದಿವಾಸಿ ಜನರು ಅಬಕಾರಿ ಜಿಲ್ಲಾಧಿಕಾರಿಗಳನ್ನು ಬೇಟಿ ಮಾಡಿ ಮನವಿ ಮಾಡಿದರು.


    ಹಾಡಿಯಿಂದ 50, 100 ಮೀಟರ್ ದೂರದಲ್ಲಿ ರೆಸಾರ್ಟ್‌ನಲ್ಲಿ ನಿಯಮ ಬಾಹಿರವಾಗಿ ಮದ್ಯದ ಅಂಗಡಿ ತೆರೆದು ಹೊರಗಡೆಯಿಂದ ಬರುವವರಿಗೆ ಮದ್ಯ ಮಾರಾಟ ಮಾಡಿಸುತ್ತಿದ್ದಾರೆ. ಇದರಿಂದ ಮದ್ಯದ ಅಮಲಿನಲ್ಲಿ ಹಾಡಿಯ ಮನೆಯ ಹತ್ತಿರ ಕೂಗಾಟ, ರಂಪಾಟ ಮಾಡುತ್ತಿದ್ದಾರೆ. ಹಾಡಿಯ ಹೆಣ್ಣುಮಕ್ಕಳು, ಶಾಲಾ ವಿದ್ಯಾರ್ಥಿಗಳು ರಸ್ತೆಯಲ್ಲಿ ತಿರುಗಾಡಲು ತುಂಬಾ ತೊಂದರೆ ಆಗಿದೆ. ನಮ್ಮ ಜನರು ಭಯದ ವಾತಾವರಣದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಮದ್ಯದ ಅಂಗಡಿ ನಡೆಸಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು.


    ಮಹಾದೇವಿಬಾಯಿ ಮಾತನಾಡಿ, ಈಗಾಗಲೇ ಗಲಾಟೆ ನಡೆದಿರುವ ವಿಚಾರ ಗಮನಕ್ಕೆ ಬಂದಿದ್ದು, ರೆಸಾರ್ಟ್ ಪಕ್ಕದ ಗೇಟ್ ಒಡೆದು ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ನಮ್ಮ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇದರ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು. ಅಬಕಾರಿ ಡಿವೈಎಸ್ಪಿ ವಿಕ್ರಮ್, ಅಬಕಾರಿ ನಿರೀಕ್ಷಕಿ ದಿವ್ಯಾಶ್ರೀ ಇದ್ದರು.


    ಹಾಡಿಯ ನಿವಾಸಿಗಳಾದ ಸುಬ್ರಹ್ಮಣ್ಯ, ಜಯಮ್ಮ, ಭಾಗ್ಯಾ, ಸಿ.ಕೆ.ರಾಜು, ಮಹೇಶ್, ರಾಜೇಶ, ಸಣ್ಣಪ್ಪ, ಸುಬ್ಬು, ಚಂದ್ರು, ಚಿನ್ನಪ್ಪ, ಜಯಮ್ಮ ಸರೋಜಿನಿ, ನಾಗೇಶ್, ಅಮ್ಮಣ್ಣಿ, ಸುಂದ್ರಿ, ರುಕ್ಮಿಣಿ, ದೀಪು, ಜಾನು, ಮಾರೇ, ಕಾಳಿ, ಬಿಂದು, ಲೀಲೆ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts