More

    ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ

    ಪಾಂಡವಪುರ: ದಲಿತ ಕಾಲನಿಯ ಆಸುಪಾಸಿನ ಸ್ಥಳಗಳಲ್ಲಿನ ಪೆಟ್ಟಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಇದರ ಪರಿಣಾಮ ಸಮಾಜದ ಯುವ ಪೀಳಿಗೆ ಮೇಲಾಗುತ್ತಿದೆ ಎಂದು ದಲಿತ ಸಮುದಾಯದ ಮುಖಂಡರು ಆರೋಪಿಸಿದರು.

    ಪಟ್ಟಣದ ಪೊಲೀಸ್ ಠಾಣೆಯಲ್ಲಿ ಭಾನುವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಕುಂದುಕೊರತೆ ಸಭೆಯಲ್ಲಿ ಸಮಾಜದ ಮುಖಂಡರು ಅಕ್ರಮ ಮದ್ಯದಂಗಡಿಗಳ ತೆರವಿಗೆ ಸಂಬಂಧಿಸಿದಂತೆ ದೂರು ಮತ್ತು ಸಲಹೆ ನೀಡುವ ಮೂಲಕ ಪೊಲೀಸ್ ಇಲಾಖೆ ಗಮನ ಸೆಳೆದರು.

    ಪ್ರತಿ ಗ್ರಾಮದ ಪೆಟ್ಟಿ ಅಂಗಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಇದರಿಂದ ಕೂಲಿ ಕಾರ್ಮಿಕರು ದುಡಿದ ಹಣವನ್ನು ಮದ್ಯಕ್ಕೆ ವಿನಿಯೋಗಿಸುತ್ತಿದ್ದಾರೆ. ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ನಿರಾತಂಕವಾಗಿದ್ದು, ಯಾವುದೇ ಅಂಜಿಕೆ ಇಲ್ಲದೆ ಸಣ್ಣಪುಟ್ಟ ಮತ್ತು ಪೆಟ್ಟಿಗೆ ಅಂಗಡಿಗಳಲ್ಲಿ ಮದ್ಯ ಮಾರಾಟವಾಗುತ್ತಿದೆ. ಮದ್ಯ ವ್ಯಸನಿಗಳು ಕುಡಿತದ ಚಟಕ್ಕೆ ಬಲಿಯಾಗಿ ತಮ್ಮ ಕುಟುಂಬವನ್ನು ಬೀದಿಪಾಲು ಮಾಡುತ್ತಿದ್ದಾರೆ. ಯುವಕರು ಮದ್ಯ ವ್ಯಸನಿಗಳಾಗುತ್ತಿರುವ ಪರಿಣಾಮ ಸಮಾಜ ದಾರಿ ತಪ್ಪುತ್ತಿದೆ. ಈ ಬಗ್ಗೆ ಕ್ರಮ ವಹಿಸಬೇಕು ಎಂದು ದಲಿತ ಸಮಾಜದ ಮುಖಂಡರು ಒತ್ತಾಯಿಸಿದರು.

    ಹಲವು ಗ್ರಾಮಗಳಲ್ಲಿ ರಾತ್ರಿ ಪಾಳಿಯಲ್ಲಿ ಪೊಲೀಸರು ಬೀಟ್ ಮಾಡುತ್ತಿಲ್ಲ. ಈ ಬಗ್ಗೆ ಗಮನಹರಿಸಬೇಕು. ಸಮುದಾಯದವರು ಜಮೀನು, ಮನೆ ಇತ್ಯಾದಿ ವಿಚಾರಗಳಲ್ಲಿ ಕಿರಿಕುಳ ಎದುರಿಸುತ್ತಿದ್ದು, ಈ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು.

    ಮುಖಂಡರ ದೂರು ಆಲಿಸಿ ಮಾತನಾಡಿದ ಸಬ್ ಇನ್‌ಸ್ಪೆಪೆಕ್ಟರ್ ಉಮೇಶ್, ಅಕ್ರಮ ಮದ್ಯ ಮಾರಾಟದ ಬಗ್ಗೆ ಮಾಹಿತಿ ನೀಡಿದರೆ ತಕ್ಷಣ ಕ್ರಮಗೊಳ್ಳಲಾಗುವುದು. ಜಮೀನು, ನಿವೇಶನ ಇತ್ಯಾದಿ ವಿಚಾರಗಳು ಸಿವಿಲ್ ಪ್ರಕರಣಗಳಾಗಿದ್ದು, ತಹಸೀಲ್ದಾರ್, ಉಪವಿಭಾಗಾಧಿಕಾರಿ ಕಚೇರಿಗೆ ಸಂಬಂಧಿಸಿದ್ದಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

    ಸಭೆಯಲ್ಲಿ ದಲಿತ ಮುಖಂಡರಾದ ಡಿ.ಕೆ.ಅಂಕಯ್ಯ, ಹಾರೋಹಳ್ಳಿ ಸೋಮಶೇಖರ್, ಚಿಕ್ಕಾಡೆ ಮದನ್‌ಕುಮಾರ್, ಬಳೇಅತ್ತಿಗುಪ್ಪೆ ವಿಜಯಕುಮಾರ್, ಹರಳಹಳ್ಳಿ ಸಿದ್ದಯ್ಯ, ದೊಡ್ಡಯ್ಯ, ಕನಗನಮರಡಿ ಕೃಷ್ಣಮೂರ್ತಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts