More

    ಧರ್ಮಾನುಷ್ಠಾನದಿಂದ ಸಂಸ್ಕೃತಿ ಉಳಿವು

    ಕಡೂರು: ಮನಸ್ಸು ಮತ್ತು ವಾತಾವರಣ ಶುಚಿಯಾಗಿದ್ದರೆ ಒಳಮನಸ್ಸು ಕೂಡ ನಿರ್ಮಲವಾಗಿರುತ್ತದೆ. ಮನಸ್ಸನ್ನು ಸದಾ ಸ್ವಚ್ಛವಾಗಿಟ್ಟುಕೊಂಡು ಎಲ್ಲವನ್ನೂ ದಯಾಭಾವದಿಂದ ಕಂಡು ಸಮಾಜದ ಋಣ ತೀರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಗೌರಿಗದ್ದೆ ಆಶ್ರಮದ ಅವಧೂತ ವಿನಯ್ ಗುರೂಜಿ ಹೇಳಿದರು.

    ತಾಲೂಕಿನ ಯಗಟಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಕುಮಾರ ವ್ಯಾಸ ಜಯಂತಿ ಕಾರ್ಯಕ್ರಮದ ಅಂಗವಾಗಿ ಗದುಗಿನ ವೀರನಾರಯಣಸ್ವಾಮಿ ದೇವಾಲಯದ ಬಳಿ ನಿರ್ಮಾಣಗೊಂಡ ಅನ್ನಪೂರ್ಣಾ ಭೋಜನ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದರು.
    ರಾಮನ ಪೂಜೆಗಿಂತ ರಾಮನಾಗಿ ಬದುಕುವುದು ಬಹುಮುಖ್ಯ. ಪ್ರಸ್ತುತ ದಿನಗಳಲ್ಲಿ ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳುತ್ತೇವೆ. ಆದರೆ ಕಾರ್ಯಾನುಷ್ಠಾನ ಮಾಡುವಲ್ಲಿ ವೈಫಲ್ಯ ಕಾಣುತ್ತಿರುವುದು ವಿಪರ್ಯಾಸ. ನಾವು ಸನಾತನದ ಬಗ್ಗೆ ತಿಳಿದುಕೊಂಡರೆ ಸಾಲದು ಧರ್ಮದ ಆಚರಣೆಯಲ್ಲಿ ತೊಡಗಿದಾಗ ಮಾತ್ರ ಸನಾತನ ಸಂಸ್ಕೃತಿಯ ಉಳಿವಿಗೆ ಕಾರಣವಾಗುತ್ತದೆ ಎಂದರು.
    ದೇಶದ ಅಸ್ಮಿತೆಯಾಗಿರುವ ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆ ಆಗಿರುವುದು ಶಸಕ್ಕಿಲ್ಲದ ಶಕ್ತಿ ಸನಾತನ ಶಾಸಕ್ಕಿದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ತೋರಿಸಿಕೊಟ್ಟಂತಾಗಿದೆ. ಸನಾತನ ಆಚರಣೆಯಲ್ಲಿ ತೊಡಗಿಸಿಕೊಂಡ ಪರಿಣಾಮವೇ ಯಾವುದೇ ಚ್ಯುತಿಬಾರದ ಹಾಗೆ ನಿರ್ವಿಘ್ನವಾಗಿ ಕಾರ್ಯಗಳು ಜರುಗಿದವು ಎಂದು ತಿಳಿಸಿದರು.
    ಸ್ವಯಂ ವ್ಯಾಸಮೂರ್ತಿಯೇ ಕುಮಾರವ್ಯಾಸ. ಸನಾತನ ಸಂಸ್ಕೃತಿಯನ್ನು ಪರಿಚಯಿಸುವ ಶಕ್ತಿ ಯಗಟಿ ಗ್ರಾಮಕ್ಕೆ ಇದೆ. ಕುಮಾರವ್ಯಾಸ ಭಾರತವನ್ನು ಎಲ್ಲ ಭಾಷೆಗಳಿಗೆ ತರ್ಜುಮೆ ಮಾಡಿಸಿ ಅದನ್ನು ಎಲ್ಲರಿಗೆ ತಲುಪಿಸುವ ಕಾರ್ಯವನ್ನು ಗೌರಿಗದ್ದೆ ಆಶ್ರಮದಿಂದ ಮಾಡುತ್ತೇವೆ. ಜತೆಗೆ ಯಗಟಿಯಲ್ಲಿ ನಡೆಯುವ ಕುಮಾರವ್ಯಾಸ ಜಯಂತಿ ಕಾರ್ಯಕ್ರಮ ಸನಾತನ ಪೂಜಾ ಕಾರ್ಯ ಸ್ವರೂಪವಾದ್ದರಿಂದ 25 ಸಾವಿರ ರೂ.ಗಳನ್ನು ಪ್ರತಿವರ್ಷ ವ್ಯಯಿಸುವ ಆಶಯ ನಮ್ಮದು ಎಂದು ಘೋಷಿಸಿದರು.
    ವ್ಯಾಸ ಪೂಜೆ ಸ್ವೀಕರಿಸಿದ ಶೃಂಗೇರಿ ಶ್ರೀ ಶಾರದಾ ಪೀಠದ ನಿರ್ಗಮಿತ ಆಡಳಿತಾಧಿಕಾರಿ ಡಾ. ವಿ.ಆರ್.ಗೌರೀಶಂಕರ್ ಮಾತನಾಡಿ, ಕಾಲ ಕೆಟ್ಟಿದೆಯೆಂಬ ಮಾತು ಬರಲು ಕಾರಣ ನಾಗರಿಕ ಸಮಾಜದಲ್ಲಿ ಸತ್ಪುರುಷರ ಜತೆಗಿನ ಸಂಬಂಧಗಳ ಕೊರತೆಯಿರುವುದು. ಇತರರಿಗೆ ತೊಂದರೆ ನೀಡಿ ವಿಕೃತ ಸಂತೋಷ ಪಡುವವರೇ ಹೆಚ್ಚಿರುವುದರಿಂದ ಸಮಾಜ ಶೋಚನೀಯ ಸ್ಥಿತಿಯಲ್ಲಿದೆ. ಧರ್ಮದ ಬಗ್ಗೆ ಅಭಿಮಾನವಿದೆ. ಆದರೆ ಶ್ರದ್ಧೆಯಿಲ್ಲ. ಸದ್ಗುರುಗಳ ಬಗ್ಗೆ ಭಕ್ತಿ ಭಾವ ಕಡಿಮೆಯಾಗಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.
    ಇಂಗ್ಲಿಷ್‌ಗೆ ತರ್ಜುಮೆಯಾಗಿರುವ ಕುಮಾರವ್ಯಾಸ ಭಾರತ ಪುಸ್ತಕವನ್ನು ಇದೇ ಸಂದರ್ಭ ಬಿಡುಗಡೆಗೊಳಿಸಲಾಯಿತು. ಮಾಜಿ ಶಾಸಕ ವೈಎಸ್‌ವಿ ದತ್ತ, ವೈ.ಎಸ್.ರವಿಪ್ರಕಾಶ್, ಕ.ವೆಂ.ಚಂದ್ರಮೌಳಿ, ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಚೋಮನಹಳ್ಳಿ ಶ್ರೀನಿವಾಸ್, ಯಗಟಿಯ ಒಂಬತ್ತು ದೊಡ್ಡಿ ಗೌಡರು, ಕುಮಾರವ್ಯಾಸನ ವಂಶಜರು ವ್ಯಾಸಪೂಜೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts