More

    ಸ್ತ್ರೀ ಸಶಕ್ತೀಕರಣಕ್ಕೆ ಸರ್ಕಾರದಿಂದ ಉತ್ತೇಜನ

    ಚಿಕ್ಕಮಗಳೂರು: ಸಮಾಜದಲ್ಲಿ ಸಾಕಷ್ಟು ಸಂದರ್ಭ ಹೆಣ್ಣು ಮಕ್ಕಳು ಲಿಂಗಭೇದ, ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಅವರಲ್ಲಿ ಅರಿವು ಮೂಡಿಸಿ ಸಶಕ್ತರನ್ನಾಗಿಸುವ ಕಾರ್ಯ ಸರ್ಕಾರದಿಂದ ನಡೆಯುತ್ತಿದೆ ಎಂದು ನಾಟ್ಯ ಕಲಾವಿದೆ ವೈಷ್ಣವಿ ಎನ್. ರಾವ್ ಹೇಳಿದರು.

    ನಗರದ ಕುವೆಂಪು ಕಲಾ ಮಂದಿರದಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದಿಂದ ಭಾನುವಾರ ಏರ್ಪಡಿಸಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಮತ್ತು ಪೋಷಣ್ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ವಿಶಿಷ್ಟ ಸಂಸ್ಕೃತಿ ಹೊಂದಿರುವ ನಮ್ಮ ದೇಶದಲ್ಲಿ ವೇದಗಳ ಕಾಲದಿಂದಲೇ ಹೆಣ್ಣಿಗೆ ವಿಶೇಷ ಸ್ಥಾನಮಾನವಿದೆ. ಪ್ರಮುಖವಾಗಿ ಹೆಣ್ಣನ್ನು ಪ್ರಕೃತಿಗೆ ಹೋಲಿಸಲಾಗುತ್ತದೆ. 12ನೇ ಶತಮಾನದಲ್ಲಿ ಬಸವಣ್ಣ ಹಾಗೂ ಅಕ್ಕಮಹಾದೇವಿ ಸ್ತ್ರೀ ಸಮಾನತೆ ಬಗ್ಗೆ ಸಾರಿದ್ದರು. ಆದರೂ ಹೆಣ್ಣು ಮಕ್ಕಳು ಶೋಷಣೆಗೆ ಒಳಗಾಗುತ್ತಿದ್ದಾರೆ. ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಸರ್ಕಾರ ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ ಎಂದರು.

    ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಮಾತನಾಡಿ, ಸಮಾಜದಲ್ಲಿ ಸಂಸ್ಕೃತಿ ಉಳಿದಿದೆ ಎಂದರೆ ಅದು ಹೆಣ್ಣಿನಿಂದ. ಜಗತ್ತಿನಲ್ಲಿ ಮಹಿಳೆ ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾಳೆ. ಸರ್ಕಾರ ಹೆಣ್ಣು ಮಕ್ಕಳ ದಿನ ಆಚರಿಸುತ್ತಿರುವುದು ನಮ್ಮನ್ನು ನಾವು ಸಂಭ್ರಮಿಸಿಕೊಳ್ಳುವ ದಿನ. ಸರ್ಕಾರ ಹೆಣ್ಣು ಮಕ್ಕಳ ಆರೋಗ್ಯ, ವಿದ್ಯಾಭ್ಯಾಸ, ಸುರಕ್ಷತೆಗೆ ಸಂಬಂಧಿಸಿ ಹಲವು ಯೋಜನೆ ಹಾಗೂ ಕಾನೂನು ಜಾರಿಗೆ ತಂದಿದೆ. ಅವುಗಳ ಬಗ್ಗೆ ತಿಳಿದುಕೊಂಡು ಜಾಗೃತರಾಗಬೇಕು ಎಂದು ಸಲಹೆ ನೀಡಿದರು.

    ಡಿಎಸಿಜಿ ಪಾಲಿಟೆಕ್ನಿಕ್ ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್ ಮಾತನಾಡಿ, ಹೆಣ್ಣಿನಲ್ಲಿ ಕಲಿತುಕೊಳ್ಳುವ ಶಕ್ತಿ ಸಹಜವಾಗಿ ಇರುತ್ತದೆ. ಈ ಸಶಕ್ತೀಕರಣ ಗುಣಕ್ಕೆ ಸಾಣೆ ಹಿಡಿಯುವ ಕೆಲಸ ಮಾಡಬೇಕಿದೆ. ಸಾಧಕ ಮಹಿಳೆಯರ ಜೀವನ ಕ್ರಮ ಮಾದರಿಯಾಗಿ ತೆಗೆದುಕೊಳ್ಳಬೇಕು. ಆಟದಲ್ಲಿ ಎದುರಾಳಿಗಳು ಇರುವಂತೆ ಬದುಕಿನ ಸವಾಲುಗಳನ್ನು ಎದುರಿಸಲು ಯೋಜನೆ ರೂಪಿಸಿಕೊಳ್ಳಬೇಕು ಎಂದರು.

    ಜಿಪಂ ಸದಸ್ಯೆ ಜಸಂತಾ ಅನಿಲ್​ಕುಮಾರ್, ತಾಪಂ ಅಧ್ಯಕ್ಷೆ ದಾಕ್ಷಾಯಿಣಿ ಪೂರ್ಣೆಶ್, ವಕೀಲೆ ಡಿ.ಎಸ್.ಮಮತಾ ಮಾತನಾಡಿದರು. ತಾಪಂ ಸದಸ್ಯರಾದ ಭವ್ಯಾ ನಟೇಶ್, ರೇಖಾ ಅನಿಲ್, ಇಒ ಎಚ್.ಡಿ.ರೇವಣ್ಣ, ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ದಿವ್ಯಾ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಡಾ. ಎಚ್.ಪಿ.ಮಂಜುಳಾ ಹುಲ್ಲಹಳ್ಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಬಿ.ಮಲ್ಲಿಕಾರ್ಜುನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts