More

    ಸಿದ್ದು ಸೋಲಿಸಲು ಡಿಕೆಶಿ ಹೋಮ; ಕಾಂಗ್ರೆಸ್-ಬಿಜೆಪಿ ಗೆಲ್ಲದಿರಲಿ ಅಂತ ದೊಡ್ಡಗೌಡರ ಪೂಜೆ: ಸಿ.ಟಿ. ರವಿ ವ್ಯಂಗ್ಯ

    ಕೊಡಗು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚುನಾವಣಾ ಕಾವು ಹೆಚ್ಚಾಗುತ್ತಿದ್ದು, ರಾಜಕಾರಣಿಗಳು ಪರಸ್ಪರ ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿಕೊಂಡಿದ್ದಾರೆ. ಇದೀಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ವಿಧಾನಸಬಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಟಿ. ರವಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಹೊಸದೊಂದು ಆರೋಪ ಮಾಡಿದ್ದಾರೆ.

    ಮಡಿಕೇರಿ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಪರ ಶನಿವಾರಸಂತೆಯಲ್ಲಿ ಪ್ರಚಾರ ನಡೆಸಿ ಮಾತನಾಡಿದ ಸಿ.ಟಿ. ರವಿ “ಸಿದ್ದರಾಮಯ್ಯ ಸೋಲಲಿ ಅಂತ ಡಿಕೆಶಿ ಹೋಮ ಮಾಡಿಸಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಬಹುಮತ ಬರದಿರಲಿ ಅಂತ ದೊಡ್ಡಗೌಡರು (ದೇವೇಗೌಡ) ಪೂಜೆ ಮಾಡಿಸುತ್ತಿದ್ದಾರೆ” ಎಂದು ವ್ಯಂಗ್ಯ ಮಾಡಿದ್ದಾರೆ.

    ಇದನ್ನೂ ಓದಿ: ಟ್ರೋಲ್​ ಮಾಡುವವರ ವಿರುದ್ಧ ಕೆಂಡ ಕಾರಿದ ಶಿವರಾಜ್​​ಕುಮಾರ್

    “ಬಿಜೆಪಿ ಸರ್ಕಾರ ಜಾತಿ‌ ಆಧಾರದಲ್ಲಿ ಯೋಜನೆಗಳನ್ನು ತಂದಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಮಕ್ಕಳ ಮನಸ್ಸಿನಲ್ಲೂ ಜಾತಿಯೆಂಬ ಬೀಜ‌ವನ್ನು ಬಿತ್ತಿದೆ. ಬಜರಂಗಿಗೆ ಸೋಲಿಲ್ಲ. ಕಾಂಗ್ರೆಸ್‌ಗೆ ಸೋಲು ಕಟ್ಟಿಟ್ಟ ಬುತ್ತಿ. ಸುಮ್ಮನಿದ್ದ ಬಜರಂಗಿಯ ಬಾಲಕ್ಕೆ ರಾವಣ ಬೆಂಕಿ ಹಚ್ಚಿದ್ದಕ್ಕೆ ಲಂಕೆ ಭಸ್ಮವಾಯ್ತು. ಈಗ ಬಜರಂಗಿಗಳನ್ನು ಕಾಂಗ್ರೆಸ್ ಕೆಣಕಿದೆ. ಅದೂ ಕೂಡ ಭಸ್ಮವಾಗುತ್ತೆ” ಎಂದರು.

    “ಬಿಜೆಪಿ ಅಧಿಕಾರಕ್ಕೆ ಬಂದರೆ ಸಮಾನ ನಾಗರಿಕ ಸಂಹಿತೆ ಜಾರಿ ಮಾಡುತ್ತೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾಲಿಬಾನ್ ಮಾದರಿ‌ ಆಡಳಿತ ಬರುತ್ತದೆ. ಇದು ಅಪ್ಪಚ್ಚು ರಂಜನ್, ಮಂಥರ್ ಗೌಡ ನಡುವಿನ ಚುನಾವಣೆ ಅಲ್ಲ. ಈ ಚುನಾವಣೆ ಬಜರಂಗ ಬಲಿ ಮತ್ತು ಟಿಪ್ಪು ನಡುವಿನ ಚುನಾವಣೆ. ಟಿಪ್ಪು ಬೆಂಬಲಿಗರಿಗೆ ಮತ ನೀಡಬೇಡಿ. ಕೊಡಗಿನಲ್ಲಿ ಜಾತಿ ರಾಜಕಾರಣ ನಡೆಯಲ್ಲ. ಹಿಂದುತ್ವ ಮಾತ್ರ ನಡೆಯುತ್ತದೆ. ಆದ್ದರಿಂದಲೇ 20-25 ವರ್ಷಗಳಿಂದ ಬಿಜೆಪಿ ಗೆಲ್ಲುತ್ತಾ ಬಂದಿದೆ” ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts