More

    ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸುಲಭ ತುತ್ತಾದ ಪಂಜಾಬ್ ಕಿಂಗ್ಸ್

    ಮುಂಬೈ: ರನ್‌ಮಳೆಗೆ ಹೆಸರುವಾಸಿಯಾದ ವಾಂಖೆಡೆ ಸ್ಟೇಡಿಯಂನಲ್ಲಿ ಸತತ 2ನೇ ದಿನ ಬೌಲರ್‌ಗಳದ್ದೇ ಅಬ್ಬರ. ಗುರುವಾರ ಡೆಲ್ಲಿ ಕ್ಯಾಪಿಟಲ್ಸ್ – ರಾಜಸ್ಥಾನ ರಾಯಲ್ಸ್ ಪಂದ್ಯದಲ್ಲಾದಂತೆ ಶುಕ್ರವಾರದ ಐಪಿಎಲ್ ಲೀಗ್ ಪಂದ್ಯದಲ್ಲೂ ಬೌಲರ್‌ಗಳೇ ಮೆರೆಯುವುದರೊಂದಿಗೆ ಪಂಜಾಬ್ ಕಿಂಗ್ಸ್ ತಂಡ ಈ ಋತುವಿನ ನಿಕೃಷ್ಟ ಮೊತ್ತಕ್ಕೆ ಕುಸಿಯಿತು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ಮೇಲುಗೈ ಸಾಧಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 6 ವಿಕೆಟ್‌ಗಳಿಂದ ಕನ್ನಡಿಗ ಕೆಎಲ್ ರಾಹುಲ್ ಬಳಗವನ್ನು ಸೋಲಿಸಿತು. ಇದರೊಂದಿಗೆ ಐಪಿಎಲ್-14ರಲ್ಲಿ ಸಿಎಸ್‌ಕೆ ಗೆಲುವಿನ ಹಳಿಗೇರಿತು.

    ಟಾಸ್ ಜಯಿಸಿ ಬೌಲಿಂಗ್ ಆಯ್ಕೆ ಮಾಡಿಕೊಂಡ ಸಿಎಸ್‌ಕೆ ನಾಯಕ ಎಂಎಸ್ ಧೋನಿ ನಿರ್ಧಾರವನ್ನು ಸಮರ್ಥಿಸುವಂತೆ ವೇಗಿ ದೀಪಕ್ ಚಹರ್ (13ಕ್ಕೆ4) ಆರಂಭದಲ್ಲೇ ಪಂಜಾಬ್ ಬ್ಯಾಟಿಂಗ್ ಮೇಲೆರಗಿ ಎದುರಾಳಿಗಳನ್ನು ಗಲಿಬಿಲಿಗೊಳಿಸಿದರು. ತನ್ನ ಮೊದಲ ಪಂದ್ಯದಲ್ಲಿ ಈವರೆಗಿನ ಗರಿಷ್ಠ 221 ರನ್ ಬಾರಿಸಿದ್ದ ಪಂಜಾಬ್ ಶುಕ್ರವಾರ ಚೆನ್ನೈ ಸೂಪರ್‌ಕಿಂಗ್ಸ್ ವಿರುದ್ಧ 8 ವಿಕೆಟ್‌ಗೆ 106 ರನ್ ಮಾತ್ರ ಗಳಿಸಿತು. ತಂಡದ ಬ್ಯಾಟಿಂಗ್ ಅಸ್ಥಿರತೆಗೆ ಕನ್ನಡಿ ಹಿಡಿಯಿತು. ತಮಿಳುನಾಡು ಮೂಲದ ಶಾರುಖ್ ಖಾನ್ (47ರನ್, 36 ಎಸೆತ, 4 ಬೌಂಡರಿ, 2 ಸಿಕ್ಸರ್) ಏಕಾಂಗಿಯಾಗಿ ಹೋರಾಡದಿದ್ದಲ್ಲಿ ಪಂಜಾಬ್ 100 ರನ್ ಗಡಿ ದಾಟುವುದೂ ಕಷ್ಟವಿತ್ತು.
    ಬಳಿಕ ಈ ಅಲ್ಪಮೊತ್ತ ಬೆನ್ನಟ್ಟಿದ ಸಿಎಸ್‌ಕೆ ತಂಡ ಆರಂಭದಲ್ಲೇ ಋತುರಾಜ್ ಗಾಯಕ್ವಾಡ್ (5) ವಿಕೆಟ್ ಕಳೆದುಕೊಂಡಿತು. ಆದರೆ, ಅನುಭವಿ ಫಾಫ್ ಡು ಪ್ಲೆಸಿಸ್ (36*ರನ್, 33 ಎಸೆತ, 3 ಬೌಂಡರಿ, 1 ಸಿಕ್ಸರ್) ಹಾಗೂ ಮೊಯಿನ್ ಅಲಿ (46 ರನ್, 31 ಎಸೆತ, 7 ಬೌಂಡರಿ, 1 ಸಿಕ್ಸರ್) 2ನೇ ವಿಕೆಟ್‌ಗೆ ಪೇರಿಸಿದ 64 ರನ್ ಜತೆಯಾಟದ ನೆರವಿನಿಂದ 15.4 ಓವರ್‌ಗಳಲ್ಲಿ 4 ವಿಕೆಟ್‌ಗೆ 107 ರನ್‌ಗಳಿಸಿ ಜಯದ ನಗೆ ಬೀರಿತು.

    ಪಂಜಾಬ್ ಕಿಂಗ್ಸ್: 8 ವಿಕೆಟ್‌ಗೆ 106 (ಕೆಎಲ್ ರಾಹುಲ್ 5, ಮಯಾಂಕ್ ಅಗರ್ವಾಲ್ 0, ಕ್ರಿಸ್ ಗೇಲ್ 10, ಶಾರುಖ್ ಖಾನ್ 47, ದೀಪಕ್ ಚಹರ್ 13ಕ್ಕೆ 4, ಸ್ಯಾಮ್ ಕರ‌್ರನ್ 12ಕ್ಕೆ 1, ಮೊಯಿನ್ ಅಲಿ 17ಕ್ಕೆ 1, ಡ್ವೇನ್ ಬ್ರಾವೊ 10ಕ್ಕೆ 1), ಸಿಎಸ್‌ಕೆ: 15.4 ಓವರ್‌ಗಳಲ್ಲಿ 4 ವಿಕೆಟ್‌ಗೆ 107 (ಡು ಪ್ಲೆಸಿಸ್ 36, ಮೊಯಿನ್ ಅಲಿ 46, ಮೊಹಮದ್ ಶಮಿ 21ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts