More

    ಭೀಮಾತೀರದಲ್ಲೊಂದು ಅಮಾನವೀಯ ಘಟನೆ, ಯುವಕನ ಬಾಯಿಗೆ ಬೂಟು ಇಟ್ಟು ಪೊಲೀಸ್ ದೌರ್ಜನ್ಯ, ಲಾಕ್ ಡೌನ್ ಮಧ್ಯೆ ಜೂಜಾಡಿರುವ‌ ಮಾಹಿತಿ ನೀಡಿದ್ದಕ್ಕೆ ಈ ಪರಿ‌ ಶಿಕ್ಷೆಯಾ?

    ವಿಜಯಪುರ: ಲಾಕ್ ಡೌನ್ ಮಧ್ಯೆಯೂ ಜೂಜಾಡುತ್ತಿದ್ದವರ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಪಿಎಸ್ ಐ ಹಾಗೂ ಪೊಲೀಸ್ ಬೀಟ್ ಯುವಕನೊಬ್ಬನ ಬಾಯಿಗೆ ಬೂಟು ಇಟ್ಟು ಹೊಡೆದಿದ್ದಲ್ಲದೇ ಆತನನ್ನು ಚರಂಡಿಗೆ ಎಸೆದು ಹೋಗಿರುವ ಪ್ರಕರಣ ಭೀಮಾತೀರದಲ್ಲಿ ಬೆಳಕಿಗೆ ಬಂದಿದೆ.

    ಇಂಡಿ ತಾಲೂಕಿನ ಹಿರೇಮಸಳಿಯಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು ಶನಿವಾರ ಪ್ರಕರಣ ಬೆಳಕಿಗೆ ಬಂದಿದೆ.
    ಗ್ರಾಮದ ಸಂತೋಷ ನಂದ್ಯಾಳ ಎಂಬಾತನೇ ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿದ್ದು, ಗ್ರಾಮೀಣ ಠಾಣೆ ಪಿಎಸ್ ಐ ಮಾಳಪ್ಪ ಪೂಜಾರಿ ಹಾಗೂ ಬೀಟ್ ಪೊಲೀಸ್ ಮಹೇಶ ಪವಾರ ಎಂಬುವರು ಈ ಕೃತ್ಯ ಎಸಗಿದ್ದಾಗಿ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.

    ಘಟನೆ ವಿವರ: ಹಿರೇಮಸಳಿ ಗ್ರಾಮದಲ್ಲಿ ಜೂಜು ಹಾಗೂ ಮದ್ಯ ಮಾರಾಟ ಹಾವಳಿ ಹೆಚ್ಚಿದೆ. ಲಾಕ್ ಡೌನ್ ನಿಯಮ ಉಲ್ಲಂಘಿಸಿ ಜೂಜು ಆಡುತ್ತಿದ್ದು ಈ ಬಗ್ಗೆ ಸಂತೋಷ ಪೊಲೀಸರ ಗಮನಕ್ಕೆ ತಂದಿದ್ದಾನೆ.‌ ಇಲ್ಲಿ ಜೂಜುಕೋರರ ಮೇಲೆ ಕ್ರಮ ಕೈಗೊಳ್ಳಬೇಕಾದ ಪೊಲೀಸ್ ಬೀಟ್ ಮಹೇಶ ಪವಾರ ಗ್ರಾಮದ ಇಮಾಮ್ ಯಲಿಗಾರ ಎಂಬಾತನ ಮಾತು ಕೇಳಿ ಸಂತೋಷನನ್ನೇ ಎಳೆದುಕೊಂಡು ಹೋಗಿ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಆ ಬಳಿಗೆ ಠಾಣೆಯಲ್ಲಿ ಪಿಎಸ್ ಐ ಮಾಳಪ್ಪ ಪೂಜಾರಿ ಹಾಗೂ ಪೇದೆ ಮಹೇಶ ಮತ್ತು ಯಲಿಗಾರ ಮೂವರು ಸೇರಿ ಹೊಡೆದಿದ್ದಾರೆ. ಪಿಎಸ್ ಐ ಮಾಳಪ್ಪ ಪೂಜಾರಿ ಬಾಯಲ್ಲಿ ಬೂಟು ಇರಿಸಿದ್ದಾನೆ. ಆ ಬಳಿಕ ಸಂತೋಷ ತೀವ್ರ ಅಸ್ವಸ್ಥಗೊಳ್ಳುತ್ತಿದ್ದಂತೆ ರಾತ್ರಿ 11 ರ ಸುಮಾರಿಗೆ ಖಾಸಗಿ ವಾಹನದಲ್ಲಿ ಗ್ರಾಮಕ್ಕೆ ಕರೆತಂದು ಗ್ರಾಮದ ಹೊರವಲಯದ ಚರಂಡಿಗೆ ಎಸೆದು ಹೋಗಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.

    ಕೂಡಲೇ ಸಂತೋಷನನ್ನು ಆಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆ ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಿರೇಮಸಳಿ ಗ್ರಾಮದಲ್ಲಿ ಜೂಜು ಹಾಗೂ ದಾಬಾಗಳ ಹಾವಳಿ ಹೆಚ್ಚಿದೆ. ಹಾಡಹಗಲೇ ಮದ್ಯಮಾರಾಟ ಜೋರಾಗಿದೆ. ದಾಬಾಗಳಲ್ಲಿ ಎಗ್ಗಿಲ್ಲದೇ ಮದ್ಯ ಮಾರಾಟವಾಗುತ್ತಿದೆ. ಪೊಲೀಸ್ ಬೀಟ್ ಮಹೇಶ ಪವಾರ ಗ್ರಾಮಕ್ಕೆ ಬಂದಾಗ ದಾಬಾಗಳಲ್ಲಿ ಕುಳಿತು ಕುಡಿದು ಊಟ ಮಾಡಿ ಹೋಗುತ್ತಿದ್ದನೆಂಬ ಆರೋಪ‌ವಿದೆ. ದಾಬಾಗಳಿಂದ ತಿಂಗಳಿಗೆ ಮಾಮೂಲು ಹೋಗುತ್ತಿದ್ದು, ಸಂತೋಷ‌ ಮೇಲೆ ದೌರ್ಜನ್ಯ ಎಸಗಲು ಇದು ಸಹ ಕಾರಣ ಎನ್ನಲಾಗಿದೆ.

    ಒಟ್ಟಿನಲ್ಲಿ ಅಕ್ರಮ ತಡೆಯಬೇಕಿದ್ದ ಪೊಲೀಸರೇ ಖಾಸಗಿ ವ್ಯಕ್ತಿಗಳ ಮತ್ತು ಜೂಜುಕೋರರ ಮಾತು ಕೇಳಿ ಅಮಾಯಕ ಯುವಕನ ಮೇಲೆ ದೌರ್ಜನ್ಯ ಎಸಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆಯಲ್ಲದೇ ಇಂಥ ಪೊಲೀಸರ ಮೇಲೆ ಗೃಹ ಸಚಿವರು ಕೂಡಲೇ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿ ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts