More

    ಕೋಟಿ ಕೊಟ್ಟರೂ ಕೃಷಿಭೂಮಿ ಕೊಡೆವು

    ಬೆಳಗಾವಿ: ಚಿನ್ನದಂತಹ ಬೆಳೆ ಬೆಳೆಯುವ ಫಲವತ್ತಾದ ಕೃಷಿ ಭೂಮಿಯಲ್ಲಿ ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ಸರ್ಕಾರ ಕೋಟಿ ರೂಪಾಯಿ ಪರಿಹಾರ ಕೊಟ್ಟರೂ ಬೇಡ. ಇದೇ ಭೂಮಿಯಲ್ಲಿ ತಾತನ ಕಾಲದಿಂದಲೂ ಕೃಷಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದೇವೆ. ನಮ್ಮ ಭೂಮಿ ನಮಗೆ ಬಿಟ್ಟುಕೊಟ್ಟು ಪುಣ್ಯಕಟ್ಟಿಕೊಳ್ಳಿ ಎಂದು ರೈತರು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರ ಬಳಿ ತಮ್ಮ ಅಳಲು ತೋಡಿಕೊಂಡರು.

    ನಗರದ ಹೊರವಲಯದಲ್ಲಿ 9.5 ಕಿ.ಮೀ. ಉದ್ದದ ಹಲಗಾ- ಮಚ್ಛೆ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಕೃಷಿ ಭೂಮಿ ಕಳೆದುಕೊಳ್ಳುತ್ತಿರುವ ಮಜಗಾವಿ, ಅನಗೋಳ, ವಡಗಾವಿ, ಮಚ್ಛೆ, ಹಲಗಾ, ಶಹಾಪುರ, ಮಹಾದೇವಪುರ ಗ್ರಾಮಗಳಿಗೆ ಶನಿವಾರ ಜಿಲ್ಲಾಧಿಕಾರಿ ಭೇಟಿ ನೀಡಿದ ಸಂದರ್ಭದಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದರು.

    ಪೊಲೀಸರಿಂದ ಬೆದರಿಕೆ: 2011 ರಿಂದಲೇ ಹಲಗಾ-ಮಚ್ಛೆ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಸುಮಾರು 150 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ಪೊಲೀಸರ ಮೂಲಕ ಹೆದರಿಸುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಈ ಕುರಿತು ಮೇಲಿಂದ ಮೇಲೆ ಸಂಬಂಧಿಸಿದವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ. ಕೃಷಿಗೆ ಯೋಗ್ಯವಲ್ಲದ ಭೂಮಿ ಸಾಕಷ್ಟಿದೆ. ಅಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಮಾಡಬಹುದು. ಆದರೆ, ಅಧಿಕಾರಿಗಳು, ಕೆಲ ರಿಯಲ್ ಎಸ್ಟೇಟ್ ಉದ್ಯಮಿಗಳು ಸೇರಿಕೊಂಡು ಕೃಷಿ ಭೂಮಿ ಸ್ವಾಧೀನಕ್ಕೆ ಪ್ರಯತ್ನಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ನಮಗೆ ನ್ಯಾಯ ಒದಗಿಸಬೇಕು ಎಂದು ರೈತರು ಕೋರಿದರು.

    ಡಿಸಿಯೊಂದಿಗೆ ವಾಗ್ವಾದ: ಜಿಲ್ಲಾಧಿಕಾರಿಗಳು ಬೈಪಾಸ್ ನಿರ್ಮಾಣಕ್ಕೆ ಭೂಮಿ ಸ್ವಾಧೀನಪಡಿಸಿಕೊಳ್ಳುವ ಕುರಿತು ರೈತರ ಮನವೊಲಿಕೆಗೆ ಪ್ರಯತ್ನಿಸಿದರು. ಇದರಿಂದ, ಮತ್ತಷ್ಟು ಆಕ್ರೋಶಗೊಂಡ ರೈತರು, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರೊಂದಿಗೆ ವಾಗ್ವಾದ ನಡೆಸಿದರು. ಈ ವೇಳೆ ರೈತ ಮಹಿಳೆಯರು ಭೂಮಿಯಲ್ಲಿ ಬೆಳೆದಿರುವ ಬೆಳೆ ಕೈಯಲ್ಲಿ ಹಿಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.

    ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಎಸಿ ಅಶೋಕ ತೇಲಿ, ಡಿಸಿಪಿ ಡಾ.ವಿಕ್ರಂ ಆಮ್ಟೆ, ರೈತರಾದ ಶಶಿಕಾಂತ ಪಡಸಲಗಿ, ಮಲ್ಲಿಕಾರ್ಜುನ ರಾಮದುರ್ಗ, ರಾಜು ಮರವೇ, ತಾನಾಜಿ ಹಲಗೇಕರ್, ಉಮೇಶ ಬಿರ್ಜೆ, ರವಿ ಸಿದ್ದಮ್ಮನವರ, ಈರಣ್ಣ ರಾಚನಾಳ, ಚೂನಪ್ಪ ಪೂಜೇರ ಸೇರಿ ಮತ್ತಿತರರು ಉಪಸ್ಥಿತರಿದ್ದರು.

    9 ಕಿ.ಮೀ. ನಡೆದ ಡಿಸಿ ಹಿರೇಮಠ

    ಹಲಗಾ-ಮಚ್ಛೆ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಸ್ವಾಧೀನಗೊಳ್ಳುತ್ತಿರುವ ಕೃಷಿ ಭೂಮಿ ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ರೈತರೊಂದಿಗೆ ಬರೋಬ್ಬರಿ 9 ಕಿ.ಮೀ. ಕಾಲ್ನಡಿಗೆಯಲ್ಲೇ ಸಂಚರಿಸಿದರು. ಅಲ್ಲದೆ, ಕೃಷಿ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ಪ್ರತಿ ರೈತರನ್ನು ಖುದ್ದಾಗಿ ಮಾತನಾಡಿಸಿ ಬೈಪಾಸ್ ರಸ್ತೆ ನಿರ್ಮಾಣದ ಸಾಧಕ-ಬಾಧಕ ಕುರಿತು ಅಭಿಪ್ರಾಯ ಸಂಗ್ರಹಿಸಿದರು. ರೈತರ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.

    ಬೈಪಾಸ್ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡಿರುವ ರೈತರಿಗೆ ನ್ಯಾಯ ಒದಗಿಸಿಕೊಡಲಾಗುವುದು. ಅಲ್ಲದೆ, ರೈತರಿಗೆ ಪರಿಹಾರ ನೀಡಲು ಕೆಲವರು ಕಮಿಷನ್ ಬೇಡಿಕೆ ಇಟ್ಟಿರುವ ವಿಷಯ ಗಮನಕ್ಕೆ ಬಂದಿದ್ದು, ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು. ಈ ಸಂಬಂಧ ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗುವುದು.
    | ರಮೇಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಸಚಿವ

    ಬೈಪಾಸ್ ನಿರ್ಮಾಣಕ್ಕೆ ಭೂಮಿ ನೀಡಿರುವ ಯಾವ್ಯಾವ ರೈತರಿಗೆ ಪರಿಹಾರ ಬಂದಿದೆ? ಯಾವ ರೈತರಿಗೆ ಪರಿಹಾರ ಸಿಕ್ಕಿಲ್ಲ ಎಂಬ ಕುರಿತು ಮಾಹಿತಿ ಪಡೆದುಕೊಂಡಿದ್ದೇನೆ. ಫೆ.15 ರಂದು ರೈತರೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಿ ಚರ್ಚಿಸಲಾಗುವುದು.
    | ಎಂ.ಜಿ.ಹಿರೇಮಠ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts