More

    ಬೆಂಬಲ ಬೆಲೆ ನಿರೀಕ್ಷೆಯಲ್ಲಿ ಅನ್ನದಾತ

    ಅಜ್ಜಂಪುರ: ಅತಿವೃಷ್ಟಿ-ಅನಾವೃಷ್ಟಿಗಳಿಂದ ಕಂಗೆಟ್ಟಿದ್ದ ರೈತನಿಗೆ ಈ ಬಾರಿ ಹಿಂಗಾರು ಬೆಳೆ ಕೈಹಿಡಿದಿದೆ. ಬೆಳೆ ಉತ್ತಮವಾಗಿ ಬಂದಿರುವುದರಿಂದ ರೈತ ಖುಷಿಪಡುವಂತಾಗಿದೆ. ಆದರೆ ಸೂಕ್ತ ದರ ಇಲ್ಲದಿರುವುದರಿಂದ ನ್ಯಾಯಯತ ಬೆಲೆಯಿಂದ ವಂಚಿತನಾಗುತ್ತಿದ್ದಾನೆ.

    ತಾಲೂಕಿನಾದ್ಯಂತ ಮುಂಗಾರು ಬೆಳೆ ಸಂಪೂರ್ಣವಾಗಿ ವೈಫಲ್ಯವಾಗಿ ಸಾಲದ ಸುಳಿಗೆ ಸಿಲುಕಿದ್ದ. ಮುಂಗಾರು ಸಮಯದಲ್ಲಿ ಅತಿವೃಷ್ಟಿ-ಅನಾವೃಷ್ಟಿಯಿಂದ ಈರುಳ್ಳಿ ಬೆಳೆ ಸಂಪೂರ್ಣವಾಗಿ ನಾಶವಾಗಿದ್ದು ರೈತ ಖರ್ಚು ಮಾಡಿದ ಹಣವೂ ಸಿಗದೆ ಸಾಲದ ಸುಳಿಯಲ್ಲಿ ಸಿಲುಕಿದ್ದ. ಸದ್ಯ ಹಿಂಗಾರು ಬೆಳೆಗಳಾದ ಕಡಲೆಕಾಳು, ಜೋಳ ಬೆಳೆಗಳು ಉತ್ತಮವಾಗಿ ಬಂದಿದ್ದು ಸ್ವಲ್ಪ ಮಟ್ಟಿಗೆ ನೆಮ್ಮದಿ ನಿಟ್ಟುಸಿರು ಬಿಡುವಂತಾಗಿದೆ.

    ತಾಲೂಕಿನಾದ್ಯಂತ 12 ಸಾವಿರ ಎಕರೆಗೂ ಅಧಿಕ ಪ್ರದೇಶದಲ್ಲಿ ಕಡಲೆಕಾಳು ಹಾಗೂ 7 ಸಾವಿರ ಎಕರೆ ಪ್ರದೇಶದಲ್ಲಿ ಹಿಂಗಾರಿ ಜೋಳ ಬಿತ್ತನೆ ಮಾಡಲಾಗಿದ್ದು ನಿರೀಕ್ಷೆಯಂತೆ ಉತ್ತಮ ಇಳುವರಿ ಬಂದಿದೆ.

    ಸರಿಸುಮಾರು 1 ಎಕರೆ ಜಮೀನಿನಲ್ಲಿ 9 ಕ್ವಿಂಟಾಲ್ ಕಡಲೆಕಾಳು ಹಾಗೂ 1 ಎಕರೆ ಜಮೀನಿನಲ್ಲಿ 10 ಕ್ವಿಂಟಾಲ್ ಜೋಳ ರೈತನ ಕೈಸೇರಿವೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಶೇ.10ರಷ್ಟು ಇಳುವರಿ ಅಧಿಕವಾಗಿದೆ ಎನ್ನುತ್ತಾರೆ ರೈತ ಸಿದ್ರಾಮಪ್ಪ.

    ಈ ಬಾರಿ ಮುಂಗಾರು ಸಮಯದಲ್ಲಿ ಅಧಿಕ ಮಳೆಯಾದ ಪರಿಣಾಮ ಭೂಮಿಯಲ್ಲಿನ ತೇವಾಂಶದಿಂದ ಹಿಂಗಾರು ಬೆಳೆಯ ಇಳುವರಿ ಹೆಚ್ಚಾಗಿದೆ ಎನ್ನುತ್ತಾರೆ ಕೃಷಿ ಅಧಿಕಾರಿ ಅರುಣ್​ಕುಮಾರ್.

    ಈಗಾಗಲೇ ಅರ್ಧಕ್ಕೂ ಹೆಚ್ಚಿನ ರೈತರು ಜೋಳ ಕಡಲೆಕಾಳು ಬೆಳೆ ಕಟಾವು ಹಾಗೂ ಹಸನು ಕಾರ್ಯ ಮುಗಿಸಿದ್ದರೆ ಇನ್ನುಳಿದ ರೈತರು ಕಟಾವು ಕಾರ್ಯದಲ್ಲಿ ನಿರತರಾಗಿದ್ದಾರೆ.

    ರೈತನಿಗೆ ಸಿಗದ ಸೂಕ್ತ ಬೆಲೆ: ಕಳೆದ ವರ್ಷ ಬೆಳೆ ಕಡಿಮೆಯಿದ್ದ ಕಾರಣ ಪ್ರತಿ ಕ್ವಿಂಟಾಲ್ ಕಡಲೆಕಾಳು 4,900 ರೂ., ಜೋಳ ಕ್ವಿಂಟಾಲ್​ಗೆ 3000 ರೂ.ಗೆ ವರ್ತಕರು ಮನೆಬಾಗಿಲಲ್ಲಿ ಖರೀದಿಸಿದ್ದರು. ಈ ಬಾರಿ ಅಧಿಕ ಬೆಳೆಯಾದ ಕಾರಣ ಕಡಲೆಕಾಳು ಕ್ವಿಂಟಾಲ್​ಗೆ 3,700 ರೂ. ಇದ್ದು ಉತ್ತಮ ಬೆಳೆ ಬಂದರೂ ಬೆಲೆ ಸಿಗದೆ ನಷ್ಟವಾಗುತ್ತಿದೆ.

    ಪ್ರತಿ ಕ್ವಿಂಟಾಲ್ ಕಡಲೆಕಾಳು ಬೆಳೆಯಲು ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ, ಕೂಲಿ ಕಾರ್ವಿುಕರ ವೆಚ್ಚ ಸೇರಿ 4 ಸಾವಿರ ರೂ.ಗೂ ಅಧಿಕ ಹಣ ಖರ್ಚಾಗುತ್ತಿದ್ದು ರೈತನ ಶ್ರಮಕ್ಕೆ ಬೆಲೆಯೇ ಸಿಗದಂತಾಗಿದೆ. ಸರ್ಕಾರ ಕಡಲೆಕಾಳಿಗೆ ಬೆಂಬಲ ಬೆಲೆ ಘೊಷಿಸಿ, ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂಬುದು ರೈತರ ಆಗ್ರಹ.

    ಸಂಗ್ರಹಣೆಗೆ ಬೇಕು ಉಗ್ರಾಣ: ತಾಲೂಕಿನಾದ್ಯಂತ ರೈತ ಬೆಳೆದ ಬೆಳೆಗಳನ್ನು ಸಂರಕ್ಷಿಸಲು ಯಾವುದೇ ವೆರ್​ಹೌಸ್​ಗಳ ಸೌಲಭ್ಯವಿಲ್ಲದ ಕಾರಣ ಕಟಾವಿನ ಸಂದರ್ಭದಲ್ಲಿ ಬೆಲೆ ಕಡಿಮೆಯಿದ್ದರೂ ಬೆಳೆಗಳನ್ನು ಸಿಕ್ಕಷ್ಟು ಬೆಲೆಗೆ ಮಾರುವ ಸ್ಥಿತಿಯಿದೆ. ಇದರಿಂದ ಮಧ್ಯವರ್ತಿಗಳು ರೈತನಿಂದ ಕಡಿಮೆ ಬೆಲೆಗೆ ಖರೀದಿಸಿ ಸಂಗ್ರಹಿಸಿ ನಂತರ ಉತ್ತಮ ಬೆಲೆ ಬಂದಾಗ ಮಾರಾಟಮಾಡಿಕೊಳ್ಳುತ್ತಿದ್ದಾರೆ. ರೈತನಿಗೆ ಯಾವುದೇ ಲಾಭ ಸಿಗುತ್ತಿಲ್ಲ. ಈ ಹಿಂದೆ ಜನಪ್ರತಿನಿಧಿಗಳು, ಅಧಿಕಾರಿಗಳು ರೈತರ ಹಿತದೃಷ್ಟಿಯಿಂದ ಬೆಳೆಗಳನ್ನು ಸಂರಕ್ಷಿಸಲು ಉಗ್ರಾಣಗಳನ್ನು ನಿರ್ವಿುಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts