More

    ತುಮಕೂರು ಜಿಲ್ಲೆಯಲ್ಲಿ ಪೂರ್ವ ಮುಂಗಾರು ಬೆಳೆ ಸಮೀಕ್ಷೆ ಅಂತ್ಯ ; ಶೇ. 83.98 ಸರ್ವೇ ಪೂರ್ಣ 

    ತುಮಕೂರು: ಜಿಲ್ಲೆಯಲ್ಲಿ ಪೂರ್ವ ಮುಂಗಾರು ಬೆಳೆ ಸಮೀಕ್ಷೆಯಲ್ಲಿ ಉತ್ತಮ ಪ್ರಗತಿ ಸಾಧಿಸಲಾಗಿದೆ. ಈವರೆಗೆ ಶೇ. 83.98 ಸಮೀಕ್ಷೆ ಪೂರ್ಣವಾಗಿದ್ದು ಸೆಪ್ಟೆಂಬರ್‌ನಲ್ಲಿ ಮುಂಗಾರು ಬೆಳೆ ಸಮೀಕ್ಷೆ ಆರಂಭವಾಗಲಿದೆ.

    ಪೂರ್ವ ಮುಂಗಾರಿನಲ್ಲಿ ಬೆಳೆ ಸಮೀಕ್ಷೆಗೆ ಹೆಸರು, ಉದ್ದು, ಅಲಸಂದೆ ಬೆಳೆಗಳನ್ನು ಒಳಪಡಿಸಲಾಗಿದೆ. ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ, ಕುಣಿಗಲ್ ತಾಲೂಕಿನಲ್ಲಿ ಪೂರ್ವ ಮುಂಗಾರು ಬೆಳೆ ಬೆಳೆದಿದ್ದು ಸಮೀಕ್ಷೆಗೆ ಒಳಪಡುವ ಒಟ್ಟು 5,78,840 ತಾಕುಗಳಿದ್ದು 5,64,423 ತಾಕುಗಳಲ್ಲಿ ಬೆಳೆ ಸಮೀಕ್ಷೆ ನಡೆಸುವ ಗುರಿ ಹೊಂದಿದೆ. ಈವರೆಗೆ 4,73,847 ತಾಕುಗಳ ಸಮೀಕ್ಷೆ ಪೂರ್ಣವಾಗಿದೆ. 90,576 ತಾಕುಗಳ ಸಮೀಕ್ಷೆ ಬಾಕಿ ಇದ್ದು ಶೇ. 83.98 ಸಮೀಕ್ಷೆ ಪೂರ್ಣಗೊಂಡಂತಾಗಿದೆ. ರಾಜ್ಯದಲ್ಲಿ ಜಿಲ್ಲೆಯು ಬೆಳೆ ಸಮೀಕ್ಷೆಯಲ್ಲಿ 13ನೇ ಸ್ಥಾನದಲ್ಲಿದೆ. ಕೋಲಾರ, ಚಿತ್ರದುರ್ಗ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳು ಮೊದಲ ಮೂರು ಸ್ಥಾನದಲ್ಲಿವೆ.

    4 ತಾಲೂಕುಗಳಲ್ಲಿ ಬೆಳೆ ಸಮೀಕ್ಷೆ: ಚಿಕ್ಕನಾಯಕನಹಳ್ಳಿಯಲ್ಲಿ ಅತಿಹೆಚ್ಚು ಪೂರ್ವ ಮುಂಗಾರು ಬೆಳೆ ಬೆಳೆಯಲಿದ್ದು 1,79,940 ತಾಕುಗಳಲ್ಲಿ 1,94,984 ತಾಕುಗಳನ್ನು ಸಮೀಕ್ಷೆಗೆ ಗುರುತಿಸಲಾಗಿದೆ. 1,39,248 ತಾಕುಗಳ ಸಮೀಕ್ಷೆ ಪೂರ್ಣಗೊಂಡಿದೆ. ಶೇ.79.58 ಸಮೀಕ್ಷೆ ಆಗಿದೆ. ಕುಣಿಗಲ್‌ನಲ್ಲಿ ಶೇ.98.73 ಸಮೀಕ್ಷೆ ಪೂರ್ಣಗೊಂಡಿದೆ. 10,681 ತಾಕುಗಳು ಸಮೀಕ್ಷೆಗೆ ಒಳಪಡಲಿದ್ದು 10,545 ತಾಕುಗಳ ಸಮೀಕ್ಷೆ ಆಗಿದೆ.

    ತಿಪಟೂರಿನಲ್ಲಿ ಶೇ.96.60 ಬೆಳೆ ಸಮೀಕ್ಷೆ ಪೂರ್ಣವಾಗಿದೆ. ತಾಲೂಕಿನಲ್ಲಿ 1,80,794 ತಾಕುಗಳಿವೆ, 1,76,721 ತಾಕುಗಳನ್ನು ಸಮೀಕ್ಷೆಗೆ ಗುರುತಿಸಿದ್ದು 1,70,711 ತಾಕುಗಳ ಸಮೀಕ್ಷೆ ಮುಗಿದಿದೆ. ತುರುವೇಕೆರೆಯಲ್ಲಿ 2,07,097 ತಾಕುಗಳಲ್ಲಿ 2,02,037 ತಾಕುಗಳನ್ನು ಬೆಳೆ ಸಮೀಕ್ಷೆಗೆ ಒಳಪಡಿಸಿದ್ದು 1,53,476 ತಾಕುಗಳ ಸಮೀಕ್ಷೆ ಪೂರ್ಣವಾಗಿದೆ. ಒಟ್ಟಾರೆ ಶೇ.75.96 ಸಮೀಕ್ಷೆ ಪ್ರಗತಿ ಸಾಧಿಸಿದೆ.

    ಬೆಳೆ ಸಮೀಕ್ಷೆ ಆ್ಯಪ್ : ರೈತರೇ ಮೊಬೈಲ್ ಪ್ಲೇಸ್ಟೋರ್‌ನಲ್ಲಿ ಬೆಳೆ ಸಮೀಕ್ಷೆ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಬೆಳೆಯ ಮಾಹಿತಿ ಅಪ್‌ಲೋಡ್ ಮಾಡುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಜಮೀನುಗಳಲ್ಲಿ ರೈತರು ಬೆಳೆದ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಅಪ್‌ಲೋಡ್ ಮಾಡಬಹುದು.

    ಬೆಳೆವಿಮೆ, ಬೆಂಬಲ ಬೆಲೆಗೂ ಅನುಕೂಲ : ರೈತರೇ ಖುದ್ದು ಬೆಳೆಗಳ ಸಮೀಕ್ಷೆ ಮಾಡಿಕೊಳ್ಳುವ ಸರ್ಕಾರದ ಯೋಜನೆಯಿಂದಾಗಿ ಬೆಳೆವಿಮೆ, ಬೆಂಬಲಬೆಲೆ ಪಡೆಯಲು ಈ ಸಮೀಕ್ಷೆ ನೆರವಾಗಲಿದೆ. ರೈತರ ಪಹಣಿಯನ್ನು ಇದಕ್ಕೆ ಲಿಂಕ್ ಮಾಡಲಿದ್ದು ಇದರಿಂದ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಒಂದು ವೇಳೆ ಬೆಳೆಗಳ ವಿವರಗಳನ್ನು ಸರಿಯಾಗಿ ಅಪ್‌ಲೋಡ್ ಮಾಡದಿದ್ದಲ್ಲಿ ಸರ್ಕಾರದ ಸವಲತ್ತುಗಳಿಂದ ವಂಚಿತರಾಗುವ ಸಾಧ್ಯತೆ ಇರುತ್ತದೆ. ಈ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ, ಕಂದಾಯ, ರೇಷ್ಮೆ ಇಲಾಖೆ ಹಾಗೂ ಆಯಾ ಹಳ್ಳಿಗಳಲ್ಲಿ ನಿಯೋಜಿಸಲಾಗಿರುವ ಖಾಸಗಿ ಪ್ರತಿನಿಧಿ ನಿವಾಸಿಗಳನ್ನು ಸಂಪರ್ಕಿಸಿ ಬೆಳೆ ಸಮೀಕ್ಷೆ ಅಪ್‌ಲೋಡ್ ಮಾಡಲು ಅನುಕೂಲ ಒದಗಿಸಲಾಗಿತ್ತು.

    4 ತಾಲೂಕುಗಳಲ್ಲಿ ಪ್ರಮುಖವಾಗಿ ಪೂರ್ವ ಮುಂಗಾರು ಬೆಳೆ ಬೆಳೆಯಲಿದ್ದು ಜಿಲ್ಲೆಯಲ್ಲಿ ಪೂರ್ವ ಮುಂಗಾರು ಸಮೀಕ್ಷೆ ಬಹುತೇಕ ಪೂರ್ಣಗೊಂಡಿದೆ. ಸೆಪ್ಟೆಂಬರ್‌ನಲ್ಲಿ ಮುಂಗಾರು ಬೆಳೆ ಸಮೀಕ್ಷೆ ಆರಂಭವಾಗಲಿದೆ. 3,80,000 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು 60 ಸಾವಿರ ಹೆಕ್ಟೇರ್ ಬಿತ್ತನೆ ಆಗಿದೆ. ಮಳೆಬಿಡುವು ಕೊಟ್ಟಿದ್ದು ನಿಗದಿತ ಗುರಿ ಮುಟ್ಟಲಿದ್ದೇವೆ.
    ರಾಜಸುಲೋಚನ ಜಂಟಿ ನಿರ್ದೇಶಕರು, ಕೃಷಿ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts