More

    ಬೆಂಬಿಡದ ಮಳೆಗೆ ಕೊಳೆಯುತ್ತಿವೆ ಬೆಳೆ

    ವಿಜಯವಾಣಿ ಸುದ್ದಿಜಾಲ ಹಾನಗಲ್ಲ

    ತಾಲೂಕಿನ ಪೂರ್ವ ಭಾಗದ ವರ್ದಿ, ನರೇಗಲ್, ಕೂಡಲ, ಹರವಿ, ಮಾರನಬೀಡ, ಬಿಂಗಾಪುರ ಗ್ರಾಮಗಳ ಕೃಷಿ ಭೂಮಿಯಲ್ಲಿ ಬೆಳೆಯಲಾದ ಶೇಂಗಾ, ಸೋಯಾ ಅವರೆ, ಗೋವಿನಜೋಳ ಮತ್ತು ಹತ್ತಿ ಫಸಲು ಸತತ ಮಳೆಯಿಂದಾಗಿ ಸಂಪೂರ್ಣ ನಾಶವಾಗಿದೆ.

    ಕಡಿಮೆ ಮಳೆ ಬೀಳುವ ಪ್ರದೇಶವಾಗಿರುವ ತಾಲೂಕಿನ ಪೂರ್ವ ಭಾಗದ ವರ್ದಿ, ನರೇಗಲ್, ಕೂಡಲ, ಹರವಿ, ಮಾರನಬೀಡ, ಬಿಂಗಾಪುರ ಗ್ರಾಮಗಳಲ್ಲಿ ಗೋವಿನಜೋಳ, ಸೋಯಾಬೀನ್, ಶೇಂಗಾ ಬೆಳೆಗಳನ್ನೇ ಹೆಚ್ಚಾಗಿ ಬಿತ್ತನೆ ಮಾಡುತ್ತಾರೆ. ಆದರೆ, ಮೇಲಿಂದ ಮೇಲೆ ಬೀಳುತ್ತಿರುವ ಮಳೆ ಕೈಗೆ ಬಂದಿರುವ ಫಸಲನ್ನು ಕಸಿದುಕೊಳ್ಳುವಂತಾಗಿದೆ.

    ಮಾರನಬೀಡ ಗ್ರಾಮವೊಂದ ರಲ್ಲಿಯೇ 450 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಶೇಂಗಾ ಹಾಗೂ ಸೋಯಾ ಅವರೆ ಹಳ್ಳದ ನೀರಿನಿಂದ ಆವೃತಗೊಂಡು ನಾಶಹೊಂದಿದೆ.

    ಈ ಕೃಷಿ ಭೂಮಿಗೆ ನೀರಲಗಿ ಕೆರೆಯಿಂದ ಹಾಗೂ ಮಾರನಬೀಡದ ದೊಡ್ಡಕೆರೆಯಿಂದ ಹೆಚ್ಚಾದ ಕೋಡಿ ನೀರು ವಡಕಿನಹಳ್ಳದ ಮೂಲಕ ಹರಿದು ಬಂದು ಹೊಲಗಳಲ್ಲಿ ಹರಡಿಕೊಳ್ಳುತ್ತದೆ. ಕಳೆದ ಆಗಷ್ಟ ತಿಂಗಳಿನಿಂದಲೂ ಈ ಹಳ್ಳದ ನೀರು ನಿರಂತರವಾಗಿ ಹರಿಯುತ್ತಿದ್ದುದರಿಂದ ಇಲ್ಲಿ ಬೆಳೆದಿದ್ದ ಫಸಲುಗಳನ್ನು ಕೀಳಲೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೊಲಗಳಲ್ಲಿಯೇ ಶೇಂಗಾ ಮತ್ತು ಸೋಯಾಬಿನ್ ಕೊಳೆಯುತ್ತಿದೆ.

    ಸುಮಾರು 200 ಎಕರೆ ಪ್ರದೇಶದಲ್ಲಿ ಸೋಯಾಅವರೆ ಬೆಳೆಯಲಾಗಿದ್ದು ನೀರು ನಿಂತಿರುವುದರಿಂದ ಅವೆಲ್ಲವೂ ಮಣ್ಣುಪಾಲಾಗುತ್ತಿವೆ. ಇನ್ನು ನೂರಾರು ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿರುವ ಗೋವಿನಜೋಳ ನೆಲಕ್ಕುರುಳಿವೆ. ಹತ್ತಿ ಕಾಯಿಗಳು ಒಡೆಯುತ್ತಿದ್ದು, ಮಳೆಯಿಂದಾಗಿ ಕಪ್ಪಾಗುತ್ತಿವೆ.

    ಇಷ್ಟಾದರೂ ಇಲ್ಲಿಯವರೆಗೂ ಕೃಷಿ-ಕಂದಾಯ ಇಲಾಖೆಗಳ ಅಧಿಕಾರಿಗಳು ಹೊಲಗಳಿಗೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿಲ್ಲ. ಸಂಕಷ್ಟಕ್ಕೊಳಗಾಗಿರುವ ರೈತರ ಹೊಲಗಳಿಗೆ ತಕ್ಷಣ ಭೇಟಿ ನೀಡಿ ಬೆಳೆ ಸಮೀಕ್ಷೆ ಕೈಗೊಳ್ಳಬೇಕು. ಸೂಕ್ತ ಪರಿಹಾರಕ್ಕೆ ವರದಿ ಸಲ್ಲಿಸಬೇಕು ಎಂದು ರೈತ ಸಂಘದ ಮಾರನಬೀಡ ಗ್ರಾಮ ಘಟಕದ ಅಧ್ಯಕ್ಷ ರವಿ ರ್ನೆಮನಿ ಹಾಗೂ ಉಪಾಧ್ಯಕ್ಷ ಅಶೋಕ ಸಂಶಿ ಹಾಗೂ ಬೆಳೆ ಹಾನಿಯನುಭವಿಸಿದ ರೈತರಾದ ಚನಬಸಪ್ಪ ಸಂಶಿ, ಜಗದೀಶ ಬಿ.ಸಂಶಿ, ಸಂಜೀವ ಮಣಕಟ್ಟಿ, ಪ್ರಮೋದಗೌಡ ಪಾಟೀಲ, ಬಸವಂತಪ್ಪ ಕಾಶಂಬಿ, ಜಗದೀಶ ನಾಗಪ್ಪ ಸಂಶಿ, ಮಾರುತಿ ಸಂಶಿ, ಚಂದ್ರಪ್ಪ ರ್ನೆಮನಿ ಆಗ್ರಹಿಸಿದ್ದಾರೆ.

    ಸವಣೂರಲ್ಲಿ ಅತಿ ಹೆಚ್ಚು ಮಳೆ: ಹಾವೇರಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಆಗಾಗ್ಗೆ ಸುರಿಯುತ್ತಿದ್ದ ಮಳೆ ಗುರುವಾರ ಸ್ವಲ್ಪವಿರಾಮ ನೀಡಿದ್ದು, ಮೋಡಕವಿದ ವಾತಾವಣ ಕಂಡು ಬಂತು. ಬೆಳಗ್ಗೆ ಮೋಡಕವಿದ ವಾತಾವರಣವಿತ್ತು. ಮಧ್ಯಾಹ್ನ ಕೆಲಹೊತ್ತು ಬಿಸಿಲು ಬಿದ್ದರೂ ಸಂಜೆ ಮತ್ತೆ ಮೋಡಕವಿದ ವಾತಾವರಣವಿತ್ತು. ಕಳೆದ 24 ಗಂಟೆಗಳ ಅವಧಿಯಲ್ಲಿ ಹಾವೇರಿ ತಾಲೂಕಿನಲ್ಲಿ 4 ಮಿಮೀ, ರಾಣೆಬೆನ್ನೂರ 17, ಬ್ಯಾಡಗಿ 7.6, ಹಿರೇಕೆರೂರ 23.6, ಸವಣೂರ 50.7, ಶಿಗ್ಗಾಂವಿ 18.3, ಹಾನಗಲ್ಲ 14.2 ಮಿಮೀ ಮಳೆಯಾಗಿದೆ.

    ಉಳ್ಳಾಗಡ್ಡಿ ನೀರು ಪಾಲು: ರಾಣೆಬೆನ್ನೂರ ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ನಿತ್ಯ ಸುರಿದ ನಿರಂತರ ಮಳೆಯಿಂದಾಗಿ ಉಳ್ಳಾಗಡ್ಡಿ ಬೆಳೆ ಸಂಪೂರ್ಣ ಕೊಳೆಯಲಾರಂಭಿಸಿದ್ದು, ರೈತರನ್ನು ಕಂಗಾಲಾಗಿಸಿದೆ.

    ಗಡ್ಡೆ ಕಟ್ಟಿರುವ ಉಳ್ಳಾಗಡ್ಡಿಯನ್ನು ರೈತರು ಕಿತ್ತು ಗೂಡು ಹಾಕಿ ಒಣಗಿಸಲು ಬಿಟ್ಟಿದ್ದರು. ಆದರೆ, ಕಳೆದ ವಾರದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಗೂಡು ಹಾಕಿದ ಉಳ್ಳಾಗಡ್ಡಿ ಸಂಪೂರ್ಣ ಕೊಚ್ಚಿ ಹೋಗಿ ಜಮೀನಿನ ತುಂಬ ಹರಡಿದೆ.

    ತಾಲೂಕಿನ ಬೆನಕನಕೊಂಡ, ಹಲಗೇರಿ, ಕುಪ್ಪೇಲೂರ, ಗಂಗಾಪುರ, ಯರೇಕುಪ್ಪಿ, ಉಕ್ಕುಂದ, ಸರ್ವಂದ ಸೇರಿ ವಿವಿಧ ಗ್ರಾಮಗಳ ರೈತರು ಈ ಬಾರಿ 10 ಸಾವಿರ ಹೆಕ್ಟೇರ್​ನಷ್ಟು ಉಳ್ಳಾಗಡ್ಡಿ ಬೆಳೆದಿದ್ದಾರೆ. ಸದ್ಯ ಗೂಡು ಹಾಕಿರುವ ಉಳ್ಳಾಗಡ್ಡಿಗೆ ಬಿಸಿಲಿನ ಅವಶ್ಯಕತೆಯಿದೆ. ಆದರೆ, ನಿರಂತರ ಮಳೆಯಾಗುತ್ತಿರುವ ಕಾರಣ ರೈತರು ಹಾಕಿದ್ದ ಗೂಡುಗಳು ಒಡೆದು, ತೇವಾಂಶ ಹೆಚ್ಚಳವಾಗಿ ಕೊಳೆಯಲಾರಂಭಿಸಿದೆ. ಮಳೆ ಇದೇ ರೀತಿ ಮುಂದುವರಿದರೆ, ಸಂಪೂರ್ಣ ಬೆಳೆ ನಾಶವಾಗುವ ಸಾಧ್ಯತೆಯಿದೆ. ಸರ್ಕಾರವು ಉಳ್ಳಾಗಡ್ಡಿ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಬೆನಕನಕೊಂಡದ ರೈತ ಶಿವಕುಮಾರ ಬಳಿಗೇರ ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts