More

    ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಪಾರ ನಷ್ಟ: ಮಾರಗೌಡನಹಳ್ಳಿಯಲ್ಲಿ ತರಕಾರಿ, ಬಿ.ಹೊಸೂರಿನಲ್ಲಿ ಕಬ್ಬು ನಾಶ

    ಮಂಡ್ಯ: ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಸ್ಕ್ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷೃದಿಂದಾಗಿ ತಾಲೂಕಿನ ವಿವಿಧೆಡೆ ಲಕ್ಷಾಂತರೂ ರೂ ಮೌಲ್ಯದ ಬೆಳೆ ಹಾಳಾಗಿದ್ದು, ಆದಾಯದ ನಿರೀಕ್ಷೆಯಲ್ಲಿದ್ದ ರೈತರಿಗೆ ಅಪಾರ ನಷ್ಟವನ್ನುಂಟು ಮಾಡಿದೆ.
    ಕೆಆರ್‌ಎಸ್ ಡ್ಯಾಂನಿಂದ ನಾಲೆಗಳಿಗೆ ನೀರು ಬಿಟ್ಟ ಹಿನ್ನೆಲೆಯಲ್ಲಿ ತೂಬಿನ ಬಳಿ ಬಾಗಿಲು ತೆಗೆಯದ ಪರಿಣಾಮ ಗುರುವಾರ ರಾತ್ರಿ ಮಾರಗೌಡನಹಳ್ಳಿಯಲ್ಲಿ ಅಪಾರ ಪ್ರಮಾಣದಲ್ಲಿ ತರಕಾರಿ ಬೆಳೆ ಹಾಗೂ ಗೊಬ್ಬರ ಕೊಚ್ಚಿಕೊಂಡು ಹೋಗಿವೆ. ಇದರಿಂದಾಗಿ ರೈತ ಚಂದ್ರಶೇಖರ್ ಅವರಿಗೆ ನಷ್ಟವಾಗಿದೆ.
    ಮೂರು ಎಕರೆ ಜಮೀನಿನಲ್ಲಿ ಸಾವಯವ ಕೃಷಿಯಲ್ಲಿ ಬದನೆಕಾಯಿ, ಮೆಣಸಿನಕಾಯಿ ಮತ್ತು ಚೆಂಡು ಹೂವು ಬೆಳೆದಿದ್ದರು. ಅಂತೆಯೇ ಜಮೀನಿಗೆ ಹಾಕಿಸಲೆಂದು 25ಕ್ಕೂ ಹೆಚ್ಚು ಟ್ರಾೃಕ್ಟರ್ ಗೊಬ್ಬರವನ್ನು ಸಂಗ್ರಹಿಸಿಟ್ಟುಕೊಂಡಿದ್ದರು. ಆದರೆ ನೀರು ನಾಲೆ ಮೇಲೆ ಜಮೀನಿಗೆ ಹರಿದ ಪರಿಣಾಮ ಗೊಬ್ಬರದೊಂದಿಗೆ ಬೆಳೆಯೂ ಕೊಚ್ಚಿಕೊಂಡು ಹೋಗಿವೆ. ಮಾತ್ರವಲ್ಲದೆ ಹನಿ ನೀರಾವರಿ ಪೈಪ್‌ಗಳು ಹಾಳಾಗಿವೆ. ಶುಕ್ರವಾರ ಬೆಳಗ್ಗೆ ಜಮೀನಿಗೆ ಬಂದಾಗ ಹಾನಿಯ ಬಗ್ಗೆ ಗೊತ್ತಾಗಿದೆ. ಕೂಡಲೇ ಸ್ಥಳೀಯರ ಸಹಾಯದಿಂದ ತೂಬಿನ ಬಾಗಿಲು ತೆಗೆಯಲಾಯಿತು. ಅಷ್ಟರಲ್ಲಾಗಲೇ ಸಾಕಷ್ಟು ಹಾನಿಯಾಗಿತ್ತು.
    ಇನ್ನು ತಾಲೂಕಿನ ಬಿ.ಹೊಸೂರು ಗ್ರಾಮದಲ್ಲಿ ವಿದ್ಯುತ್ ತಂತಿ ತಗಲಿ ಸುಮಾರು ಎರಡು ಎಕರೆ ಜಮೀನಿನಲ್ಲಿ ಬೆಳೆದು ನಿಂತಿದ್ದ ಕಬ್ಬು ಸುಟ್ಟು ಭಸ್ಮವಾಗಿದೆ. ಮಾಧವ ಕುಮಾರ್ ಎಂಬುವರಿಗೆ ಸೇರಿದ 11 ತಿಂಗಳ ಕಬ್ಬು ಹಾಳಾಗಿದೆ. ಗುರುವಾರ ರಾತ್ರಿ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡಿದೆ. ಇದನ್ನು ಕಂಡ ಸ್ಥಳೀಯರು ಮಾಲೀಕನಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ದುರಾದೃಷ್ಟವಶಾತ್ ಅಗ್ನಿಶಾಮಕ ದಳ ಬರುವ ವೇಳೆಗೆ ಬೆಳೆ ಬಹುತೇಕ ಸುಟ್ಟು ಹೋಗಿತ್ತು. ಇದರಿಂದಾಗಿ ಕಟಾವು ಹಂತದಲ್ಲಿದ್ದ ಬೆಳೆ ಕಳೆದುಕೊಂಡು ನಷ್ಟ ಅನುಭವಿಸುವಂತಾಗಿದೆ.
    ನಷ್ಟಕ್ಕೆ ಪರಿಹಾರ ಕೊಡಿ: ಅಧಿಕಾರಿಗಳ ನಿರ್ಲಕ್ಷೃದಿಂದಾಗಿ ಬೆಳೆದು ನಿಂತಿದ್ದ ಬೆಳೆ ಹಾಳಾಗಿದೆ. ಆದ್ದರಿಂದ ಸಂತ್ರಸ್ತ ರೈತರಿಗೆ ನಷ್ಟಕ್ಕೆ ತಕ್ಕ ಪರಿಹಾರವನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೊಡಬೇಕು ಎಂದು ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಆಗ್ರಹಿಸಿದರು.
    ಮಾರಗೌಡನಹಳ್ಳಿ ಮತ್ತು ಬಿ.ಹೊಸೂರು ಗ್ರಾಮದಲ್ಲಿ ಬೆಳೆ ಹಾನಿ ಪರಿಶೀಲಿಸಿ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಮೊಬೈಲ್ ಮೂಲಕ ಮಾತನಾಡಿದ ಅವರು, ಅಧಿಕಾರಿಗಳು ಮಾಡಿದ ತಪ್ಪಿಗೆ ರೈತರಿಗೆ ನಷ್ಟವಾಗಿದೆ. ಆದ್ದರಿಂದ ಸೂಕ್ತ ಪರಿಹಾರ ಒದಗಿಸಬೇಕು. ಈ ಸಂಬಂಧ ಇಬ್ಬರು ರೈತರಿಂದ ಮನವಿ ಸಲ್ಲಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts