More

    ಮಂಜೂರಾತಿ ಪಟ್ಟಿ ನೀಡುವಂತೆ ಪಟ್ಟು

    ಪರಶುರಾಮಪುರ: ಸಂಕಷ್ಟದಲ್ಲಿ ಬೆಳೆವಿಮೆ ನೆರವಿಗೆ ಬರಲಿದೆ ಎಂದು ಕಂತು ಪಾವತಿಸಿದರೆ, ಪರಿಹಾರವೇ ನೀಡಿಲ್ಲ.

    ಬೆಳೆನಷ್ಟ ಪರಿಹಾರದ ಮಂಜೂರಾತಿ ಪಟ್ಟಿ ನೀಡಿದರೆ ಅಧಿಕಾರಿಗಳ ಕಾರ್ಯವೈಖರಿ ಬಹಿರಂಗವಾಗಲಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

    ಪಿ.ಮಹದೇವಪುರ ಸರ್ಕಾರಿ ಪ್ರೌಢಶಾಲಾ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕೃಷಿ, ತೋಟಗಾರಿಕೆ ಇಲಾಖೆ, ವಿಮಾ ಕಂಪನಿ ಅಧಿಕಾರಿಗಳ ಸಭೆಯಲ್ಲಿ ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

    ಪಿ.ಓಬನಹಳ್ಳಿ, ಕಡೇಹುಡೆ, ಪಿ.ಮಹದೇವಪುರ ಗ್ರಾಮಗಳ ಬೆಳೆವಿಮೆ, ಬೆಳೆನಷ್ಟ ಪರಿಹಾರ ಮಂಜೂರಾತಿಯಾಗಿರುವ ರೈತರ ಪಟ್ಟಿ ಮೊದಲು ನೀಡಿ ಎಂದು ಕೃಷಿಕರು ಪಟ್ಟು ಹಿಡಿದರು.

    2022-23ನೇ ಸಾಲಿನಲ್ಲಿ 1,100ಕ್ಕೂ ಹೆಚ್ಚು ರೈತರು ಬೆಳೆವಿಮೆಗೆ ಅರ್ಜಿ ಸಲ್ಲಿಸಿದ್ದರು.

    ಆದರೆ, ಕಂಪನಿಗಳು ಕೆಲ ಕಂದಾಯ, ಕೃಷಿ ಅಧಿಕಾರಿಗಳು ಕಮಿಷನ್ ಆಸೆಗೆ ಅವ್ಯವಹಾರ ಎಸಗಿದ್ದು, ಇದರಿಂದ ಕೇವಲ 161 ಮಂದಿಗೆ ಮಾತ್ರ ಬೆಳೆವಿಮೆ ಹಣ ಜಮಾ ಆಗಿದೆ.

    ಉಳಿದ 900 ಮಂದಿಗೆ ಅನ್ಯಾಯ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕೃಷಿ ಇಲಾಖೆಯ ಜೆಡಿ ಮಂಜುನಾಥ, ತೋಟಗಾರಿಕಾ ಡಿಡಿ ಕವಿತಾ, ಚಳ್ಳಕೆರೆ ತಹಸೀಲ್ದಾರ್ ರೆಹಾನ್ ಪಾಷಾ ಇತರರು ರೈತರ ಸಮಸ್ಯೆ ಆಲಿಸಿ, ಸಮಸ್ಯೆ ಪರಿಹಾರಕ್ಕೆ ಶೀಘ್ರ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

    ಗ್ರಾಪಂ ಅಧ್ಯಕ್ಷ ತ್ಯಾಗರಾಜು, ಜಿಪಂ ಮಾಜಿ ಸದಸ್ಯ ಪಿ.ಜಯಪ್ರಕಾಶ, ಕೃಷಿ ಎಡಿಎ ಅಶೋಕ, ಕೃಷಿ ಅಧಿಕಾರಿ ಜೀವನ್,

    ಆರ್‌ಐ ಎಂ.ಟಿ.ಮೋಹನಕುಮಾರ, ಗ್ರಾಮಲೆಕ್ಕಾಧಿಕಾರಿ ದುರುಗಮ್ಮ, ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ, ಮಾಜಿ ಸದಸ್ಯ ರಾಜಶೇಖರ,

    ಮುಖಂಡರಾದ ಭೋಜರಾಜು, ಮಧು, ಹನುಮಂತರಾಯ, ವೀರಭಧ್ರಪ್ಪ, ರೈತರಾದ ಶಿವಣ್ಣ, ತಿಮ್ಮಾರೆಡ್ಡಿ, ಅಭಿಷೇಕ, ಅಕ್ಕಮ್ಮ, ನಿಂಗಣ್ಣ ಇತರರಿದ್ದರು.

    ಮಧ್ಯವರ್ತಿಗಳ ಮೂಲಕ ವ್ಯವಹರಿಸಿದ ರೈತರಿಗೆ ಮಾತ್ರ ಬೆಳೆವಿಮೆ ಪರಿಹಾರ ಲಭಿಸಿದೆ. ಉಳಿದವರಿಗೆ ಇಲ್ಲ. ಈ ಅವ್ಯವಹಾರ ಕುರಿತು ಸಮಗ್ರ ತನಿಖೆ ಆಗಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಕೃಷಿಕರಿಗೆ ನ್ಯಾಯ ಲಭಿಸಬೇಕು.
    ರಾಮಮೂರ್ತಿ, ಗ್ರಾಮಸ್ಥ, ಎನ್‌ಪಿ ಗೇಟ್

    ಬೆಳೆಕಟಾವಿನ ನಂತರ ಬೆಳೆನಷ್ಟ ಪರಿಹಾರಕ್ಕೆ ವೈಯಕ್ತಿಕವಾಗಿ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಪರಿಹಾರ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಸಹಾಯವಾಣಿಗೆ ಕರೆ ಮಾಡಿ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಹಣ ಜಮಾ ಆಗಿದೆ. ಈ ವಿಷಯದಲ್ಲಿ ರೈತರು ಗೊಂದಲಕ್ಕೆ ಸಿಲುಕಿ, ಅನಗತ್ಯವಾಗಿ ಅವ್ಯವಹಾರ ಆರೋಪ ಮಾಡುತ್ತಿದ್ದಾರೆ.
    ಮಾರೇಶ, ಬೆಳೆವಿಮಾ ಕಂಪನಿ ಅಧಿಕಾರಿ, ಚಳ್ಳಕೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts