More

    ಹಿರಿಯರ ಟೀಕೆ ನನಗೆ ಆಶೀರ್ವಾದ: ಬಿವೈಆರ್

    ಶಿವಮೊಗ್ಗ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ನನ್ನ ಬಗ್ಗೆ ಪ್ರೀತಿಯಿದೆ. ಆದರೆ ಯಾರೋ ಪಕ್ಕದಲ್ಲಿದ್ದವರು ಹೇಳಿಕೊಟ್ಟಿದ್ದಾರೆ ಎಂಬ ಕಾರಣಕ್ಕೆ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಇಲ್ಲಿಗೆ ಬಂದಾಗ ಅವರ ಕರ್ತವ್ಯವನ್ನು ನಿಭಾಯಿಸಿದ್ದಾರಷ್ಟೇ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ತಿರುಗೇಟು ನೀಡಿದರು.

    ಶರಾವತಿ ಸಂತ್ರಸ್ತರಿಗೆ ಹಕ್ಕುಪತ್ರ ನೀಡಲು 1980ರವರೆಗೂ ರಾಜ್ಯ ಸರ್ಕಾರಕ್ಕೇ ಅವಕಾಶವಿತ್ತು. ಆಗ ಏನೂ ಮಾಡದ ಕಾಂಗ್ರೆಸ್‌ನವರು ಈಗ ನನ್ನತ್ತ ಬೊಟ್ಟು ತೋರುತ್ತಿದ್ದಾರೆ. ಎಂಪಿಎಂಗೆ ಕೊನೇ ಮೊಳೆ ಹೊಡೆದಿದ್ದು ಕಾಂಗ್ರೆಸ್. ಈಗ ನನ್ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾರೆ ಎಂದು ಕಿಡಿಕಾರಿದರು.
    ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಣ್ಯಹಕ್ಕು ಕಾಯ್ದೆಯಡಿ ಹಕ್ಕುಪತ್ರ ನೀಡಲು 75 ವರ್ಷದ ಮಿತಿಯನ್ನು 25 ವರ್ಷಕ್ಕೆ ಇಳಿಸುವ ಅವಕಾಶ ಯುಪಿಎ ಸರ್ಕಾರಕ್ಕೆ ಇತ್ತು. ಆ ಸಂದರ್ಭದಲ್ಲಿ ಆಸಕ್ತಿ ತೋರದೇ ಈಗ ಬಿಜೆಪಿಯನ್ನು ಟೀಕಿಸಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
    ಅನೇಕರು ಅನೇಕ ಟೀಕೆಗಳನ್ನು ಮಾಡುತ್ತಿರುತ್ತಾರೆ. ಅದಕ್ಕೆ ಉತ್ತರ ಕೊಡಲು ಸಮಯವಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ನನ್ನ ಮೇಲೆ ಪ್ರೀತಿಯಿದೆ. ಅವರ ಟೀಕೆಯನ್ನು ನಾನು ಆಶೀರ್ವಾದ ಎಂದು ಭಾವಿಸುತ್ತೇನೆ. ಅವರ ಟೀಕೆಗೆ ನಾನು ಉತ್ತರಿಸಲ್ಲ ಎಂದರು.
    ಈಶ್ವರಪ್ಪನವರ ಟೀಕೆಗೆ ಉತ್ತರಿಸುವಷ್ಟು ನಾನು ದೊಡ್ಡವನ್ನಲ್ಲ. ಅವರು ಏನು ಹೇಳಿದರೂ ಅದು ನನಗೆ ಆಶೀರ್ವಾದ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಪಕ್ಷದ ಹಿರಿಯರು ಅವರ ಹೇಳಿಕೆಗೆ ಉತ್ತರಿಸುತ್ತಾರೆ. ಹಿರಿಯರ ಬಗ್ಗೆ ಯಾವಾಗಲೂ ಭಯ, ಭಕ್ತಿ ಇರಬೇಕು ಎಂಬುದನ್ನು ನಮಗೆ ಹೇಳಿಕೊಟ್ಟಿದ್ದಾರೆ ಎಂದು ಹೇಳಿದರು.
    ಜಿಲ್ಲೆಯಲ್ಲಿ ಪ್ರವಾಸಕ್ಕೆ ಉತ್ತಮ ವಾತಾವರಣ ಕಂಡುಬರುತ್ತಿದೆ. ನನಗೆ ರಾಜಕೀಯ ಬೆಂಬಲ ನೀಡಿದ ಶಿಕಾರಿಪುರ ಕ್ಷೇತ್ರದಲ್ಲಿ ಏ.17ರಂದು ಪ್ರವಾಸ ಮಾಡುತ್ತೇನೆ. ಹುಚ್ಚುರಾಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತೇನೆ. ರಾಮನವಮಿ ಹಿನ್ನೆಲೆಯಲ್ಲಿ ವಿವಿಧ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸುತ್ತೇನೆ ಎಂದರು.
    ಚುನಾವಣಾ ಪ್ರಚಾರಕ್ಕೆ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ನಾಯಕರು ಬರುತ್ತಾರೆ. ನಮ್ಮ ಪಕ್ಷದಲ್ಲಿ ಬೂತ್ ಅಧ್ಯಕ್ಷರು ಮತ್ತು ಕಾರ್ಯಕರ್ತರೇ ಸ್ಟಾರ್ ಪ್ರಚಾರಕರು. ನಾನು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರದ ಜನರು ಬೆಂಬಲಿಸುವ ವಿಶ್ವಾಸವಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts