More

    ಅಭ್ಯರ್ಥಿಗಳ ಮೇಲೆ ಕ್ರಿಮಿನಲ್ ಕೇಸ್; ಒಟ್ಟು ಸಂಖ್ಯೆಯಲ್ಲಿ ಕಾಂಗ್ರೆಸ್ ಮುಂದೆ

    ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಮೇಲಿರುವ ಒಟ್ಟು ಕ್ರಿಮಿನಲ್ ಕೇಸ್‌ಗಳ ಸಂಖ್ಯೆಯ ಪ್ರಕಾರ ಕಾಂಗ್ರೆಸ್ ಪಕ್ಷ ಮುಂದಿದೆ. ನಾಮಪತ್ರ ಜತೆಗೆ ಸಲ್ಲಿಸಿರುವ ಅಫಿಡವಿಟ್‌ಗಳಲ್ಲಿ ಅಭ್ಯರ್ಥಿಗಳು ಒದಗಿಸಿದ ವಿವರದಿಂದ ಗೊತ್ತಾಗಿದೆ.

    ಕಾಂಗ್ರೆಸ್ ಪಕ್ಷವು ಎಲ್ಲ 14 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಒಟ್ಟು 18 ಕೇಸ್‌ಗಳು ಪಕ್ಷದ ಅಭ್ಯರ್ಥಿಗಳ ಮೇಲಿವೆ. ಈ ಪೈಕಿ ಬೆಂಗಳೂರು ದಕ್ಷಿಣದ ಅಭ್ಯರ್ಥಿ ಸೌಮ್ಯಾ ರೆಡ್ಡಿ ವಿರುದ್ಧ ಆರು ಕ್ರಿಮಿನಲ್ ಕೇಸ್‌ಗಳು ದಾಖಲಾಗಿವೆ.

    ಜೆಡಿಎಸ್ ಪಕ್ಷದ ಜತೆಗೆ ಮೈತ್ರಿ ಮಾಡಿಕೊಂಡ ಬಿಜೆಪಿ 11 ಕ್ಷೇತ್ರಗಳಲ್ಲಿ ಉಮೇದುವಾರರನ್ನು ಸ್ಪರ್ಧೆಗೆ ಇಳಿಸಿದೆ. ಒಟ್ಟು 10 ಕ್ರಿಮಿನಲ್ ಕೇಸ್‌ಗಳನ್ನು ಪಕ್ಷದ ಅಭ್ಯರ್ಥಿಗಳು ಎದುರಿಸುತ್ತಿದ್ದು, ಬೆಂಗಳೂರು ಕೇಂದ್ರದ ಪಿ.ಸಿ.ಮೋಹನ್ ವಿರುದ್ಧ ಎರಡು ದಾವೆಗಳಿವೆ.

    ಜೆಡಿಎಸ್ ಪಕ್ಷ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ, ನಾಲ್ಕು ಕ್ರಿಮಿನಲ್ ಕೇಸ್‌ಗಳಿವೆ ಎಂದು ಬಿಜೆಪಿ ಮಾಜಿ ಸಚಿವ, ರಾಜಾಜಿನಗರ ಶಾಸಕ ಎಸ್.ಸುರೇಶ್‌ಕುಮಾರ್ ಭಾನುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಮುನ್ನ 2024ರ ಚುನಾವಣಾ ಕೈಪಿಡಿಯನ್ನು ಬಿಡುಗಡೆ ಮಾಡಿದರು.

    ಚುನಾವಣಾ ಕೈಪಿಡಿ

    ಚುನಾವಣಾ ಪ್ರಕ್ರಿಯೆ, ನಿಯಮಗಳು, ಕಾನೂನು-ಕಟ್ಟಳೆಗಳ ಕುರಿತು ಪಕ್ಷದ ಕಾರ್ಯಕರ್ತರಲ್ಲಿ ಅರಿವು ಮೂಡಿಸುವುದು ಕೈಪಿಡಿ ಪ್ರಕಟಿಸಿದ ಮುಖ್ಯ ಉದ್ದೇಶ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅಪೇಕ್ಷೆಯಂತೆ ಕೈಪಿಡಿ ಪ್ರಕಟವಾಗಿದೆ.

    ಅನೇಕ ಕಡೆ ಖಾಸಗಿ ವ್ಯಕ್ತಿಗಳು ಸ್ವಇಚ್ಛೆಯಿಂದ ಮನೆ ಮೇಲೆ ಬಾವುಟ, ಪಕ್ಷದ ನಾಯಕರು, ಲಾಂಛನ ಚಿತ್ರ ಬರೆಯಿಸಿಕೊಂಡಿದ್ದಾರೆ. ಆದರೆ ನೀತಿ ಸಂಹಿತೆ ನೆಪವೊಡ್ಡಿ ಅಧಿಕಾರಿಗಳು ಇದಕ್ಕೆಲ್ಲ ಸುಣ್ಣ ಬಳಿದು ಮರೆ ಮಾಡುತ್ತಿದ್ದಾರೆ.

    ಸ್ವಕ್ಷೇತ್ರದ ಅಟಲ್ ಬಿಹಾರಿ ವಾಜಪೇಯಿ ಹೆಸರಿನ ಕ್ರೀಡಾಂಗಣದಲ್ಲಿ ಅಟಲ್ ಬಿಹಾರಿ ವಾಜಪೇಯಿ ಮುಖ ಮುಚ್ಚಿದರೆ, ಮತ್ತೊಂದೆಡೆ ರಾಜೀವಗಾಂಧಿ ಭಾವಚಿತ್ರ ಹಾಗೆಯೇ ಬಿಟ್ಟಿದ್ದರು. ಮುಖ್ಯ ಚುನಾವಣಾಧಿಕಾರಿಗೆ ದೂರಿತ್ತ ನಂತರ ತಾರತಮ್ಯ ಸರಿಪಡಿಸಿದರು.

    ಬೇರೆ ಕ್ಷೇತ್ರಗಳಲ್ಲಿ ಈ ರೀತಿ ಆಗುವುದನ್ನು ತಪ್ಪಿಸಲು ಚುನಾವಣಾ ಆಯೋಗ ಹೊರಡಿಸಿದ ಸುತ್ತೋಲೆ ಜತೆಗೆ ಕೈಪಿಡಿಯನ್ನು ಕಾರ್ಯಕರ್ತರಿಗೆ ಹಂಚಿಕೆ ಮಾಡಲಾಗುವುದು ಎಸ್.ಸುರೇಶ್ ಕುಮಾರ್ ತಿಳಿಸಿದರು.

    ಸ್ವ-ಇಚ್ಛೆ- ಸ್ವೇಚ್ಛೆ ಎರಡೂ ಬೇರೆ

    ಸ್ವ-ಇಚ್ಛೆ ಹಾಗೂ ಸ್ವೇಚ್ಛೆ ಎರಡೂ ಬೇರೆಯಾಗಿವೆ. ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಸ್ವ-ಇಚ್ಛೆ ಹೆಸರಿನಲ್ಲಿ ಸ್ವೇಚ್ಛೆ ಮೆರೆಯುತ್ತಿದ್ದು, ಕಾನೂನು ಕ್ರಮವಾಗಲಿದೆ. ಪಕ್ಷ ಅಧಿಕಾರದಲ್ಲಿದ್ದಾಗ ಅವರಿಗೆ ಸಹಕಾರ ಸಚಿವ ಸ್ಥಾನ, ಮೈಸೂರು ಜಿಲ್ಲಾ ಉಸ್ತುವಾರಿ ಕೊಟ್ಟಾಗ ಎಲ್ಲವೂ ಸರಿಯಿತ್ತು, ಸಿಹಿಯಾಗಿತ್ತು.

    ಈಗ ಅಧಿಕಾರದಲ್ಲಿರುವ ಪಕ್ಷದ ಬೆನ್ನುಬಿದ್ದಿದ್ದು, ಬಿಜೆಪಿ ವಿಷವಾಗಿಬಿಟ್ಟಿದೆ. ಅವರು ಹೇಳಿದಂತೆ ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಹಲವರನ್ನು ಪಕ್ಷದಿಂದ ತೆಗೆದುಹಾಕಲಾಯಿತು. ಗೌರವದಿಂದ ನಡೆಸಿಕೊಳ್ಳಲಾಗುತ್ತಿದೆ ಎಂದು ಹಿಂದೊಮ್ಮೆ ಅವರೇ ಹೇಳಿದ್ದು ಮರೆತುಬಿಟ್ಟಿದ್ದಾರೆ ಎಂದು ಸುರೇಶ್ ಕುಮಾರ್ ಟೀಕಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts