More

    ವಂಚನೆ ನಡೆದರೆ ಸುಮ್ಮನಿರೆನು : ಸಾಲ ವಿತರಣೆಯ ಲೋಪದ ತನಿಖೆ ನಡೆಸುವೆ ಎಂದ ಸಚಿವ ಮುನಿರತ್ನ

    ಕೋಲಾರ :  ಶೋಷಿತರ ಹೆಸರಿನಲ್ಲಿ ವಂಚನೆ ನಡೆದರೆ ಸರ್ಕಾರ ಸುಮ್ಮನೆ ಇರಲು ಸಾಧ್ಯವಿಲ್ಲ. ಡಿಸಿಸಿ ಬ್ಯಾಂಕ್‌ನಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ವಿತರಣೆಯಲ್ಲಿ ಆಗಿರುವ ಲೋಪಗಳ ಬಗ್ಗೆ ಎಳೆಎಳೆಯಾಗಿ ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದರು.

    ಜಿಲ್ಲಾಡಳಿತ, ಜಿಪಂ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಸ್ತ್ರೀ ಶಕ್ತಿ ಮಹಿಳಾ ಸಮಾವೇಶ, ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ ಸಪ್ತಾಹ ಮತ್ತು ಪೋಷಣ್ ಅಭಿಯಾನ ಯೋಜನೆಯ ಮಾಸಾಚರಣೆ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕೇಂದ್ರದಿಂದ ಜಿಲ್ಲೆಯ 5012 ಸಂಘಗಳ 78,720 ಫಲಾನುಭವಿಗಳಿಗೆ ಒಟ್ಟು 12.60 ಕೋಟಿ ರೂ. ಆರ್ಥಿಕ ಸಹಾಯ ನೀಡಿದೆ. ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆ ತೆರೆದು ಸದಸ್ಯೆಯರಿಗೆ ಬರಬೇಕಾದ 25,000 ರೂ,.ಗಳಲ್ಲಿ 5000 ರೂ. ನೀಡಿ 20,000 ವಂಚಿಸಿದ್ದರೆ ಅಂತಹವರ ವಿರುದ್ಧ ದೂರು ಕೊಡಿ, ಕಾನೂನು ಚೌಕಟ್ಟಿನಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತೇನೆ ಎಂದರು.

    ಡಿಸಿಸಿ ಬ್ಯಾಂಕ್‌ನಿಂದ ನೀಡುವ ಸಾಲವನ್ನು ತಮ್ಮತಾತ, ಮುತ್ತಾತನ ಆಸ್ತಿ ಮಾರಿ ಸಹಾಯ ಮಾಡುತ್ತಿರುವಂತೆ ನಡೆದುಕೊಳ್ಳುತ್ತಿದ್ದಾರೆ. ಸರ್ಕಾರದ ಹಣವನ್ನು ದಾನದಂತೆ ನೀಡಲು ಅವರು ಯಾರು?. ಇಂತಹ ಕೆಲಸ ಮಾಡಿದವರು ಯಾರೇ ಆಗಲಿ ಪ್ರಾಯಶ್ಚಿತ್ತ, ಪಶ್ಚಾತ್ತಾಪ ಪಡಬೇಕು. ಯಾರು ಎಷ್ಟೆಷ್ಟು ಮಾಡಿದ್ದಾರೆ ಎಂಬುದನ್ನು ಮಾಹಿತಿ ಪಡೆಯುತ್ತಿರುವೆ, ಅಂತಹವರಿಗೆ ದಾರಿ ಕಾಣಿಸುವೆ, ಒಂದೊಂದಾಗಿಯೇ ಬಯಲಿಗೆ ತರುತ್ತೇನೆ ಎಂದು ಹೇಳಿದರು.

    ಸಾಲ ವಿತರಣೆಯಲ್ಲಿ ಲೋಪಗಳಾದರೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ, ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ. ಇಷ್ಟು ದಿನ ಏನೇನು ಮಾಡಿದ್ದಾರೋ ಅದೆಲ್ಲದಕ್ಕೂ ಒಳ್ಳೆಯ ತೀರ್ಮಾನ ತೆಗೆದುಕೊಳ್ಳುವ ದಿನ ಹತ್ತಿರ ಬಂದಿದೆ. ಆದಷ್ಟು ಬೇಗ ಒಂದು ತೀರ್ಮಾನ ಮಾಡುತ್ತೇನೆ ಎಂದು ನುಡಿದರು.

    ಸಂಸದ ಎಸ್ ಮುನಿಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ನಬಾರ್ಡ್, ಅಪೆಕ್ಸ್ ಬ್ಯಾಂಕ್ ನೆರವಿನಿಂದ ಮಹಿಳಾ ಸಂಘಗಳಿಗೆ ಸಾಲ ನೀಡುತ್ತದೆ. ಇದನ್ನು ತಮ್ಮ ಮನೆಯಿಂದಲೇ ಸಾಲ ನೀಡಿದಂತೆ, ಚುನಾವಣೆ ಸಂದರ್ಭದಲ್ಲಿ ಬಳಸಿಕೊಳ್ಳುವುದು ನಡೆಯುತ್ತಿದೆ. ಸಾಲದ ಹಣ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಮನೆಯದ್ದಲ್ಲ. ಸಾಲ ವಿತರಣೆ ಕಾರ್ಯಕ್ರಮಗಳು ಕೂಡ ಜನಪ್ರತಿನಿಧಿಗಳ ಸಮ್ಮುಖದಲ್ಲೇ ನಡೆಯುವಂತಾಗಬೇಕು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಉಸ್ತುವಾರಿ ಸಚಿವರನ್ನು ಕೋರಿದರು.

    ಡಿಸಿ ಡಾ.ಆರ್.ಸೆಲ್ವಮಣಿ, ಸಿಇಒ ಎನ್.ಎಂ.ನಾಗರಾಜ್, ಕುಡಾ ಅಧ್ಯಕ್ಷ ಚಲಪತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಎಂ.ಜಿ.ಪಾಲಿ,. ಕುಡಾ ಸದಸ್ಯರಾದ ಮಮತಮ್ಮ, ವಕ್ಫ್ ಬೊರ್ಡ್ ಅಧ್ಯಕ್ಷ ಜಾಮೀಲ್ ಸೇರಿ ಅಧಿಕಾರಿಗಳು, ಸ್ತ್ರೀ ಶಕ್ತಿ ಸಂಘಗಳ ಸದಸ್ಯರು ಉಪಸ್ಥಿತರಿದ್ದರು. ಮಾತೃ ವಂದನಾ ಯೋಜನೆಯನ್ನು ಚೆನ್ನಾಗಿ ಅನುಷ್ಠಾನಗೊಳಿಸಿದ ಅಂಗನವಾಡಿ ಕಾರ್ಯಕರ್ತೆ, ಸಹಾಕಿಯರನ್ನು ಸನ್ಮಾನಿಸಲಾಯಿತು. ಗರ್ಭಿಣಿಗೆ ಸೀಮಂತ ಕಾರ್ಯಕ್ರಮ ನಡೆಯಿತು.

    ಬಿಜೆಪಿಗೆ ಜೈ ಕಾರ:
    ದೇಶದ ಹೆಣ್ಣು ಮಕ್ಕಳು ಅವರವರ ಶಕ್ತಿ ಮೇಲೆ ಬದುಕಬೇಕೆಂಬ ಉದ್ದೇಶದಿಂದ ಸ್ತ್ರೀಶಕ್ತಿ ಸಂಘಗಳಿಗೆ ಸಾಲ ಸೌಲಭ್ಯ, ಇನ್ನಿತರ ಯೋಜನೆಗಳನ್ನು ಜಾರಿಗೆ ತಂದಿದ್ದು ಪ್ರಧಾನಿ ಮೋದಿ, ಬಿಜೆಪಿ ಸರ್ಕಾರ. ಇದಕ್ಕಾಗಿ ಮೋದಿಗೆ ಜೈ…. ಬಿಜೆಪಿಗೆ ಜಯಕಾರ ಕೂಗುವಂತೆ ಹೇಳಿ ಹೆಣ್ಣು ಮಕ್ಕಳಿಂದ ಸಚಿವ ಮುನಿರತ್ನ ಸರ್ಕಾರಿ ಕಾರ್ಯಕ್ರಮದಲ್ಲಿ ಜಯಕಾರ ಕೂಗಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts