More

  ರಾಜಕೀಯಕ್ಕಾಗಿ ಜಾತಿಗಳ ಮಧ್ಯೆ ವೈಷಮ್ಯ ಸೃಷ್ಟಿ

  ನರಗುಂದ: ರಾಜಕೀಯಕ್ಕಾಗಿ ಜಾತಿ, ಜಾತಿಗಳ ಮಧ್ಯೆ ವೈಷಮ್ಯ ಬಿತ್ತುತ್ತಿರುವುದು ಹೆಚ್ಚಾಗಿದೆ. ಜಾತಿ ಗಾಳದಿಂದ ಕೆಲವರು ಸ್ವಾರ್ಥ ಮೆರೆಯುತ್ತಿದ್ದಾರೆ. ಮಾನವೀಯ ಧರ್ಮ ಕುಗ್ಗ ತೊಡಗಿದೆ. ಇದು ಮುಂದೊಂದು ದಿನ ಬೀದಿ ಜಗಳಕ್ಕೆ ಪ್ರಮುಖ ಕಾರಣವಾದರೂ ಅಚ್ಚರಿಪಡಬೇಕಾಗಿಲ್ಲ ಎಂದು ವಿಧಾನಸಭೆ ಮುಖ್ಯ ಸಚೇತಕ, ರಾಮದುರ್ಗ ಶಾಸಕ ಅಶೋಕ ಪಟ್ಟಣ ಕಳವಳ ವ್ಯಕ್ತಪಡಿಸಿದರು.

  ಪಟ್ಟಣದ ಶ್ರೀ ಬಸವೇಶ್ವರ ಸಮುದಾಯ ಭವನದಲ್ಲಿ ಬಣಜಿಗ ಕ್ಷೇಮಾಭಿವೃದ್ಧಿ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.
  ಸಮಾಜದ ಎಲ್ಲ ವರ್ಗದವರನ್ನು ಸಮನ್ವಯದಿಂದ ಕರೆದೊಯ್ಯುವ ಶಕ್ತಿ ಬಣಜಿಗ ಸಮಾಜಕ್ಕೆ ಇದೆ. ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸವಿನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸುವ ಬದಲು ಅವರಿಗೆ ನಗದು ನೀಡಿ ಪ್ರೋತ್ಸಾಹಿಸಬೇಕು. ನರಗುಂದದಲ್ಲಿ ಬಣಜಿಗ ಸಮುದಾಯ ಭವನ ನಿರ್ಮಾಣಕ್ಕೆ 2ಗುಂಟೆ ನಿವೇಶನ ನೀಡಲು ಮನವಿ ಮಾಡಿದ್ದು, ಸರ್ಕಾರದ ಮಟ್ಟದಲ್ಲಿ ಸೂಕ್ತ ನಿವೇಶನ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

  ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಬಣಜಿಗ ಸಮಾಜ ಕೃಷಿ, ವಾಣಿಜ್ಯ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿಯೂ ತನ್ನ ಛಾಪನ್ನು ಮೂಡಿಸಿದೆ. ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣದ ಜತೆಗೆ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಎದುರಿಸುವಂತಹ ಶಕ್ತಿ, ಧೈರ್ಯವನ್ನು ಪಾಲಕರು ನೀಡಬೇಕಾಗಿದೆ ಎಂದರು.

  ಬಣಜಿಗ ಸಮಾಜದ ತಾಲೂಕು ಅಧ್ಯಕ್ಷ ಶಿವಾನಂದ ಶೇಬಣ್ಣವರ, ಗವಿಸಿದ್ದಪ್ಪ ಕೊಪ್ಪಳ ಮಾತನಾಡಿದರು. ವಿರಕ್ತಮಠದ ಶಿವಕುಮಾರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

  ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ವಿಶೇಷ ಸಾಧನೆಗೈದ ಸಮಾಜದ 25 ವಿದ್ಯಾರ್ಥಿಗಳಿಗೆ, ಸಾಧಕರಿಗೆ ಪ್ರತಿಭಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

  ಬಣಜಿಗ ಸಮಾಜದ ಜಿಲ್ಲಾಧ್ಯಕ್ಷ ಈಶಣ್ಣ ಮುನವಳ್ಳಿ, ಶಿವಾನಂದ ನಿಂಗನೂರ, ನವಲಗುಂದ ತಾಲೂಕಾಧ್ಯಕ್ಷ ಅಣ್ಣಪ್ಪ ಬಾಗಿ, ಸಂಸ್ಥಾಪಕ ಅಧ್ಯಕ್ಷ ಎಸ್.ವಿ. ಗೋವೇಶ್ವರ, ಎಂ.ಎಸ್. ಯಾವಗಲ್, ಚನ್ನು ನಂದಿ, ಚಂಬಣ್ಣ ವಾಳದ, ಶಂಕರಣ್ಣ ವಾಳದ, ಚನ್ನಪ್ಪ ಕೋರಿ ಉಪಸ್ಥಿತರಿದ್ದರು. ವೀಣಾ ಚಿನಿವಾಲರ, ಶೋಭಾ ಬೆಲ್ಲದ, ರಚನಾ ಗೋವೇಶ್ವರ ಅವರು ವಿಭೂತಿ ಧಾರಣೆ, ವಚನ, ಪ್ರಾರ್ಥನೆ ಗೀತೆ ಪ್ರಸ್ತುತಪಡಿಸಿದರು. ಆರ್.ಬಿ. ಚಿನಿವಾಲರ, ಸುಭಾಸ ಕೋತಿನ, ಸುಧಾ ಗುಗ್ಗರಿ, ವೀಣಾ ಚಿನಿವಾಲರ ನಿರ್ವಹಿಸಿದರು.

  ರಾಜ್ಯೋತ್ಸವ ರಸಪ್ರಶ್ನೆ - 21

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts