More

    ಕೈಗಾರಿಕೆಗಳಲ್ಲಿ ಉದ್ಯೋಗ ಸೃಷ್ಟಿಸಿ ; ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಸೂಚನೆ

    ತುಮಕೂರು: ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಅಗತ್ಯ ಮೂಲ ಸೌಕರ್ಯ ನೀಡಲು ಸರ್ಕಾರ ಸಿದ್ಧವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಭರವಸೆ ನೀಡಿದರು.

    ವಸಂತನರಸಾಪುರ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಸಂಬಂಧಿಸಿದ ಸಭೆಯಲ್ಲಿ ಕೈಗಾರಿಕೋದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕೈಗಾರಿಕಾ ವಲಯದಲ್ಲಿ ಮೂಲಸೌಕರ್ಯ ಸೃಷ್ಟಿಸುವುದು ಸರ್ಕಾರದ ಕರ್ತವ್ಯ ಎಂದರು. ಸರ್ಕಾರದಿಂದ ಎಲ್ಲವನ್ನೂ ಪಡೆಯುವ ಕೈಗಾರಿಕೆಗಳು ಜವಾಬ್ದಾರಿ ಅರಿತಿರಬೇಕು, ಸ್ಥಳೀಯರಿಗೆ ಉದ್ಯೋಗ ಸಿಗಲಿದೆ ಎಂಬ ಭರವಸೆಯಿಂದಲೇ ಸರ್ಕಾರ ಕೈಗಾರಿಕೆಗಳಿಗೆ ಉತ್ತೇಜನ ನೀಡುತ್ತದೆ ಎಂದರು.

    ಕೈಗಾರಿಕೆಗಳಲ್ಲಿ ವಿದ್ಯುತ್, ನೀರಿನ ಸೌಲಭ್ಯ, ರಸ್ತೆ ಸೇರಿ ಮೂಲಸೌಲಭ್ಯ ಕಲ್ಪಿಸಬೇಕು. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಎತ್ತಿನಹೊಳೆ ಯೋಜನೆಯಡಿ ನೀರು ಇಲ್ಲಿಯವರೆಗೂ ಹಂಚಿಕೆಯಾಗದೆ ಚರ್ಚೆಯಲ್ಲಿಯೇ ಮುಂದುವರಿದಿದೆ ಎಂದರು. ಕಾರ್ಮಿಕರು, ವಾಚ್‌ಮನ್‌ಗಳು ಸೇರಿ ಕೆಳಹಂತದವರಿಗೆ ವಸತಿ ವ್ಯವಸ್ಥೆ ಒದಗಿಸಬೇಕು. ಕಾರ್ಮಿಕರಿಗೆ ತೊಂದರೆಯಾಗದಂತೆ ಉಳಿದು
    ಕೊಳ್ಳಲು ವ್ಯವಸ್ಥೆ ಮಾಡಿಕೊಡಬೇಕು. ಕೈಗಾರಿಕೆಗಳಲ್ಲಿ ಸದ್ಯ ಎಷ್ಟು ಜನ ಕೆಲಸ ಮಾಡುತ್ತಿದ್ದಾರೆ. ಎಷ್ಟು ಜನರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಬೇಕು ಎಂಬುದರ ಬಗ್ಗೆ ಕೈಗಾರಿಕಾ ಪ್ರದೇಶದಲ್ಲಿರುವ ಕಂಪನಿಗಳ ಜತೆ ಚರ್ಚಿಸಿ ಪ್ರಸ್ತಾವನೆ ಸಲ್ಲಿಸಿ, ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಕೊಳಚೆ ನೀರನ್ನು ಸಂಸ್ಕರಿಸಿ ಕೈಗಾರಿಕೆಗಳಿಗೆ ಪೂರೈಸಲು ಸೂಕ್ತ ನಿರ್ಧಾರವನ್ನು ಕೈಗೊಳ್ಳಲಾಗುತ್ತಿದೆ. ಕೆಐಡಿಬಿ ಹಾಗೂ ಬೆಂಗಳೂರು ಜಲಮಂಡಳಿಯನ್ನು ಉಪಯೋಗಿಸಿಕೊಂಡು ಪೀಣ್ಯ, ದಾಬಸ್‌ಪೇಟೆ, ಮಾಗಡಿ ಕಡೆ ಬೆಂಗಳೂರಿನ ನೀರನ್ನು ಪೂರೈಸಲು ನಿರ್ಧಾರ ಮಾಡಲಾಗಿದೆ ಎಂದರು.

    ವಸಂತನರಸಾಪುರ ಕೈಗಾರಿಕಾ ಸಂಘದ ಅಧ್ಯಕ್ಷ ಶಿವಶಂಕರ್ ಮಾತನಾಡಿ, ಕೈಗಾರಿಕೆಗಳಿಂದ ಹೊರ ಹೋಗುವ ಅಶುದ್ಧ ನೀರನ್ನು ಶುದ್ಧ ನೀರಾಗಿ ಪರಿವರ್ತಿಸಲು ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು. ಕೈಗಾರಿಕಾ ಪ್ರದೇಶದಲ್ಲಿ ಸ್ಕಿಲ್ ಟ್ರೈನಿಂಗ್ ಸೆಂಟರ್ ಸ್ಥಾಪಿಸಲು ಸ್ಥಳಾವಕಾಶವಿದ್ದು, ಸರ್ಕಾರ ಇದಕ್ಕೆ 5 ಕೋಟಿ ರೂಪಾಯಿ ನೀಡಿದಲ್ಲಿ ಸೆಂಟರ ಸ್ಥಾಪಿಸಿ, ಸ್ಥಳೀಯರಿಗೆ ತರಬೇತಿ ನೀಡಿ ಉದ್ಯೋಗ ನೀಡುತ್ತೇವೆ ಎಂದರಲ್ಲದೇ ಕೆಲಸ ಮಾಡುವ ಕಾರ್ಮಿಕರಿಗೆ ಅನುಕೂಲವಾಗುವಂತೆ ಎಂದರು.

    ಗ್ರಾಪಂ ಅಧ್ಯಕ್ಷ ಶಿವಕುಮಾರ್, ಎಸ್ಪಿ ಡಾ.ಕೆ.ವಂಶಿಕೃಷ್ಣ, ಟೆಕ್ನೊ ಸ್ಪಾರ್ಕ್‌ನ ಮೋಹನ್ ಸುರೇಶ್, ವಸಂತನರಸಾಪುರ ಕೈಗಾರಿಕಾ ಪ್ರದೇಶದ ಉಪಾಧ್ಯಕ್ಷ ಜಿ.ವಿ ರಾಮಮೂರ್ತಿ, ಟಿಡಿಸಿಸಿಐ ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಸಿ.ವಿ ಹರೀಶ್, ಜಂಟಿ ಕಾರ್ಯದರ್ಶಿ ಎಂ.ಸತ್ಯನಾರಾಯಣ್, ಜಿಲ್ಲಾ ಕೈಗಾರಿಕ ಕೇಂದ್ರದ ಜಂಟಿ ನಿರ್ದೇಶಕ ನಾಗೇಶ್, ಕೆಐಡಿಬಿಯಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿ ತಬ್ಸುಮ್ ಜಹೇರ್, ಡಿವೈಎಸ್‌ಪಿ ತಿಪ್ಪೇಸ್ವಾಮಿ ಇದ್ದರು.

    ತ್ರೈಮಾಸಿಕ ಕೆಡಿಪಿ ಸಭೆ 8ಕ್ಕೆ ನಿಗದಿ: ನಾಲ್ಕನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ಮುಂದುವರಿದ ಸಭೆ ಜೂ.8ರಂದು ಬೆಳಗ್ಗೆ 10.30ಕ್ಕೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕರೊನಾ ಹಿನ್ನೆಲೆಯಲ್ಲಿ ಕೆಲವು ಇಲಾಖೆಗಳ ಪ್ರಗತಿ ಪರಿಶೀಲನೆಯನ್ನಷ್ಟೇ ಮಾಡಲಾಗಿತ್ತು.

    ಕೆಲ ವರ್ಷಗಳಲ್ಲಿ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚು ಉದ್ಯೋಗಾವಕಾಶ ಸೃಷ್ಟಿಯಾಗುತ್ತವೆ. ಇಲ್ಲಿನ ಕಾರ್ಮಿಕರಿಗೆ ಕುಡಿಯುವ ನೀರಿನ ಸಮಸ್ಯೆಯಿದ್ದು, ಶೀಘ್ರದಲ್ಲಿ ಸಮಸ್ಯೆ ಪರಿಹರಿಸಲಾಗುವುದು. ಸ್ಕಿಲ್ ಪಾರ್ಕ್ ಸ್ಥಾಪಿಸಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಲಾಗುವುದು.
    ಡಾ.ಕೆ.ರಾಕೇಶ್‌ಕುಮಾರ್, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts