More

    ಹಳ್ಳಿಗಳಲ್ಲಿ ಉದ್ಯೋಗ ಸೃಷ್ಟಿಸಿ ; ಅಧಿಕಾರಿಗಳಿಗೆ ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ತಾಕೀತು

    ತುಮಕೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ಯೋಜನೆ ಅನುಷ್ಠಾನದಲ್ಲಿ ತಾಲೂಕು ಹಿಂದೆಬಿದ್ದಿದೆ. ಕರೊನಾ ಭೀತಿಯಿಂದ ಹಳ್ಳಿಗೆ ಮರಳಿರುವವರಿಗೆ ಉದ್ಯೋಗ ನೀಡುವ ಮೂಲಕ ಉದ್ಯೋಗ ಸೃಜಿಸುವ ಕೆಲಸವಾಗಬೇಕಿದೆ ಎಂದು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ತಾಕೀತು ಮಾಡಿದರು.

    ತಾಪಂ ಸಭಾಂಗಣದ ಹೊರಭಾಗದಲ್ಲಿ ಶುಕ್ರವಾರ ಪಂಚಾಯಿತಿ ಆಡಳಿತಾಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಬೆಂಗಳೂರಿನಿಂದ ಗುಳೆ ಬಂದಿರುವ ಜನರಿಗೆ ಉದ್ಯೋಗ ನೀಡಬೇಕು. ಪ್ರತೀ ಗ್ರಾಮ ಪಂಚಾಯಿತಿಗಳಿಗೂ ಗುರಿ ನಿಗದಿ ಮಾಡುವ ಮೂಲಕ ನರೇಗಾ ಯೋಜನೆಯಡಿ ಉದ್ಯೋಗ ಸೃಜಿಸುವ ಕೆಲಸವಾಗಬೇಕು. ತುಮಕೂರು ಗ್ರಾಮಾಂತರ ಏನು ಅಮೆರಿಕಾನಾ? ನರೇಗಾ ಜಾಬ್ ಕಾರ್ಡ್‌ನಲ್ಲಿ ಕೆಲಸ ಏಕೆ ಮಾಡಿಸುತ್ತಿಲ್ಲ. ಪಿಡಿಒಗಳು ನರೇಗಾ ಅಡಿಯಲ್ಲಿ ಕೆಲಸ ಮಾಡಿಸಲು ಮುಂದಾಗಬೇಕು ಎಂದು ತರಾಟೆಗೆ ತೆಗೆದುಕೊಂಡರು.

    ಶೀಘ್ರ ನಿವೇಶನ: ಅಲೆಮಾರಿ ಜನಾಂಗದವರಿಗೆ ನಿವೇಶನ ಹಾಗೂ ಮನೆ ರಹಿತ ಹಾಗೂ ನಿವೇಶನರಹಿತರ ಮಾಹಿತಿಯನ್ನು ಶೀಘ್ರವಾಗಿ ಕಂದಾಯ ಇಲಾಖೆಗೆ ಸಂಬಂಧಪಟ್ಟವರು ನೀಡಬೇಕು. ಕಡತ ನಿರ್ವಹಿಸಲು ಸಿಬ್ಬಂದಿಯನ್ನು ನೇಮಿಸಿ, ಶೀಘ್ರವಾಗಿ ಬಡವರಿಗೆ ನಿವೇಶನ ಹಂಚುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖವಾಗಬೇಕು ಎಂದು ಗೌರಿಶಂಕರ್ ಹೇಳಿದರು.
    ಗ್ರಾಮಾಂತರ ಕ್ಷೇತ್ರದಲ್ಲಿ ಅಕ್ರಮವಾಗಿ ನಿವೇಶನಗಳನ್ನು ರಿಯೆಲ್ ಎಸ್ಟೇಟ್ ಕುಳಗಳು ನಿರ್ಮಿಸುತ್ತಿದ್ದಾರೆ. ಮೂಲಸೌಕರ್ಯಗಳಿಲ್ಲದ ಲೇಔಟ್‌ಗಳಲ್ಲಿ ನಿವೇಶನ ಖಾತೆ ಮಾಡುವ ಮುನ್ನ ತಾಪಂ ಇಒ ಗಮನಕ್ಕೆ ತರಬೇಕು. ಮೂಲ ಸೌಕರ್ಯಗಳನ್ನು ಒದಗಿಸದೇ ನಿವೇಶನಗಳನ್ನು ಖಾತೆ ಮಾಡಿಸಿದರೆ ಅಧಿಕಾರಿಗಳೇ ಹೊಣೆಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಯಲ್ಲಾಪುರ, ಮುತ್ಸಂದ್ರ, ವಡ್ಡರಹಳ್ಳಿ, ಸೋರೆಕುಂಟೆ, ಲಿಂಗದಹಳ್ಳಿಯಲ್ಲಿ ನೀರಿನ ಸಮಸ್ಯೆ ಹೆಚ್ಚಿದ್ದು, ಹೊನಸಿಗೆರೆಯಲ್ಲಿ ರೈತರ ಕೊಳವೆಬಾವಿಯಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲು ಮುಂದಿನವಾರ ಕೆಡಿಪಿ ಸಭೆ ಕರೆಯುವಂತೆ ತಾಪಂ ಇಒ ಜೈಪಾಲ್‌ಗೆ ಸೂಚಿಸಿದರು. ತಾಲೂಕು ಪಂಚಾಯಿತಿ ಸದಸ್ಯರಾದ ದೀಪು, ರಂಗಸ್ವಾಮಯ್ಯ ಇದ್ದರು.

    ರೈತರಿಗೆ ಅನ್ಯಾಯವಾದ್ರೆ ಸಹಿಸಲ್ಲ: ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಬಿಲ್ ಕಲೆಕ್ಟರ್ ಹಾಗೂ ಕಂಪ್ಯೂಟರ್ ಆಪರೇಟರ್‌ಗಳು ರೈತರ ಬಳಿ ಹಣಕ್ಕಾಗಿ ಬೇಡಿಕೆ ಇಡುವ ಬಗ್ಗೆ ದೂರುಗಳು ಬಂದಿದ್ದು, ಆಡಳಿತಾಧಿಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕು. ರೈತರಿಗೆ ಅನ್ಯಾಯವಾದರೆ ಸಹಿಸೋಲ್ಲ ಎಂದು ಶಾಸಕ ಗೌರಿಶಂಕರ್ ಎಚ್ಚರಿಕೆ ನೀಡಿದರು.

    ಪಂಚಾಯಿತಿಗಳಲ್ಲಿ ಜನಪ್ರತಿನಿಧಿಗಳಿದ್ದಾಗ, ಯಾರದ್ದೋ ಮುಲಾಜಿಗೆ, ಒತ್ತಡಕ್ಕೆ ಸಿಲುಕಿ ಬಡವರ ಪರ ಕೆಲಸ ಮಾಡಲು ತೊಂದರೆ ಆಗುತ್ತಿತ್ತು. ಆಡಳಿತಾಧಿಕಾರಿ ನೇಮಿಸಿರುವುದರಿಂದ ಕೆಲಸ ಮಾಡುವ ಹೆಚ್ಚಿನ ಜವಾಬ್ದಾರಿ ಪಿಡಿಒಗಳ ಮೇಲಿದೆ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಅಶಕ್ತರಿಗೆ ಸಹಾಯ ಮಾಡಿ.
    ಡಿ.ಸಿ.ಗೌರಿಶಂಕರ್ ಗ್ರಾಮಾಂತರ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts