More

    ದೊಡ್ಡಬಸವಣ್ಣ ದೇಗುಲ ವಿಮಾನಗೋಪುರದಲ್ಲಿ ಬಿರುಕು!

    • ದುರಸ್ತಿ ಕಾರ್ಯಕ್ಕೆ ಹಣದ ಸಮಸ್ಯೆ
    • ಮಳೆ ಬಂದರೆ ಕಾದಿದೆ ಹಾನಿ

    ಪಂಕಜ ಕೆ.ಎಂ. ಬೆಂಗಳೂರು


    ಬಸವನಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆ (ಡಿ.10-11) ಸಮೀಪಿಸುತ್ತಿದೆ. ಆದರೆ ಪರಿಷೆಯ ಕೇಂದ್ರ ತಾಣವಾಗಿರುವ ಶ್ರೀ ದೊಡ್ಡಬಸವಣ್ಣ ದೇವಾಲಯ ಬಿರುಕುಬಿಟ್ಟಿರುವ ವಿಮಾನ ಗೋಪುರವನ್ನು ದುರಸ್ತಿಗೊಳಿಸಲು ಹಾಗೂ ದೇವಾಲಯಕ್ಕೆ ಸುಣ್ಣಬಣ್ಣ ಮಾಡಿಸಲು ಹಣವೇ ಇಲ್ಲವಾಗಿದೆ.
    ನೂರಾರು ವರ್ಷಗಳ ಇತಿಹಾಸ ಹೊಂದಿರುವ ದೊಡ್ಡಬಸವಣ್ಣ ದೇಗುಲ ರಾಜ್ಯ ಪುರಾತತ್ವ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದು, ದೇವಾಲಯದ ಆಡಳಿತವನ್ನು ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ನಡೆಸಲಾಗುತ್ತಿದೆ. ದೇವಾಲಯದ ವಿಮಾನ ಗೋಪುರದ ದಕ್ಷಿಣ ದಿಕ್ಕಿನ ಕೆಲವು ಭಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದರ ದುರಸ್ತಿ ಕಾರ್ಯವನ್ನು ಮಾಡಿಸಿಕೊಡುವಂತೆ ಪುರಾತತ್ವ ಇಲಾಖೆಗೆ ದೇವಾಲಯ ವತಿಯಿಂದ ಪತ್ರ ಬರೆದು ಮೂರು ತಿಂಗಳು ಕಳೆದಿದ್ದು, ಈವರೆಗೆ ಕ್ರಮ ಕೈಗೊಂಡಿಲ್ಲ.


    ದೇವಾಲಯದ ಗೋಡೆ ಹಾಗೂ ವಿಮಾನ ಗೋಪುರ ಬಣ್ಣ ಕಂಡು ವರ್ಷಗಳೇ ಕಳೆದಿವೆ. ಬಿರುಕು ಬಿಟ್ಟಿರುವ ಭಾಗವನ್ನು ಸರಿಪಡಿಸದಿದ್ದರೆ ಮಳೆ ಬಂದಾಗ ಇನ್ನಷ್ಟು ಹಾಳಾಗಿ, ಗೋಪುರದ ಮೂಲ ವಿನ್ಯಾಸ ವಿರೂಪಗೊಳ್ಳುವ ಸಾಧ್ಯತೆ ಇದೆ. ದೇವಾಲಯದ ಆಗಮ ಪಂಡಿತರ ಅಭಿಪ್ರಾಯದಂತೆ ಇದರ ದುರಸ್ತಿ ಕಾರ್ಯವನ್ನು ಪುರಾತತ್ವ ಇಲಾಖೆ ವತಿಯಿಂದಲೇ ನಡೆಸಬೇಕಿದೆ. ಹಾಗಾಗಿ ಇಲಾಖೆಗೆ ಪತ್ರ ಬರೆದು ಮನವಿ ಮಾಡಲಾಗಿದೆ ಎನ್ನುತ್ತಾರೆ ದೇಗುಲದ ಅಧಿಕಾರಿಗಳು.


    ಈ ಕುರಿತು ಪುರಾತತ್ವ ಇಲಾಖೆ ಅಧಿಕಾರಿಗಳು, ವಿಮಾನ ಗೋಪುರ ದುರಸ್ತಿ ಮಾಡಿಸಲು ಸದ್ಯ ನಮ್ಮಲ್ಲಿ ಹಣವಿಲ್ಲ. ಈ ವರ್ಷದ ಕ್ರಿಯಾ ಯೋಜನೆಯಲ್ಲಿ ಗುರುತಿಸಲಾಗಿದ್ದ ಸ್ಮಾರಕಗಳು ದೇವಾಲಯಗಳ ದುರಸ್ತಿ ಹಾಗೂ ಜೀರ್ಣೋದ್ಧಾರ ಕಾರ್ಯಗಳನ್ನಷ್ಟೇ ಮಾಡಲು ಸಾಧ್ಯ. ಉಳಿದಂತೆ ವಿಮಾನಗೋಪುರ ದುರಸ್ತಿ ಕುರಿತು ಮುಂದಿನ ಕ್ರಿಯಾ ಯೋಜನೆಯಲ್ಲಿ ಸೇರಿಸಿ ನಂತರ ಕ್ರಮ ವಹಿಸಲಾಗುವುದು. ಇಲ್ಲವೇ ದೇವಾಲಯದ ಆದಾಯ ಮೂಲದಿಂದ ಹಣ ನೀಡಿದಲ್ಲಿ ಶಾಸಾನುಸಾರ ಅನುಭವಿ ಶಿಲ್ಪತಜ್ಞರ ಮೂಲಕ ದುರಸ್ತಿ ಕಾರ್ಯ ಮಾಡಿಸಿಕೊಡಲಾಗುವುದು ಎಂದು ‘ವಿಜಯವಾಣಿ’ಗೆ ತಿಳಿಸಿದರು.


    ದೇವಾಲಯದಲ್ಲೂ ಹಣವಿಲ್ಲ: ಶ್ರೀ ದೊಡ್ಡಬಸವಣ್ಣ ದೇವಾಲಯದ ಆಡಳಿತ ಮುಜರಾಯಿ ಇಲಾಖೆ ಅಧೀನದಲ್ಲಿದ್ದು, ಕಡಲೆಕಾಯಿ ಪರಿಷೆಯ 3 ದಿನ ಹೊರತುಪಡಿಸಿದರೆ, ಉಳಿದಂತೆ ಭಕ್ತರು ಬರುವುದು ವಿರಳ. ಬದಲಿಗೆ ಪ್ರವಾಸಿಗರು ಭೇಟಿ ನೀಡುತ್ತಾರೆ. ಹಾಗಾಗಿ ದೇವಾಲಯಕ್ಕೆ ಹೆಚ್ಚಿನ ಆದಾಯವೇನು ಬರುತ್ತಿಲ್ಲ. ದುರಸ್ತಿ ಕಾರ್ಯವಿರಲಿ, ಬಣ್ಣ ಬಳಿಸಲಿಕ್ಕೂ ಆಗುವುದಿಲ್ಲ. ಕಡಲೆಕಾಯಿ ಪರಿಷೆ ಸಮೀಪಿಸುತ್ತಿದ್ದು, ದುರಸ್ತಿ ಮಾಡಿ ಬಣ್ಣ ಬಳಿಸಿದ್ದರೆ ಚೆನ್ನಾಗಿರುತ್ತಿತ್ತು. ಮುಂದಿನ ವರ್ಷಕ್ಕಾದರೂ ಇದು ಸಾಧ್ಯವಾಗಲಿ ಎಂಬುದು ದೇಗುಲದ ಪ್ರಮುಖರ ಆಶಯ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts