More

    ರೋಗಲಕ್ಷಣ ಇದ್ದರಷ್ಟೇ ಕೋವಿಡ್ ಟೆಸ್ಟ್

    ವೇಣುವಿನೋದ್ ಕೆ.ಎಸ್.ಮಂಗಳೂರು
    ಜಿಲ್ಲೆಯಲ್ಲಿ ಈಗ ಕೋವಿಡ್ ರೋಗ ಲಕ್ಷಣ ಇದ್ದರೆ ಮಾತ್ರ ಆರ್‌ಟಿ ಪಿಸಿಆರ್ ಟೆಸ್ಟ್ ಮಾಡಿಸಿದರೆ ಸಾಕು. ಇಲ್ಲವಾದರೆ ಅಗತ್ಯವಿಲ್ಲ.
    1ನೇ ತಾರೀಕಿನಿಂದ ಟೆಸ್ಟಿಂಗ್ ವ್ಯವಸ್ಥೆಯಲ್ಲಿ ಹೀಗೊಂದು ಬದಲಾವಣೆ ಮಾಡಿಕೊಳ್ಳಲಾಗಿದೆ. ಬೇಕೇಬೇಕು ಎಂದಾದರೆ ಖಾಸಗಿ ಲ್ಯಾಬ್‌ಗೆ ತೆರಳಿ ನಿಗದಿತ ಹಣ ಪಾವತಿಸಿ ಟೆಸ್ಟ್ ಮಾಡಿಸಿಕೊಳ್ಳಬಹುದು.

    ಸದ್ಯ ಪ್ರಾಥಮಿಕ ಆರೋಗ್ಯ ಕೇಂದ್ರ, ವೆನ್ಲಾಕ್‌ನಂತಹ ಸರ್ಕಾರಿ ಟೆಸ್ಟಿಂಗ್ ಕೇಂದ್ರಗಳಿಗೆ ತೆರಳಿದರೆ ಜನರನ್ನು ಸಾಲಾಗಿ ನಿಲ್ಲಿಸಿ ಮೊದಲು ಅವರಿಗೆ ರೋಗ ಲಕ್ಷಣ (ಕೆಮ್ಮು, ತಲೆನೋವು, ಮೈಕೈನೋವು ಇತ್ಯಾದಿ) ಇದೆಯೇ ಎಂಬುದನ್ನು ವೈದ್ಯರು ನೋಡುತ್ತಿದ್ದಾರೆ. ರೋಗ ಲಕ್ಷಣ ಇಲ್ಲವೆಂದಾದರೆ ಅವರನ್ನು ವಾಪಸ್ ಕಳುಹಿಸುತ್ತಾರೆ. ರೋಗ ಲಕ್ಷಣ ಇದ್ದರೆ ಮಾತ್ರವೇ ಪರೀಕ್ಷಾ ವಿಭಾಗಕ್ಕೆ ಅವರನ್ನು ಕಳುಹಿಸಲಾಗುತ್ತಿದೆ. ಜನರು ಅನಗತ್ಯ ಭಯದಿಂದ ಟೆಸ್ಟಿಂಗ್ ಕೇಂದ್ರಕ್ಕೆ ಮುಗಿಬೀಳುತ್ತಿರುವ ಕಾರಣ ಲ್ಯಾಬ್‌ನಲ್ಲಿ ಲೋಡ್ ಹೆಚ್ಚುತ್ತಿದೆ. ಇದರಿಂದ ಪರೀಕ್ಷಾ ವರದಿ ವಿಳಂಬವಾಗುತ್ತಿದೆ. ಹಾಗಾಗಿ ಈ ಬದಲಾವಣೆ ಎಂದು ಮೂಲಗಳು ತಿಳಿಸಿವೆ.

    ಟೆಸ್ಟ್ ಕಿಟ್ ಕೊರತೆಯಿಲ್ಲ: ಈ ನಿರ್ಧಾರದ ಹಿಂದೆ ಟೆಸ್ಟ್ ಕಿಟ್ ಕೊರತೆಯಂತಹ ಯಾವುದೇ ಕಾರಣ ಇಲ್ಲ. ಬದಲಾಗಿ ಅರ್ಹರಿಗೆ ಚಿಕಿತ್ಸೆ ವಿಳಂಬವಾಗಬಾರದು ಎಂಬುದು ಉದ್ದೇಶ ಎನ್ನುತ್ತಾರೆ ಅಧಿಕಾರಿಗಳು. ಸದ್ಯಕ್ಕೆ ಜಿಲ್ಲೆಯಲ್ಲಿ 1 ಲಕ್ಷ ಆರ್‌ಟಿಪಿಸಿಆರ್ ಟೆಸ್ಟ್ ಕಿಟ್ ಲಭ್ಯವಿದೆ.

    ವಿಮಾನ ಪ್ರಯಾಣಿಕರೇ ಜಾಸ್ತಿ: ವಿಮಾನ ಪ್ರಯಾಣಿಕರು ಬೇರೆ ದೇಶಕ್ಕೆ ಹೋಗಬೇಕಾದರೆ ಈಗ ಟೆಸ್ಟ್ ವರದಿ ಕಡ್ಡಾಯ. ಸರ್ಕಾರಿ ಟೆಸ್ಟಿಂಗ್ ಈ ಮಾದರಿಯವರೇ ಹೆಚ್ಚು. ಇದರಿಂದಾಗಿ ರೋಗ ಲಕ್ಷಣ ಇರುವವರು, ನಿಜಕ್ಕೂ ಚಿಕಿತ್ಸೆಯ ಅಗತ್ಯ ಇರುವವರಿಗೆ ಆದ್ಯತೆ ನೀಡಲಾಗುತ್ತಿಲ್ಲ. ಈ ಕಾರಣದಿಂದ ವ್ಯವಸ್ಥೆ ಬದಲಾವಣೆ ಮಾಡಿಕೊಳ್ಳಲಾಗಿದೆ. ಪ್ರಯಾಣಿಕರು ಖಾಸಗಿ ಆಸ್ಪತ್ರೆಯ ಟೆಸ್ಟಿಂಗ್ ಕೇಂದ್ರಕ್ಕೆ ತೆರಳಿ ಟೆಸ್ಟ್ ಮಾಡಿಸಿಕೊಳ್ಳಬಹುದು ಎನ್ನುತ್ತಾರೆ ಅಧಿಕಾರಿಗಳು.

    ದಿನಕ್ಕೆ 4,500 ಕರೊನಾ ಟೆಸ್ಟ್: ಕರೊನಾ ಒಂದನೇ ಅಲೆಯ ಸಂದರ್ಭ ದಿನಕ್ಕೆ ಸರಾಸರಿ 1500ದಿಂದ 2000 ಟೆಸ್ಟ್ ಮಾಡಲಾಗುತ್ತಿತ್ತು. ಆದರೆ ಈಗ ಎರಡನೇ ಅಲೆಯಲ್ಲಿ ದಿನಕ್ಕೆ ಈ ಪ್ರಮಾಣ 4500ಕ್ಕೇರಿದೆ. ಹಿಂದೆ ಲ್ಯಾಬ್‌ಗಳ ಸಂಖ್ಯೆಯೂ ಕಡಿಮೆ ಇತ್ತು. ಈಗ 8 ಖಾಸಗಿ ಲ್ಯಾಬ್ ಇದ್ದರೆ ವೆನ್ಲಾಕ್‌ನಲ್ಲಿರುವ ಸರ್ಕಾರಿ ಲ್ಯಾಬ್‌ನಲ್ಲೇ ದಿನಕ್ಕೆ 2200 ಟೆಸ್ಟ್ ಮಾಡಲಾಗುತ್ತಿದೆ. ಕೆಲ ದಿನಗಳ ಹಿಂದೆ ಒಂದೇ ದಿನ ಜಿಲ್ಲೆಯಲ್ಲಿ 6000 ಟೆಸ್ಟ್ ಮಾಡಿಸಲಾಗಿದ್ದು, ಇದೊಂದು ದಾಖಲೆ. ಅನೇಕ ಬಾರಿ ದಿನಕ್ಕೆ 5000ದಷ್ಟು ಕೋವಿಡ್ ಟೆಸ್ಟ್ ಮಾಡಲಾಗಿದೆ.

    ಪ್ರಾಥಮಿಕ ಸಂಪರ್ಕ ಇದ್ದವರಾದರೂ, ರೋಗ ಲಕ್ಷಣ ಇದ್ದರಷ್ಟೇ ಆರ್‌ಟಿಪಿಸಿಆರ್ ಟೆಸ್ಟ್ ಮಾಡಲಾಗುತ್ತಿದೆ. ಅಗತ್ಯವಿಲ್ಲದೆ ರ‌್ಯಾಂಡಮ್ ಟೆಸ್ಟ್ ಮಾಡಿ ಪ್ರಯೋಜನವಿಲ್ಲ. ವ್ಯವಸ್ಥೆಯ ಮೇಲೆ ಇನ್ನಷ್ಟು ಒತ್ತಡವಾಗುತ್ತದೆ. ಹಾಗಾಗಿ ಜನರು ರೋಗಲಕ್ಷಣ ಇದ್ದರೆ ಮಾತ್ರವೇ ಟೆಸ್ಟ್ ಮಾಡಿಸಿಕೊಳ್ಳಬೇಕು.
    – ಡಾ.ಕಿಶೋರ್ ಕುಮಾರ್ ಡಿಎಚ್‌ಒ, ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts