More

    ಮೊದಲ ದಿನ 220 ಮಂದಿ ಪರೀಕ್ಷೆ: ಕೇರಳ ಗಡಿಯಲ್ಲಿ ಮುಂದುವರಿದ ತಪಾಸಣೆ

    ಮಂಗಳೂರು/ಮಂಜೇಶ್ವರ: ರಾ.ಹೆ.66ರಲ್ಲಿ ಕೇರಳ-ಕರ್ನಾಟಕ ಗಡಿಯಲ್ಲಿ ಸೋಮವಾರ ಕೇರಳದಿಂದ ಆಗಮಿಸಿದ 220 ಮಂದಿಗೆ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲಾಗಿದ್ದು, ಅವರಲ್ಲಿ ಯಾರೊಬ್ಬರೂ ಪಾಸಿಟಿವ್ ಆಗಿಲ್ಲ. ಮಂಗಳವಾರದ ಅಂಕಿಅಂಶ ಲಭ್ಯವಾಗಿಲ್ಲ.

    ಹೊಸ ಆದೇಶ ಜಾರಿ ಬಳಿಕ ಅಗತ್ಯ ಕೆಲಸಗಳಿಗೆ ಕೇರಳ ಕಡೆಯಿಂದ ಕರ್ನಾಟಕ ಪ್ರವೇಶಿಸುವವರಿಗೆ ಸಮಸ್ಯೆ ಆಗಿಲ್ಲ. ಟೆಸ್ಟ್ ವರದಿ ಇಲ್ಲದವರಿಗೆ ಸ್ಥಳದಲ್ಲೇ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ. ಉಭಯ ರಾಜ್ಯಗಳ ಅಂತಾರಾಜ್ಯ ಬಸ್ ಸಂಚಾರ ಮುಂದುವರಿದಿದೆ.
    ಕಾಸರಗೋಡಿನಿಂದ ಮಂಗಳೂರು ಕಡೆಗೆ ಸಾಗುವ ಎಲ್ಲ ವಾಹನಗಳನ್ನು ನಿಲ್ಲಿಸಿ ಆರ್‌ಟಿಪಿಸಿಆರ್ ನೆಗೆಟಿವ್ ಪ್ರಮಾಣ ಪತ್ರ ಇದ್ದವರಿಗೆ ಮಾತ್ರ ಗಡಿ ದಾಟಲು ಅನುಮತಿ ನೀಡಲಾಗಿದೆ. ಪ್ರಮಾಣಪತ್ರ ಇಲ್ಲದವರಿಗೆ ಸ್ಥಳದಲ್ಲೇ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಿ ಮೊಬೈಲ್‌ಗೆ ಬರುವ ಸಂದೇಶವನ್ನು ತಪಾಸಣಾ ನಿರತ ಅಧಿಕಾರಿಗಳಿಗೆ ತೋರಿಸಿ ಸಂಚರಿಸಲು ಅನುಮತಿ ನೀಡಲಾಗಿತ್ತು. ಆದರೆ ಕಾಸರಗೋಡು-ಮಂಗಳೂರು ರಸ್ತೆಯಲ್ಲಿ ಸಾಗುವ ಬಸ್‌ಗಳಲ್ಲಿ ತಪಾಸಣೆ ಇಲ್ಲದೆ ಪ್ರಯಾಣ ಕಂಡುಬಂದಿದೆ.

    ಬಸ್ ಪ್ರಯಾಣಿಕರು ಆರ್‌ಟಿಪಿಸಿಆರ್ ನೆಗೆಟಿವ್ ಪ್ರಮಾಣ ಪತ್ರ ಇಲ್ಲದೆ ಬಸ್ ಸಂಚಾರ, ಪ್ರಯಾಣಕ್ಕೆ ಅವಕಾಶ ನೀಡಬಾರದೆಂದು ಬಸ್ ನಿರ್ವಾಹಕರಿಗೆ ಈ ಹಿಂದೆಯೇ ಆದೇಶ ನೀಡಲಾಗಿತ್ತು. ಇಲಾಖೆ ಮತ್ತು ಮಂಗಳೂರು ವೆನ್ಲಾಕ್ ಆಸ್ಪತ್ರೆ ಸಿಬ್ಬಂದಿ ಸೋಮವಾರದಿಂದಲೇ ತಪಾಸಣೆಯಲ್ಲಿ ನಿರತರಾಗಿದ್ದಾರೆ. ಕಾಸರಗೋಡು ಜಿಲ್ಲೆಯ ಸಾರಡ್ಕ, ಪಂಜಿಕಲ್ಲು, ಸ್ವರ್ಗ, ಮುಳಿಗದ್ದೆ- ಮುಗುಳಿ, ಬೆರಿಪದವು ಮೊದಲಾದ ಅಂತಾರಾಜ್ಯ ಗಡಿಗಳಲ್ಲಿ ತಪಾಸಣೆ ಆರಂಭಿಸಲಾಗಿದೆ. ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ವಿಭಾಗದ ಶೈಲಜಾ ಖಾರ್ವಿ ತಲಪಾಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

    26 ಮಂದಿಗೆ ಕೋವಿಡ್ ಪಾಸಿಟಿವ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ 19 ಮಂದಿಯಲ್ಲಿ (ಶೇ.0.39) ಕರೊನಾ ಸೋಂಕು ದೃಢಪಟ್ಟಿದ್ದು, ಎಂಟು ಮಂದಿ ಸೋಂಕಿನಿಂದ ಮುಕ್ತರಾಗಿದ್ದಾರೆ. 147 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ಒಟ್ಟು 1,15,881 ಮಂದಿ ಸೋಂಕಿಗೊಳಗಾಗಿದ್ದು, 1,14,040 ಮಂದಿ ಗುಣವಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಮಂಗಳವಾರ 7 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ. 1,602 ಮಂದಿಯನ್ನು ಪರೀಕ್ಷಿಸಲಾಗಿದ್ದು, ಪಾಸಿಟಿವಿಟಿ ದರ ಶೇ.0.43ರಷ್ಟಿದೆ. ಸೋಂಕಿತರಲ್ಲಿ 4 ಮಂದಿ ಉಡುಪಿ ಹಾಗೂ ಮೂವರು ಕುಂದಾಪುರ ತಾಲೂಕಿನವರು. ಐವರು ರೋಗಲಕ್ಷಣ ಹೊಂದಿದ್ದು, ಎಲ್ಲರೂ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 6 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, 58 ಸಕ್ರಿಯ ಪ್ರಕರಣಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts