More

    ಪ್ರೊ ಕಬಡ್ಡಿ ಲೀಗ್‌ಗೆ ಕರೊನಾ ಕಾಟ, 2 ತಂಡಗಳ ಆಟಗಾರರಿಗೆ ಅಂಟಿದ ವೈರಸ್!

    ಬೆಂಗಳೂರು: ಕಳೆದ ಒಂದು ತಿಂಗಳಿನಿಂದ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸುರಕ್ಷಿತ ಬಯೋಬಬಲ್‌ನಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದ ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿಗೆ ಇದೀಗ ಕರೊನಾ ವೈರಸ್ ತೊಂದರೆ ನೀಡಿದೆ. ಪಟನಾ ಪೈರೇಟ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡದ ಕೆಲ ಆಟಗಾರರು ಕರೊನಾ ಸೋಂಕಿತರಾಗಿದ್ದಾರೆ. ಇದರಿಂದಾಗಿ ಈ 2 ತಂಡಗಳ ಕೆಲ ಪಂದ್ಯ ಮುಂದೂಡಿಕೆಯಾಗಿವೆ.

    ಟೂರ್ನಿಯಲ್ಲಿ ಪಟನಾ ಪೈರೇಟ್ಸ್ ತಂಡ ಜನವರಿ 18ರಂದು ತನ್ನ ಕೊನೇ ಪಂದ್ಯ ಆಡಿದ್ದರೆ, ಗುಜರಾತ್ ಜೈಂಟ್ಸ್ ತಂಡ ಜನವರಿ 20ರಂದು ಕೊನೇ ಪಂದ್ಯ ಆಡಿತ್ತು. ಇವೆರಡು ತಂಡಗಳಿಗೆ ಸದ್ಯ ಕಣಕ್ಕಿಳಿಸಲು ಬೇಕಾದ ಕನಿಷ್ಠ 12 ಆಟಗಾರರೂ ಲಭ್ಯರಿಲ್ಲ ಎನ್ನಲಾಗಿದೆ.

    ಇದರಿಂದಾಗಿ ಟೂರ್ನಿಯ ವೇಳಾಪಟ್ಟಿ ಅಲ್ಪ ಬದಲಾವಣೆ ಕಂಡಿದ್ದು, ಇನ್ನು ಮಂಗಳವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಕೇವಲ 1 ಪಂದ್ಯವಷ್ಟೇ ನಡೆಯಲಿದೆ. ಪಂದ್ಯಗಳು ರಾತ್ರಿ 7.30ಕ್ಕೆ ಆರಂಭಗೊಳ್ಳಲಿವೆ. ಮುಂದಿನ ಶನಿವಾರ 3 ಪಂದ್ಯಗಳು (ಟ್ರಿಪಲ್ ಹೆಡರ್ಸ್‌) ನಡೆಯುವುದಿಲ್ಲ. ಶನಿವಾರ ಮತ್ತು ಭಾನುವಾರ ತಲಾ 2 ಪಂದ್ಯಗಳಷ್ಟೇ ನಡೆಯಲಿವೆ.

    ಬೆಂಗಾಲ್ ವಾರಿಯರ್ಸ್‌ಗೆ ಭರ್ಜರಿ ಜಯ
    ನಾಯಕ ಮಣಿಂದರ್ ಸಿಂಗ್ (13) ಯಶಸ್ವಿ ರೈಡಿಂಗ್‌ಗಳ ನೆರವಿನಿಂದ ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್‌ ತಂಡ ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿಯಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಜೈಪುರ ಪಿಂಕ್‌ಪ್ಯಾಂಥರ್ಸ್‌ ವಿರುದ್ಧ 41-22ರಿಂದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಬೆಂಗಾಲ್ (41) ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಮೊದಲಾರ್ಧದಲ್ಲಿ 14-11ರಿಂದ ಅಲ್ಪ ಮುನ್ನಡೆ ಕಂಡಿದ್ದ ಬೆಂಗಾಲ್, 3 ಬಾರಿ ಜೈಪುರ ತಂಡವನ್ನು ಆಲೌಟ್ ಬಲೆಗೆ ಬೀಳಿಸುವ ಮೂಲಕ ಸಂಪೂರ್ಣ ಮೇಲುಗೈ ಸಾಧಿಸಿತು.

    ಡೆಲ್ಲಿಗೆ ಆಘಾತ
    ಅಗ್ರಸ್ಥಾನಕ್ಕೆ ಮರಳುವ ಹಂಬಲದಲ್ಲಿದ್ದ ದಬಾಂಗ್ ಡೆಲ್ಲಿ ತಂಡ ದಿನದ 2ನೇ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ವಿರುದ್ಧ 25-42ರಿಂದ ಆಘಾತಕಾರಿ ಸೋಲು ಎದುರಿಸಿತು. ಡೆಲ್ಲಿ ಮೊದಲಾರ್ಧದಲ್ಲಿ 13-25ರಿಂದ ಹಿನ್ನಡೆ ಅನುಭವಿಸಿತ್ತು. ಡೆಲ್ಲಿ (43) 2ನೇ ಸ್ಥಾನದಲ್ಲೇ ಉಳಿದರೆ, ಬೆಂಗಳೂರು ಬುಲ್ಸ್ (46) ಅಗ್ರಸ್ಥಾನ ಕಾಯ್ದುಕೊಂಡಿತು.

    ಐಪಿಎಲ್‌ಗೆ ಸೇರ್ಪಡೆಯಾದ ಹೊಸ ತಂಡ ಲಖನೌ ಹೆಸರು ಅನಾವರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts