More

    ಮಳಿಗೆ ಮುಚ್ಚಿಸಿದ ಪೊಲೀಸ್ ಕಮಿಷನರ್

    ಮಂಗಳೂರು: ನಗರ ವ್ಯಾಪ್ತಿಯಲ್ಲಿ ಕರೊನಾ ಮಾರ್ಗಸೂಚಿ ಉಲ್ಲಂಘನೆ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮತ್ತು ಡಿಸಿಪಿ ಹರಿರಾಂ ಶಂಕರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರು.

    ಹಂಪನಕಟ್ಟೆ, ಮಾರ್ಕೆಟ್ ರಸ್ತೆ, ಹಳೇ ಬಸ್ ನಿಲ್ದಾಣ, ಬಲ್ಮಠ ರಸ್ತೆ, ಪಳ್ನೀರ್ ರಸ್ತೆ, ಕಂಕನಾಡಿವರೆಗೆ ರೌಂಡಪ್ ನಡೆಸಿದ ಕಮಿಷನರ್ ಮಾರ್ಗಸೂಚಿ ಉಲ್ಲಂಘನೆ ಮಾಡಿ ತೆರೆದಿಟ್ಟ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದರು. ಕೆಲವು ಮಳಿಗೆಗಳನ್ನು ಕೂಡಲೇ ಬಂದ್ ಮಾಡುವಂತೆ ಸೂಚನೆ ನೀಡಿದರು. ನಿಯಮ ಮೀರಿಯೂ ವ್ಯವಹಾರ ನಡೆಸಿದ ಕೆಲವು ಮಳಿಗೆಗಳ ಮೇಲ್ವಿಚಾರಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

    ನಿಯಮ ಪಾಲಿಸಿದವರಿಗೆ ಗುಲಾಬಿ: ಮಾರ್ಗಸೂಚಿ ಪಾಲಿಸಿದ ಸಾರ್ವಜನಿಕರಿಗೆ ಗುಲಾಬಿ ಹೂ ನೀಡಿ ಅಭಿನಂದಿಸಿ, ಮುಂದಿನ ದಿನಗಳಲ್ಲೂ ಜಾಗೃತರಾಗುವಂತೆ ಸೂಚನೆ ನೀಡಿದರು.
    ನಗರದ ಬಲ್ಮಠ ರಸ್ತೆಯಲ್ಲಿ ಬಸ್ ಹತ್ತಿದ ಪೊಲೀಸ್ ಕಮಿಷನರ್ ಮತ್ತು ಡಿಸಿಪಿಯವರು ಪ್ರಯಾಣಿಕರನ್ನು ಪರಿಶೀಲನೆ ನಡೆಸಿದರು. ಬಸ್‌ನಲ್ಲಿ ಮಾಸ್ಕ್ ಹಾಕಿ ಕುಳಿತಿದ್ದ ತಾಯಿ, ಮಗುವಿಗೆ ಗುಲಾಬಿ ನೀಡಿ ಅಭಿನಂದಿಸಿದರು. ರಸ್ತೆಯಲ್ಲಿ ಮಾಸ್ಕ್ ಹಾಕಿ ಸಾಗುತ್ತಿದ್ದ ಹಿರಿಯ ನಾಗರಿಕರಿಗೆ ಗುಲಾಬಿ ನೀಡಿದ ಕಮಿಷನರ್, ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿದರು. ಬಲ್ಮಠ ರಸ್ತೆಯಲ್ಲಿ ನಗರಕ್ಕೆ ಬಂದ ಕುಟುಂಬವೊಂದರ 6 ಮಂದಿಗೂ ಗುಲಾಬಿ ನೀಡಿ ಕೋವಿಡ್ ನಿಯಮ ಪಾಲನೆಗೆ ಅಭಿನಂದಿಸಿದರು.
    ಕಾರ್ಯಾಚರಣೆ ವೇಳೆ ನಗರ ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ನಟರಾಜ್ ಮತ್ತು ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

    ಕಮಿಷನರ್ ಹಿಂತಿರುಗಿದ ತಕ್ಷಣ ಓಪನ್!: ಫಳ್ನೀರ್, ಹಂಪನಕಟ್ಟೆ, ಬಲ್ಮಠ ರಸ್ತೆಯಲ್ಲಿರುವ ಚಿನ್ನದ ಅಂಗಡಿ ಪ್ರವೇಶಿಸಿದ ಕಮಿಷನರ್ ತಂಡ ಪರಿಶೀಲಿಸಿ, ಎಲ್ಲ ಮಳಿಗೆಗಳನ್ನು ಕೂಡಲೇ ಬಂದ್ ಮಾಡುವಂತೆ ಸೂಚನೆ ನೀಡಿದರು. ಆದರೆ ಪಳ್ನೀರ್‌ನಲ್ಲಿರುವ ಚಿನ್ನ ಮಾರಾಟದ ಮಳಿಗೆ ಕಮಿಷನರ್ ವಾಪಸ್ ತೆರಳಿದ ಕೆಲವೇ ಕ್ಷಣದಲ್ಲಿ ಮತ್ತೆ ತೆರೆದುಕೊಂಡಿತು. ಕಮಿಷನರ್ ಅಂಗಡಿಗಳ ಮೇಲ್ವಿಚಾರಕರನ್ನು ಕರೆದು ವಿಚಾರಣೆ ನಡೆಸಿದರು. ಮಳಿಗೆಯೊಳಗಿದ್ದ ಸಿಬ್ಬಂದಿ, ಗ್ರಾಹಕರನ್ನು ಹೊರಗೆ ಕಳುಹಿಸುವಂತೆ ಸೂಚನೆ ನೀಡಿ ತೆರಳಿದರು. ಆದರೆ ಕಮಿಷನರ್ ಮಳಿಗೆಯಿಂದ ಹೊರತೆರಳಿದ 5 ನಿಮಿಷ ಬಳಿಕ ಮತ್ತೆ ಚಿನ್ನದ ಮಳಿಗೆ ತೆರೆದಿದ್ದು, ವ್ಯವಹಾರ ಪುನರಾರಂಭಿಸಿತು. ಈ ಬಗ್ಗೆ ಕಮಿಷನರ್ ಗಮನಕ್ಕೆ ತಂದಾಗ ಆ ಮಳಿಗೆ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts