More

    ಕೋವಿಡ್ ಪರೀಕ್ಷೆ ವಿಳಂಬ, ಕ್ವಾರಂಟೈನ್ 14 ದಿನಕ್ಕೆ ಮುಗಿಯಲ್ಲ

    ಉಡುಪಿ: ಹೊರ ರಾಜ್ಯಗಳಿಂದ ಆಗಮಿಸಿದ ಜಿಲ್ಲೆಯ ನಿವಾಸಿಗಳನ್ನು ಕ್ವಾರಂಟೈನ್ ಮಾಡಲಾಗಿದ್ದು, ಹಂತಹಂತವಾಗಿ ಗಂಟಲ ದ್ರವ ತೆಗೆದು ಕೋವಿಡ್-19 ಪರೀಕ್ಷೆಗೆ ಕಳಿಸಲಾಗುತ್ತಿದೆ. ಲ್ಯಾಬ್‌ಗಳಲ್ಲಿ ಹೆಚ್ಚಿದ ಒತ್ತಡದಿಂದಾಗಿ ವರದಿ ಬರುವುದು ವಿಳಂಬವಾಗುತ್ತಿದೆ. ಹೀಗಾಗಿ ಕ್ವಾರಂಟೈನ್ ಒಳಪಟ್ಟವರ 14 ದಿನದ ಅವಧಿ ವಿಸ್ತರಣೆಯಾಗಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಈವರೆಗೆ ಆಗಮಿಸಿದ ಎಲ್ಲ 8010 ಮಂದಿಯೂ ಕ್ವಾರಂಟೈನ್‌ನಲ್ಲಿದ್ದಾರೆ. 3600 ಮಂದಿಯದು ಮಾತ್ರ ಗಂಟಲ ದ್ರವ ತೆಗೆದು ಪರೀಕ್ಷೆಗೆ ಕಳಿಸಲಾಗಿದೆ. ಇದರಲ್ಲಿ ಬಹುತೇಕ ಮಂದಿಯ ವರದಿ ಬರಲು ಬಾಕಿ ಇದೆ. ಕೋವಿಡ್ ಪರೀಕ್ಷೆ ನಡೆಸದೆ ಯಾರನ್ನೂ ಮನೆಗೆ ಕಳುಹಿಸುವುದಿಲ್ಲ. ಪ್ರಸ್ತುತ ಮಣಿಪಾಲ ಕೆಎಂಸಿಯಲ್ಲಿ ಮಾತ್ರ ಪ್ರಯೋಗಾಲಯ ಇದೆ. ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಲ್ಯಾಬ್ ಕಾರ್ಯಾಚರಿಸಲು ಇನ್ನೂ ಮೂರು ವಾರ ಬೇಕಾಗಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪರೀಕ್ಷೆ ಮಾಡಬೇಕಿದ್ದು, ಇದಕ್ಕಾಗಿ ಮಂಗಳೂರಿನ ವೆನ್ಲಾಕ್, ಕೆಎಂಸಿ ಮತ್ತು ಯೇನೆಪೋಯ ಹಾಗೂ ಶಿವಮೊಗ್ಗ ಲ್ಯಾಬ್‌ಗಳಿಗೆ ಕೋರಿಕೆ ಸಲ್ಲಿಸಲಾಗಿದ್ದು, ಸೀಮಿತ ಸಂಖ್ಯೆ ಮಾದರಿಗಳ ವರದಿ ನೀಡುವ ಭರವಸೆ ದೊರೆತಿದೆ ಎಂದರು.

    ಕ್ವಾರಂಟೈನ್ ಕೇಂದ್ರ ಭರ್ತಿ: ಜಿಲ್ಲೆಯ ಬಹುತೇಕ ಕ್ವಾರಂಟೈನ್ ಕೇಂದ್ರಗಳು ಭರ್ತಿಯಾಗಿವೆ. ಮಹಾರಾಷ್ಟ್ರ 7226, ತಮಿಳುನಾಡು 74, ತೆಲಂಗಾಣ 425, ಆಂಧ್ರಪ್ರದೇಶ 43, ಗೋವಾ 53, ಗುಜರಾತ್ 42, ಮಧ್ಯಪ್ರದೇಶ 1, ದೆಹಲಿ 26, ಹರಿಯಾಣ 1, ಚಂಡೀಗಢ 1, ಒಡಿಶಾ 1, ಪಶ್ಚಿಮ ಬಂಗಾಳ 6, ರಾಜಸ್ಥಾನ 6, ಪಂಜಾಬ್ 12, ಕೇರಳ 93 ಮಂದಿ ಸೇರಿದಂತೆ ಒಟ್ಟು 8010 ಮಂದಿ ಅಗಮಿಸಿದ್ದಾರೆ ಎಂದು ಡಿಸಿ ತಿಳಿಸಿದರು. ಕ್ವಾರಂಟೈನ್ ಕೇಂದ್ರದಿಂದ ಕೆಲವರು ಹೊರಬರುತ್ತಿರುವ ಬಗ್ಗೆ ಮಾಹಿತಿಯಿದ್ದು, ಅಂತಹವರ ವಿರುದ್ಧ ಸೆಕ್ಷನ್ 188 ಪ್ರಕಾರ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು. ಪಾಸ್ ಇಲ್ಲದೆ ಜಿಲ್ಲೆ ಪ್ರವೇಶಿಸಿದವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕ್ವಾರಂಟೈನ್ ಕೇಂದ್ರದಲ್ಲಿರುವವರಿಗೆ ಮನೆ ಊಟಕ್ಕೆ ಅವಕಾಶವಿಲ್ಲ ಎಂದರು.
    ಜಿಲ್ಲಾ ಪಂಚಾಯಿತಿ ಸಿಇಒ ಪ್ರೀತಿ ಗೆಹ್ಲೋಟ್, ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು ಸುದ್ದಿಗೋಷ್ಠಿಯಲ್ಲಿದ್ದರು.

    ಸೋಂಕಿತರು ಹೆಚ್ಚಾಗುವ ಸಾಧ್ಯತೆ: ಸೋಂಕಿತರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಇದಕ್ಕಾಗಿ ಈಗಾಗಲೇ ಇರುವ ಟಿಎಂಎ ಪೈ ಕೋವಿಡ್ ಆಸ್ಪತ್ರೆಯ ಜತೆಗೆ ಕುಂದಾಪುರದಲ್ಲಿ 125 ಹಾಸಿಗೆಗಳ ಕೋವಿಡ್ ಪ್ರತ್ಯೇಕ ವಾರ್ಡ್ ಆರಂಭಿಸಲಾಗಿದೆ. ಕಾರ್ಕಳ ತಾಲೂಕು ಆಸ್ಪತ್ರೆಯಲ್ಲಿ 75, ಉದ್ಯಾವರ ಎಸ್.ಡಿ.ಎಂನಲ್ಲಿ 90, ಕಾರ್ಕಳ ಭುವನೇಂದ್ರ ಹಾಸ್ಟೆಲ್‌ನಲ್ಲಿ 58 ಹಾಸಿಗೆಗಳ ಚಿಕಿತ್ಸಾ ಸೌಲಭ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts