More

    ದಕ್ಷಿಣ ಕನ್ನಡದಲ್ಲಿ ಕೊವಿಡ್ ಹೊಸ ಪ್ರಕರಣವಿಲ್ಲ

    ಮಂಗಳೂರು: ದಕ್ಷಿಣ ಕನ್ನಡದಲ್ಲಿ ಬುಧವಾರ ಯಾವುದೇ ಕರೊನಾ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ.
    ಬುಧವಾರ 44 ಮಂದಿಯ ತಪಾಸಣೆ ನಡೆಸಲಾಗಿದ್ದು, ಮನೆಯ ನಿಗಾವಣೆಯಲ್ಲಿ ಉಳಿದಿರುವವರು ಕೇವಲ 4 ಮಂದಿ. ಎನ್‌ಐಟಿಕೆ ಸುರತ್ಕಲ್‌ನಲ್ಲಿ 49, ಇಎಸ್‌ಐ ಆಸ್ಪತ್ರೆಯಲ್ಲಿ 10 ಮಂದಿ ನಿಗಾವಣೆಯಲ್ಲಿದ್ದಾರೆ. ಈವರೆಗೆ 6069 ಮಂದಿ 28 ದಿನಗಳ ನಿಗಾವಣೆ ಪೂರ್ತಿಗೊಳಿಸಿರುತ್ತಾರೆ.

    ಬುಧವಾರ 151 ಸ್ಯಾಂಪಲ್‌ಗಳನ್ನು ಲ್ಯಾಬ್‌ಗೆ ಕಳುಹಿಸಿದ್ದು, ಬಂದಿರುವ ಎಲ್ಲ 85ರ ವರದಿಯೂ ನೆಗೆಟಿವ್ ಆಗಿದೆ. ಇನ್ನೂ 495ರ ವರದಿ ಬರಲು ಬಾಕಿ ಇದೆ. 11 ಮಂದಿಯನ್ನು ನಿಗಾದಲ್ಲಿ ಇರಿಸಲಾಗಿದೆ. ಉಸಿರಾಟದ ತೊಂದರೆ ಇರುವ 12ರಷ್ಟು ಮಂದಿಯನ್ನು ಪತ್ತೆ ಮಾಡಿದ್ದು, ಅವರಲ್ಲೊಬ್ಬರನ್ನು ವೆನ್ಲಾಕ್‌ಗೆ ಶಿಫಾರಸು ಮಾಡಿರುವುದಾಗಿ ಕೊವಿಡ್ ಬುಲೆಟಿನ್‌ನಲ್ಲಿ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.

    ಬಂಟ್ವಾಳದಲ್ಲಿ ಏ.19ರಂದು ಕೊವಿಡ್‌ನಿಂದ ಮೃತಪಟ್ಟ ಮಹಿಳೆಯ ಪುತ್ರ, ಪತಿ ಸೇರಿದಂತೆ ಮನೆಯ ಎಲ್ಲ ಸದಸ್ಯರ ಸ್ಯಾಂಪಲ್ ವರದಿಯೂ ನೆಗೆಟಿವ್ ಬಂದಿದೆ. ಈವರೆಗೆ ದ.ಕ ಜಿಲ್ಲೆಯಲ್ಲಿ 16 ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಓರ್ವರು ಸಾವನ್ನಪ್ಪಿದ್ದಾರೆ. 12 ಮಂದಿ ಬಿಡುಗಡೆಯಾಗಿದ್ದು ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 21ರಂದು ಕರೊನಾ ಪಾಸಿಟಿವ್ ಆಗಿರುವ ಬಂಟ್ವಾಳದ 67ರ ಹರೆಯದ ವೃದ್ಧೆಯ ಆರೋಗ್ಯ ಯಥಾಸ್ಥಿತಿಯಲ್ಲಿದೆ. ಅವರಿಗೆ ಐಸಿಯುನಲ್ಲಿ ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಉಸಿರಾಟ ತೊಂದರೆ, ಮಹಿಳೆ ಆಸ್ಪತ್ರೆಗೆ
    ವಿಟ್ಲ: ತೀವ್ರ ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಕರೋಪಾಡಿ ಗ್ರಾಮದ ಮಹಿಳೆಯನ್ನು ಬುಧವಾರ ಬಂಟ್ವಾಳ ಆಸ್ಪತ್ರೆಗೆ ದಾಖಲಿಸಲಾಯಿತು. 50 ವರ್ಷ ಪ್ರಾಯದ ಮಹಿಳೆಗೆ ಮಧ್ಯಾಹ್ನ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಲಾಯಿತು. ಸ್ಥಳೀಯ ಆಸ್ಪತ್ರೆಯವರ ಮಾಹಿತಿ ಪ್ರಕಾರ ಬಂಟ್ವಾಳದಿಂದ ಆಗಮಿಸಿದ ವಿಶೇಷ ತಂಡ ಅವರನ್ನು ಬಂಟ್ವಾಳ ಆಸ್ಪತ್ರೆಗೆ ವರ್ಗಾವಣೆ ಮಾಡಿತು. ಎರಡು ವರ್ಷಗಳಿಂದ ಇವರಿಗೆ ಉಸಿರಾಟದ ಸಮಸ್ಯೆ ಆಗಾಗೆ ಉಂಟಾಗುತ್ತಿತ್ತು ಎನ್ನಲಾಗಿದೆ. ಕರೊನಾ ಪ್ರಕರಣಗಳು ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಅವರ ಮೇಲೆ ನಿಗಾ ಇಡಲಾಗಿದೆ.

    13 ಮಂದಿಯ ಮಾದರಿ ಸಂಗ್ರಹ
    ಉಡುಪಿ: ಐಸೋಲೇಷನ್ ವಾರ್ಡ್‌ಗೆ ಬುಧವಾರ 11 ಮಂದಿ ಕರೊನಾ ಶಂಕಿತ ರೋಗಿಗಳು ದಾಖಲಾಗಿದ್ದು, ಒಟ್ಟು 52 ಮಂದಿಯ ಬಗ್ಗೆ ನಿಗಾ ಇರಿಸಲಾಗಿದೆ. 2ನೇ ಹಂತದ ಸಂಪರ್ಕ ಹೊಂದಿದವರ ಮಾದರಿ ಪರೀಕ್ಷೆ ಹಿನ್ನೆಲೆಯಲ್ಲಿ ಒಟ್ಟು 13 ಮಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಒಂದು ನೆಗೆಟಿವ್ ವರದಿ ವೈದ್ಯರ ಕೈ ಸೇರಿದೆ. ಈವರೆಗೆ ಕಳುಹಿಸಿದ ಒಟ್ಟು 110 ಮಂದಿಯ ವರದಿ ನಿರೀಕ್ಷಿಸಲಾಗುತ್ತಿದೆ. 29 ಮಂದಿ 28 ದಿನಗಳ ನಿಗಾ ಪೂರೈಸಿದ್ದು, 65 ಮಂದಿ 14 ದಿನಗಳ ನಿಗಾ ಅವಧಿ ಪೂರೈಸಿದ್ದಾರೆ. 14 ಮಂದಿ ಹಾಸ್ಪಟಲ್ ಕ್ವಾರೆಂಟೈನ್‌ನಲ್ಲಿದ್ದಾರೆ.

    ಕಾಸರಗೋಡಲ್ಲಿ ಹೊಸ ಪ್ರಕರಣವಿಲ್ಲ
    ಕಾಸರಗೋಡು: ಜಿಲ್ಲೆಯಲ್ಲಿ ಬುಧವಾರ ಕೊವಿಡ್ 19 ವೈರಸ್ ಪ್ರಕರಣ ದಾಖಲಾಗಿಲ್ಲ. ಜಿಲ್ಲೆಯಲ್ಲಿ ಇದುವರೆಗೆ 146 ಮಂದಿ ಗುಣಮುಖರಾಗಿದ್ದು, ಪ್ರಸಕ್ತ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ 26 ಮಂದಿ ಚಿಕಿತ್ಸೆಯಲ್ಲಿದ್ದಾರೆ. ಜಿಲ್ಲೆಯಲ್ಲಿ 3741ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 3685ಮಂದಿ ಮನೆಗಳಲ್ಲಿ ಹಾಗೂ 56ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಆದರೆ, ಕೇರಳದಲ್ಲಿ ಹನ್ನೊಂದು ಪಾಸಿಟಿವ್ ಪ್ರಕರಣ ಕಾಣಿಸಿಕೊಂಡಿದೆ. ಕಣ್ಣೂರು ಜಿಲ್ಲೆಯಲ್ಲಿ ಏಳು, ಕೋಯಿಕ್ಕೋಡ್ ಎರಡು, ಕೋಟ್ಟಾಯಂ ಹಾಗೂ ಮಲಪ್ಪುರಂನಲ್ಲಿ ತಲಾ ಒಬ್ಬರಲ್ಲಿ ವೈರಸ್ ಕಾಣಿಸಿಕೊಂಡಿದೆ. ಕಣ್ಣೂರು, ರಾಜ್ಯದಲ್ಲಿ ಹೆಚ್ಚಿನ ಕೋವಿಡ್-19 ವೈರಸ್‌ಬಾಧಿತರನ್ನು ಹೊಂದಿರುವ ಜಿಲ್ಲೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts