More

    ಭಕ್ತಿಗೆ ಒಲಿದು ಬಂದ ಪರಮಾತ್ಮ ಪ್ರಭು ವಿಠ್ಠಲ

    ಚಿತ್ರದುರ್ಗ: ನಗರದ ಹಳೇ ಮಾರುಕಟ್ಟೆ ರಸ್ತೆಯಲ್ಲಿರುವ ರುಕ್ಮಿಣಿ, ಸತ್ಯಭಾಮಾ ದೇವಿಯರ ಸಮೇತ ನೆಲೆನಿಂತ ಪಾಂಡುರಂಗ ವಿಠ್ಠಲ ಸ್ವಾಮಿ ಭಕ್ತಿಗೆ ಒಲಿಯುವ ಕರುಣಾಮಯಿಯಾಗಿದ್ದಾನೆ.

    ಸುಮಾರು 400ಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ ಈ ದೇಗುಲ ತ್ಯಾಗರಾಜ ಬೀದಿಯಲ್ಲಿ ನಿರ್ಮಿತವಾಗಿದ್ದು, ಭಕ್ತರನ್ನು ಆಕರ್ಷಿಸುತ್ತಿದೆ. ಬೇಡಿದ ಇಷ್ಟಾರ್ಥ ಈಡೇರಿಸುವ ಈ ದೈವವನ್ನು ಹಿಂದು ಧರ್ಮದ ಬಹುತೇಕ ಸಮುದಾಯದವರು ಆರಾಧಿಸುತ್ತ ಬಂದಿದ್ದಾರೆ.

    1742ರಲ್ಲಿ ಮೈಸೂರು ಮಹಾಸಂಸ್ಥಾನದ ಅರಸರು, ರಾಜವೀರ ಮದಕರಿನಾಯಕರ ಕಾಲದಿಂದಲೂ ಸ್ವಾಮಿಯ ಬ್ರಹ್ಮ ರಥೋತ್ಸವ ನಡೆಯುತ್ತಿದೆ. ಅಂದಿನಿಂದಲೂ ಭಕ್ತಿಪೂರ್ವಕವಾಗಿ ಆಚರಿಸುತ್ತ ಬರಲಾಗಿದೆ.

    ಸ್ವಾಮಿ ನೆಲೆಯೂರಲು ಕಾರಣ: ಹರಿ ಸರ್ವೋತ್ತಮ, ವಾಯು ಜೀವೋತ್ತಮ ಎಂಬ ನಂಬಿಕೆ ಭಕ್ತರಲ್ಲಿ ಬೇರೂರಿದೆ. ತಾಡಪತ್ರಿ ವಂಶದವರು ಸ್ವಪ್ನದಲ್ಲಿ ಕರುಣಾಂತರಂಗನ ಕಂಡರು. ಅದನ್ನು ಆತ್ಮೀಯರಲ್ಲಿ ಹಂಚಿಕೊಂಡರು. ಸ್ವಪ್ನ ಸೂಚಿತ ಸ್ಥಳಕ್ಕೆ ಭಕ್ತಿಯಲ್ಲಿ ಹೊರಟು ಹರಿಹರದ ಕೊಡೆಯಾಲ ಬಳಿ ನಿಂದರು. ತುಂಗಭದ್ರೆಯಲ್ಲಿ ಮಿಂದು ಪೂಜಿಸಿದರು. ನಂತರ ತೀರದ ಮಡಿಲಲ್ಲಿದ್ದ ಪಾಂಡುರಂಗನ ದರ್ಶನವಾಯಿತು.

    ಕರಿಶಿಲೆಯ ಮುಗುಳುನಗೆಯ ಸುಂದರ ಪಾಂಡುರಂಗ ಕಟಿಯಲ್ಲಿ ಕರವಿಟ್ಟ ವಿಠ್ಠಲ ನವಮೋಹನಾಂಗನಾದ ಸ್ವಾಮಿಯನ್ನು ಭಜಿಸಿ, ಬಹು ಭಕುತಿಯಲ್ಲಿ ಚಿತ್ರದುರ್ಗಕ್ಕೆ ಕರೆತಂದರು. ಬಳಿಕ ಹಳೆ ಮಾರುಕಟ್ಟೆ ಬಳಿ ವಿಠ್ಠಲ ಮಂದಿರ ನಿರ್ಮಿಸಿ, ರುಕ್ಮಿಣಿ ಮತ್ತು ಸತ್ಯಭಾಮಾ ಸಹಿತ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾರಂಭಿಸಿದರು.

    ಬ್ರಹ್ಮರಥೋತ್ಸವದ ವಿಶೇಷತೆಗಳು: ಪ್ರಸಕ್ತ ವರ್ಷ ಸ್ವಾಮಿ ಸನ್ನಿಧಾನದಲ್ಲಿ ಮೇ 20ರಿಂದ 24ರವರೆಗೆ ರುಕ್ಮಿಣಿ ಸತ್ಯಭಾಮಾ ಸಹಿತ ಪಾಂಡುರಂಗವಿಠ್ಠಲ ದೇವರ ಬ್ರಹ್ಮರಥೋತ್ಸವ ಹಮ್ಮಿಕೊಳ್ಳಲಾಗಿದೆ.

    ಪ್ರತಿದಿನ ಸಂಜೆ 6ರಿಂದ 6.30ರವರೆಗೆ ಭಕ್ತರಿಂದ ಭಜನೆ ಕಾರ್ಯಕ್ರಮ ನಡೆಯಲಿದೆ. 6.30ರಿಂದ 8ರವರೆಗೆ ಚಿತ್ರದುರ್ಗ ಉತ್ತರಾದಿಮಠದ ವಿದ್ವಾನ್ ಪ್ರಭಂಜನಾಚಾರ್ಯ ಅವರಿಂದ ಪ್ರವಚನ ಮಹಾಭಾರತ ತಾತ್ಪರ್ಯ ನಿರ್ಣಯ ಕಾರ್ಯಕ್ರಮ ಆಯೋಜಿಸಲಾಗಿದೆ. ರಥೋತ್ಸವದ ಧಾರ್ಮಿಕ ವಿಧಿವಿಧಾನಗಳು ಇವರ ಪೌರೋಹಿತ್ಯದಲ್ಲಿ ನೆರವೇರಲಿವೆ.

    20ರಂದು ಪುಣ್ಯಾಹ ನವಗ್ರಹ ಪೂಜಾ, ಕಲಶ ಸ್ಥಾಪನೆ, ಅಂಕುರಾರ್ಪಣ, ಧ್ವಜಾರೋಹಣ, 21ರಂದು ತ್ರಯೋದಶಿ ಹನುಮದ್ವಾಹನೋತ್ಸವ, ನರಸಿಂಹ ಜಯಂತಿ, ಕಂಬದ ನೃಸಿಂಹ ದೇವರಿಗೆ ವಿಶೇಷ ಪೂಜೆ ಜರುಗಲಿದೆ. 22ರಂದು ಚತುರ್ದಶಿ ಗರುಡ ವಾಹನೋತ್ಸವ, ಸಂಜೆ 7ಕ್ಕೆ ಸ್ವಾಮಿಯ ಕಲ್ಯಾಣೋತ್ಸವ ನಡೆಯಲಿದೆ.

    23ರಂದು ಬೆಳಗ್ಗೆ 10.30ರಿಂದ 11ರವರೆಗೆ ಪಾಂಡುರಂಗಸ್ವಾಮಿ ಬ್ರಹ್ಮ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಲಿದೆ. ನಂತರ ಉಪನ್ಯಾಸದ ಮಂಗಳ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.

    24ರಂದು 6.30ರಿಂದ ಅವಭೃತಸ್ನಾನ, ರಾತ್ರಿ 8.30ಕ್ಕೆ ಹಯನೋತ್ಸವ ಹಾಗೂ ಶಯನೋತ್ಸವ ಪೂಜಾ ಕಾರ್ಯಕ್ರಮ ಆಯೋಜಿಸಿದ್ದು, ಭಗವದ್ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಕಾರ್ಯನಿರ್ವಾಹಕ ಸೇವಕ ಟಿ.ಸಿ.ಶ್ರೀನಿವಾಸ್ ತಿಳಿಸಿದ್ದಾರೆ.

    ವೈಶಾಖ ಶುದ್ಧ ಪೌರ್ಣಮಿಯಂದು ತ್ಯಾಗರಾಜ ಬೀದಿಯಲ್ಲಿ ಬಹುವೈಭವದಲ್ಲಿ ಸ್ವಾಮಿಯ ಬ್ರಹ್ಮರಥೋತ್ಸವ ಪ್ರತಿ ವರ್ಷ ಆಚರಿಸುತ್ತ ಬರಲಾಗಿದೆ. ಹವನ, ಭಜನೆ, ಪ್ರವಚನ, ಕಲ್ಯಾಣೋತ್ಸವ, ರಥೋತ್ಸವ ಹೀಗೆ ಐದು ದಿನವೂ ಸ್ವಾಮಿಯ ಉತ್ಸವ ಅತ್ಯಂತ ವಿಶೇಷವಾಗಿ ನಡೆಯಲಿದೆ ಎನ್ನುತ್ತಾರೆ ದೇಗುಲದ ಅರ್ಚಕ ಟಿ.ಎಸ್.ಗೋಪಾಲಕೃಷ್ಣ.

    ಪಾರಾಯಣ ಪಾರಮಾರ್ಥಿಕದೆಡೆಗೆ: ಪಾಂಡುರಂಗ ವಿಠ್ಠಲನ ಸನ್ನಿಧಾನದಲ್ಲಿ ಪ್ರತಿ ಭಾನುವಾರ ಪ್ರಾತಃಕಾಲದಲ್ಲಿ ಬೆಳಗ್ಗೆ 8ರಿಂದ 9ರವರೆಗೂ ಹರಿವಾಯುಸ್ತುತಿ ಪಾರಾಯಣವನ್ನು ಪಾರಮಾರ್ಥಿಕದೆಡೆಗೆ ಕೊಂಡೊಯ್ಯುತ್ತದೆ ಎಂಬ ನಂಬಿಕೆಯೊಂದಿಗೆ ದೇಗುಲ ಆರಂಭದಿಂದಲೂ ಶ್ರದ್ಧಾ-ಭಕ್ತಿಯಿಂದ ನೆರವೇರಿಸುತ್ತ ಬರಲಾಗಿದೆ ಎನ್ನುತ್ತಾರೆ ದೇಗುಲದ ಕಾರ್ಯನಿರ್ವಾಹಕ ಸೇವಕರಾದ ಟಿ.ಪಿ.ವಿಠ್ಠಲ ರಾವ್, ಟಿ.ಪಿ.ರಾಮಚಂದ್ರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts