More

    ಕೋವಿಡ್ ನಿಯಮ ಉಲ್ಲಂಘನೆ ದಂಡಕ್ಕೆ ತೀವ್ರ ವಿರೋಧ : ಆದೇಶ ವಾಪಸ್​​ಗೆ ಮಾಲೀಕರ ಪಟ್ಟು

    ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಹೋಟೆಲ್, ರೆಸ್ಟೋರೆಂಟ್, ಅಂಗಡಿ ಮುಂಗಟ್ಟು, ಶಾಪಿಂಗ್ ಮಾಲ್ ಹಾಗೂ ಬೀದಿ ಬದಿ ವ್ಯಾಪಾರ, ಸಭೆ-ಸಮಾರಂಭಗಳಲ್ಲಿ ಜನರು ಕೋವಿಡ್ ನಿಯಮ ಉಲ್ಲಂಸಿದಲ್ಲಿ ಮಾಲೀಕರು ಅಥವಾ ಆಯೋಜಕರಿಗೆ 5 ಸಾವಿರ ರೂ.ಗಳಿಂದ 1 ಲಕ್ಷ ರೂ.ವರೆಗೆ ದಂಡ ವಿಧಿಸುವ ಪಾಲಿಕೆ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

    ರಾಜಧಾನಿಯಲ್ಲಿ ಕರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿವಿಧ ತಂತ್ರಗಳನ್ನು ಅಳವಡಿಕೆ ಮಾಡುತ್ತಿದೆ. ಜತೆಗೆ ಚಳಿಗಾಲದಲ್ಲಿ ಸೋಂಕಿನ ಜೀವಿತಾವಧಿ ಹೆಚ್ಚಿರಲಿದ್ದು, ಒಬ್ಬರಿಂದೊಬ್ಬರಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ. ಇದೇ ವೇಳೆ ಮದುವೆ, ಜಾತ್ರೆ, ಶುಭ ಸಮಾರಂಭಗಳು ಹೆಚ್ಚಾಗಿ ನಡೆಯಲಿದ್ದು, ಜನರು ನಿರ್ಲಕ್ಷ್ಯ ತೋರುವ ಮೂಲಕ ಸೋಂಕು ಹರಡಲು ಕಾರಣವಾಗಲಿದ್ದಾರೆ ಎಂಭ ಆತಂಕ ಎದುರಾಗಿದೆ. ಹೀಗಾಗಿ, ಹೋಟೆಲ್, ರೆಸ್ಟೋರೆಂಟ್, ಶಾಪಿಂಗ್ ಮಾಲ್‌ಗಳು, ಕಲ್ಯಾಣ ಮಂಟಪ ಬೀದಿ ಬದಿ ವ್ಯಾಪಾರದ ಸ್ಥಳದಲ್ಲಿ ಜನರು ಮಾಸ್ಕ್ ಧರಿಸದ ಅಥವಾ ವ್ಯಕ್ತಿಗತ ಅಂತರ ಕಾಪಾಡದ ವೇಳೆ ಮಾಲೀಕರಿಗೆ ದುಬಾರಿ ದಂಡ ವಿಧಿಸಲು ಪಾಲಿಕೆ ಮುಂದಾಗಿದೆ.

    ಪಾಲಿಕೆ ಆದೇಶಕ್ಕೆ ಬೀದಿ ಬದಿ ವ್ಯಾಪಾರಿಗಳು, ಹೋಟೆಲ್ ಉದ್ಯಮಿಗಳು, ಕಲ್ಯಾಣ ಮಂಟಪಗಳು ಮತ್ತು ಶಾಪಿಂಗ್ ಮಾಲ್‌ಗಳ ಮಾಲೀಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಜನರೇ ಜಾಗೃತಿಯಿಂದ ಸ್ವಯಂ ಆಗಿ ಕೋವಿಡ್ ನಿಯಮ ಪಾಲಿಸಬೇಕು. ಎಲ್ಲವನ್ನು ಮಾಲೀಕರು ತಿಳಿಸಲಾಗುವುದಿಲ್ಲ. ಹೀಗಾಗಿ, ಬಿಬಿಎಂಪಿ ದುಬಾರಿ ದಂಡದ ಆದೇಶವನ್ನು ವಾಪಸ್ ಪಡೆದು ಪರಾಮರ್ಶಿಸಬೇಕು ಎಂದು ಉದ್ಯಮಗಳ ಮಾಲೀಕರು ಆಗ್ರಹಿಸಿದ್ದಾರೆ.

    ಬೀದಿ ಬದಿ ವ್ಯಾಪಾರಿಗಳು ಪ್ರತಿನಿತ್ಯ 200 ರೂ.ನಿಂದ 1 ಸಾವಿರ ರೂ. ದುಡಿಮೆ ಮಾಡುತ್ತೇವೆ. ಆದರೆ, ಬಿಬಿಎಂಪಿ ಕೋವಿಡ್ ನಿಯಮ ಉಲ್ಲಂಘನೆಗೆ 5 ಸಾವಿರ ರೂ. ದಂಡ ವಿಧಿಸುವ ಕ್ರಮ ಅಸಮಂಜಸವಾಗಿದೆ. ಕೆಲವೊಮ್ಮೆ ಗ್ರಾಹಕರು ಮಾಸ್ಕ್ ಧರಿಸದೇ ಬಂದಲ್ಲಿ ಅವರನ್ನು ವಾಪಸ್ ಕಳುಹಿಸಲು ಸಾಧ್ಯವಿಲ್ಲ. ಹೀಗಾಗಿ, ಮಾಸ್ಕ್ ಧರಿಸದವರಿಗೆ ಮಾರ್ಷಲ್‌ಗಳು ನೇರವಾಗಿ ಜನರಿಗೆ ದಂಡ ವಿಧಿಸಬೇಕು. ವ್ಯಾಪಾರಿಗಳಿಗೆ ತೊಂದರೆ ದಂಡ ವಿಧಿಸುವ ನಿರ್ಧಾರ ಕೈಬಿಡಬೇಕು ಎಂದು ರಾಜ್ಯ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಂಗಸ್ವಾಮಿ ಒತ್ತಾಯಿಸಿದ್ದಾರೆ.

    ದಂಡದ ಬಗ್ಗೆ ಆಯುಕ್ತರಿಂದ ಸಮರ್ಥನೆ: ಚಳಿಗಾಲದಲ್ಲಿ ಕರೊನಾ ಸೋಂಕು ಹೆಚ್ಚಾಗುವ ಮತ್ತು ಜನವರಿಯಿಂದ ಕೋವಿಡ್ 2ನೇ ಅಲೆ ಶುರುವಾಗುವ ಸಾಧ್ಯತೆಗಳ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ, ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಡಿಸೆಂಬರ್‌ನಿಂದ ಫೆಬ್ರವರಿವರೆಗೆ ಮದುವೆ, ಜಾತ್ರೆ, ಶುಭ ಸಮಾರಂಭ ಹೆಚ್ಚಾಗಿದ್ದು, ಬಹುತೇಕರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಪಾಲಿಸುವುದಿಲ್ಲ. ಹೀಗಾಗಿ, ಎಲ್ಲೆಡೆ ಮಾರ್ಷಲ್‌ಗಳನ್ನು ನೇಮಕ ಮಾಡಲು ಸಾಧ್ಯವಿಲ್ಲದಿರುವ ಕಾರಣ ಮಾಲೀಕರು ಮತ್ತು ಆಯೋಜಕರೇ ಜಾಗೃತಿ ಮೂಡಿಸಬೇಕು. ನಿಯಮ ಪಾಲಿಸಿದಲ್ಲಿ ದಂಡದ ಬಗ್ಗೆ ವಿರೋಧ ವ್ಯಕ್ತಪಡಿಸುವ ಅಗತ್ಯವಿಲ್ಲ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಸಮರ್ಥನೆ ಮಾಡಿಕೊಂಡಿದ್ದಾರೆ.

    ಹೋಟೆಲ್ ಪ್ರವೇಶಕ್ಕೆ ಮುನ್ನ ಮಾಸ್ಕ್ ಇದ್ದವರಿಗೆ ಅವಕಾಶ ನೀಡುತ್ತೇವೆ. ಆದರೆ, ಊಟ, ತಿಂಡಿ ಸೇವಿಸುವಾಗ ಮಾಸ್ಕ್ ಧರಿಸುವಂತೆ, ಒಂದೇ ಕುಟುಂಬದವರು ಒಟ್ಟಿಗೆ ಕುಳಿತಾಗ ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವಂತೆ ಹೇಳುವುದು ಅಸಾಧ್ಯ. ಚಂದ್ರಶೇಖರ್ ಹೆಬ್ಬಾರ್, ರಾಜ್ಯ ಹೋಟೆಲ್‌ಗಳ ಮಾಲೀಕರ ಸಂಘದ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts