More

    ದೇಶಕ್ಕೆ ಆಹಾರ ಭದ್ರತೆ ಕಲ್ಪಿಸುವ ಯೋಧರಿಗೇಕಿಲ್ಲ ರಕ್ಷಣೆ? ಕೃಷಿ ಕ್ಷೇತ್ರದ ಸುವ್ಯವಸ್ಥೆಗೆ ನಾಂದಿಯಾಗಲಿದೆಯೇ ಕರೊನಾ

    ನವದೆಹಲಿ: ಗಡಿಯಲ್ಲಿ ಶತ್ರುಗಳ ವಿರುದ್ಧ ಹೋರಾಡುವುದಷ್ಟೇ ಅಲ್ಲದೇ, ದೇಶದೊಳಗೂ ಅಗೋಚರ ಶತ್ರುಗಳ ವಿರುದ್ಧ ಹೋರಾಡುವುದು ಕೂಡ ದೇಶ ರಕ್ಷಣೆ ಎಂಬುದು ಪ್ರಸ್ತುತ ಸಂದರ್ಭದಲ್ಲಿ ಹೆಚ್ಚು ವೇದ್ಯವಾಗುತ್ತಿದೆ. ಜನರಿಗೂ ಹಾಗೂ ನೀತಿ ನಿರೂಪಕ ರಾಜಕಾರಣಿಗಳಿಗೂ ಕೂಡ.

    ಸಾಂಕ್ರಾಮಿಕ ರೋಗವೊಂದು ದೇಶವನ್ನು ವ್ಯಾಪಿಸಿದಾಗ ನಾವೆಷ್ಟರ ಮಟ್ಟಿಗೆ ಸನ್ನದ್ಧವಾಗಿದ್ದೇವೆ ಎಂಬುದು ಈಗ ಎಲ್ಲರಿಗೂ ಮನವರಿಕೆಯಾಗುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿ ನಾವೆಷ್ಟು ಸ್ವಾವಲಂಬಿಗಳು ಎಂಬುದನ್ನು ಇದು ತೋರಿಸಿಕೊಟ್ಟಿದೆ.
    ಕರೊನಾ ವಿರುದ್ಧ ಹೋರಾಟದಲ್ಲಿ ಮುಂಚೂಣಿ ಪಡೆಯಲ್ಲೀಗ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ಮೊದಲಾದವರಿದ್ದರೆ, ನಂತರದ ಸ್ಥಾನದಲ್ಲಿರುವವರು ರೈತರು. ಇವರು ಸದಾ ದೇಶದ ಬೆನ್ನೆಲುಬಿದ್ದಂತೆ. ಆದರೆ, ನೀತಿ ನಿರೂಪಕರಿಂದ ಸದಾ ನಿರ್ಲಕ್ಷ್ಯಕ್ಕೆ ಒಳಗಾಗುವ ಕ್ಷೇತ್ರವೆಂದರೆ ಕೃಷಿ.

    ದೇಶದ ಶೇ.50ಕ್ಕೂ ಅಧಿಕ ಜನರು ಇದನ್ನು ಅವಲಂಬಿಸಿದ್ದಾರೆ. ದೇಶದ ಜಿಡಿಪಿಗೆ ಇದರ ಕೊಡುಗೆ ಶೇ.17-19 ಆದಾಯ ಈ ಕ್ಷೇತ್ರದಿಂದಲೇ ಬರುತ್ತದೆ. ಆದರೆ, ಈ ಬಾರಿ ಒಟ್ಟಾರೆ ಬಜೆಟ್​ನಲ್ಲಿ ಇದಕ್ಕೆ ನಿಗದಿಯಾಗುವ ಮೊತ್ತದ ಪ್ರಮಾಣ ಶೇ.4.69 ಮಾತ್ರ. ಕಳೆದ ಹಲವು ಬಜೆಟ್​ಗಳನ್ನು ಗಮನಿಸಿದರೆ, ಇದರ ಪ್ರಮಾಣದಲ್ಲಿ ಕೊಂಚ ಹೆಚ್ಚಳವಾಗಿದೆ ಎಂದುಕೊಂಡರೂ ಶೇ.5 ಮೀರಿಲ್ಲ.

    ಇನ್ನೊಂದು ವಿಷಯವನ್ನು ಗಮನಿಸುವುದಾದರೆ, ಬಜೆಟ್​ ಪ್ರತಿ ಬಾರಿ ಆದ್ಯತೆ ದೊರೆಯುವುದು ರಕ್ಷಣಾ ಕ್ಷೇತ್ರಕ್ಕೆ. ಒಟ್ಟಾರೆ ಬಜೆಟ್​ ಗಾತ್ರ 30,42,230 ಕೋಟಿ ರೂ.ಗಳದ್ದಾಗಿದ್ದರೆ, ರಕ್ಷಣಾ ಕ್ಷೇತ್ರಕ್ಕೆ ಇದರಲ್ಲಿ ಮೀಸಲಾಗಿರುವುದು 4,71,378 ಕೋಟಿ ರೂ. ಅಂದರೆ ಬಜೆಟ್​ನ ಶೇ.15.49 ಇದಕ್ಕೆ ನೀಡಲಾಗಿದೆ. ಕೆಲ ವರ್ಷಗಳಿಂದ ಕೆಲಮಟ್ಟಿಗೆ ಕಡಿಮೆ ಮಾಡಲಾಗಿದೆ ಎಂದರೂ ಶೇ.15ಕ್ಕಿಂತ ಕಡಿಮೆಯಾಗಿದ್ದಿಲ್ಲ. ಜತೆಗೆ, ವಿದೇಶಗಳಿಂದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವ ಹಾಗೂ ಅತಿ ಹೆಚ್ಚು ವೆಚ್ಚ ಮಾಡುವ ರಾಷ್ಟ್ರಗಳಲ್ಲಿ ಭಾರತಕ್ಕೆ ನಾಲ್ಕನೇ ಸ್ಥಾನವಿದೆ ಎಂಬುದು ಕೂಡ ಮುಖ್ಯ.

    ಇಷ್ಟಾಗಿಯೂ ರಕ್ಷಣಾ ಕ್ಷೇತ್ರದಲ್ಲಿ ಯೋಧರ ವೇತನ, ಪಿಂಚಣಿ ಸಮಸ್ಯೆ, ಮೂಲಸೌಕರ್ಯಗಳಿಲ್ಲದಿರುವುದು, ಸಂಶೋಧನೆಗೆ ಪ್ರಾಧಾನ್ಯತೆ ಇಲ್ಲದಿರುವುದು ಮೊದಲಾದ ಸಮಸ್ಯೆಗಳನ್ನು ಈ ಕ್ಷೇತ್ರ ಎದುರಿಸುತ್ತಿದೆ. ಈ ನಿಟ್ಟಿನಲ್ಲಿ ದೇಶೀಯವಾಗಿ ಸ್ವಾವಲಂಬಿಯಾಗದ ಹೊರತು ದೊಡ್ಡ ಮೊತ್ತದ ಹಣ ನೀಡುವುದು ಇದಕ್ಕೆ ಪರಿಹಾರವಲ್ಲ ಎಂಬುದು ಕೂಡ ಗೊತ್ತಾಗಿದೆ.

    ಇನ್ನು, ಕೃಷಿ ಕ್ಷೇತ್ರ ಕರೊನಾದಿಂದಾಗಿ ಅತಿ ಹೆಚ್ಚು ಸಂಕಷ್ಟಕ್ಕೆ ಒಳಗಾಗಿದೆ. ಸದ್ಯ ಹಿಂಗಾರು ಬೆಳೆಗಳ ಕಟಾವಿಗೆ ಜನರು ಬೇಕಾಗಿದ್ದಾರೆ. ನಂತರ ಜೂನ್​ನಲ್ಲಿ ಮುಂಗಾರು ಶುರುವಾಗುತ್ತಿದ್ದಂತೆ ಬಿತ್ತನೆ ಚಟುವಟಿಕೆಗಳಿಗೆ ಕಾರ್ಮಿಕರು ಬೇಕಾಗುತ್ತಾರೆ. ಆದರೆ, ಲಾಕ್​ಡೌನ್ ಕಾರಣದಿಂದಾಗಿ ಈ ವ್ಯವಸ್ಥೆಯಲ್ಲಿ ಅಸ್ತವ್ಯಸ್ತವಾಗಲಿದೆ. ಇನ್ನೊಂದು ಹಿನ್ನಡೆ ಎಂದರೆ ದೇಶ ಶೇ.40-50 ಪ್ರಮಾಣವಷ್ಟೇ ಕೃಷಿ ಯಾಂತ್ರಿಕರಣವಾಗಿದೆ. ಅದರಲ್ಲೂ ಅದು ಉತ್ತರ ಭಾರತ ಕೆಲ ರಾಜ್ಯಗಳಿಗೆ ಕೇಂದ್ರಕೃತವಾಗಿದೆ. ಈಶಾನ್ಯ ಭಾರತದಲ್ಲಿ ಬಹುತೇಕ ಸಣ್ಣ ಹಿಡುವಳಿಗಳಲ್ಲಿ ಕೃಷಿ ಹಂಚಿಹೋಗಿದೆ.

    ಇದಲ್ಲದೇ, ಕೊನೆಯ ಹಂತದ ವಿತರಣಾ ವ್ಯವಸ್ಥೆ ಸಮರ್ಪಕವಾಗಿಲ್ಲ, ಆನ್​ಲೈನ್​ ಮಾರುಕಟ್ಟೆ ಜಾರಿ ಮಾಡಲಾಗಿದ್ದರೂ ಅದು ಸಂಪೂರ್ಣ ವ್ಯವಸ್ಥಿತವಾಗಿಲ್ಲ ಎನ್ನುವುದು ಸಂಕಷ್ಟದ ಸಮಯದಲ್ಲಿಯೇ ಅರಿವಾಗಿದೆ. ಫಸಲು ಹೊಲಗಳಲ್ಲಿಯೇ ನಾಶವಾಗುತ್ತಿದೆ.
    ಕರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ವಿಮಾ ಯೋಜನೆ ಕಲ್ಪಿಸುವ ಸರ್ಕಾರ ದೇಶಕ್ಕೆ ಆಹಾರ ಖಾತ್ರಿ ಒದಗಿಸುವ ಯೋಧರಾದ ರೈತರಿಗೆ ಭದ್ರತೆ ನೀಡುವುದಿಲ್ಲ. ಏಕೆಂದರೆ, ಬೆಳೆ ವಿಮೆ ಯೋಜನೆಗಳೇ ಸಮರ್ಪಕವಾಗಿಲ್ಲ. ಸಂಪೂರ್ಣ ಬೆಳೆ ನಾಶವಾದರೂ ಅವರಿಗೆ ಸಿಗುವುದು ಚಿಕ್ಕಾಸು ಮಾತ್ರ.

    ಒಟ್ಟಾರೆ ಹೇಳುವುದಾದರೆ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಜಾರಿಗೊಳಿಸುವ ಸರ್ಕಾರ, ಆಹಾರ ಭದ್ರತೆ ಬಗ್ಗೆ ತನ್ನ ಧೋರಣೆಯನ್ನು ಸಂಪೂರ್ಣವಾಗಿ ಮರುಪರಿಶೀಲನೆಗೆ ಒಳಪಡಿಸಬೇಕಾಗಿದೆ. ಕೋವಿಡ್​ ಮೊದಲಿನ ಹಾಗೂ ನಂತರದ ಸ್ಥಿತಿಗತಿಗಳೇ ಇದಕ್ಕೆ ಪಾಠವಾಗಲಿವೆ ಎನ್ನುತ್ತಾರೆ ಕೃಷಿ ಕ್ಷೇತ್ರದ ತಜ್ಞರು.

    ತುತ್ತು ಅನ್ನಕ್ಕೂ ಹಾಹಾಕಾರ, ಹಸಿವಿನಿಂದ ಕಂಗೆಡಲಿದ್ದಾರೆ 26 ಕೋಟಿ ಜನ, ವಿಶ್ವಸಂಸ್ಥೆ ನೀಡಿದೆ ಆಘಾತಕಾರಿ ವರದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts