More

    ಲಾಕ್​ಡೌನ್​ ಎಫೆಕ್ಟ್​: ದಂಪತಿ ನಡುವೆ ಹೆಚ್ಚಿದ ಸರಸ- ಸಲ್ಲಾಪಕ್ಕೆ ವಿಶ್ವ ಸಂಸ್ಥೆ ಬೆಚ್ಚಿ ಬಿದ್ದದ್ದೇಕೆ?

    ವಿಶ್ವಸಂಸ್ಥೆ: ಲಾಕ್​ಡೌನ್​ನಿಂದ ಮನೆಯೊಳಕ್ಕೆ ಇರಲು ಬೇಸರವಾಗಿ ಲಾಕ್​ಡೌನ್​ ಯಾವಾಗ ಮುಗಿಯತ್ತೋ, ಯಾವಾಗ ಹೊರಗಡೆ ಹೋಗುತ್ತೇವೆಯೋ ಎಂದು ಹಲವರು ಕಾದು ಕುಳಿತಿದ್ದರೆ, ಅದೇ ಇನ್ನೊಂದೆಡೆ, ದಂಪತಿಯ ನಡುವೆ ಪ್ರೇಮ, ಸರಸ ಸಲ್ಲಾಪಗಳು ಹೆಚ್ಚಾಗಿವೆ.

    ಗಂಡ- ಹೆಂಡತಿ ನಡುವೆ ಅನ್ಯೋನ್ಯತೆ ಹೆಚ್ಚಾದರೆ ಅದು ತುಂಬಾ ಒಳ್ಳೆಯ ವಿಷಯ. ಇದು ತುಂಬಾ ಒಳ್ಳೆಯ ಬೆಳವಣಿಗೆ ಕೂಡ. ಆದರೆ ವಿಶ್ವ ಸಂಸ್ಥೆ ನಡೆಸಿದ ಅಧ್ಯಯನದಿಂದ ಹೊರಬಂದಿರುವ ವರದಿಗೆ ಖುದ್ದು ವಿಶ್ವಸಂಸ್ಥೆಯೇ ಆತಂಕ ವ್ಯಕ್ತಪಡಿಸಿದೆ.

    ಅಷ್ಟಕ್ಕೂ, ಈ ಆತಂಕಕ್ಕೆ ಕಾರಣವೆಂದರೆ, ಜಗತ್ತಿನಾದ್ಯಂತ ಅತಿ ಹೆಚ್ಚು ಮಂದಿ ಗರ್ಭವತಿಯರಾದದ್ದು! ಇದರಲ್ಲಿ ಬೆಚ್ಚಿ ಬೀಳುವ ಅಂಶವೇನೆಂದರೆ, ಗರ್ಭಧಾರಣೆ ಮಾಡಿರುವ ಸ್ತ್ರೀಯರ ಪೈಕಿ 4.7 ಕೋಟಿ ಮಂದಿಗೆ ಈ ಗರ್ಭ ಬೇಡವಂತೆ! ತಮ್ಮ ಇಷ್ಟವಿಲ್ಲದೇ ಗರ್ಭಧಾರಣೆ ಆಗಿದ್ದು, ತಮಗೆ ಇದರಿಂದ ತೊಂದರೆ ಎಂದಿದ್ದಾರೆ ಮಹಿಳೆಯರು! ಇದು ಒಂದೆಡೆಯಾದರೆ, ಈ ಪರಿಯ ಸ್ತ್ರೀಯರು ಇಷ್ಟವಿಲ್ಲದ ಮಗುವಿಗೆ ಜನ್ಮ ನೀಡಿದರೆ, ವಿನಾಕಾರಣ ಜನಸಂಖ್ಯೆಯ ಸ್ಫೋಟ ಆಗುತ್ತದೆ ಎಂಬುದು ವಿಶ್ವ ಸಂಸ್ಥೆಯ ಚಿಂತೆಗೆ ಕಾರಣವಾಗಿದೆ.

    ಇಷ್ಟವಿಲ್ಲದ ಗರ್ಭ ಧರಿಸಿರುವ ಅನೇಕ ಮಹಿಳೆಯರು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗೆ ಸೇರಿದ್ದಾರೆ. ಲಾಕ್​ಡೌನ್​ ಹಿನ್ನೆಲೆಯಲ್ಲಿ ಗರ್ಭನಿರೋಧಕಗಳ ಮಾತ್ರೆಗಳು ಇವರಿಗೆ ಸೂಕ್ತ ಸಮಯದಲ್ಲಿ ಸಿಗಲಿಲ್ಲ. ಹಲವು ಕಡೆಗಳಲ್ಲಿ ಈ ಮಾತ್ರೆಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಆದ್ದರಿಂದ ಈ ರೀತಿಯಾಗಿದೆ ಎಂದು ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ (ಯುಎನ್ಎಫ್​ಬಿಎ) ಹೇಳಿದೆ. ಲಾಕ್​ಡೌನ್ ಬಿಕ್ಕಟ್ಟಿನಿಂದಾಗಿ ಆಮದು ಮತ್ತು ರಫ್ತು ಸ್ಥಗಿತಗೊಂಡಿರುವುದರಿಂದ ಪುರುಷರು ಮತ್ತು ಮಹಿಳೆಯರಿಗೆ ಗರ್ಭನಿರೋಧಕಗಳು ಲಭ್ಯವಾಗುತ್ತಿಲ್ಲ.. ಕುಟುಂಬ ಯೋಜನೆ ಪಾಲಿಸಲು ದಂಪತಿಗೆ ಸಾಧ್ಯವಾಗುತ್ತಿಲ್ಲ. ಇದು ಜಗತ್ತಿನಾದ್ಯಂತ ಲಕ್ಷಾಂತರ ಸ್ತ್ರೀಯರ ಮೇಲೆ ದುಷ್ಪರಿಣಾಮ ಬೀರಲಿದೆ. ಜತೆಗೆ, ಅನೇಕ ಸ್ತ್ರೀಯರು ತಮ್ಮ ದೇಹ ಮತ್ತು ಆರೋಗ್ಯವನ್ನು ರಕ್ಷಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುವ ಅಪಾಯವಿದೆ. ಇದರಿಂದಾಗಿ ಅವರು ಇಷ್ಟವಿಲ್ಲದಿದ್ದರೂ ಗರ್ಭಧರಿಸುವಂತಾಗುತ್ತದೆ. ಇದರ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎಂದು ಯುಎನ್​ಎಫ್​ಬಿಎ ಆತಂಕ ವ್ಯಕ್ತಪಡಿಸಿದೆ.

    ಇದರ ಜತೆಗೆ, ಪುರುಷರು ಮನೆಯಲ್ಲಿಯೇ ಇರುವ ಕಾರಣ, ಲಕ್ಷಾಂತರ ಮಹಿಳೆಯರು ಲಿಂಗ ತಾರತಮ್ಯ, ಕೌಟುಂಬಿಕ ದೌರ್ಜನ್ಯ, ಲೈಂಗಿಕ ಹಿಂಸಾಚಾರ ಮತ್ತು ಇತರ ಗಂಭೀರ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ ಎಂದು ಯುಎನ್ಎಫ್​ಬಿಎ ಕಾರ್ಯಕಾರಿ ನಿರ್ದೇಶಕಿ ನಟಾಲಿಯಾ ಕನೇಮ್ ತಿಳಿಸಿದ್ದಾರೆ.

    ಜಾಗತಿಕವಾಗಿ, ಕಡಿಮೆ ಮತ್ತು ಮಧ್ಯಮ-ಆದಾಯದ ಸುಮಾರು 114 ದೇಶಗಳಲ್ಲಿ ಸುಮಾರು 4.50 ಕೋಟಿ ಮಹಿಳೆಯರು ಗರ್ಭನಿರೋಧಕಗಳನ್ನು ಬಳಸುತ್ತಾರೆ ಎಂದು ಅಧ್ಯಯನ ತಿಳಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts