More

    ಕೋವಿಡ್ ಮೂಲ ಅಧ್ಯಯನ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಯಾವ ಮೂಲದಿಂದ ಕೋವಿಡ್ ಬಂದಿದೆ ಎನ್ನುವುದನ್ನು ತಜ್ಞ ವೈದ್ಯರ ಸಮಿತಿ ಅಧ್ಯಯನ ನಡೆಸುತ್ತಿದ್ದು, ಇನ್ನೆರಡು ದಿನಗಳಲ್ಲಿ ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

    ವಿಜಯವಾಣಿ ಜತೆ ಮಾತನಾಡಿದ ಅವರು, ಕೋವಿಡ್ ಜಿಲ್ಲೆಯಲ್ಲಿ ಪಸರಿಸಿದ ಮೂಲದ ಬಗ್ಗೆ ಕರೊನಾ ನೋಡಲ್ ಅಧಿಕಾರಿ ಪೊನ್ನುರಾಜ್, ಜಿಲ್ಲಾಧಿಕಾರಿ, ಆರೋಗ್ಯ ಇಲಾಖೆ ಪ್ರಮುಖರೊಂದಿಗೆ ಭಾನುವಾರ ಸಭೆ ನಡೆಸಿದ್ದೇನೆ, ನಾಳೆ ಜಿಲ್ಲಾ ಆರೋಗ್ಯಾಧಿಕಾರಿ ಈ ಭಾರತೀಯ ವೈದ್ಯಕೀಯ ಮಂಡಳಿಯವರೊಂದಿಗೆ ಸಭೆ ನಡೆಸುತ್ತಾರೆ, ಬಳಿಕ ಸಂಜೆ ನಾವೂ ಮತ್ತೊಮ್ಮೆ ಸಮಾಲೋಚನೆ ನಡೆಸುತ್ತೇವೆ. ಸೋಮವಾರ ಸಾಯಂಕಾಲ ಅಥವಾ ಮಂಗಳವಾರ ಸರ್ಕಾರಕ್ಕೆ ವರದಿ ಸಲ್ಲಿಸುವ ನಿರೀಕ್ಷೆ ಇದೆ ಎಂದರು.

    ದ.ಕ ಜಿಲ್ಲೆಯಲ್ಲಿ ಭಾನುವಾರ ಕೋವಿಡ್ ಪ್ರಕರಣ ವರದಿಯಾಗಿಲ್ಲ. 36 ಮಂದಿಯನ್ನು ತಪಾಸಣೆ ಮಾಡಲಾಗಿದ್ದು ಎನ್‌ಐಟಿಕೆಯಲ್ಲಿ 32, ಇಎಸ್‌ಐನಲ್ಲಿ 40 ಮಂದಿಯನ್ನು ಕ್ವಾರಂಟೈನ್ ಆಗಿ ಇರಿಸಲಾಗಿದೆ. ಭಾನುವಾರ ಬಂದಿರುವ ಎಲ್ಲ 190 ಸ್ಯಾಂಪಲ್ ವರದಿಗಳು ನೆಗೆಟಿವ್ ಆಗಿದ್ದು, 88 ಹೊಸ ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 15 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿ ನಿಗಾ ಇರಿಸಲಾಗುತ್ತಿದೆ.

    ಕಿತ್ತಳೆ ವಲಯದಲ್ಲೇ ಇದೆ ದ.ಕ
    ಸತತವಾಗಿ ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವ ಹೊರತಾಗಿಯೂ ದ.ಕ ಜಿಲ್ಲೆ ಕಿತ್ತಳೆ ವಲಯದಲ್ಲೇ ಮುಂದುವರಿದಿದೆ. ರಾಜ್ಯ ಮಟ್ಟದ ಕೋವಿಡ್ ವಾರಿಯರ್ಸ್‌ ನೀಡಿರುವ ವರದಿ ಅನ್ವಯ ರಾಜ್ಯದಲ್ಲಿ ಹಿಂದೆ ಘೋಷಿಸಿರುವ ಮೂರೇ ಜಿಲ್ಲೆಗಳೇ ಇನ್ನೂ ಕೆಂಪು ವಲಯದಲ್ಲಿ ಮುಂದುವರಿದಿವೆ. ಉಳಿದಂತೆ ದ.ಕ ಕಿತ್ತಳೆಯಲ್ಲೇ ಇದ್ದರೆ ಉಡುಪಿಯೂ ಹಸಿರಾಗಿಯೇ ಇದೆ. ಜಿಲ್ಲೆಯಲ್ಲಿ ದೈನಂದಿನ ಕೋವಿಡ್ ಪ್ರಗತಿ ದರ ಕಳೆದ ವಾರ ಶೇ 3.7 ಇದ್ದುದು ಈ ವಾರ ಶೇ 2.6ಕ್ಕೆ ಇಳಿಕೆಯಾಗಿರುವುದು ಸಮಾಧಾನಕರ. ಇನ್ನು ಪ್ರಕರಣಗಳು ದ್ವಿಗುಣಗೊಳ್ಳಲು ಬೇಕಾಗುವ ದಿನಗಳ ಸಂಖ್ಯೆ ಕಳೆದವಾರ 14 ಇದ್ದುದು ಈ ವಾರ 16ಕ್ಕೆ ಏರಿರುವುದು ಕೂಡ ಇನ್ನೊಂದು ಗಮನಾರ್ಹ ಅಂಶ. ಜಿಲ್ಲೆಯಲ್ಲಿ ಕೋವಿಡ್ ಲಕ್ಷಣಗಳು ಇರುವ ರೋಗಿಗಳ ಸಂಖ್ಯೆ 25ರಲ್ಲಿ 7 ಮಾತ್ರ, ಉಳಿದ 18 ಮಂದಿಯೂ ರೋಗ ಲಕ್ಷಣಗಳಿಲ್ಲದೆಯೂ ಪಾಸಿಟಿವ್ ಆಗಿರುವವರು ಎನ್ನುವುದು ವಿಶೇಷ.

    ಕಾಸರಗೋಡು ಕೋವಿಡ್ ಮುಕ್ತ ಜಿಲ್ಲೆ
    ಕಾಸರಗೋಡು: ಕೋವಿಡ್ 19 ಬಾಧಿಸಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿದ್ದ 178 ಸೋಂಕಿತರೂ ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಜಿಲ್ಲೆ ಕೋವಿಡ್ ಮುಕ್ತವಾಗಿದೆ. ಜಿಲ್ಲೆಯಲ್ಲಿದ್ದ ಒಟ್ಟು 178 ರೋಗಿಗಳಲ್ಲಿ 177 ಮಂದಿ ಈ ಹಿಂದೆಯೇ ಗುಣಮುಖರಾಗಿ ತೆರಳಿದ್ದರು. ಉಕ್ಕಿನಡ್ಕದ ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಕೊನೆಯ ವ್ಯಕ್ತಿ ಗುಣಮುಖರಾಗಿ ಬಿಡುಗಡೆಗೊಳ್ಳುವ ಮೂಲಕ ಕಾಸರಗೋಡು ಶೇ.100 ಕೋವಿಡ್ ಮುಕ್ತ ಜಿಲ್ಲೆಯಾಗಿದೆ. ರಾಜ್ಯದಲ್ಲಿ ಕೋವಿಡ್ 19 ಸೋಂಕಿನ ಪ್ರತಿರೋಧ ಚಟುವಟಿಕೆಗಳ ಎರಡನೇ ಹಂತ ಆರಂಭಿಸಿದ ವೇಳೆ ಜಿಲ್ಲೆ ತಲ್ಲಣಗೊಂಡಿತ್ತು. ಸಾಮಾಜಿಕ ಹರಡುವಿಕೆಯ ಸಾಧ್ಯತೆಗಳ ಭೀತಿ ಎಲ್ಲೆಡೆ ಕಂಡುಬರುತ್ತಿತ್ತು. ಆದರೆ ಎಲ್ಲ ವಲಯಗಳ ಸಹಕಾರ, ಜನಜಾಗೃತಿಯಿಂದ ಜಿಲ್ಲೆ ಅಪೂರ್ವ ಸಾಧನೆ ಮಾಡಿದೆ. ಈ ಮಧ್ಯೆ ಕೇರಳದಲ್ಲಿ ಭಾನುವಾರ ಕೋವಿಡ್-19 ವೈರಸ್‌ನ ಏಳು ಹೊಸ ಪ್ರಕರಣ ಪತ್ತೆಯಾಗಿದೆ.

    ಉಡುಪಿಯಲ್ಲಿ 24 ವರದಿ ನೆಗೆಟಿವ್
    ಉಡುಪಿ: ಕರೊನಾ ಶಂಕೆ ಹಿನ್ನೆಲೆಯಲ್ಲಿ ಪ್ರಯೋಗಾಲಯಕ್ಕೆ ಕಳುಹಿಸಿದ್ದ 24 ವರದಿಗಳು ಭಾನುವಾರ ನೆಗೆಟಿವ್ ಬಂದಿದ್ದು, 232 ಮಂದಿಯ ವರದಿಗಾಗಿ ನಿರೀಕ್ಷಿಸಲಾಗುತ್ತಿದೆ. ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ 5 ಮಂದಿ, ಕರೊನಾ ಪಾಸಿಟಿವ್ ಸಂಪರ್ಕ ಹೊಂದಿದ 1, ಅನಾರೋಗ್ಯಪೀಡಿತ 6, ಹಾಟ್‌ಸ್ಪಾಟ್ ಪ್ರದೇಶಗಳಿಗೆ ಭೇಟಿ ನೀಡಿದ್ದ 81 ಮಂದಿ ಸೇರಿದಂತೆ ಒಟ್ಟು 93 ಮಾದರಿ ಸಂಗ್ರಹಿಸಲಾಗಿದ್ದು, 9 ಮಂದಿ ಐಸೋಲೇಶನ್ ವಾರ್ಡ್‌ಗೆ ದಾಖಲಾಗಿದ್ದಾರೆ. ಓರ್ವ ಬಿಡುಗಡೆ ಹೊಂದಿದ್ದಾರೆ. 75 ಮಂದಿ 28 ದಿನದ ನಿಗಾವಣೆ ಹಾಗೂ 29 ಮಂದಿ 14 ದಿನದ ನಿಗಾವಣೆ ಪೂರೈಸಿದ್ದಾರೆ.

    ಕೋವಿಡ್ ಶಂಕೆ ಆಸ್ಪತ್ರೆಗೆ ದಾಖಲು
    ಉಳ್ಳಾಲ: ಸೋಮೇಶ್ವರ ಪುರಸಭಾ ವ್ಯಾಪ್ತಿಯ ಕುಂಪಲ ಮಾರುಕಟ್ಟೆಯ ಯುವಕನೊಬ್ಬನನ್ನು ಅನಾರೋಗ್ಯ ಹಿನ್ನೆಲೆಯಲ್ಲಿ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ಶನಿವಾರ ಸಾಯಂಕಾಲ ದಾಖಲಿಸಲಾಗಿದ್ದು, ಪರಿಸರವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. 21 ವರ್ಷದ ಯುವಕನಿಗೆ ತೀವ್ರ ಉಸಿರಾಟದ ತೊಂದರೆ ಕಂಡುಬಂದ ಹಿನ್ನೆಲೆಯಲ್ಲಿ ಆತನ ತಾಯಿ ಚಿಕಿತ್ಸೆಗಾಗಿ ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿನ ವೈದ್ಯರು ಸಂಶಯ ವ್ಯಕ್ತಪಡಿಸಿ ಮಂಗಳೂರು ಕೋವಿಡ್ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದರು ಎಂದು ಹೇಳಲಾಗಿದೆ. ಈ ಯುವಕ ಕೆಲವು ದಿನಗಳಿಂದ ಬಂಟ್ವಾಳದ ಸಿದ್ದಕಟ್ಟೆಯಲ್ಲಿದ್ದ ಎನ್ನಲಾಗಿದ್ದು, ಅನಾರೋಗ್ಯ ಕಾರಣದಿಂದಾಗಿ ಗುರುವಾರ ಕುಂಪಲದ ಮನೆಗೆ ಬಂದಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.

    200ಕ್ಕೂ ಅಧಿಕ ಜನರಿಗೆ ಕ್ವಾರಂಟೈನ್
    ಪಡುಬಿದ್ರಿ: ಶನಿವಾರ ರಾತ್ರಿಯಿಂದ ಭಾನುವಾರ ಸಾಯಂಕಾಲದವರೆಗೆ ಉಡುಪಿ ಜಿಲ್ಲೆ ಪ್ರವೇಶಿಸಿದ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕೇರಳ ರಾಜ್ಯಗಳ 10 ಮಂದಿ, ಅನ್ಯ ಜಿಲ್ಲೆಗಳ 100 ಮತ್ತು ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸಿದ 100 ಜನರಿಗೆ ಹೆಜಮಾಡಿ ಗಡಿಯಲ್ಲಿ ಮೊಹರು ಹಾಕಿ ಸಾಂಸ್ಥಿಕ ಹಾಗೂ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts