More

    ಮತ್ತೊಂದು ಕೋವಿಡ್ ಪ್ರಕರಣ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಬಂಟ್ವಾಳ ಸಂಬಂಧಿತ ಮತ್ತೊಂದು ಕೋವಿಡ್ ಪ್ರಕರಣ ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 19ಕ್ಕೇರಿಕೆಯಾಗಿದೆ.
    ಎರಡು ದಿನ ಹಿಂದೆ ನಗರದ ಖಾಸಗಿ ಆಸ್ಪತ್ರೆಯಿಂದ ಕರೊನಾ ಪಾಸಿಟಿವ್ ಆಗಿ ವೆನ್ಲಾಕ್‌ಗೆ ಸ್ಥಳಾಂತರಗೊಂಡು ಮೃತಪಟ್ಟಿದ್ದ 75 ವರ್ಷ ವಯಸ್ಸಿನ ವೃದ್ಧೆಯ ಸಂಪರ್ಕದಿಂದಾಗಿ ಬಂಟ್ವಾಳ ತಾಲೂಕಿನ ನರಿಕೊಂಬು ನಿವಾಸಿ 47ರ ಮಹಿಳೆಗೆ ಕರೊನಾ ಸೋಂಕು ದೃಢಪಟ್ಟಿದೆ.

    ನಗರದ ಹೊರವಲಯದಲ್ಲಿ ಸೀಲ್‌ಡೌನ್ ಆಗಿರುವ ಫಸ್ಟ್ ನ್ಯೂರೊ ಆಸ್ಪತ್ರೆಯಲ್ಲಿ ಈಕೆ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದರು. ಕರೊನಾ ಸೋಂಕಿನಿಂದ ಮೃತಪಟ್ಟ ವೃದ್ಧೆಯ ಸಂಪರ್ಕಕ್ಕೆ ಬಂದ ಕಾರಣ ಸೋಂಕು ತಗಲಿರಬಹುದು ಎಂದು ಅಂದಾಜಿಸಲಾಗಿದೆ. ವೃದ್ಧೆಗೆ ಪಾಸಿಟಿವ್ ದೃಢಪಟ್ಟು ಏ.21ರಂದು ಮೃತಪಟ್ಟ ತಕ್ಷಣ ಆಸ್ಪತ್ರೆ ಸಿಬ್ಬಂದಿಗಳೆಲ್ಲರನ್ನೂ ಆಸ್ಪತ್ರೆಯಲ್ಲೇ ಕ್ವಾರಂಟೈನ್ ಮಾಡಲಾಗಿತ್ತು.
    ಬಂಟ್ವಾಳ ಕಸ್ಬಾ ನಿವಾಸಿ ಮಹಿಳೆಯನ್ನು ಈಗಲೂ ಐಸಿಯುನಲ್ಲಿ ಇರಿಸಿ ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಆರೋಗ್ಯ ಸ್ಥಿತಿ ಗಂಭೀರವಾಗಿದೆ, ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ವೆನ್ಲಾಕ್ ಹೆಲ್ತ್ ಬುಲೆಟಿನ್ ತಿಳಿಸಿದೆ.
    27ಮಂದಿಯನ್ನು ಭಾನುವಾರ ಸ್ಕ್ರೀನಿಂಗ್ ಮಾಡಲಾಗಿದ್ದು, ಎನ್‌ಐಟಿಕೆ ಸುರತ್ಕಲ್‌ನಲ್ಲಿ 53 ಮಂದಿಯನ್ನು, ಇಎಸ್‌ಐ ಆಸ್ಪತ್ರೆಯಲ್ಲಿ 32 ಮಂದಿಯನ್ನು ನಿಗಾವಣೆಯಲ್ಲಿ ಇರಿಸಲಾಗಿದೆ. 6073 ಮಂದಿ 28 ದಿನಗಳ ನಿಗಾವಣೆ ಪೂರ್ಣಗೊಳಿಸಿದ್ದಾರೆ. ಭಾನುವಾರ 143 ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 214ರ ವರದಿ ಬಂದಿದ್ದು ಒಂದು ಪಾಸಿಟಿವ್ ಮತ್ತು 213 ನೆಗೆಟಿವ್ ಆಗಿರುತ್ತದೆ. ಇನ್ನೂ 513 ವರದಿಗಳು ಬರುವುದು ಬಾಕಿ ಇದೆ. 29 ಮಂದಿಯನ್ನು ನಿಗಾ ಇರಿಸುವುದಕ್ಕಾಗಿ ಆಸ್ಪತ್ರೆಗೆ ದಾಖಲಿಸಿದ್ದು, ಉಸಿರಾಟದ ತೊಂದರೆ ಇರುವ 3 ಪ್ರಕರಣಗಳು ಪತ್ತೆಯಾಗಿವೆ.

    ಒಟ್ಟು ಸ್ಯಾಂಪಲ್ 2173: ಇದುವರೆಗೆ ಒಟ್ಟು 2173 ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಿದ್ದು 1660ರ ಪ್ರಕರಣ ಬಂದಿದೆ. 19 ಪಾಸಿಟಿವ್, ಅದರಲ್ಲಿ 12 ಗುಣಮುಖರಾಗಿ ತೆರಳಿದ್ದರೆ 2 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಐವರು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸ್ಥಳಾವಕಾಶದ ಕೊರತೆ, ಶಂಕಿತರ ಶಿಫ್ಟ್
    ಫಸ್ಟ್ ನ್ಯೂರೊ ಆಸ್ಪತ್ರೆಯಲ್ಲಿದ್ದ ಬಹುತೇಕ ಮಂದಿಯ ಸ್ಯಾಂಪಲ್ ವರದಿಗಳು ಬಂದಿದ್ದು, ಒಂದು ಮಾತ್ರ ಪಾಸಿಟಿವ್ ಆಗಿದೆ. ಇನ್ನು ಕೆಲವೇ ವರದಿಗಳು ಬರಲು ಬಾಕಿ ಇದೆ. ಇಲ್ಲಿರುವ ರೋಗಿಗಳನ್ನು ಅಲ್ಲೇ ಉಳಿಸಿಕೊಳ್ಳಲಾಗಿದೆ. ಸಿಬ್ಬಂದಿಗಳ ಪೈಕಿ ಹಲವರನ್ನು ಅಲ್ಲಿ ಸ್ಥಳಾವಕಾಶದ ಕೊರತೆಯಿಂದ ನರ್ಸಿಂಗ್ ಹಾಸ್ಟೆಲ್, ಇಎಸ್‌ಐ ಆಸ್ಪತ್ರೆ, ಎನ್‌ಐಟಿಕೆ ಮುಂತಾದೆಡೆಗೆ ವರ್ಗಾಯಿಸಿ ನಿಗಾವಣೆಯಲ್ಲಿ ಇರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ತಿಳಿಸಿದ್ದಾರೆ.

    ನಾಯಿಲ ಪ್ರದೇಶ ಸೀಲ್‌ಡೌನ್
    ಬಂಟ್ವಾಳ: ನರಿಕೊಂಬು ಗ್ರಾಮ ವ್ಯಾಪ್ತಿಯ ನಾಯಿಲ ಪರಿಸರದ ಮಹಿಳೆಯಲ್ಲಿ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆಕೆಯ ಮನೆಯಿರುವ ನಾಯಿಲ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ. ಇಲ್ಲಿನ ಸತ್ಯಶ್ರೀ ಸಭಾಂಗಣ ಬಳಿ ಬ್ಯಾರಿಕೇಡ್ ಅಳವಡಿಸಿ ಗ್ರಾಮದ ಒಳಗೆ ಸಂಪರ್ಕ ನಿರ್ಬಂಧಿಸಲಾಗಿದೆ. ಪೊಲೀಸ್ ಕಾವಲು ನಿಯೋಜಿಸಲಾಗಿದೆ.
    ಮಹಿಳೆಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡ ಕಾರಣ ಪರಿಸರದ ಜನರಲ್ಲಿ ಆತಂಕ ಹೆಚ್ಚಾಗಿದೆ. ಮಹಿಳೆ ಇಲ್ಲಿನ ಅಂಗಡಿ ಮತ್ತಿತರ ಪ್ರದೇಶಗಳಿಗೆ ಭೇಟಿ ನೀಡಿದ್ದರಿಂದ ಟ್ರಾವೆಲ್ ಹಿಸ್ಟರಿ ಹುಡುಕಾಟ ಆರಂಭಗೊಂಡಿದೆ. ಇದು ಬಂಟ್ವಾಳ ತಾಲೂಕಿನ 7ನೇ ಕರೊನಾ ಪಾಸಿಟಿವ್ ಪ್ರಕರಣವಾಗಿದೆ. ಈ ಹಿಂದಿನ 6 ಪ್ರಕರಣಗಳ ಪೈಕಿ ಒಂದೇ ಮನೆಯ ಇಬ್ಬರು ಮಹಿಳೆಯರು ಮೃತಪಟ್ಟಿದ್ದರು. ಇಬ್ಬರು ಗುಣಮುಖರಾಗಿದ್ದಾರೆ, ಒಂದೇ ಮನೆಯ ತಾಯಿ ಮಗಳಿಬ್ಬರು ಚಿಕಿತ್ಸೆಯಲ್ಲಿದ್ದಾರೆ. ಈಗ ಇನ್ನೋರ್ವ ಮಹಿಳೆ ಹೆಚ್ಚುವರಿಯಾಗಿ ಸೇರ್ಪಡೆಗೊಂಡಂತಾಗಿದೆ.

    ಸೀಲ್‌ಡೌನ್ ಉಲ್ಲಂಘನೆ ಕೇಸು ದಾಖಲು
    ಸೀಲ್‌ಡೌನ್ ನಿಯಂತ್ರಿತ ವಲಯದಿಂದ ಉದ್ದೇಶಪೂರ್ವಕವಾಗಿ ಮನೆಯಿಂದ ಹೊರಗೆ ಹೋದ ಆರೋಪದಡಿ ಎಸ್‌ವಿಎಸ್ ಶಾಲಾ ಓಣಿ ನಿವಾಸಿ ವಿಜಯಾನಂದ ಎಂಬುವರ ಮೇಲೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋವಿಡ್-19 ಪ್ರಕರಣದಲ್ಲಿ ವ್ಯಕ್ತಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಬಂಟ್ವಾಳ ಪೇಟೆಯನ್ನು ಜಿಲ್ಲಾಡಳಿತದ ಆದೇಶದಂತೆ ಸೀಲ್‌ಡೌನ್ ಮಾಡಲಾಗಿತ್ತು. ನಿಯಂತ್ರಿತ ಪ್ರದೇಶಕ್ಕೆ ಒಳಪಟ್ಟ ವ್ಯಕ್ತಿಗಳು ಮನೆಯಿಂದ ಹೋಗಬಾರದೆಂದು ಆದೇಶವಿದ್ದರೂ, ವಿಜಯಾನಂದ ಮನೆಯಿಂದ ಹೊರ ಹೋಗಿದ್ದಾರೆ. ಕೋವಿಡ್-19 ಕರೊನಾ ಸೋಂಕು ಹರಡುವಿಕೆಯಲ್ಲಿ ಬೇರೆಯವರ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಿರ್ಲಕ್ಷೃ ವಹಿಸಿದ್ದಾರೆ ಎಂದು ಅವರ ಮೇಲೆ ಪ್ರಕರಣ ದಾಖಲಾಗಿದೆ.

    ಕಾಸರಗೋಡಿನಲ್ಲಿ ಓರ್ವ ಗುಣಮುಖ
    ಕಾಸರಗೋಡು: ಜಿಲ್ಲೆಯಲ್ಲಿ ಭಾನುವಾರವೂ ಕೋವಿಡ್ 19 ಸೋಂಕು ಖಚಿತಗೊಂಡ ಯಾವುದೇ ಕೇಸ್ ವರದಿಯಾಗಿಲ್ಲ. ಜಿಲ್ಲೆಯಲ್ಲಿ ಒಬ್ಬರು ರೋಗದಿಂದ ಗುಣಮುಖರಾಗಿದ್ದಾರೆ. ಈವರೆಗೆ 160 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಭಾನುವಾರ 2197 ಮಂದಿ ನಿಗಾದಲ್ಲಿದ್ದಾರೆ. ಭಾನುವಾರ ನೂತನವಾಗಿ ಇಬ್ಬರನ್ನು ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ. ಆದರೆ ಕೇರಳದಲ್ಲಿ ಹನ್ನೊಂದು ಮಂದಿಯಲ್ಲಿ ಕೋವಿಡ್-19 ವೈರಸ್ ಕಾಣಿಸಿಕೊಂಡಿದೆ.

    56 ಮಂದಿ ಮೇಲೆ ಕೇಸು: ಲಾಕ್‌ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 56 ಕೇಸು ದಾಖಲಿಸಲಾಗಿದೆ. 96 ಮಂದಿಯನ್ನು ಬಂಧಿಸಲಾಗಿದ್ದು, 26 ವಾಹನ ವಶಪಡಿಸಲಾಗಿದೆ. ಮಂಜೇಶ್ವರ, ಚೀಮೇನಿ ಪೊಲೀಸ್ ಠಾಣೆಯಲ್ಲಿ ತಲಾ 1, ಕುಂಬಳೆ 8, ಕಾಸರಗೋಡು, ಬೇಕಲ, ವೆಳ್ಳರಿಕುಂಡ್ ಠಾಣೆಯಲ್ಲಿ ತಲಾ 3, ವಿದ್ಯಾನಗರ 7, ಬದಿಯಡ್ಕ 4, ಬೇಡಗಂ 5, ಮೇಲ್ಪರಂಬ 9, ಅಂಬಲತ್ತರ 2, ನೀಲೇಶ್ವರ 4, ಚಂದೇರ 2, ಚಿತ್ತಾರಿಕ್ಕಲ್ ಠಾಣೆಯಲ್ಲಿ 4 ಕೇಸು ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ 1809 ಕೇಸುಗಳನ್ನು ದಾಖಲಿಸಲಾಗಿದೆ. 2176 ಮಂದಿಯನ್ನು ಬಂಧಿಸಲಾಗಿದೆ. 736 ವಾಹನ ವಶಪಡಿಸಲಾಗಿದೆ.

    10 ಮಂದಿಯ ಮಾದರಿ ಸಂಗ್ರಹ
    ಉಡುಪಿ: ಜಿಲ್ಲೆಯಲ್ಲಿ ತೀವ್ರ ಉಸಿರಾಟದ ಸಮಸ್ಯೆ ಇರುವ 7 ಮಂದಿ, ಇಲ್‌ನೆಸ್‌ಗೆ ಸಂಬಂಧಿಸಿ ಒಬ್ಬರು ಸೇರಿದಂತೆ ಒಟ್ಟು 8 ಮಂದಿ ಭಾನುವಾರ ಐಸೊಲೇಷನ್ ವಾರ್ಡ್‌ಗೆ ದಾಖಲಾಗಿದ್ದಾರೆ. ಭಾನುವಾರ ಹತ್ತು ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು, ಯಾವುದೇ ವರದಿ ಸ್ವೀಕಾರವಾಗಿಲ್ಲ. ಭಾನುವಾರಕ್ಕೆ 43 ಮಂದಿ 28 ದಿನದ ಕ್ವಾರಂಟೈನ್ ಪೂರೈಸಿದ್ದಾರೆ. ಐಸೊಲೇಷನ್ ವಾರ್ಡ್‌ನಿಂದ ಒಬ್ಬರು ಡಿಸ್ಚಾರ್ಜ್ ಆಗಿದ್ದಾರೆ. 41 ಮಂದಿಯ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

    ಅಗತ್ಯವೆನಿಸಿದರೆ ಕಠಿಣ ಕ್ರಮ
    ಮಂಗಳೂರು/ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿದೆ. ಅಗತ್ಯವೆನಿಸಿದರೆ ಜಿಲ್ಲೆಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.
    ಬಂಟ್ವಾಳ ತಾಲೂಕಿನ ಕಸಬಾ ಪ್ರದೇಶದಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ತುರ್ತು ಸಭೆ ನಡೆಸಿ ಮಾತನಾಡಿದರು.
    ಬಂಟ್ವಾಳದಲ್ಲಿ ಮೇ 3ರವರೆಗೆ ಲಾಕ್‌ಡೌನ್ ವಿನಾಯಿತಿ ಇಲ್ಲ. ಕಸಬಾ ಹೋಬಳಿಯ 92 ಮನೆಗಳು ಹಾಗೂ ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ 213 ಮನೆಗಳಲ್ಲಿ ಪ್ರತಿನಿತ್ಯ ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಸಿಬ್ಬಂದಿ ಭೇಟಿಕೊಟ್ಟು ವರದಿ ನೀಡಬೇಕು. ಈ ವ್ಯಾಪ್ತಿಯಲ್ಲಿ ಲಾಕ್‌ಡೌನ್‌ನಲ್ಲಿ ಸಡಿಲಿಕೆ ಇಲ್ಲ ಎಂದು ಸ್ಪಷ್ಟಪಡಿಸಿದರು.
    ಮಂಗಳೂರಿನ ಫಸ್ಟ್ನ್ಯೂರೋ ಆಸ್ಪತ್ರೆಯ 198 ಸಿಬ್ಬಂದಿ ಹಾಗೂ ಇನ್ನಿತರರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ 49 ಪ್ರಕರಣಗಳ ವರದಿ ಬಂದಿದ್ದು, 48 ನೆಗೆಟಿವ್ ಒಂದು ಪಾಸಿಟಿವ್ ಆಗಿರುತ್ತದೆ. ಜಿಲ್ಲಾಡಳಿತದ ಪೂರ್ಣ ಕಣ್ಗಾವಲಿನಲ್ಲಿ ಕರೊನಾ ನಿಯಂತ್ರಣ ಮಾಡಲಾಗುತ್ತಿದೆ. ಸಾರ್ವಜನಿಕರು ಲಘುವಾಗಿ ತೆಗೆದುಕೊಳ್ಳದೆ, ಸ್ವಯಂಪ್ರೇರಿತ ನಿಯಂತ್ರಣಕ್ಕೆ ಒಳಪಡಬೇಕು ಎಂದ ಅವರು, ಅನಿವಾರ್ಯವಾದರೆ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
    ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ಅಧಿಕಾರಿಗಳು ಕಟ್ಟೆಚ್ಚರದಿಂದ ಕಾರ್ಯನಿರ್ವಹಿಸಬೇಕು, ವಲಸೆ ಕಾರ್ಮಿಕರು ಹಾಗೂ ಜಿಲ್ಲೆಯ ಸಮಸ್ಯೆಗಳಿಗೆ ತಕ್ಷಣ ಪರಿಹರಿಸಬೇಕು. ಆಹಾರಗಳ ಪೂರೈಕೆ ಸೇರಿದಂತೆ ಸ್ಥಳೀಯ ಶಾಸಕರಿಗೆ ಸಹಕಾರ ನೀಡಲಿದೆ ಎಂದು ಅವರು ಹೇಳಿದರು.
    ಶಾಸಕ ರಾಜೇಶ್ ನಾಕ್, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ತಹಸೀಲ್ದಾರ್ ರಶ್ಮಿ, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

    11 ಅಧಿಕಾರಿಗಳಿಂದ ಅಹೋರಾತ್ರಿ ಕರ್ತವ್ಯ
    ಬಂಟ್ವಾಳ ಕಸಬಾ ಹಾಗೂ ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿ ಸೀಲ್‌ಡೌನ್ ಮಾಡಲಾಗಿದ್ದು, ವಿಶೇಷ ಅಧಿಕಾರಿಗಳನ್ನು ನೇಮಕ ಮಾಡಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಮ್ ತೆರೆದು ಸಾರ್ವಜನಿಕರ ಅನುಕೂಲಕ್ಕೆ ದೂರವಾಣಿ ಸಂಪರ್ಕ ನೀಡಲಾಗಿದೆ ಎಂದು ಸಚಿವ ಕೋಟ ಹೇಳಿದರು. 11 ಅಧಿಕಾರಿಗಳನ್ನು ಈ ಪ್ರದೇಶದಲ್ಲಿ ಹಗಲು-ರಾತ್ರಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಸಾರ್ವಜನಿಕರು ಮನೆಯಲ್ಲಿದ್ದುಕೊಂಡು ಅಗತ್ಯ ಸಾಮಾಗ್ರಿಗಳನ್ನು ತೆಗೆದುಕೊಳ್ಳಬಹುದು. ದಿನಸಿ ಸಾಮಗ್ರಿ, ಹಾಲು, ದಿನಪತ್ರಿಕೆ, ಔಷಧ, ಊಟೋಪಚಾರ, ತರಕಾರಿ, ಹಣ್ಣು ಮಾಂಸಗಳನ್ನು ಸಾರ್ವಜನಿಕರ ಬೇಡಿಕೆಯಂತೆ ಒದಗಿಸಲು ಹಾಗೂ ಬ್ಯಾಂಕಿಂಗ್ ಸೇವೆ, ಗ್ಯಾಸ್ ಇನ್ನಿತರ ಸೇವೆ, ತುರ್ತು ಸೇವೆಗಳನ್ನು ಒದಗಿಸಲು ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts